ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ: ಚಿಕಿತ್ಸೆಗೆ ಕಾಯುತ್ತಿದೆ ಪಶುವೈದ್ಯಕೀಯ ಇಲಾಖೆ

Last Updated 15 ನವೆಂಬರ್ 2021, 5:14 IST
ಅಕ್ಷರ ಗಾತ್ರ

ಚಿತ್ರದುರ್ಗ: ರಾಜ್ಯದಲ್ಲಿಯೇ ಅತಿ ಹೆಚ್ಚು ಕುರಿ–ಮೇಕೆಗಳನ್ನು ಹೊಂದಿದ ಜಿಲ್ಲೆಗಳ ಸಾಲಿನಲ್ಲಿರುವ ಚಿತ್ರದುರ್ಗದಲ್ಲಿ ಪಶುವೈದ್ಯಕೀಯ ಇಲಾಖೆಯೇ ಚಿಕಿತ್ಸೆಗೆ ಕಾಯುತ್ತಿದೆ. ಜಾನುವಾರಿಗೆ ಸಕಾಲಕ್ಕೆ ಸಿಗದ ಚಿಕಿತ್ಸೆ, ಪಶು ಪಾಲಕರ ಕೈಗೆಟುಕದ ಔಷಧ, ಪಶು ಚಿಕಿತ್ಸಾಲಯಕ್ಕೆ ಸಿಗದ ಮೂಲಸೌಲಭ್ಯ ಹಾಗೂ ಸಿಬ್ಬಂದಿಯ ಕೊರತೆಯಿಂದ ಪಶುವೈದ್ಯಕೀಯ ಇಲಾಖೆ ನರಳುತ್ತಿದೆ.

ಜಿಲ್ಲೆಯಲ್ಲಿ ವಿಶಾಲವಾಗಿ ಹರಡಿದ ಹುಲ್ಲುಗಾವಲುಗಳಂತಹ ಪ್ರದೇಶದಲ್ಲಿ ಕುರಿ–ಮೇಕೆ ಸಾಕಣೆ ಹೆಚ್ಚಾಗಿದೆ. ಕಾವಲು, ಗೋಮಾಳ ಪ್ರದೇಶ ಇರುವೆಡೆ ಜಾನುವಾರು ಸಾಕಣೆಯನ್ನು ರೈತರು ಉಪಕಸುಬಾಗಿ ನಂಬಿಕೊಂಡಿದ್ದಾರೆ. ಗೊಲ್ಲ ಹಾಗೂ ಮ್ಯಾಸಬೇಡ ಬುಡಕಟ್ಟು ಜನರಿಗೆ ಜಾನುವಾರು ಹಾಗೂ ಕುರಿ ಸಾಕಣೆಯೇ ಮುಖ್ಯ ಕಸುಬಾಗಿದೆ. ಕೃಷಿ ಕ್ಷೇತ್ರದಷ್ಟೇ ಪಶುಪಾಲನೆಯ ಮೇಲೆಯೂ ರೈತರು ಅವಲಂಬಿತರಾಗಿದ್ದಾರೆ. ಆದರೆ, ಪಶುವೈದ್ಯಕೀಯ ಸೇವೆ ಮಾತ್ರ ಸಮರ್ಪಕವಾಗಿ ಸಿಗುತ್ತಿಲ್ಲ ಎಂಬ ಕೊರಗು ಜನರಲ್ಲಿದೆ.

ಜಿಲ್ಲೆಯಲ್ಲಿ 2.25 ಲಕ್ಷ ದನಕರು, 1.13 ಲಕ್ಷ ಎಮ್ಮೆ, 13.52 ಲಕ್ಷ ಕುರಿ ಹಾಗೂ 3.85 ಲಕ್ಷ ಮೇಕೆಗಳಿವೆ. 772 ಮೊಲ, 26 ಸಾವಿರ ನಾಯಿ, 51 ಕುದುರೆ ಹಾಗೂ 2 ಸಾವಿರ ಹಂದಿಗಳನ್ನು ಜಿಲ್ಲೆಯಲ್ಲಿ ಸಾಕಣೆ ಮಾಡಲಾಗುತ್ತಿದೆ. ಇದರಲ್ಲಿ ಸ್ವದೇಶಿ ಹಾಗೂ ವಿದೇಶಿ ತಳಿಗಳೂ ಇವೆ. ಈ ಸಾಕು ಪ್ರಾಣಿಗಳ ಆರೋಗ್ಯ ಕಾಪಾಡುವ ಹೊಣೆ ಪಶುವೈದ್ಯಕೀಯ ಇಲಾಖೆಯ ಮೇಲಿದೆ. ಸಕಾಲಕ್ಕೆ ಚಿಕಿತ್ಸೆ ನೀಡಲು ಸಿಬ್ಬಂದಿ ಕೊರತೆ ಇರುವ ಕಾರಣಕ್ಕೆ ಇಡಿ ಇಲಾಖೆ ಸೊರಗಿ ಹೋಗಿದೆ. ಸಮರ್ಪಕ ಸೇವೆಗೆ ಬೇಡಿಕೆ ಮುಂದಿಟ್ಟು ಅಲ್ಲಲ್ಲಿ ಹೋರಾಟ ನಡೆಸಿದ ಪಶುಪಾಲಕರು ಕೂಡ ಬೇಸರದಿಂದ ಮೌನವಾಗಿದ್ದಾರೆ.

ಪಶುಪಾಲನೆ ಜಿಲ್ಲೆಯ ಬಹುತೇಕ ಕುಟುಂಬಗಳ ಮೂಲ ಕಸುಬು. ಇದರೊಂದಿಗೆ ಬುಡಕಟ್ಟು ಸಮುದಾಯದ ಸಂಸ್ಕೃತಿಯೂ ಬೆರೆತುಕೊಂಡಿದೆ. ಚಳ್ಳಕೆರೆ, ಮೊಳಕಾಲ್ಮುರು, ಹಿರಿಯೂರು ಹಾಗೂ ಚಿತ್ರದುರ್ಗ ತಾಲ್ಲೂಕುಗಳಲ್ಲಿ ಕುರಿ–ಮೇಕೆ ಸಾಕಣೆ ಹೆಚ್ಚಾಗಿದೆ. ಮ್ಯಾಸಬೇಡ ಹಾಗೂ ಗೊಲ್ಲ ಸಮುದಾಯದ ಬಹುಪಾಲು ಜನರ ಪ್ರಮುಖ ಕಸುಬು ಪಶುಪಾಲನೆ. ಕುರಿ–ಮೇಕೆಗೆ ಬರುವ ಕಾಯಿಲೆಗಳು ಬಹುಬೇಗ ವ್ಯಾಪಿಸುತ್ತವೆ. ಇಂತಹ ಸಂದರ್ಭದಲ್ಲಿ ಸಕಾಲಕ್ಕೆ ಸೇವೆ ದೊರೆತ ನಿದರ್ಶನ ವಿರಳ ಎಂಬ ಕೊರಗು ಪಶುಪಾಲಕರಲ್ಲಿದೆ.‌

ಪಶುವೈದ್ಯಕೀಯ ಇಲಾಖೆಯನ್ನು ಪ್ರಮುಖವಾಗಿ ಬಾಧಿಸುತ್ತಿರುವುದು ಸಿಬ್ಬಂದಿ ಕೊರತೆ. ಇಲಾಖೆಗೆ ಮಂಜೂರಾದ ಹುದ್ದೆಯಲ್ಲಿ ಶೇ 49ರಷ್ಟು ಖಾಲಿ ಇವೆ. 604 ಮಂಜೂರಾತಿ ಹುದ್ದೆಯಲ್ಲಿ 309 ಸಿಬ್ಬಂದಿ ಮಾತ್ರ ಕೆಲಸ ಮಾಡುತ್ತಿದ್ದಾರೆ. ಮುಖ್ಯ ಪಶುವೈದ್ಯಾಧಿಕಾರಿ 7, ಹಿರಿಯ ಪಶು ವೈದ್ಯಾಧಿಕಾರಿ12 ಹುದ್ದೆಗಳು ಭರ್ತಿಯಾಗಿಲ್ಲ. 43 ಪಶುವೈದ್ಯಕೀಯ ಪರೀಕ್ಷಕರು, 60 ಕಿರಿಯ ಪಶುವೈದ್ಯಕೀಯ ಪರೀಕ್ಷಕರು, 154 ‘ಡಿ’ ದರ್ಜೆ ನೌಕರರ ಹುದ್ದೆಗಳು ಖಾಲಿ ಇವೆ. ಕ್ಷ–ಕಿರಣ ವಿಭಾಗದಲ್ಲಿರುವ ಹುದ್ದೆ ಈವರೆಗೆ ಭರ್ತಿಯಾಗಿಲ್ಲ.

ಹೊಸದುರ್ಗ, ಚಳ್ಳಕೆರೆ ಹಾಗೂ ಮೊಳಕಾಲ್ಮುರು ತಾಲ್ಲೂಕಿನಲ್ಲಿ ವೈದ್ಯರು ಎರಡು ಅಥವಾ ಮೂರು ಆಸ್ಪತ್ರೆಗಳಲ್ಲಿ ಹೆಚ್ಚುವರಿ ಹೊಣೆ ನಿಭಾಯಿಸುತ್ತಿದ್ದಾರೆ. ಬೆಳಿಗ್ಗೆ ಒಂದು ಆಸ್ಪತ್ರೆಯಲ್ಲಿ, ಮಧ್ಯಾಹ್ನ ಮತ್ತೊಂದು ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುವ ಸ್ಥಿತಿ ಇದೆ. ತುರ್ತು ಸಂದರ್ಭದಲ್ಲಿ ಸಂಚಾರಿ ಆಸ್ಪತ್ರೆಯ ಸೇವೆಯನ್ನು ಪಡೆಯಲು ಅವಕಾಶವಿದೆ. ತಾಲ್ಲೂಕಿಗೆ ಒಂದರಂತೆ ಇರುವ ಈ ಸಂಚಾರಿ ಆಸ್ಪತ್ರೆಯ ಮೇಲಿನ ಹೊರೆ ಹೆಚ್ಚಾಗಿದೆ ಎಂಬುದು ಸಿಬ್ಬಂದಿ ಅಳಲು.

ಕುರಿ–ಮೇಕೆಗಳು ಅಪಘಾತಕ್ಕೆ ಬಲಿಯಾಗುವುದು ಹೆಚ್ಚಾಗುತ್ತಿದೆ. ರಾಜ್ಯ ಹೆದ್ದಾರಿಯಲ್ಲಿ ಅಪಘಾತ ಹೆಚ್ಚು. ಭಾರಿ ವಾಹನ ಹರಿದು ಹತ್ತಾರು ಕುರಿ–ಮೇಕೆ ಏಕಕಾಲಕ್ಕೆ ಮೃತಪಡುತ್ತಿವೆ. ಇಂತಹ ಸಂದರ್ಭದಲ್ಲಿ ಕುರಿ–ಮೇಕೆಗೆ ತುರ್ತು ಚಿಕಿತ್ಸೆ ಒದಗಿಸಲು ಸಾಧ್ಯವಾಗುತ್ತಿಲ್ಲ. ಕಾಲುಬಾಯಿ ಜ್ವರ, ಕರಳು ಬೇನೆ ಸೇರಿ ಹಲವು ಕಾಯಿಲೆಗಳಿಗೆ ಲಸಿಕೆ ಹಾಕುವ ಅಭಿಯಾನ ನಿರಂತರವಾಗಿ ನಡೆಯುತ್ತದೆ. ಸಿಬ್ಬಂದಿಯ ಕೊರತೆಯಿಂದ ಇದನ್ನು ಸಕಾಲಕ್ಕೆ ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ.

ರಾಷ್ಟ್ರೀಯ ಕಾರ್ಯಕ್ರಮ ಅನುಷ್ಠಾನ ಸಮಸ್ಯೆ

ಹಿರಿಯೂರು: ತಾಲ್ಲೂಕಿನಲ್ಲಿ ಒಂದು ಸಂಚಾರಿ ಪಶು ಚಿಕಿತ್ಸಾಲಯ ಸೇರಿ ಒಟ್ಟು 26 ಪಶು ವೈದ್ಯಕೀಯ ಆಸ್ಪತ್ರೆಗಳಿವೆ. ಪಶುವೈದ್ಯರಲ್ಲಿ ಮಾತ್ರ ಮೂರು ಹುದ್ದೆಗಳು ಖಾಲಿ ಇವೆ.

2018ರಲ್ಲಿ ನಡೆದ ಗಣತಿಯಂತೆ ತಾಲ್ಲೂಕಿನಲ್ಲಿ 29 ಸಾವಿರ ಹಸು, 12 ಸಾವಿರ ಎಮ್ಮೆ , 3.8 ಲಕ್ಷ ಕುರಿ,1.1 ಲಕ್ಷ ಮೇಕೆಗಳಿವೆ. ಹಸು, ಎಮ್ಮೆ, ಹಂದಿಗಳಲ್ಲಿ ಕಾಣಿಸಿಕೊಳ್ಳುವ ಕಾಲುಬಾಯಿ ಜ್ವರಕ್ಕೆ ವರ್ಷಕ್ಕೆ ಎರಡು ಬಾರಿ ಲಸಿಕೆ, ಮಳೆ ಹೆಚ್ಚಾದಾಗ ಕುರಿ–ಮೇಕೆಗಳಲ್ಲಿ ಕಂಡುಬರುವ ಕಾಲಿನ ಗೊರಸಿನ ಕೀವು, ಕರುಳು, ಗಂಟಲುಬೇನೆ ರೋಗಗಳಿಗೆ ಕಾಲಕಾಲಕ್ಕೆ ಲಸಿಕೆ ಹಾಕಬೇಕಾಗುತ್ತದೆ.

ಜಾನುವಾರಿಗೆ ವಿಶೇಷ ಗುರುತಿನ ಸಂಖ್ಯೆ ನೀಡುವ ಹೊಣೆಯೂ ಇಲಾಖೆಯ ಸಿಬ್ಬಂದಿಯ ಮೇಲಿದೆ. ಇದರ ಪೂರ್ಣ ವಿವರವನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಬೇಕು. ಇದಕ್ಕೆ ತಾಂತ್ರಿಕತೆಯ ಅನುಭವ ಇರುವವರು ಬೇಕು. ಲಸಿಕೆ ಕಾರ್ಯಕ್ರಮಕ್ಕೆ ಪಶುವೈದ್ಯ ಪರೀಕ್ಷಕರು, ಪಶುವೈದ್ಯ ಸಹಾಯಕರು, ‘ಡಿ’ ಗ್ರೂಪ್ ನೌಕರರು ಅಗತ್ಯವಾಗಿ ಬೇಕು ಎನ್ನುತ್ತಾರೆ ತಾಲ್ಲೂಕು ಮುಖ್ಯ ಪಶುವೈದ್ಯಾಧಿಕಾರಿ ಡಾ. ಎಸ್. ಹೊರಕೇರಪ್ಪ.

ಹಿರಿಯ ಪಶುವೈದ್ಯ ಪರೀಕ್ಷಕರ 9 ಹುದ್ದೆಗಳಲ್ಲಿ ಒಂದು, ಪಶುವೈದ್ಯ ಪರೀಕ್ಷಕರ 4, ಪಶುವೈದ್ಯ ಸಹಾಯಕರ 9, ‘ಡಿ’ ಗ್ರೂಪ್ ನೌಕರರ 45 ಹುದ್ದೆಗಳಲ್ಲಿ ಕೇವಲ ಮೂವರು ಕಾಯಂ ನೌಕರರಿದ್ದು, 16 ಜನರನ್ನು ಹೊರಗುತ್ತಿಗೆ ಮೇಲೆ ನೇಮಿಸಿಕೊಂಡಿದ್ದೇವೆ. ಇಲಾಖೆಗೆ ಒಂದು ವಾಹನವಿದ್ದು, ವಾಹನ ಹೋಗದ ಸ್ಥಳಗಳಿಗೆ, ಸಿಬ್ಬಂದಿ ಕೊರತೆ ಇರುವ ಕಡೆ ಮಾತ್ರ ಬಳಸುತ್ತೇವೆ. ಮೊದಲು ಕೆಎಂಎಫ್‌ ಐದು ವಾಹನದ ವ್ಯವಸ್ಥೆ ಮಾಡಿತ್ತು. ಲಾಕ್‌ಡೌನ್ ನಂತರ ವಾಹನಗಳನ್ನು ಕೊಟ್ಟಿಲ್ಲ. ಹೀಗಾಗಿ ರಾಷ್ಟ್ರೀಯ ಕಾರ್ಯಕ್ರಮಗಳ ಅನುಷ್ಠಾನ, ಜಾನುವಾರುಗಳಿಗೆ ಇದ್ದಕ್ಕಿದ್ದಂತೆ ಮಾರಣಾಂತಿಕ ರೋಗ ಕಂಡುಬಂದರೆ ಚಿಕಿತ್ಸೆ ಕಷ್ಟವಾಗುತ್ತದೆ’ ಎಂದು ಅವರು ಹೇಳುತ್ತಾರೆ.

ಕುರಿ-ಮೇಕೆಗಿಲ್ಲ ಸಕಾಲದ ಚಿಕಿತ್ಸೆ

ನಾಯಕನಹಟ್ಟಿ: ಕುರಿ–ಮೇಕೆಗಳಿಗೆ ತಕ್ಷಣಕ್ಕೆ ಎದುರಾಗುವ ಆರೋಗ್ಯ ಸಮಸ್ಯೆಗಳಿಗೆ ಪಶುವೈದ್ಯಕೀಯ ಸಿಬ್ಬಂದಿಯ ಕೊರತೆಯಿಂದ ಸೂಕ್ತವಾದ ಚಿಕಿತ್ಸೆ ಲಭಿಸುತ್ತಿಲ್ಲ.

ಬಯಲುಸೀಮೆಯಾದ ನಾಯಕನಹಟ್ಟಿ ಹೋಬಳಿಯಲ್ಲಿ ಕುರಿ–ಮೇಕೆ ಸಾಕಾಣಿಕೆಗೆ ಉತ್ತಮ ನೈಸರ್ಗಿಕ ವಾತವರಣವಿದೆ. ಒಂದು ದಶಕದಿಂದ ಕುರಿ–ಮೇಕೆ ಸಾಕಾಣಿಕೆದಾರರ ಸಂಖ್ಯೆ ದ್ವಿಗುಣವಾಗಿದೆ. ನಾಯಕನಹಟ್ಟಿ ಪಶು ಚಿಕಿತ್ಸಾ ಕೇಂದ್ರದ ವ್ಯಾಪ್ತಿಯಲ್ಲಿ ಸುಮಾರು 57 ಸಾವಿರ ಕುರಿಗಳು, 9 ಸಾವಿರ ಮೇಕೆಗಳು ಇವೆ. ಹೋಬಳಿಯ ಪ್ರತಿಯೊಂದು ಗ್ರಾಮದಲ್ಲೂ ಬಹುತೇಕ ರೈತ ಕುಟುಂಬಗಳು ಕುರಿ–ಮೇಕೆಯನ್ನು ಉಪಕಸುಬನ್ನಾಗಿ ಮಾಡಿಕೊಂಡಿವೆ.

ನಾಯಕನಹಟ್ಟಿ ಪಟ್ಟಣ ಸೇರಿದಂತೆ ತಿಮ್ಮಪ್ಪಯ್ಯನಹಳ್ಳಿ ಮತ್ತು ನೇರಲಗುಂಟೆ ಗ್ರಾಮಗಳಲ್ಲಿ ಪಶು ಚಿಕಿತ್ಸಾಲಯಗಳಿವೆ. ಹಾಗೂ ಜೋಗಿಹಟ್ಟಿ, ಅಬ್ಬೇನಹಳ್ಳಿ, ಎನ್.ದೇವರಹಳ್ಳಿ ಗ್ರಾಮಗಳಲ್ಲಿ ಪ್ರಾಥಮಿಕ ಪಶುಚಿಕಿತ್ಸಾ ಕೇಂದ್ರಗಳಿವೆ. ಆದರೆ, ಕುರಿಮೇಕೆಗಳ ಸಂಖ್ಯೆಗೆ ಅನುಗುಣವಾಗಿ ಚಿಕಿತ್ಸಾ ಸೌಲಭ್ಯ, ಔಷಧಗಳು ಸಕಾಲಕ್ಕೆ ದೊರೆಯುತ್ತಿಲ್ಲ. ಇದರಿಂದ ಸಾಕಾಣಿಕೆದಾರರು ಕುರಿಮೇಕೆಗಳ ಆರೋಗ್ಯ ರಕ್ಷಿಸಲು ಹರಸಾಹಸಪಡಬೇಕಾಗಿದೆ. ಜತೆಗೆ ಔಷಧಗಳಿಗೆ ಖಾಸಗಿ ಔಷಧಂಗಡಿ ಮೊರೆಹೋಗುತ್ತಿದ್ದಾರೆ.

‘ಕುರಿ–ಮೇಕೆಗಳಿಗೆ ಮಳೆಗಾಲ ಮತ್ತು ಚಳಿಗಾಲದಲ್ಲಿ ಹೊಸಚಿಗುರು ಹುಲ್ಲನ್ನು ಮೇಯುವುದರಿಂದ ಕರುಳುಬೇನೆ ರೋಗಬರುತ್ತದೆ. ಬೇಧಿಯಾಗುವುದು ಮತ್ತು ಪಿಪಿಆರ್ ಸೋಂಕಿನಿಂದ ಜ್ವರ ಬರುವುದು, ಬೇಸಿಗೆಯಲ್ಲಿ ದೊಮ್ಮೆರೋಗ ಬರುವುದು ಸಾಮಾನ್ಯ. ಈ ರೋಗಗಳಿಗೂ ಉಚಿತ ಚಿಕಿತ್ಸೆಗಳಿವೆ. ಅದಕ್ಕಾಗಿ ಪ್ರತಿ 6 ತಿಂಗಳಿಗೊಮ್ಮೆ ಕುರಿಮೇಕೆಗಳಿಗೆ ಲಸಿಕೆ ಹಾಕಿಸಬೇಕು’ ಎಂದು ನಾಯಕನಹಟ್ಟಿ ಪಶುಚಿಕಿತ್ಸಾ ಕೇಂದ್ರದ ವೈದ್ಯಾಧಿಕಾರಿ ವಿಜಯಕುಮಾರ್ ಸಲಹೆ ನೀಡುತ್ತಾರೆ.

‘15 ದಿನಗಳಿಂದ ಹೋಬಳಿಯ ಎಲ್ಲ ಗ್ರಾಮಗಳ ಪ್ರತಿ ಜಾನುವಾರು ಮತ್ತು ಕುರಿಮೇಕೆಗಳಿಗೆ ಲಸಿಕೆ ಹಾಕಿಸುವ ಅಭಿಯಾನ ಕೈಗೊಳ್ಳಲಾಗಿದೆ. ನಿತ್ರಾಣಗೊಂಡ ಜಾನುವಾರುಗಳ ಚಿಕಿತ್ಸೆಗೆ ಪಶುಸಂಜೀವಿನಿ ವಿಶೇಷ ವಾಹನದ ಮೂಲಕ ಚಿಕಿತ್ಸೆ ನೀಡುವ ಸೌಲಭ್ಯವಿದೆ. ಅನುಗ್ರಹ ಯೋಜನೆ ಮೂಲಕ ಮೃತಪಟ್ಟ ಕುರಿ–ಮೇಕೆಗಳಿಗೆ ಪರಿಹಾರ ಪಡೆಯುವ ಸೌಲಭ್ಯಗಳಿವೆ. ಈ ಎಲ್ಲ ಸೌಲಭ್ಯಗಳನ್ನು ಬಳಸಿಕೊಳ್ಳಲು ಕುರಿ–ಮೇಕೆ ಸಾಕಾಣಿಕೆದಾರರು ಮುಂದಾಗಬೇಕು’ ಎಂದು ಹೇಳುತ್ತಾರೆ.

ಲಸಿಕೆ, ಪ್ರಚಾರ ಕಾರ್ಯಕ್ಕೆ ಹರಸಾಹಸ

ಮೊಳಕಾಲ್ಮುರು: ತಾಲ್ಲೂಕಿನಲ್ಲಿ ಪಶು ಇಲಾಖೆಯಲ್ಲಿ ಕಾಡುತ್ತಿರುವ ತೀವ್ರ ಸಿಬ್ಬಂದಿ ಕೊರತೆಯಿಂದಾಗಿ ಇಲಾಖೆ ಕಾರ್ಯಕ್ರಮಗಳ ಬಗ್ಗೆ ಪ್ರಚುರಪಡಿಸಲು ಹಾಗೂ ವಾರ್ಷಿಕವಾಗಿ ಹಾಕುವ ಲಸಿಕೆ ಕಾರ್ಯಗಳನ್ನು ಕೈಗೊಳ್ಳಲು ತೀವ್ರ ತೊಂದರೆಯಾಗುತ್ತಿದೆ.

ತಾಲ್ಲೂಕಿನಲ್ಲಿ ಬುಡಕಟ್ಟು ಜನಾಂಗ ಹೆಚ್ಚಾಗಿದೆ. ಬುಡಕಟ್ಟು ಜನಾಂಗದ ಪ್ರಮುಖ ಕಸುಬು ಕುರಿ, ಮೇಕೆ, ಜಾನುವಾರು ಸಾಕಣೆಯಾಗಿದೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಹೆಚ್ಚು ಕುರಿ ಸಾಕಣೆ ಮೊಳಕಾಲ್ಮುರು ತಾಲ್ಲೂಕಿನಲ್ಲಿ ದಾಖಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ಹಾಲು ಉತ್ಪಾದನೆಗೆ ಒತ್ತು ನೀಡುತ್ತಿರುವುದು ಇಲ್ಲಿ ಕಂಡುಬರುತ್ತಿದೆ.

ತಾಲ್ಲೂಕಿನಲ್ಲಿ ಪಟ್ಟಣದ ಪಶು ಆಸ್ಪತ್ರೆ, 6 ಪಶು ಚಿಕಿತ್ಸಾ ಕೇಂದ್ರ ಮತ್ತು 5 ಪ್ರಾಥಮಿಕ ಚಿಕಿತ್ಸಾ ಕೇಂದ್ರ ಸೇರಿ ಒಟ್ಟು 12 ಕೇಂದ್ರಗಳಿವೆ. 51 ಮಂಜೂರಾತಿ ಹುದ್ದೆಗಳಿಗೆ ಕೇವಲ 14 ಮಂದಿ ಕಾರ್ಯ ನಿರ್ವಹಿಸುತ್ತಿದ್ದು ಉಳಿದವು ಖಾಲಿಯಿವೆ. ಸಹಾಯಕ ನಿರ್ದೇಶಕ ಮತ್ತು ರಾಂಪುರ ಕೇಂದ್ರದ ವೈದ್ಯರು ಮಾತ್ರ ಇದ್ದಾರೆ. ಸರ್ಕಾರದ ಕಾರ್ಯಕ್ರಮ, ಪ್ರಗತಿ ಪರಿಶೀಲನಾ ಸಭೆ ಮುಂತಾದವುಗಳಿಗೆ ನಿರ್ದೇಶಕರು ಹೋದಲ್ಲಿ ದೇವರೇ ಗತಿ ಎನ್ನುಂತಾಗಿದೆ. ಕಟ್ಟಡಗಳು ಸುಸಜ್ಜಿತವಾಗಿಲ್ಲ. ಪಟ್ಟಣದ ಪಶು ಆಸ್ಪತ್ರೆ ಕಟ್ಟಡ ಶಿಥಿಲವಾಗಿದೆ.

ವಾರ್ಷಿಕ ಲಸಿಕೆ ಕಾರ್ಯಕ್ರಮಗಳಿಗೆ ಹೊರಗುತ್ತಿಗೆ ಸಿಬ್ಬಂದಿ ಸೇವೆ ಪಡೆಯಲಾಗುತ್ತಿದೆ. ರೈತರಿಗೆ ಇಲಾಖೆ ಮಾಹಿತಿ, ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಪ್ರಚಾರ ಮಾಡುವುದು ಕಷ್ಟವಾಗಿದೆ. ವಾಹನವಿದೆ ಆದರೆ ಚಾಲಕ ಹುದ್ದೆ ಖಾಲಿ ಇದೆ ಎಂದು ಸಹಾಯಕ ನಿರ್ದೇಶಕ ಡಾ. ತಿಮ್ಮಣ್ಣ ಅಸಹಾಯಕತೆ ವ್ಯಕ್ತಪಡಿಸಿದರು.

***

ಸಿಬ್ಬಂದಿ ಕೊರತೆಯಿಂದ ಇಲಾಖಾ ಕಾರ್ಯಕ್ರಮ ಸಮರ್ಪಕವಾಗಿ ನಡೆಯುತ್ತಿಲ್ಲ. ಲಸಿಕೆ ಯಾರು ಹಾಕುತ್ತಾರೆ ಎಂಬ ಮಾಹಿತಿಯೂ ಸಿಗುತ್ತಿಲ್ಲ.

ಓಂಕಾರಪ್ಪ, ಮೊಗಲಹಳ್ಳಿ, ಮೊಳಕಾಲ್ಮುರು

***

ಕುರಿ–ಮೇಕೆಗಳಿಗೆ ನೀಲಿನಾಲಗೆ, ಹಸಿರುನಾಲಗೆ, ಗಂಟಲುಬಾವು ರೋಗ ಸಂಭವ ಹೆಚ್ಚು. ಚಿಕಿತ್ಸೆಗೆ ವೈದ್ಯರು ಸಿಗುವುದಿಲ್ಲ. ಖಾಸಗಿ ಔಷಧ ಮಳಿಗೆಗೆ ತೆರಳಿ ತಂದು ಔಷಧೋಪಚಾರ ಮಾಡುತ್ತೇವೆ.

ಮೂರ್ತಿನಾಯ್ಕ್,ಮನುಮೈನಹಟ್ಟಿ, ಚಳ್ಳಕೆರೆ ತಾಲ್ಲೂಕು

***

ಹಸುಗಳಿಗೆ ಕಾಲುಬಾಯಿ ಜ್ವರ ಹೆಚ್ಚು. ಲಸಿಕೆ ಹಾಕಿದರೂ ನನ್ನ ಸಹೋದರನ ಎರಡು ಹಸು ಮೃತಪಟ್ಟಿವೆ. ಹಸುಗಳಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ರೋಗಗಳ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಯಬೇಕು.

ಆರ್.ಮುರುಗೇಶ್, ಲಕ್ಕವ್ವನಹಳ್ಳಿ, ಹಾಲು ಉತ್ಪಾದಕ

***

ಸಿಬ್ಬಂದಿ ಕೊರತೆ ಇರುವುದು ನಿಜ. ಇದರಿಂದ ಕೆಲವೆಡೆ ಸಾರ್ವಜನಿಕರಿಗೆ ತೊಂದರೆ ಆಗಿರಬಹುದು. ಸೇವೆಯ ಮೇಲೆ ಪರಿಣಾಮ ಬೀರದಂತೆ ನೋಡಿಕೊಳ್ಳುತ್ತಿದ್ದೇವೆ.

ಡಾ.ಜಿ.ಎಂ.ಹನುಮಪ್ಪ, ಉಪನಿರ್ದೇಶಕ ಪಶುವೈದ್ಯಕೀಯ ಇಲಾಖೆ

ಅಂಕಿ–ಅಂಶ

* 158ಪಶು ವೈದ್ಯಕೀಯ ಆಸ್ಪತ್ರೆ

* 6ಸಂಚಾರಿ ಪಶು ಚಿಕಿತ್ಸಾಲಯ

* 1ಪಾಲಿಕ್ಲಿನಿಕ್‌ ಚಿತ್ರದುರ್ಗದಲ್ಲಿದೆ

* 18ಪಶು ಆಸ್ಪತ್ರೆಗಳು ಜಿಲ್ಲೆಯಲ್ಲಿವೆ

* 62‍ಪಶು ಚಿಕಿತ್ಸಾಲಯ

* 69ಪ್ರಾಥಮಿಕ ಪಶು ಚಿಕಿತ್ಸಾಲಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT