ಬುಧವಾರ, ಆಗಸ್ಟ್ 17, 2022
26 °C
ಕೋಟೆನಗರಿಯ ದೇಗುಲಗಳಲ್ಲಿ ತಿಂಗಳವರೆಗೆ ಮುಂಜಾನೆಯಿಂದಲೇ ಪೂಜೆ ಆರಂಭ

ಧನುರ್ಮಾಸ: ದೇಗುಲಗಳಲ್ಲಿ ಪೂಜಾ ವಿಶೇಷ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಕೋಟೆನಗರಿಯ ಹಲವು ದೇಗುಲಗಳಲ್ಲಿ ಈಗಾಗಲೇ ಧನುರ್ಮಾಸ ಪೂಜೆ ಆರಂಭವಾಗಿದ್ದು, ಸತತ ಒಂದು ತಿಂಗಳ ಕಾಲ ನಿತ್ಯ ಮುಂಜಾನೆಯಿಂದಲೇ ವಿಶೇಷ ಪೂಜೆಗಳು ಜರುಗಲಿವೆ. ಸಂಕ್ರಾಂತಿ ಹಬ್ಬದವರೆಗೂ ವಿಭಿನ್ನವಾಗಿ ದೇವರ ಮೂರ್ತಿಗಳಿಗೆ ಅಲಂಕಾರ ಸೇವೆ ನೆರವೇರಲಿದೆ.

ಅಯ್ಯಪ್ಪಸ್ವಾಮಿ ಸೇವಾ ಟ್ರಸ್ಟ್‌ನಿಂದ ಧನುರ್ಮಾಸದ ಅಂಗವಾಗಿ ಇಲ್ಲಿನ ಮೆದೇಹಳ್ಳಿ ರಸ್ತೆಯ ಅಯ್ಯಪ್ಪಸ್ವಾಮಿ ದೇಗುಲದಲ್ಲಿ ಸ್ವಾಮಿಯ ಧ್ವಜಾ ರೋಹಣ ಕಾರ್ಯಕ್ರಮಕ್ಕೂ ಚಾಲನೆ ದೊರೆತಿದೆ.

ರಕ್ಷಕ ದೇವತೆಗಳಿಗೂ ವಿಶೇಷ ಪೂಜೆ: ನಗರದ ಶಕ್ತಿದೇವತೆ ಬರಗೇರಮ್ಮ ದೇಗುಲದಲ್ಲಿ ತಿಂಗಳ ಕಾಲ ಧನುರ್ಮಾಸ ಪೂಜೆಯನ್ನು ವಿಶೇಷವಾಗಿ ಆಚರಿಸಲಾಗುತ್ತಿದೆ ಎಂದು ದೇಗುಲದ ಪ್ರಧಾನ ಅರ್ಚಕ ಪೂಜಾರ್ ಸತ್ಯಪ್ಪ ತಿಳಿಸಿದ್ದಾರೆ.

ಚಿತ್ರದುರ್ಗದ ರಕ್ಷಕ ದೇವತೆ ಗಳೆಂದೇ ಖ್ಯಾತಿ ಗಳಿಸಿರುವ ದುರ್ಗದ ಅಧಿದೇವತೆ ಏಕನಾಥೇಶ್ವರಿ, ಉಚ್ಚಂಗಿ ಯಲ್ಲಮ್ಮ, ಕಣಿವೆ ಮಾರಮ್ಮ, ತ್ರಿಪುರ ಸುಂದರಿ ತಿಪ್ಪಿನಘಟ್ಟಮ್ಮ, ಗೌರಸಂದ್ರ ಮಾರಮ್ಮ, ಬನ್ನಿ ಮಹಾಕಾಳಿಕಾಂಬ, ಕುಕ್ಕವಾಡೇಶ್ವರಿ, ಚೌಡೇಶ್ವರಿ ದೇಗುಲಗಳಲ್ಲೂ ಧನುರ್ಮಾಸ ಮುಕ್ತಾಯದವರೆಗೂ ನಿತ್ಯ ವಿಶೇಷ ಪೂಜೆ ನೆರವೇರಲಿದೆ.

ಕೆಳಗೋಟೆಯ ಕೊಲ್ಲಾಪುರದ ಮಹಾಲಕ್ಷ್ಮಿ ದೇವಿ, ಮಾರಿಕಾಂಬ ಸೇರಿ ವಿವಿಧ ದೇಗುಲಗಳಲ್ಲೂ ಪೂಜೆ ನಡೆಸಲು ದೇಗುಲದ ಆಡಳಿತ ಮತ್ತು ಭಕ್ತ ಮಂಡಳಿ ತೀರ್ಮಾನಿಸಿದ್ದು, ವಿಶೇಷ ಪೂಜೆ ಆರಂಭವಾಗಿವೆ.

ಮೇಲುದುರ್ಗದ ಬೆಟ್ಟದ ಗಣಪತಿ, ಮದಕರಿ ಮಹಾಗಣಪತಿ, ಪ್ರಸನ್ನ ಗಣಪತಿ, ಹೊಳಲ್ಕೆರೆ ರಸ್ತೆಯ ಸಂಕಷ್ಟಹರ ಗಣಪತಿ, ತಮಟಕಲ್ಲು ಆಂಜನೇಯ, ವೀರಾಂಜನೇಯ, ಕೋಟೆ ಆಂಜನೇಯ, ಬರಗೇರಿ ಆಂಜನೇಯ, ಕ್ರೀಡಾಂಗಣ ರಸ್ತೆಯ ಆಂಜನೇಯ ಸ್ವಾಮಿ ದೇಗುಲಗಳಲ್ಲೂ ವಿಶೇಷ ಪೂಜೆಗಳು ನಡೆಯಲಿವೆ.

ಕೋಟೆಯೊಳಗಿನ ಹಿಡಂಭೇಶ್ವರ, ಸಂಪಿಗೆ ಸಿದ್ಧೇಶ್ವರ, ನಗರದಲ್ಲಿನ ಗಾರೆಬಾಗಿಲು ಈಶ್ವರ, ಉಮಾ ಮಹೇಶ್ವರ, ನಗರೇಶ್ವರ ದೇಗುಲಗಳಲ್ಲೂ ವಿಶೇಷ ಪೂಜೆ ನೆರವೇರಲಿದೆ.

ಜೆಸಿಆರ್‌ ಬಡಾವಣೆಯ ಗಣಪತಿ, ಆಂಜನೇಯ ಸ್ವಾಮಿ ದೇಗುಲದಲ್ಲೂ ಧನುರ್ಮಾಸದಲ್ಲಿ ನಿತ್ಯ ಬೆಳಿಗ್ಗೆ 6.15ಕ್ಕೆ ಮಹಾಪೂಜೆ, ಮಹಾಮಂಗಳಾರತಿ ಜರುಗಲಿವೆ ಎಂದು ದೇಗುಲದ ಅರ್ಚಕರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.