ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಧರ್ಮಪುರ: ಬಯಲುಸೀಮೆಯಲ್ಲಿ ಸಮೃದ್ಧ ಜಂಬೂ ನೇರಳೆ

ಧರ್ಮಪುರ ಸಮೀಪದ ಹೊಂಬಳದಹಟ್ಟಿ ಎಚ್.ಬಿ.ಕಾಂತರಾಜು ಯಶೋಗಾಥೆ
Published 19 ಜೂನ್ 2024, 6:25 IST
Last Updated 19 ಜೂನ್ 2024, 6:25 IST
ಅಕ್ಷರ ಗಾತ್ರ

ಧರ್ಮಪುರ: ಆರು ವರ್ಷಗಳ ಹಿಂದೆ ನಾಟಿ ಮಾಡಿದ್ದ ಜಂಬೂ ನೇರಳೆ ಈಗ ರೈತನ ಕೈಹಿಡಿದಿದೆ. ಧರ್ಮಪುರ ಸಮೀಪದ ಹೊಂಬಳದಹಟ್ಟಿ ಎಚ್.ಬಿ.ಕಾಂತರಾಜು ಮತ್ತು ಪತ್ನಿ ಸುಜಾತಾ ಅವರ ಪರಿಶ್ರಮಕ್ಕೆ ಸಮೃದ್ಧವಾದ ಫಲ ದೊರೆಯುತ್ತಿದೆ.

ಇಪ್ಪತ್ತು ವರ್ಷಗಳಿಂದಲೂ ಕೃಷಿ ನಂಬಿ ಜೀವನ ಸಾಗಿಸುತ್ತಿದ್ದ ಕಾಂತರಾಜು ಅವರು ಹಲವು ಪ್ರಯೋಗಗಳನ್ನು ಮಾಡಿ ಕೈಸುಟ್ಟುಕೊಂಡು ವ್ಯವಸಾಯವೇ ಬೇಡ ಎನ್ನುವಷ್ಟರ ಮಟ್ಟಿಗೆ ನಿರ್ಧರಿಸಿದ್ದರು. ಆದರೆ ಅದೇ ವ್ಯವಸಾಯದಲ್ಲಿ ಈಗ ಸಂತೃಪ್ತರಾಗಿದ್ದಾರೆ. ಶಾಲೆಯ ಮೆಟ್ಟಿಲು ಹತ್ತದ ಕಾಂತರಾಜು ಅವರ ಕೃಷಿಯಲ್ಲಿನ ಅದಮ್ಯ ಉತ್ಸಾಹ ಹಾಗೂ ತಾಂತ್ರಿಕತೆ ನೋಡಿದರೆ ಎಂಥವರಿಗೂ ಆಶ್ಚರ್ಯವಾಗುತ್ತದೆ.

ಕೃಷಿಯಲ್ಲಿ ಏನನ್ನಾದರೂ ಸಾಧಿಸಬೇಕೆಂಬ ಛಲದಿಂದ ಪ್ರಾರಂಭದಲ್ಲಿ ಹಣ್ಣಿನ ಬೆಳೆಗಳನ್ನು ಬೆಳೆಯಲು ನಿರ್ಧರಿಸಿದ್ದರು. ಆರಂಭದಲ್ಲಿ ದಾಳಿಂಬೆ, ಪಪ್ಪಾಯ, ಕರ್ಬೂಜ ಬೆಳೆದು ನಷ್ಟ ಅನುಭವಿಸಿದರು. ಆದರೂ ಪಟ್ಟುಬಿಡದೆ ಜಂಬೂ ನೇರಳೆ ಬೆಳೆದು ಅದರಲ್ಲಿ ಯಶಸ್ಸು ಕಂಡಿದ್ದಾರೆ.

55 ಎಕರೆ ಕೃಷಿ ಭೂಮಿಯನ್ನು ಹೊಂದಿರುವ ಅವರು 12 ಎಕರೆಯಲ್ಲಿ ಜಂಬೂ ನೇರಳೆ ತೋಟ, 13 ಎಕರೆಯಲ್ಲಿ ದಾಳಿಂಬೆ, 15 ಎಕರೆ ಅಡಿಕೆ ತೋಟ ಮಾಡಿದ್ದಾರೆ. 13 ಎಕರೆಯಲ್ಲಿ ಶ್ರೀಗಂಧ ನಾಟಿ ಮಾಡಿ, ಅದರಲ್ಲಿ ಅಂತರ ಬೆಳೆಯಾಗಿ ಸೀಬೆ ಬೆಳೆದಿದ್ದಾರೆ. 1 ಎಕರೆಯಲ್ಲಿ ಕೃಷಿ ಹೊಂಡ ನಿರ್ಮಿಸಿಕೊಂಡು ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡಿದ್ದು, ಹೆಚ್ಚು ಆದಾಯ ಕಾಣುತ್ತಿದ್ದಾರೆ.

ಕೈಹಿಡಿದ ಜಂಬೂ ನೇರಳೆ: ಆರು ವರ್ಷಗಳ ಹಿಂದೆ ಆಂಧ್ರಪ್ರದೇಶದ ರಾಜಮಂಡ್ರಿಯಿಂದ ಗಿಡಗಳನ್ನು ತರಿಸಿ, 12 ಎಕರೆಯಲ್ಲಿ 30x30 ಅಳತೆಯಲ್ಲಿ ಅಂದಾಜು 700 ಗಿಡಗಳನ್ನು ನಾಟಿ ಮಾಡಲಾಯಿತು. ಪ್ರತಿ ಗಿಡಕ್ಕೂ ಹನಿ ನೀರಾವರಿ ಪದ್ಧತಿಯಿಂದ ನೀರುಣಿಸಲಾಯಿತು. ಐದನೇ ವರ್ಷಕ್ಕೆ ಫಸಲು  ಪ್ರಾರಂಭವಾಗಿ ಮೊದಲ ಅವಧಿಯಲ್ಲೇ ಅಂದಾಜು ₹10 ಲಕ್ಷ ಆದಾಯ ಗಳಿಸಿದರು. ಈ ವರ್ಷವೂ ಗಿಡದಲ್ಲಿ ಸಮೃದ್ಧವಾಗಿ ಹಣ್ಣು ಬೆಳೆದಿದ್ದು, ₹15–₹20 ಲಕ್ಷ ಆದಾಯದ ನಿರೀಕ್ಷೆಯಲ್ಲಿದ್ದಾರೆ. 

ಉತ್ತರ ಕರ್ನಾಟಕದಲ್ಲಿ ಹೆಚ್ಚು ಬೆಳೆಯುತ್ತಿದ್ದ ಜಂಬೂ ನೇರಳೆಯನ್ನು ಬಯಲು ಸೀಮೆಯಲ್ಲೂ ಬೆಳೆಯಬಹುದು ಎಂಬುದನ್ನು ಕಾಂತರಾಜು ನಿಜ ಮಾಡಿದ್ದಾರೆ. ಹಣ್ಣು ಖರೀದಿಸಲು ಬೆಂಗಳೂರು, ತುಮಕೂರು ಭಾಗಗಳಿಂದ ಹೆಚ್ಚು ವ್ಯಾಪಾರಸ್ಥರು ಬರುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಕೆ.ಜಿ.ಗೆ ₹150ರಿಂದ ₹200 ದರ ಇದೆ. 

ಕೃಷಿ ಹೊಂಡ: 55 ಎಕರೆಗೆ ನೀರುಣಿಸಲು ಒಟ್ಟು 5 ಕೊಳವೆ ಬಾವಿಗಳಿವೆ. ನೀರು ಸಂಗ್ರಹಿಸಲು ಒಂದು ಎಕರೆ ವಿಸ್ತೀರ್ಣದಲ್ಲಿ ಕೃಷಿ ಹೊಂಡ ನಿರ್ಮಿಸಲಾಗಿದ್ದು, ಸಮಗ್ರ ಕೃಷಿಗೆ ಹನಿ ನೀರಾವರಿ ವ್ಯವಸ್ಥೆ ಅಳವಡಿಸಿಕೊಳ್ಳಲಾಗಿದೆ. ಕೃಷಿ ಹೊಂಡದಲ್ಲಿ ಮೀನು ಸಾಕಾಣಿಕೆ ಮಾಡಿ, ಅದರಲ್ಲಿಯೂ ಆದಾಯ ಕಾಣುತ್ತಿದ್ದಾರೆ.

‘ನಾನು ಅನಕ್ಷರಸ್ಥ. ಕೃಷಿಯೇ ನನ್ನ ಜೀವಾಳವಾಗಿತ್ತು. ಅದರಲ್ಲಿಯೇ ಬದುಕು ಕಟ್ಟಿಕೊಳ್ಳಬೇಕೆಂಬ ನನ್ನಾಸೆಗೆ ಹೆಗಲು ಕೊಟ್ಟವರು ಪತ್ನಿ ಸುಜಾತಾ.  ದೆಹಲಿಯಲ್ಲಿ ಐಎಎಸ್ ಕೋಚಿಂಗ್ ಪಡೆಯುತ್ತಿರುವ ಪುತ್ರ ಕೀರ್ತಿಯಾದವ್, ಚಿತ್ರದುರ್ಗದ ಶಾಂಭವಿ ಎಂಟರ್ ಪ್ರೈಸಸ್‌ನ ಅರುಣ್ ಕುಮಾರ್ ಮತ್ತು ಪ್ರಿಯಾಂಕಾ ನೆರವಾಗಿದ್ದಾರೆ’ ಎಂದು ರೈತ ಕಾಂತರಾಜು ಸ್ಮರಿಸುತ್ತಾರೆ. 

ರೈತ ಕಾಂತರಾಜು ಸಂಪರ್ಕಕ್ಕೆ ಮೊಬೈಲ್ ನಂಬರ್ 9902376293

ಸಮೃದ್ಧವಾಗಿ ಬೆಳೆದಿರುವ ಜಂಬೂ ನೇರಳೆ ತೋಟ
ಸಮೃದ್ಧವಾಗಿ ಬೆಳೆದಿರುವ ಜಂಬೂ ನೇರಳೆ ತೋಟ
ಜಂಬೂ ನೇರಳೆ ಹಣ್ಣು
ಜಂಬೂ ನೇರಳೆ ಹಣ್ಣು
ಜಂಬೂ ನೇರಳೆ ತೋಟದಲ್ಲಿ ಕೂಲಿ ಕಾರ್ಮಿಕರು ಹಣ್ಣು ಬಿಡಿಸುತ್ತಿರುವುದು
ಜಂಬೂ ನೇರಳೆ ತೋಟದಲ್ಲಿ ಕೂಲಿ ಕಾರ್ಮಿಕರು ಹಣ್ಣು ಬಿಡಿಸುತ್ತಿರುವುದು
ಕೃಷಿ ಹೊಂಡ
ಕೃಷಿ ಹೊಂಡ

ಬಯಲುಸೀಮೆ ಪ್ರದೇಶದಲ್ಲಿ ಕೃಷಿಯ ಹೊಸ ಹೊಸ ಪ್ರಯೋಗಗಳು ನಡೆಯುತ್ತಿವೆ. ರೈತರು ಬೆಳೆದ ಹಣ್ಣು ಕೆಡದಂತೆ ಸಂಗ್ರಹಿಸಲು ಹಿರಿಯೂರಿನಲ್ಲಿ ಸಂಗ್ರಹಣಾ ವ್ಯವಸ್ಥೆ ಆಗಬೇಕು

-ಸುಜಾತಾ ರೈತ ಕಾಂತರಾಜ್ ಪತ್ನಿ

‘ತೋಟಗಾರಿಕಾ ಬೆಳೆಗೆ ಸೂಕ್ತ’

ಚಿತ್ರದುರ್ಗ ಜಿಲ್ಲೆಯೂ ಸೇರಿದಂತೆ ಬಯಲು ಸೀಮೆ ಪ್ರದೇಶವು ತೋಟಗಾರಿಕಾ ಬೆಳೆಗಳನ್ನು ಬೆಳೆಯಲು ಉತ್ತಮ ಹವಾಗುಣ ಹೊಂದಿದೆ. ರೈತರು ಬರಡು ಭೂಮಿಯಲ್ಲಿ ಹೆಚ್ಚು ನೀರಿಲ್ಲದೆ ಖರ್ಚಿಲ್ಲದೆ ಜಂಬೂ ನೇರಳೆ ಬೆಳೆಯಲು ಸೂಕ್ತವಾಗಿದೆ. ಇಲಾಖೆಯಿಂದ ಹನಿ ನೀರಾವರಿ ಅಳವಡಿಸಿಕೊಳ್ಳಲು ಫಾರ್ಮ್ ಹೌಸ್ ಕಟ್ಟಿಕೊಳ್ಳಲು ಕೃಷಿ ಹೊಂಡ ನಿರ್ಮಿಸಿಕೊಳ್ಳಲು ಸಹಾಯಧನ ಸಿಗಲಿದೆ. ಇದರ ಪ್ರಯೋಜನ ಪಡೆದು ಸಮಗ್ರ ಕೃಷಿ ಅಭಿವೃದ್ಧಿಪಡಿಸಿಕೊಳ್ಳಬಹುದು ಎಂದು ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಲೋಕೇಶ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT