ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ: ಡಯಾಲಿಸಿಸ್‌ ಕೇಂದ್ರದಲ್ಲಿ ರೋಗಿಗಳ ಪರದಾಟ

ಮುಷ್ಕರದಲ್ಲಿ ಪಾಲ್ಗೊಂಡು ಮಧ್ಯಾಹ್ನದ ಬಳಿಕ ಕರ್ತವ್ಯಕ್ಕೆ ಹಾಜರಾದ ಸಿಬ್ಬಂದಿ
Last Updated 25 ಜೂನ್ 2022, 7:02 IST
ಅಕ್ಷರ ಗಾತ್ರ

ಚಿತ್ರದುರ್ಗ: ವೇತನ ಕಡಿತ ಹಾಗೂ ಇಎಸ್‌ಐ, ಪಿಎಫ್‌ ಪಾವತಿಸದ ಕಾರಣ ಬೆಂಗಳೂರಿನಲ್ಲಿ ನಡೆಯುತ್ತಿರುವ ಡಯಾಲಿಸಿಸ್ ಕೇಂದ್ರದ ಸಿಬ್ಬಂದಿ ಮುಷ್ಕರಕ್ಕೆ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳ ಡಯಾಲಿಸಿಸ್ ಕೇಂದ್ರದ ಸಿಬ್ಬಂದಿ ಬೆಂಬಲ ಸೂಚಿಸಿ ಶುಕ್ರವಾರ ಬಂದ್‌ ಆಚರಿಸಿದರು.

ಸಿಬ್ಬಂದಿ ಪ್ರತಿಭಟನೆಯಿಂದಾಗಿ ರೋಗಿಗಳು ಪರದಾಡಿದರು. ಗುರುವಾರದಿಂದಲೇ ಕೇಂದ್ರಗಳು ಬಂದ್‌ ಆದ ಕಾರಣ ಡಯಾಲಿಸಿಸ್‌ ಇಲ್ಲದೇ ತೀವ್ರ ಸಮಸ್ಯೆ ಅನುಭವಿಸಿದರು. ಚಿತ್ರದುರ್ಗದ ಜಿಲ್ಲಾ ಆಸ್ಪತ್ರೆಯಲ್ಲಿಯ ಕೇಂದ್ರದಲ್ಲಿ ನಿತ್ಯ ಮೂರು ಪಾಳಿಯಲ್ಲಿ 27 ರೋಗಿಗಳು ಡಯಾಲಿಸಿಸ್‌ಗೆ ಒಳಗಾಗುತ್ತಾರೆ.

ಗುರುವಾರ ಬಂದ್‌ ಆಗಿದ್ದರೂ ನಾಳೆ ಸರಿ ಹೋಗುತ್ತದೆ ಎಂಬ ಭರವಸೆ ರೋಗಿಗಳಲ್ಲಿತ್ತು. ಆದರೆ, ಬಂದ್‌ ಮುಂದುವರಿದಿದ್ದರಿಂದ ಬೆಳಿಗ್ಗೆಯಿಂದಲೇ ರೋಗಿಗಳು ಸಂಕಷ್ಟಕ್ಕೆ ಸಿಲುಕಿದರು.

ಹಿರಿಯೂರು, ಚಳ್ಳಕೆರೆ, ಜಗಳೂರು ಸೇರಿದಂತೆ ವಿವಿಧೆಡೆಯಿಂದ ಬಂದಿದ್ದ ರೋಗಿಗಳು ಕೇಂದ್ರದ ಆವರಣದಲ್ಲಿ ಕಾದು ಸುಸ್ತಾದರು. ಬಳಿಕ ಜಿಲ್ಲಾ ಆಸ್ಪತ್ರೆಯಿಂದ ಪತ್ರಗಳನ್ನು ನೀಡಿ ಬಸವೇಶ್ವರ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ 6 ರೋಗಿಗಳನ್ನು ಕಳುಹಿಸಲಾಯಿತು.

‘ಖಾಸಗಿ ಆಸ್ಪತ್ರೆಗಳಲ್ಲಿ ಡಯಾಲಿಸಿಸ್‌ಗೆ ದುಬಾರಿ ಹಣ ಪಾವತಿಸಬೇಕು. ಸರ್ಕಾರ ಕೂಡಲೇ ಸಮಸ್ಯೆ ಬಗೆಹರಿಸಿ ಬಡ ರೋಗಿಗಳ ಜೀವ ಉಳಿಸಬೇಕು’ ಎಂದು ಡಯಾಲಿಸಿಸ್‌ಗೆ ಒಳಗಾದ ಪ್ರತಾಪ್‌ ರುದ್ರದೇವ್‌ ಒತ್ತಾಯಿಸಿದರು.

*
ಮಧ್ಯಾಹ್ನದ ಬಳಿಕ 6 ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾದರು. ಎರಡು ಪಾಳಿಯಲ್ಲಿ 16 ರೋಗಿಗಳಿಗೆ ಡಯಾಲಿಸಿಸ್‌ ಮಾಡಲಾಗಿದೆ. ಶನಿವಾರದಿಂದ ಎಂದಿನಂತೆ ಡಯಾಲಿಸಿಸ್‌ ನಡೆಯಲಿದೆ.
-ಡಾ.ಬಸವರಾಜಪ್ಪ, ಜಿಲ್ಲಾ ಶಸ್ತ್ರ ಚಿಕಿತ್ಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT