ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಿಂಟಿಂಗ್ ಪ್ರೆಸ್‌ಗಳಿಗೆ ಬಂತು ಬೇಡಿಕೆ!

ಗ್ರಾಮ ಪಂಚಾಯಿತಿ ಚುನಾವಣೆಯ ಕರಪತ್ರ ಮುದ್ರಣಕ್ಕೆ ಮುಗಿಬಿದ್ದ ಅಭ್ಯರ್ಥಿಗಳು
Last Updated 16 ಡಿಸೆಂಬರ್ 2020, 2:00 IST
ಅಕ್ಷರ ಗಾತ್ರ

ಹೊಳಲ್ಕೆರೆ: ಗ್ರಾಮ ಪಂಚಾಯಿತಿ ಚುನಾವಣೆ ಹತ್ತಿರವಾಗುತ್ತಿದ್ದು, ಪ್ರಿಂಟಿಂಗ್‌ ಪ್ರೆಸ್‌ಗಳಿಗೆ ಭಾರೀ ಬೇಡಿಕೆ ಬಂದಿದೆ. ಡಿಸೆಂಬರ್ 22ರಂದು ಮೊದಲ ಹಂತದ ಮತದಾನ ನಡೆಯಲಿದ್ದು, ಕರಪತ್ರ ಮುದ್ರಣಕ್ಕೆ ಅಭ್ಯರ್ಥಿಗಳು, ಅವರ ಬೆಂಬಲಿಗರು ಪ್ರಿಂಟಿಂಗ್ ಪ್ರೆಸ್‌ಗಳಿಗೆ ಧಾವಿಸುತ್ತಿದ್ದಾರೆ.

ಚುನಾವಣಾ ಆಯೋಗ ಅಭ್ಯರ್ಥಿಗಳಿಗೆ ಚಿಹ್ನೆ ನೀಡುತ್ತಿದ್ದಂತೆ ಪಟ್ಟಣ ಹಾಗೂ ರಾಮಗಿರಿ, ಎಚ್.ಡಿ. ಪುರ, ಮಲ್ಲಾಡಿಹಳ್ಳಿಯ ಪ್ರಿಂಟಿಂಗ್ ಪ್ರೆಸ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ. ಕೆಲವು ಪ್ರಿಂಟಿಂಗ್ ಪ್ರೆಸ್ ಮಾಲೀಕರು ಕರಪತ್ರ ಮುದ್ರಿಸಲಾರದೆ ಅಭ್ಯರ್ಥಿಗಳನ್ನು ವಾಪಸ್ ಕಳುಹಿಸುವ ಹಂತಕ್ಕೆ ಬಂದಿದ್ದಾರೆ.

‘ನಮ್ಮ ಪ್ರೆಸ್‌ನ ಮುದ್ರಣ ಸಾಮರ್ಥ್ಯಕ್ಕೆ ಅನುಗುಣವಾಗಿ ಆರ್ಡರ್ ತೆಗೆದುಕೊಳ್ಳುತ್ತಿದ್ದೇವೆ. ಸಾಮಾನ್ಯವಾಗಿ ಒಬ್ಬ ಅಭ್ಯರ್ಥಿ 500ರಿಂದ 800 ಕರಪತ್ರಕ್ಕೆ ಆರ್ಡರ್ ಕೊಡುತ್ತಾರೆ. ತಾಲ್ಲೂಕಿನಲ್ಲಿ 29 ಗ್ರಾಮ ಪಂಚಾಯಿತಿಗಳಿದ್ದು, 1,292 ಅಭ್ಯರ್ಥಿಗಳಿದ್ದಾರೆ. ಒಬ್ಬರಿಗೆ ಕನಿಷ್ಠ 500 ಎಂದರೂ ಸುಮಾರು 6.5 ಲಕ್ಷ ಕರಪತ್ರ ಮುದ್ರಿಸಬೇಕು. ಪಟ್ಟಣದಲ್ಲಿ ನಾಲ್ಕು, ಗ್ರಾಮೀಣ ಪ್ರದೇಶಗಳಲ್ಲಿ ಏಳೆಂಟು ಮುದ್ರಣಾಲಯಗಳಿದ್ದು, ಇಷ್ಟೊಂದು ಕರಪತ್ರ ಮುದ್ರಿಸುವುದು ಕಷ್ಟ. ನಮ್ಮಲ್ಲಿರುವ ಮಷಿನ್‌ನಲ್ಲಿ ಒಂದು ಗಂಟೆಗೆ ಸುಮಾರು 5,000 ಕರಪತ್ರಗಳನ್ನು ಮುದ್ರಿಸಬಹುದು. ಹೆಚ್ಚು ಹೊತ್ತು ಕೆಲಸ ಮಾಡಿದರೆ ದಿನಕ್ಕೆ ಸುಮಾರು 40 ಸಾವಿರ ಕರಪತ್ರ ಮುದ್ರಿಸಬಹುದು. ವಿದ್ಯುತ್ ಕೈಕೊಟ್ಟರೆ ಇಷ್ಟೂ ಮುದ್ರಿಸಲಾಗುವುದಿಲ್ಲ’ ಎನ್ನುತ್ತಾರೆ ಪಟ್ಟಣದ ಶಂಕರ ಮುದ್ರಣಾಲಯದ ಮಾಲೀಕ ಶಿವಶಂಕರ್.

‘ಕರಪತ್ರ ಮುದ್ರಿಸಿಕೊಂಡು ಹೋಗಲು ಬಂದಿದ್ದೇವೆ. ಆದರೆ, ಯಾವ ಪ್ರೆಸ್‌ನವರೂ ಆರ್ಡರ್ ತೆಗೆದುಕೊಳ್ಳುತ್ತಿಲ್ಲ. ಎರಡು ದಿನ ಟೈಮ್ ಕೊಟ್ಟರೆ ಮುದ್ರಿಸಿಕೊಡುವುದಾಗಿ ಹೇಳುತ್ತಾರೆ. ಚುನಾವಣೆ ಹತ್ತಿರ ಇರುವುದರಿಂದ ನಮಗೆ ಟೆನ್ಷನ್ ಹೆಚ್ಚಾಗಿದೆ. ಕರಪತ್ರ ಇಲ್ಲದೆ ಪ್ರಚಾರ ನಡೆಸುವುದು ಕಷ್ಟ. ದುಡ್ಡು ಎಷ್ಟು ಬೇಕಾದರೂ ಕೊಡುತ್ತೇವೆ. ನಮಗೆ ಬೇಗ ಕರಪತ್ರ ಮುದ್ರಿಸಿಕೊಟ್ಟರೆ ಸಾಕು. ಕೆಲವರು ಇಲ್ಲಿ ಆಗುವುದಿಲ್ಲ ಎಂದು ಚಿತ್ರದುರ್ಗಕ್ಕೆ ಹೋಗಿದ್ದಾರೆ’ ಎನ್ನುತ್ತಾರೆ ಸಿರಾಪನಹಳ್ಳಿಯ ಅಭ್ಯರ್ಥಿ ಪ್ರದೀಪ್.

--------

‘ವ್ಯಾಪಾರದ ಜತೆಗೆ ಒತ್ತಡ ಹೆಚ್ಚಾಗಿದೆ’

‘ಗ್ರಾಮ ಪಂಚಾಯಿತಿ ಚುನಾವಣೆಯಿಂದ ನಮಗೆ ವ್ಯಾಪಾರದಲ್ಲಿ ಚೇತರಿಕೆ ಆಗಿದ್ದರೂ ಟೆನ್ಷನ್ ಹೆಚ್ಚಾಗಿದೆ’ ಎಂದು ಶಂಕರ ಮುದ್ರಣಾಲಯದ ದಾಕ್ಷಾಯಣಮ್ಮ ಹೇಳುತ್ತಾರೆ.

‘ಚುನಾವಣೆ ಹತ್ತಿರ ಇರುವುದರಿಂದ ಅಭ್ಯರ್ಥಿಗಳು ಒಮ್ಮೆಲೆ ಮುಗಿಬೀಳುತ್ತಾರೆ. ಇವತ್ತೇ ಕರಪತ್ರ ಮುದ್ರಿಸಿ ಕೊಡಿ ಎಂದು ಒತ್ತಾಯಿಸುತ್ತಾರೆ. ನಮಗೆ ತಿಂಡಿ, ಊಟ, ನಿದ್ದೆ ಮಾಡಲೂ ಬಿಡುವುದಿಲ್ಲ. ಹಗಲು, ರಾತ್ರಿ ಮುದ್ರಿಸಿದರೂ ಸಮಯ ಸಾಕಾಗುತ್ತಿಲ್ಲ. ಒಂಚೂರು ತಪ್ಪಾದರೂ ಜಗಳಕ್ಕೆ ಬರುತ್ತಾರೆ. ಜನರ ಕಾಟ ತಾಳಲಾರದೆ ಪ್ರಿಂಟಿಂಗ್ ಪ್ರೆಸ್‌ನ ಮುಂದಿನ ಬಾಗಿಲು ಮುಚ್ಚಿಕೊಂಡು ಒಳಗೆ ಕೆಲಸ ಮಾಡುತ್ತಿದ್ದೇವೆ’ ಎನ್ನುತ್ತಾರೆ ಅವರು.

===

ಕೋವಿಡ್ ಬಂದಾಗಿನಿಂದ ಪ್ರಿಂಟಿಂಗ್ ಪ್ರೆಸ್ ಮಾಲೀಕರು ಸಂಕಷ್ಟ ಅನುಭವಿಸುತ್ತಿದ್ದರು. ಈಗ ಗ್ರಾಮ ಪಂಚಾಯಿತಿ ಚುನಾವಣೆ ಬಂದಿದ್ದು ವ್ಯಾಪಾರ ಹೆಚ್ಚಾಗಿದೆ. <br/>-ಶಿವಶಂಕರ್, ಶಂಕರ ಮುದ್ರಣಾಲಯದ ಮಾಲೀಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT