ಸೋಮವಾರ, ಜೂನ್ 14, 2021
26 °C

ಹಿರಿಯೂರು: ರಸಗೊಬ್ಬರ ದರ ಇಳಿಸಲು ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಿರಿಯೂರು: ರಸಗೊಬ್ಬರ, ಡೀಸೆಲ್–ಪೆಟ್ರೋಲ್, ಅಡುಗೆ ಅನಿಲದ ಬೆಲೆ ಇಳಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ತಾಲ್ಲೂಕು ಶಾಖೆ ಅಧ್ಯಕ್ಷ ಬಿ.ಒ. ಶಿವಕುಮಾರ್ ನೇತೃತ್ವದಲ್ಲಿ ತಹಶೀಲ್ದಾರ್‌ ಅವರಿಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು.

‘2022ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವುದಾಗಿ ಪ್ರಧಾನಿ ಅವರು ಭರವಸೆ ನೀಡಿದ್ದರು. ಡೀಸೆಲ್–ಪೆಟ್ರೋಲ್, ಅಡುಗೆ ಅನಿಲದ ಬೆಲೆ ಏರಿಕೆಯಿಂದ ಜನಸಾಮಾನ್ಯರು ತತ್ತರಿಸಿ ಹೋಗಿದ್ದಾರೆ. ರಸಗೊಬ್ಬರದ ಬೆಲೆ ಏರಿಕೆಯಿಂದ ಸಣ್ಣ–ಅತಿಸಣ್ಣ ರೈತರು ಕೃಷಿಯಿಂದ ವಿಮುಖರಾಗುವ ಸನ್ನಿವೇಶ ಸೃಷ್ಟಿಯಾಗಿದೆ. 50 ಕೆ.ಜಿ. ಡಿಎಪಿ ಬೆಲೆಯನ್ನು ₹ 1,200ರಿಂದ ₹ 1,700ರ ವರೆಗೆ, 20–20–20 ಗೊಬ್ಬರದ ಬೆಲೆಯನ್ನು ₹ 925ರಿಂದ ₹ 1.350ರವರೆಗೆ, ಅಡುಗೆ ಅನಿಲದ ಬೆಲೆಯನ್ನು ₹ 300ರಿಂದ ₹ 925ರ ವರೆಗೂ ಹೆಚ್ಚಿಸಲಾಗಿದೆ’ ಎಂದು ಶಿವಕುಮಾರ್ ಆರೋಪಿಸಿದರು.

‘ಮೋದಿ ಅವರಿಗೆ ನಿಜವಾಗಿಯೂ ರೈತರ ಪರ ಕಾಳಜಿ ಇದ್ದರೆ ತಕ್ಷಣ ಹೆಚ್ಚಿಸಿರುವ ಬೆಲೆಗಳನ್ನು ಮೊದಲಿನ ದರಕ್ಕೆ ಇಳಿಸಬೇಕು. ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕವಾಗಿ ಬೆಂಬಲ ಬೆಲೆ ಘೋಷಿಸಿ, ಸರ್ಕಾರದಿಂದಲೇ ಖರೀದಿಸಬೇಕು. ಬೆಂಬಲ ಬೆಲೆ ನೀತಿಗೆ ಕಾನೂನು ಸ್ವರೂಪ ನೀಡಬೇಕು’ ಎಂದು  ಆಗ್ರಹಿಸಿದರು.

ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಕೆ.ಸಿ.ಹೊರಕೇರಪ್ಪ, ವಿ.ಕಲ್ಪನಾ, ಯಳನಾಡು ಚೇತನ್, ಎಂ. ಲಕ್ಷ್ಮೀಕಾಂತ್, ಎಚ್.ಆರ್.ತಿಪ್ಪೇಸ್ವಾಮಿ, ಮೇಟಿಕುರ್ಕೆ ತಿಪ್ಪೇಸ್ವಾಮಿ, ಮಹಂತೇಶ್, ದೇವರಕೊಟ್ಟ ರಂಗಸ್ವಾಮಿ, ರಾಘವೇಂದ್ರ, ಓಬಣ್ಣ, ಹನುಮಂತರಾಯ, ವೀರಣ್ಣ ಅವರೂ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು