ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ: ಕುರಿಗಳ ಸಾವು, ರೈತ ಕಂಗಾಲು

ಮೌನ ತಾಳಿದ ಪಾಶುಪಾಲನೆ ಮತ್ತು ಪಶು ವೈದ್ಯಕೀಯ ಸೇವೆಗಳ ಇಲಾಖೆ
Last Updated 17 ನವೆಂಬರ್ 2019, 6:13 IST
ಅಕ್ಷರ ಗಾತ್ರ

ನಾಯಕನಹಟ್ಟಿ: ಹೋಬಳಿಯ ಬಹುತೇಕ ಗ್ರಾಮಗಳ ಕುರಿಗಳಿಗೆ ನೀಲಿ ನಾಲಗೆ ರೋಗದ ಸೋಂಕು ತಗುಲಿ ನೂರಾರು ಕುರಿಗಳು ಸಾವನ್ನಪ್ಪುತ್ತಿದ್ದು, ರೈತರು ಕಂಗಾಲಾಗಿದ್ದಾರೆ.

ಮಳೆಯ ಅಭಾವದಿಂದ ನಿರಂತರ ಬರಗಾಲಕ್ಕೆ ರೈತರು ತತ್ತರಿಸಿದ್ದು, ಜೀವನೋಪಾಯಕ್ಕಾಗಿ ಕುರಿ ಕೋಳಿ, ಹಸು ಸಾಕಣೆಯಲ್ಲಿ ತೊಡಗಿದ್ದಾರೆ. ಆದರೆ, ಹಲವು ದಿನಗಳಿಂದ ಹೋಬಳಿಯಾದ್ಯಂತ ಎಲ್ಲ ಗ್ರಾಮಗಳಲ್ಲೂ ಕುರಿಗಳಿಗೆ ನೀಲಿನಾಲಗೆ ರೋಗ ಕಾಣಿಸಿಕೊಂಡಿದೆ. ಇದರಿಂದ ನಿತ್ಯ ನೂರಾರು ಕುರಿಗಳು ಆಹಾರ ಸೇವಿಸದೇ ನಿತ್ರಾಣಗೊಂಡು ಸಾವನ್ನಪ್ಪುತ್ತಿವೆ. ಕುರಿಗಳನ್ನೇ ನಂಬಿ ಜೀವನ ನಡೆಸುತ್ತಿರುವ ರೈತರಿಗೆ ಸಂಕಷ್ಟ ಎದುರಾಗಿದೆ.

‘ಒಂದು ತಿಂಗಳಿನಿಂದ ನಾಯಕನಹಟ್ಟಿ ಹೋಬಳಿಯಾದ್ಯಂತ ಕುರಿಗಳು ಸತ್ತಿವೆ. ಇದಕ್ಕೆ ಸೂಕ್ತಚಿಕಿತ್ಸೆ ನೀಡಿ ಎಂದು ಪಶು ವೈದ್ಯಾಧಿಕಾರಿಗಳನ್ನು ಕೇಳಿದರೆ, ಈ ರೋಗಕ್ಕೆ ಚಿಕಿತ್ಸೆ ನಮ್ಮಲ್ಲಿ ಲಭ್ಯವಿಲ್ಲ. ಸರ್ಕಾರದಿಂದಾಗಲಿ, ನಮ್ಮ ಇಲಾಖೆಯಿಂದಾಗಲಿ ಲಸಿಕೆ ಉಚಿತ ಸರಬರಾಜು ಇಲ್ಲ ಎಂದು ಖಾಸಗಿ ಔಷಧ ಅಂಗಡಿಗಳಿಗೆ ಚೀಟಿ ಬರೆಯುತ್ತಾರೆ’ ಎಂದು ರೈತರಾದ ರೇಖಲಗೆರೆ ಗೌರಮ್ಮ, ಬಲ್ಲನಾಯಕನಹಟ್ಟಿ ಕಾಮಯ್ಯ, ಕೋಲಮ್ಮನಹಳ್ಳಿ ಗ್ರಾಮದ ಕುಮಾರ, ಮನುಮೈನಹಟ್ಟಿ ನಿರಂಜನ ಹೇಳುತ್ತಾರೆ.

ಈ ಸಂಬಂಧ ಪಶುಸಂಗೋಪನೆ ಜಿಲ್ಲಾ ಉಪನಿರ್ದೇಶಕ ಡಾ.ಕೃಷ್ಣಪ್ಪ ಮಾತನಾಡಿ, ‘ಇದು ವೈರಸ್‌ನಿಂದ ಹರಡುವ ರೋಗ. ಕುರುಡ ನೊಣಗಳ ಕಡಿತದಿಂದ ಈ ರೋಗ ಹರಡುತ್ತಿದೆ. ಮಳೆ ಹೆಚ್ಚಾಗಿ ಹಸಿರು ಹುಲ್ಲಿನಲ್ಲಿ ಕೀಟಗಳು ಸೇರಿಕೊಂಡಿರುತ್ತವೆ. ಇದೇ ಹುಲ್ಲನ್ನು ಕುರಿಗಳು ಮೇಯ್ದಾಗ ಈ ಸೋಂಕು ತಗುಲುತ್ತದೆ. ಸಂಜೆ ವೇಳೆ ರೈತರು ತಮ್ಮ ಕುರಿಗಳನ್ನು ನೀರಿರುವ, ಜೌಗು ಪ್ರದೇಶಗಳ ಬಳಿ ಹಸಿ ಹುಲ್ಲನ್ನು ಮೇಯಿಸಬಾರದು. ರಾತ್ರಿ ಕುರಿ ರೊಪ್ಪಗಳಲ್ಲಿ ಬೇವಿನ ಸೊಪ್ಪಿನ ಹೊಗೆಯನ್ನು ಹಾಕುವುದರಿಂದ ರೋಗ ತಡೆಗಟ್ಟಬಹುದು’ ಎಂದು ರೈತರಿಗೆ ಸಲಹೆ ನೀಡಿದ್ದಾರೆ.

***

"ಸೂಕ್ತ ಚಿಕಿತ್ಸೆ ಸಿಗದೇ ನಿತ್ಯ ಎರಡು ಮೂರು ಕುರಿಗಳು ಸಾಯುತ್ತಿವೆ. ಇದರಿಂದ ದಿಕ್ಕುತೋಚದಂತಾಗಿದೆ. ಇದರ ಲಸಿಕೆ ತುಂಬಾ ದುಬಾರಿಯಿದ್ದು ಚಿಕಿತ್ಸೆ ವೆಚ್ಚ ಭರಿಸುವ ಶಕ್ತಿ "

-ಕಾಮಣ್ಣ, ಗುಂತಕೋಲಮ್ಮನಹಳ್ಳಿಯ ರೈತ.

***

"ಉಚಿತವಾಗಿ ಲಸಿಕೆಗಳನ್ನು ಹಾಕಿಸುವ ವ್ಯವಸ್ಥೆ ಕಲ್ಪಿಸಬೇಕು. ಸತ್ತ ಕುರಿಗಳಿಗೆ ಶೀಘ್ರವಾಗಿ ತಲಾ ₹ 5 ಸಾವಿರದಂತೆ ಎಲ್ಲ ರೈತರಿಗೂ ಪರಿಹಾರ ದೊರಕಿಸಬೇಕು"
-ಕೆ.ಎಂ.ಪಂಚಾಕ್ಷರಿಸ್ವಾಮಿ, ತಾಲ್ಲೂಕು ಅಧ್ಯಕ್ಷರು, ಭಾರತೀಯ ಕಿಸಾನ್‌ ಸಂಘ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT