ಶುಕ್ರವಾರ, ಜನವರಿ 28, 2022
25 °C
ಒಂಬತ್ತು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ ದಂಪತಿ

ಹಿರಿಯೂರು: ಗೋಡೆ ಕುಸಿದು ಒಂದೇ ಕುಟುಂಬದ ಮೂವರ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಿರಿಯೂರು: ತಾಲ್ಲೂಕಿನ ಐಮಂಗಲ ಹೋಬಳಿಯ ಕಾರೋಬನಹಟ್ಟಿಯಲ್ಲಿ ಭಾನುವಾರ ಬೆಳಗಿನ ಜಾವ ಶೋಕ ಮಡುಗಟ್ಟಿತ್ತು. ನಾಲ್ಕು ದಿನಗಳಿಂದ ಸುರಿಯುತ್ತಿರುವ ಜಿಟಿಜಿಟಿ ಮಳೆಗೆ ಮನೆಯ ಒಂದು ಬದಿಯ ಗೋಡೆ ಕುಸಿದು ಒಂಬತ್ತು ತಿಂಗಳ ಹಿಂದೆಯಷ್ಟೇ ದಾಂಪತ್ಯ ಬದುಕಿಗೆ ಕಾಲಿಟ್ಟಿದ್ದ ಪತಿ–ಪತ್ನಿ ಹಾಗೂ ಮನೆಯ ಯಜಮಾನ ಮೃತಪಟ್ಟಿದ್ದರಿಂದ ಕುಟುಂಬದವರು, ಅಕ್ಕಪಕ್ಕದವರ ಆಕ್ರಂದನ ಮುಗಿಲುಮುಟ್ಟಿತ್ತು.

ಗೋಡೆ ಕುಸಿದು ಚನ್ನಕೇಶವ (26), ಅವರ ಪತ್ನಿ ಸೌಮ್ಯ (20), ಚನ್ನಕೇಶವನ ತಂದೆ ಕ್ಯಾಸಪ್ಪ (55) ಮೃತಪಟ್ಟಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಹೋ.ಚಿ. ಬೋರಯ್ಯನವರು ಕಾರೋಬಯ್ಯನಹಟ್ಟಿಯಲ್ಲಿ ಮಂಜೂರು ಮಾಡಿಸಿದ್ದ ದರಖಾಸ್ತು ಜಮೀನಿನಲ್ಲಿ ಸುಮಾರು 20 ಕುಟುಂಬಗಳು ಸಾಗುವಳಿ ಮಾಡಿಕೊಂಡು 30–40 ವರ್ಷಗಳಿಂದ ಬದುಕು ಸಾಗಿಸುತ್ತಿವೆ. ಜಮೀನಿನ ಕೆಲಸ ಇಲ್ಲದಾಗ ಎಲ್ಲರೂ ಕೂಲಿಗೆ ಹೋಗುತ್ತಾರೆ. ಖಾಲಿ ಇದ್ದ 20 ಗುಂಟೆ ಜಮೀನಿನಲ್ಲಿ ಕಲ್ಲು–ಮಣ್ಣು ಬಳಸಿ ಮನೆ, ಗುಡಿಸಲು ಕಟ್ಟಿಕೊಂಡು ‘ಹೋ.ಚಿ. ಬೋರಯ್ಯ ಬಡಾವಣೆ’ ಎಂದು ಹೆಸರಿಟ್ಟುಕೊಂಡಿದ್ದಾರೆ.

ಕ್ಯಾಸಣ್ಣ ಮನೆಯನ್ನು ಅರ್ಧಭಾಗ ಕಲ್ಲಿನಿಂದ ನಿರ್ಮಿಸಿಕೊಂಡು, ಮೇಲೆ ಚಪ್ಪರ ಹಾಕಿಕೊಂಡಿದ್ದರು. ಮಳೆ ಬಂದರೆ ಸೋರಬಾರದು ಎಂದು ಪ್ಲಾಸ್ಟಿಕ್ ತಾಡಪಾಲು ಹೊದಿಸಿದ್ದರು. ಅದೇ ಗೋಡೆಗೆ ಹೊಂದಿಕೊಂಡು ಚನ್ನಕೇಶವ ಮತ್ತು ಸೌಮ್ಯ ಗುಡಿಸಲು ಕಟ್ಟಿಕೊಂಡು ರಾತ್ರಿ ವೇಳೆ ಮಲಗಲು ವ್ಯವಸ್ಥೆ ಮಾಡಿಕೊಂಡಿದ್ದರು. ಮಳೆಗೆ ಮಣ್ಣಿನ ಗೋಡೆ ತೊಯ್ದು ಕುಸಿದು ಬಿದ್ದ ಕಾರಣ ಚನ್ನಕೇಶವ ಹಾಗೂ ಸೌಮ್ಯ ಸ್ಥಳದಲ್ಲಿಯೇ ಮೃತಪಟ್ಟರು. ಸೌಮ್ಯ ಮೂರು ತಿಂಗಳ ಗರ್ಭಿಣಿಯಾಗಿದ್ದು, ಕುಟುಂಬದವರ ರೋದನ ಎಲ್ಲರಲ್ಲಿ ಕಣ್ಣೀರು ತರಿಸುತ್ತಿತ್ತು.

ಗೋಡೆ ಬಿದ್ದ ಶಬ್ದ ಕೇಳಿದ ನೆರೆಯವರು ಮಣ್ಣಿನ ಅಡಿಯಲ್ಲಿ ಸಿಲುಕಿದವರನ್ನು ರಕ್ಷಿಸುವ ಪ್ರಯತ್ನ ನಡೆಸುವ ವೇಳೆಗೆ ದಂಪತಿ ಮೃತಪಟ್ಟಿದ್ದರು.

ಚಿತ್ರದುರ್ಗ ತಾಲ್ಲೂಕಿನ ಜೆ.ಎನ್. ಕೋಟೆ ಗ್ರಾಮದ ಸೌಮ್ಯ ಅವರನ್ನು ಚನ್ನಕೇಶವ ಒಂಬತ್ತು ತಿಂಗಳ ಹಿಂದೆ ವಿವಾಹವಾಗಿದ್ದರು. 

ಮಾಹಿತಿ ತಿಳಿಯುತ್ತಿದ್ದಂತೆ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಹಟ್ಟಿಗೆ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿ, ವೈಯಕ್ತಿಕ ಧನಸಹಾಯ ಮಾಡಿದರು. ಡಿ.ಟಿ. ಶ್ರೀನಿವಾಸ್, ಟಿ.ಚಂದ್ರಶೇಖರ್, ರಾಜೇಶ್ವರಿ ಇದ್ದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಎಸ್. ಕುಬೇರಪ್ಪ ಅಂತ್ಯಸಂಸ್ಕಾರಕ್ಕೆ ವೈಯಕ್ತಿಕವಾಗಿ ₹ 25 ಸಾವಿರ ನೆರವು ನೀಡಿದರು.

ಸ್ಥಳಕ್ಕೆ ತಹಶೀಲ್ದಾರ್ ಶಿವಕುಮಾರ್, ಸಿಪಿಐ ಕೆ.ರಾಘವೇಂದ್ರ, ಎಸ್ಐ ಅಶ್ವಿನಿ ಎಂ. ಹಂಡಿ ಭೇಟಿ ನೀಡಿದ್ದರು.

‘ಸರ್ಕಾರದ ಯಾವುದೇ ವಸತಿ ಯೋಜನೆಯ ಲಾಭ ನಮಗೆ ಸಿಕ್ಕಿಲ್ಲ. ಇಲ್ಲಿ ಅಗತ್ಯ ಸೌಲಭ್ಯಗಳು ಮರೀಚಿಕೆಯಾಗಿವೆ. ಎಲ್ಲರೂ ಪರಿಶಿಷ್ಟ ಪಂಗಡದವರೇ ಇದ್ದೇವೆ. ಘಟನೆ ನಡೆದ ನಂತರ ಎಲ್ಲರೂ ಬಂದು ಸಾಂತ್ವನ ಹೇಳುತ್ತಿದ್ದಾರೆ. ನಮ್ಮೂರು ಇಲ್ಲಿದೆಯೇ ಎಂಬುದೇ ಅಧಿಕಾರಿಗಳಿಗೆ ತಿಳಿಯದು’ ಎಂದು ಗ್ರಾಮಸ್ಥ ಯರ‍್ರಪ್ಪ ಆರೋಪಿಸಿದರು.

‘ಪಿಡಿಒ ಮೂಲಕ ಮನೆ ಹಂಚಿಕೆ ಬಗ್ಗೆ ಚರ್ಚಿಸುತ್ತೇನೆ. ಸರ್ಕಾರದ ಪರಿಹಾರವನ್ನು ತಲುಪಿಸುತ್ತೇನೆ’ ಎಂದು ತಹಶೀಲ್ದಾರ್ ಶಿವಕುಮಾರ್ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು