ಬುಧವಾರ, ಜನವರಿ 22, 2020
19 °C
ಕೋಟೆ ನಗರಿಯ ದೇಗುಲಗಳಲ್ಲಿ ನಿತ್ಯ ವಿಶೇಷ ಪೂಜೆ

ಧನುರ್ಮಾಸ ಪೂಜೆ ನಾಳೆಯಿಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಸತತ ಒಂದು ತಿಂಗಳ ಕಾಲ ವಿಶೇಷವಾಗಿ ಜರುಗಲಿರುವ ಧನುರ್ಮಾಸ ಪೂಜೆ ಡಿ.16ರಿಂದ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಸಂಕ್ರಾಂತಿ ಹಬ್ಬದವರೆಗೂ ಕೋಟೆನಗರಿಯ ವಿವಿಧ ದೇಗುಲಗಳಲ್ಲಿ ವಿಶೇಷ ಪೂಜೆ ನೆರವೇರಲಿದೆ.

ಅಯ್ಯಪ್ಪಸ್ವಾಮಿ ಸೇವಾ ಟ್ರಸ್ಟ್‌ನಿಂದ ಧನುರ್ಮಾಸದ ಅಂಗವಾಗಿ ಇಲ್ಲಿನ ಮೆದೇಹಳ್ಳಿ ರಸ್ತೆಯ ಅಯ್ಯಪ್ಪಸ್ವಾಮಿ ದೇಗುಲದಲ್ಲಿ 17ರಂದು ಸ್ವಾಮಿಯ ಧ್ವಜಾರೋಹಣ ಕಾರ್ಯಕ್ರಮ ಆಯೋಜಿಸಲಾಗಿದೆ.

‘ಸ್ವಾಮಿಯ 20ನೇ ವರ್ಷದ ಬ್ರಹ್ಮೋತ್ಸವ ಕಾರ್ಯಕ್ರಮವೂ 16ರಿಂದ 21ರವರೆಗೆ ನಡೆಯಲಿದೆ. 19ರಂದು ನೂರಾರು ಮಾಲಾಧಾರಿಗಳು ಹಾಗೂ ಭಕ್ತರ ಸಮ್ಮುಖದಲ್ಲಿ ಪಡಿಪೂಜೆ ಮಹೋತ್ಸವ, 20ರಂದು ಉತ್ಸವ ಬಲಿ ಪೂಜೆ, 22ಕ್ಕೆ ಸಾವಿರಾರು ಭಕ್ತರಿಗಾಗಿ ಸಾಮೂಹಿಕ ಅನ್ನದಾನ ಹಮ್ಮಿಕೊಳ್ಳಲಾಗಿದೆ’ ಎಂದು ಟ್ರಸ್ಟ್‌ನ ಅಧ್ಯಕ್ಷ ಶರಣ್‌ಕುಮಾರ್ ತಿಳಿಸಿದ್ದಾರೆ.

‘ಡಿಸೆಂಬರ್ ಕೊನೆಯ ವಾರದಿಂದ ಜನವರಿ 8ರವರೆಗೂ ಜಿಲ್ಲೆಯ ಎಲ್ಲ ತಾಲ್ಲೂಕುಗಳ ವಿವಿಧ ಭಾಗಗಳಲ್ಲಿ ಮಾಲಾಧಾರಿಗಳು ಪಡಿಪೂಜೆಯನ್ನು ವಿಶೇಷವಾಗಿ ನಡೆಸಲಿದ್ದಾರೆ. ಚಿತ್ರದುರ್ಗ ನಗರದ 15 ಕಡೆಗಳಲ್ಲೂ ಪಡಿಪೂಜೆ ನಡೆಯಲಿದೆ’ ಎಂದು ತಿಳಿಸಿದ್ದಾರೆ.

‘ಜ. 13ರಂದು ಸಂಜೆ 5ಕ್ಕೆ ಅಯ್ಯಪ್ಪಸ್ವಾಮಿಯ ಆಭರಣ ಮೆರವಣಿಗೆಯೂ ಆನೆಬಾಗಿಲು ಸಮೀಪದ ಗಣಪತಿ ದೇಗುಲದಿಂದ ಆರಂಭವಾಗಲಿದೆ. 14ರಂದು ಸಂಜೆ 5.30ಕ್ಕೆ ಸ್ವಾಮಿಯ ದೇಗುಲದ ಮುಂಭಾಗದಲ್ಲಿ ಲಕ್ಷ ದೀಪೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ಜರುಗಲಿದೆ’ ಎಂದು ಹೇಳಿದರು.

ರಕ್ಷಕ ದೇವತೆಗಳಿಗೂ ವಿಶೇಷ ಪೂಜೆ: ನಗರದ ಶಕ್ತಿದೇವತೆ ಬರಗೇರಮ್ಮ ದೇಗುಲದಲ್ಲಿ ಒಂದು ತಿಂಗಳ ಕಾಲ ಧನುರ್ಮಾಸ ಪೂಜೆಯನ್ನು ಈ ಬಾರಿ ವಿಶೇಷವಾಗಿ ಆಚರಿಸಲಾಗುವುದು ಎಂದು ದೇಗುಲದ ಪ್ರಧಾನ ಅರ್ಚಕ ಪೂಜಾರ್ ಕಸ್ತೂರಪ್ಪ ತಿಳಿಸಿದ್ದಾರೆ.

ಚಿತ್ರದುರ್ಗದ ರಕ್ಷಕ ದೇವತೆಗಳೆಂದೇ ಖ್ಯಾತಿ ಗಳಿಸಿರುವ ದುರ್ಗದ ಅಧಿದೇವತೆ ಏಕನಾಥೇಶ್ವರಿ, ಉಚ್ಚಂಗಿ ಯಲ್ಲಮ್ಮ, ಕಣಿವೆ ಮಾರಮ್ಮ, ತ್ರಿಪುರಸುಂದರಿ ತಿಪ್ಪಿನಘಟ್ಟಮ್ಮ, ಗೌರಸಂದ್ರ ಮಾರಮ್ಮ, ಬನ್ನಿ ಮಹಾಕಾಳಿಕಾಂಬ, ಕುಕ್ಕವಾಡೇಶ್ವರಿ, ಚೌಡೇಶ್ವರಿ ದೇವತೆ ದೇಗುಲಗಳಲ್ಲೂ ಧನುರ್ಮಾಸದಲ್ಲಿ ಪ್ರತಿನಿತ್ಯ ವಿಶೇಷ ಪೂಜೆ ನೆರವೇರಲಿದೆ.

ಇಲ್ಲಿನ ಕೆಳಗೋಟೆಯ ಅನ್ನಪೂರ್ಣೇಶ್ವರಿ, ಕೊಲ್ಲಾಪುರದ ಮಹಾಲಕ್ಷ್ಮಿ ದೇವಿ, ಮಾರಿಕಾಂಬ ಸೇರಿ ವಿವಿಧ ದೇವಿ ದೇಗುಲಗಳಲ್ಲೂ ಪೂಜೆ ನಡೆಸಲು ದೇಗುಲದ ಆಡಳಿತ ಮತ್ತು ಭಕ್ತ ಮಂಡಳಿ ಈಗಾಗಲೇ ಪೂರ್ವ ಸಿದ್ಧತೆ ನಡೆಸಿದ್ದಾರೆ.

ಗಣಪತಿ, ಆಂಜನೇಯ ದೇಗುಲದಲ್ಲೂ ವಿಶೇಷ: ಮೇಲುದುರ್ಗದ ಬೆಟ್ಟದ ಗಣಪತಿ, ಮದಕರಿ ಮಹಾಗಣಪತಿ, ಪ್ರಸನ್ನ ಗಣಪತಿ, ಹೊಳಲ್ಕೆರೆ ರಸ್ತೆಯ ಸಂಕಷ್ಟಹರ ಗಣಪತಿ, ತಮಟಕಲ್ಲು ಆಂಜನೇಯ, ವೀರಾಂಜನೇಯ, ಕೋಟೆ ಆಂಜನೇಯ, ಬರಗೇರಿ ಆಂಜನೇಯ, ಕ್ರೀಡಾಂಗಣ ರಸ್ತೆಯ ಆಂಜನೇಯ ಸ್ವಾಮಿ ದೇಗುಲಗಳಲ್ಲೂ ವಿಶೇಷ ಪೂಜೆಗಳು ನಡೆಯಲಿವೆ.

ಜೆಸಿಆರ್‌ ಬಡಾವಣೆಯ ಗಣಪತಿ, ಆಂಜನೇಯ ಸ್ವಾಮಿ ದೇಗುಲದಲ್ಲೂ ಧನುರ್ಮಾಸದಲ್ಲಿ ನಿತ್ಯ ಬೆಳಿಗ್ಗೆ 6.15ಕ್ಕೆ ಮಹಾಪೂಜೆ, ಮಹಾಮಂಗಳಾರತಿ ಜರುಗಲಿದೆ ಎಂದು ದೇಗುಲದ ಅರ್ಚಕರು ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)