ಶನಿವಾರ, ಏಪ್ರಿಲ್ 1, 2023
29 °C
ನಾಟಕೋತ್ಸವ ಬೆಳ್ಳಿಹಬ್ಬ ಕಾರ್ಯಕ್ರಮ

ಹಣದ ವ್ಯಾಮೋಹದಿಂದ ಶಿಕ್ಷಣದ ಮೂಲ ಉದ್ದೇಶ ಹಾಳು: ಸಚಿವ ಬಿ.ಸಿ.ನಾಗೇಶ್‌ 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಾಣೇಹಳ್ಳಿ (ಹೊಸದುರ್ಗ): ‘25 ವರ್ಷಗಳ ಹಿಂದೆ ಮನುಷ್ಯನಿಗೆ ಹಣವೇ ಮುಖ್ಯವಾಗಿತ್ತು. ಹಣಕ್ಕಾಗಿಯೇ ಮೆಡಿಕಲ್, ಎಂಜಿನಿಯರ್ ಶಿಕ್ಷಣ ಎನ್ನುವ ಭಾವನೆಯಿತ್ತು. ಶಿಕ್ಷಣದ ಮೂಲ ಉದ್ದೇಶ ಇದರಿಂದ ಹಾಳಾಯಿತು. ಅವಿಭಕ್ತ ಕುಟುಂಬಗಳು ವಿಭಕ್ತ ಕುಟುಂಬಗಳಾದವು’ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಸಾಣೇಹಳ್ಳಿ ತರಳಬಾಳು ಶಾಖಾ ಮಠದಲ್ಲಿ ನಡೆಯುತ್ತಿರುವ ಶಿವಸಂಚಾರ ನಾಟಕೋತ್ಸವ ಬೆಳ್ಳಿಹಬ್ಬ ಕಾರ್ಯಕ್ರಮದ 4ನೇ ದಿನವಾದ ಶುಕ್ರವಾರ ನಡೆದ ಸಮಾರಂಭದಲ್ಲಿ ಅವರು ಮಾತನಾಡಿದರು.

ಸ್ವಾಮೀಜಿಯವರ ಮುಂದಾಳತ್ವದಲ್ಲಿ ಹೋದರೆ ಒಳಿತು ಸಾಧ್ಯ. ಭಾರತ ಕೋವಿಡ್‌ ಅನ್ನು ಎದುರಿಸಲು ಸಾಧ್ಯವಿಲ್ಲ ಎನ್ನುವ ನಂಬಿಕೆ ಹಲವರಲ್ಲಿತ್ತು. ಆದರೆ ಪ್ರಪಂಚಕ್ಕೇ ಲಸಿಕೆ ನೀಡುವ ಶಕ್ತಿಯನ್ನು ಪಡೆದುಕೊಂಡಿತು ಎಂದರು.

‘ಕೊರೋನೋತ್ತರ ಬದುಕು’ ಕುರಿತು ಉಪನ್ಯಾಸ ನೀಡಿದ ದಾವಣಗೆರೆ ಆರೋಗ್ಯ ಇಲಾಖೆಯ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಜಿ.ಡಿ.ರಾಘವನ್, ‘ಕೊರೊನಾ ಹೊಸ ರೋಗವಲ್ಲ. ಹಿಂದೆಯೂ ಅದರ ಬಗ್ಗೆ ತಿಳಿವಳಿಕೆಯಿತ್ತು. ಆದರೆ ಅದು ಇಷ್ಟು ದೊಡ್ಡ ಪ್ರಮಾಣದಲ್ಲಿ ಜಗತ್ತಿಗೆ ಆಘಾತವನ್ನುಂಟು ಮಾಡುತ್ತದೆ ಎನ್ನುವುದರ ಅರಿವಿರಲಿಲ್ಲ’ ಎಂದರು.

ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಮೈಸೂರಿನ ಕುಂದೂರು ಮಠದ ಶರತ್ಚಂದ್ರ ಸ್ವಾಮೀಜಿ, ಹೊಸದುರ್ಗದ ಲೇಖಕ ಎಚ್‌.ಎಸ್.ನವೀನಕುಮಾರ್ ಅವರ ‘ಅಮೃತ ಬಿಂದುಗಳು’ ಕೃತಿ ಲೋಕಾರ್ಪಣೆ ಮಾಡಿದರು.

ಶಾಸಕರಾದ ಜಿ.ಎಚ್‌. ತಿಪ್ಪಾರೆಡ್ಡಿ, ಕೆ.ಎಂ. ಶಿವಲಿಂಗೇಗೌಡ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಜಿ.ರಾಧಿಕಾ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಮಾತನಾಡಿದರು.

ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನೀಕೇರಿ, ಹೊಸದುರ್ಗದ ಸಾಹಿತಿ ಎಚ್.ಎಸ್. ನವೀನಕುಮಾರ್, ಹೊಸದುರ್ಗದ ಶಾಸಕ ಗೂಳಿಹಟ್ಟಿ ಡಿ. ಶೇಖರ್, ಮಾಜಿ ಶಾಸಕ ಗೋವಿಂದಪ್ಪ, ಪ್ರಮುಖ ಎಚ್‌. ಆನಂದಪ್ಪ ಇದ್ದರು.

ಬಳಿಕ ಲಿಂಗದೇವರು ಹಳೆಮನೆ ರಚನೆಯ ಆರ್‌. ಜಗದೀಶ್ ನಿರ್ದೇಶನದ ‘ಗಡಿಯಂಕ ಕುಡಿಮುದ್ದ’ ನಾಟಕ ಪ್ರದರ್ಶನಗೊಂಡಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು