ಗುರುವಾರ , ಮೇ 19, 2022
21 °C
ಯಾದಲಗಟ್ಟೆ; ನಿರಾಕರಿಸಿದ ವ್ಯಕ್ತಿಯಿಂದಲೇ ಕ್ಷೌರ

ಪರಿಶಿಷ್ಟ ಜಾತಿಯವರಿಗೆ ಕ್ಷೌರ ನಿರಾಕರಣೆ; ಮನವೊಲಿಸಿದ ತಹಶೀಲ್ದಾರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಳ್ಳಕೆರೆ: ತಾಲ್ಲೂಕಿನ ಕಾಲುವೆಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಾದಲಗಟ್ಟೆ ಗ್ರಾಮದಲ್ಲಿ ಪರಿಶಿಷ್ಟ ಜಾತಿಯವರಿಗೆ ಶ್ರೀನಿವಾಸ್ ಎಂಬುವರು ಕ್ಷೌರ ಮಾಡಲು ನಿರಾಕರಿಸಿರುವ ಆರೋಪ ಕೇಳಿಬಂದಿದೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಶನಿವಾರ ಹರಿದಾಡಿತ್ತು. ವಿಷಯ ತಿಳಿದ ತಹಶೀಲ್ದಾರ್‌ ಎನ್.ರಘುಮೂರ್ತಿ ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ನಿರಾಕರಿಸಿದ ವ್ಯಕ್ತಿಯ ಮನವೊಲಿಸಿ ಅವರಿಂದಲೇ ಪರಿಶಿಷ್ಟ ಜಾತಿಯವರಿಗೆ ಕ್ಷೌರ ಮಾಡಿಸಿದ್ದು, ಗ್ರಾಮದಲ್ಲಿ ಉಂಟಾಗಿದ್ದ ಬಿಗುವಿನ ವಾತಾವರಣ ತಿಳಿಗೊಂಡಿತು.

‘ಡಾ.ಬಿ.ಆರ್.ಅಂಬೇಡ್ಕರ್ ಆಶಯ ದಂತೆ ಗ್ರಾಮದಲ್ಲಿ ಪ್ರತಿಯೊಬ್ಬರೂ ಪ್ರೀತಿ, ವಿಶ್ವಾಸ, ಪರಸ್ಪರ ಹೊಂದಾಣಿಕೆಯಿಂದ ಸಾಮರಸ್ಯದ ಬದುಕನ್ನು ಕಟ್ಟಿಕೊಳ್ಳಬೇಕು. ಹಿಂದುಳಿದವರನ್ನು ಮನುಷ್ಯರಂತೆ ಕಾಣಬೇಕು. ಇದರಿಂದ ಆಯಾ ಕುಲಕಸುಬಿಗೆ ಗೌರವ ದೊರೆ ಯುತ್ತದೆ. ಕ್ಷೌರ ನಿರಾಕರಿಸಿ ಸಮಾಜ-ಸರ್ಕಾರಕ್ಕೆ ಕೆಟ್ಟ ಹೆಸರು ತರಬಾರದು’ ಎಂದು ಶ್ರೀನಿವಾಸ್ ಅವರಿಗೆ ತಹಶೀಲ್ದಾರ್‌ ತಿಳಿವಳಿಕೆ ನೀಡಿದರು.

‘ಯಾದಲಗಟ್ಟೆ ಗ್ರಾಮದಲ್ಲಿ ಕ್ಷೌರಿಕರು ಇಲ್ಲದ ಕಾರಣ ಪಕ್ಕದ ಗ್ರಾಮದ ಕ್ಯಾತಗೊಂಡನಹಳ್ಳಿಯ ಶ್ರೀನಿವಾಸ್ ವಾರಕ್ಕೆ 2 ಸಲ ಗ್ರಾಮಕ್ಕೆ ಬಂದು ಜನರಿಗೆ ಕ್ಷೌರ ಮಾಡಿ ಸ್ವಗ್ರಾಮಕ್ಕೆ ಮರಳುತ್ತಿದ್ದರು’ ಎಂದು ಗ್ರಾಮದವರು ತಿಳಿಸಿದ್ದಾರೆ.

ವಿಡಿಯೊದಲ್ಲಿ ಇರುವುದೇನು?

‘ನಾನು ನರಸಿಂಹ ಸ್ವಾಮಿ ದೇವರಿಗೆ ನಡೆದುಕೊಳ್ಳುತ್ತೇನೆ. ಹಾಗಾಗಿ ಕ್ಷೌರ ಮಾಡುವುದಿಲ್ಲ’ ಎಂದು ಶ್ರೀನಿವಾಸ್ ನಿರಾಕರಿಸಿದ್ದಾರೆ. ಆಗ ಗ್ರಾಮದವರು ‘ಕ್ಷೌರ ಮಾಡದಿದ್ದರೆ ನಮ್ಮೂರಿಗೆ ಬರಬೇಡ’ ಎಂದು ಗದರಿದ್ದಾರೆ. ಆಗ ಶ್ರೀನಿವಾಸ್, ‘ಕ್ಷೌರ ಮಾಡಬೇಡ ಎಂದು ಗ್ರಾಮದವರೇ ಹೇಳಿದ್ದಾರೆ’ ಎಂದು ಉತ್ತರಿಸಿದ್ದಾರೆ. ಆಗ ‘ಯಾರು ಹೇಳು’ ಎಂದು ಪಟ್ಟು ಹಿಡಿದಿದ್ದಾರೆ. ಗ್ರಾಮದ ಜನರು ಸೇರಿಕೊಂಡು ಆತನ ಮನವೊಲಿಸಲು ಪ್ರಯತ್ನಿಸಿದರೂ ಅದು ಸಾಧ್ಯವಾಗಲಿಲ್ಲ.

ಇದನ್ನು ಕೆಲವರು ವಿಡಿಯೊ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ.

‘ನಾನು ಬೀದಿ ಬದಿಯಲ್ಲೇ ಜನರಿಗೆ ಕ್ಷೌರ ಮಾಡಬೇಕು. ನಾನು ಅಂಗವಿಕಲ. ಕ್ಷೌರಿಕ ವೃತ್ತಿ ಬಿಟ್ಟರೆ ಬೇರೆ ಯಾವ ಕೆಲಸವನ್ನೂ ಮಾಡಲು ಆಗುವುದಿಲ್ಲ. ಹಾಗಾಗಿ ಕ್ಷೌರ ಮಾಡಲು ಪ್ರತ್ಯೇಕ ಕೊಠಡಿ ನಿರ್ಮಿಸಿಕೊಡಿ’ ಎಂದು ಕ್ಷೌರಿಕ ಶ್ರೀನಿವಾಸ್ ಅಧಿಕಾರಿಗಳಲ್ಲಿ ಮನವಿ ಮಾಡಿದರು.

ಗ್ರಾಮಾಭಿವೃದ್ಧಿ ಅಧಿಕಾರಿ ರಜನಿ, ಮುಖ್ಯಶಿಕ್ಷಕ ಗುರುಸಿದ್ದಮೂರ್ತಿ, ಜಿಲ್ಲಾ ನವ ಜಾಗೃತಿ ಯುವ ವೇದಿಕೆ ಕಾರ್ಯದರ್ಶಿ ಎನ್. ಜಗನ್ನಾಥ್, ನಾಗರಾಜ ಇದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.