ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಳ್ಳಕೆರೆ | ನೆರವಿಗೆ ಅಂಗವಿಕಲರ ಕುಟುಂಬದ ಮೊರೆ

Last Updated 20 ಮೇ 2020, 20:00 IST
ಅಕ್ಷರ ಗಾತ್ರ

ಚಳ್ಳಕೆರೆ: ನಿತ್ಯ ಕೂಲಿ ಕೆಲಸದಿಂದಲೇ ತುತ್ತಿನ ಚೀಲ ತುಂಬಿಸಿಕೊಂಡು ಕಷ್ಟದ ಜೀವನ ಸಾಗಿಸುತ್ತಿದ್ದ ಒಂದೇ ಕುಟುಂಬದ ಮೂವರು ಅಂಗವಿಕಲರನ್ನು ಲಾಕ್‍ಡೌನ್ ಮತ್ತಷ್ಟು ದುರ್ಗತಿಗೆ ತಳ್ಳಿದೆ.

ನೇತ್ರ ದೋಷದಿಂದ ಬಳಲುತ್ತಿರುವ ತಾಲ್ಲೂಕಿನ ಹುಲಿಕುಂಟೆ ಗ್ರಾಮದ ಕರಿಯಪ್ಪ (70), ಅವರ ಪತ್ನಿ ತಿಪ್ಪಮ್ಮ (60)(‌ಅವರಿಗೆ ಮೂಳೆ ಸವೆತ) ಮತ್ತು ಮಗ ವೀರನಾಗಪ್ಪ (35) ಅವರು ಲಾಕ್‌ಡೌನ್‌ನಿಂದಾಗಿ ಮನೆ ಮುಂದಿನ ಬೀದಿಯಲ್ಲಿ ಕುಳಿತು ಬೇಡುವ ಮೂಲಕ ಹಸಿವನ್ನು ನೀಗಿಸಿಕೊಳ್ಳುವ ಪರಿಸ್ಥಿತಿ ಬಂದೊದಗಿದೆ. ದಿನದ ತುತ್ತಿಗೂ ಪರದಾಡುತ್ತಿರುವ ಈ ಕುಟುಂಬದ ಸ್ಥಿತಿ ‘ಬಡವರ ಗೋಳು ಗಿರಿಗೆ ಮುಟ್ಟೀತೆ’ ಎನ್ನುವಂತಾಗಿದೆ.

ಚಿಕಿತ್ಸೆಗೆ ಹಣದ ಕೊರತೆ: ಮೂಳೆ ಸವೆತದ ಪರಿಣಾಮವಾಗಿ ತಿಪ್ಪಮ್ಮ ಅವರಿಗೆ ಮೊಳಕಾಲು ನೋವು ಕಾಣಿಸಿಕೊಂಡು ಓಡಾಡಲು ಸಾಧ್ಯವಾಗುತ್ತಿಲ್ಲ. ದಾವಣಗೆರೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ಪ್ರತಿ ತಿಂಗಳು ಕನಿಷ್ಠ ₹ 6,000 ಅಗತ್ಯ. ಈಗಾಗಲೇ ಸಾಲಸೋಲ ಮಾಡಿ ಎರಡು ಬಾರಿ ಚಿಕಿತ್ಸೆ ಪಡೆದಿದ್ದಾರೆ. ಇನ್ನೂ 3-4 ವರ್ಷ ಚಿಕಿತ್ಸೆ ಪಡೆಯಲೇ ಬೇಕು ಎಂದು ಮೂಳೆ ತಜ್ಞರು ಸಲಹೆ ನೀಡಿದ್ದಾರೆ. ಆದ್ದರಿಂದ ತಾಯಿಯ ಮೂಳೆ ಚಿಕಿತ್ಸೆಗೆ ಆರ್ಥಿಕ ಸಹಾಯಹಸ್ತ ಅಗತ್ಯ ಎನ್ನುತ್ತಾರೆ ಮಗ ವೀರನಾಗಪ್ಪ.

‘ಸರ್ಕಾರ ನೀಡಿದ್ದ ₹ 14 ಸಾವಿರ ವೆಚ್ಚದಲ್ಲಿ ಸಿಮೆಂಟ್ ಶೀಟಿನ ಮನೆ ನಿರ್ಮಿಸಿ 20 ವರ್ಷಗಳು ಕಳೆದಿವೆ. ಶೀಟ್ ಅಲ್ಲಲ್ಲಿ ಒಡೆದು ಹೋಗಿರುವ ಕಾರಣ ಮಳೆ ಬಂದರೆ ಸೋರುತ್ತದೆ. ಈ ಶಿಥಿಲಗೊಂಡಿರುವ ಮನೆಯಲ್ಲಿ ಇರಲು ಭಯವಾಗುತ್ತದೆ. ಅಪ್ಪನಿಗೆ ಕಣ್ಣು ಕಾಣುವುದಿಲ್ಲ. ಅಮ್ಮ ಕಾಲು ನೋವಿನಿಂದ ಬಳಲುತ್ತಿದ್ದಾರೆ. ಅವರಿಗೆ ಓಡಾಡಲು ತೊಂದರೆ. ಇಷ್ಟು ದಿನ ಕೈಲಾದ ಮಟ್ಟಿಗೆ ಕೂಲಿ ಕೆಲಸ ಮಾಡಿ ಅಪ್ಪ-ಅಮ್ಮನನ್ನು ನೋಡಿಕೊಳ್ಳುತ್ತಿದ್ದೆ. ಈಗ ನನ್ನಲ್ಲೂ ಶಕ್ತಿ ಇಲ್ಲ (ಹದವ). ಅಪ್ಪನ ಹೆಸರಲ್ಲಿ ಏನೂ ಇಲ್ಲ. ನಮ್ಮಲ್ಲಿ ಈಗ ಪುಡಿಗಾಸೂ ಇಲ್ಲ. ಬದುಕು ಕಟ್ಟಿಕೊಳ್ಳಲು ದಿಕ್ಕೇ ತೋಚುತ್ತಿಲ್ಲ’ ಎಂದು ಅಳಲು ತೋಡಿಕೊಂಡರು.

ತಾಯಿ ಚಿಕಿತ್ಸೆ ಹಾಗೂ ನಿತ್ಯ ಜೀವನ ನಿರ್ವಹಣೆಗೆ ಆರ್ಥಿಕ ನೆರವು ಒದಗಿಸಬೇಕು ಎಂದು ಸಂಘ-ಸಂಸ್ಥೆಗಳು, ಜನಪ್ರತಿನಿಧಿಗಳಲ್ಲಿ ವೀರನಾಗಪ್ಪ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT