ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಯಕನಹಟ್ಟಿ: ಅಲೆಮಾರಿ ಸಮುದಾಯಗಳಿಗೆ ನಿವೇಶನ ಹಂಚಲು ಆಗ್ರಹ

Last Updated 13 ಜನವರಿ 2021, 13:34 IST
ಅಕ್ಷರ ಗಾತ್ರ

ನಾಯಕನಹಟ್ಟಿ: ಸರ್ಕಾರ ಹಲವು ವರ್ಷಗಳ ಹಿಂದೆ ಪಟ್ಟಣದ 5ನೇ ವಾರ್ಡಿನಲ್ಲಿರುವ ಅಲೆಮಾರಿ ಸಮುದಾಯಗಳಿಗೆ ನೀಡಿರುವ ನಿವೇಶನಗಳನ್ನು ಹಂಚಿಕೆ ಮಾಡಿ ಮೂಲಸೌಕರ್ಯ ಒದಗಿಸಬೇಕು ಎಂದು ಅಲೆಮಾರಿ ಸಮುದಾಯದ ಮುಖಂಡರು ಆಗ್ರಹಿಸಿದರು.

ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿದ ಮುಖಂಡರು ಹಲವು ವರ್ಷಗಳಿಂದ ವಾಸಿಸುತ್ತಿದ್ದರೂ ನಿವೇಶನ ನೀಡದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.

ಮುಖಂಡ ಎಂ.ರಾಮಣ್ಣ , ‘ಪಟ್ಟಣದಲ್ಲಿ 30 ವರ್ಷಗಳಿಂದ ದೊಂಬಿದಾಸ ಹಾಗೂ ಮುಂಡಾಲ ಸಮುದಾಯದ ಜನರು ಗುಡಿಸಲಿನಲ್ಲಿ ಹಾಗೂ ಬಟ್ಟೆ ಟೆಂಟ್‌ಗಳಲ್ಲಿ ವಾಸಿಸುತ್ತಿದ್ದೇವೆ. 6 ವರ್ಷದ ಹಿಂದೆ ಗುಡಿಸಲುಗಳು ಬೆಂಕಿಗೆ ಆಹುತಿಯಾಗಿದ್ದವು. 2016ರಲ್ಲಿ ಸರ್ಕಾರ ಪಟ್ಟಣದ 5ನೇ ವಾರ್ಡಿನಲ್ಲಿ ವಾಸಿಸುತ್ತಿರುವ ಅಲೆಮಾರಿ ಹಾಗೂ ಅರೆ ಅಲೆಮಾರಿ ಸಮುದಾಯದ ಕುಟುಂಬಗಳಿಗೆ 28 ನಿವೇಶನಗಳನ್ನು ನೀಡಲು ಅನುಮೋದನೆ ನೀಡಿದೆ. ಅದಕ್ಕಾಗಿ ಪಟ್ಟಣದ ಹೊರವಲಯದಲ್ಲಿರುವ ಸರ್ವೇ ನಂ.194ರಲ್ಲಿ 1ಎಕರೆ ಜಮೀನನ್ನು ಕಂದಾಯ ಇಲಾಖೆ ಮಂಜೂರು ಮಾಡಿದೆ. ಆದರೆ ಫಲಾನುಭವಿಗಳಿಗೆ ನಿವೇಶನಗಳನ್ನು ವಿತರಿಸಲು ಸ್ಥಳಿಯ ಕಂದಾಯ ಇಲಾಖೆ ಅಧಿಕಾರಿಗಳಾಗಲಿ, ಪಟ್ಟಣ ಪಂಚಾಯಿತಿ ಅಧಿಕಾರಿಗಳಾಗಲಿ ಮುಂದಾಗುತ್ತಿಲ್ಲ’ ಎಂದು ದೂರಿದರು.

ಮುಖಂಡ ಮರಿಪಾಲಯ್ಯ, ‘ಸ್ಥಳೀಯ ಆಡಳಿತ 5 ವರ್ಷಗಳಾದರೂ ನಿವೇಶನದ ಫಲಾನುಭವಿಗಳನ್ನು ಗುರುತಿಸಿಲ್ಲ. ಸಮುದಾಯದ ಜನರು ಬಟ್ಟೆ ಟೆಂಟ್‌ಗಳಲ್ಲಿ ವಾಸ ಮಾಡುತ್ತಿದ್ದಾರೆ. ಪಟ್ಟಣದ ಹೊರವಲಯದಲ್ಲಿರುವ ಈ ಜನರಿಗೆ ಸರಿಯಾದ ರಸ್ತೆ, ಕುಡಿಯುವ ನೀರು ಹಾಗೂ ಬೆಳಕಿನ ವ್ಯವಸ್ಥೆ ಇಲ್ಲ. ರಾತ್ರಿ ವೇಳೆ ವಿಷ ಜಂತುಗಳ ಕಾಟದಿಂದ ಮಹಿಳೆಯರು ಮಕ್ಕಳು ರೋಸಿ ಹೋಗಿದ್ದಾರೆ. ಹಾಗಾಗಿ ತುರ್ತಾಗಿ ನಿವೇಶನ ವಿತರಿಸಬೇಕು. ಮತ್ತು ಸರ್ಕಾರದ ಆಶ್ರಯ ಯೋಜನೆಯಲ್ಲಿ ಮನೆಗಳನ್ನು ನೀಡಬೇಕು’ ಎಂದು ಒತ್ತಾಯಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಚ್.ಡಿ. ಲಿಂಗರಾಜ್, ‘ಈ ಬಗ್ಗೆ ಕಡತಗಳನ್ನು ಪರಿಶೀಲಿಸಲಾಗುವುದು. ಕಂದಾಯ ಇಲಾಖೆ ಹಾಗೂ ಕಾನೂನು ತಜ್ಞರ ಸಲಹೆ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದರು.

ಅಲೆಮಾರಿ ಸಮುದಾಯದ ವೆಂಕಟಮ್ಮ, ನಾಗಮ್ಮ, ರೇಣುಕಮ್ಮ, ಅಂಜಿನಿ, ನಾಗಮ್ಮ, ಕೆಂಚಪ್ಪ, ತಿಪ್ಪೇಶ್, ರಾಮಕ್ಕ, ರಾಮು, ತಿಪ್ಪೇಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT