ಗುರುವಾರ , ಜೂನ್ 30, 2022
27 °C
ಸುಗಮ ಸಂಚಾರಕ್ಕೆ ‘ರಸ್ತೆ ಕಾಮಗಾರಿ’ ಕಂಟಕ – ದಂಡದ ಭಯವಿಲ್ಲದ ಸವಾರರು

ಟ್ರಾಫಿಕ್‌ ಸಿಗ್ನಲ್‌ಗಳಿಲ್ಲದ ಜಿಲ್ಲಾ ಕೇಂದ್ರ

ಕೆ.ಪಿ. ಓಂಕಾರಮೂರ್ತಿ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ವರ್ಷದಿಂದ ವರ್ಷ ನಗರದ ಜನಸಂಖ್ಯೆ ಹೆಚ್ಚಿದಂತೆ ವಾಹನಗಳ ಸಂಖ್ಯೆ ಸಹ ಏರಿಕೆ ಕಾಣುತ್ತಿದೆ. ಆದರೆ ರಸ್ತೆ ವಿಸ್ತರಣೆ ಕಾಮಗಾರಿ ಹಾಗೂ ಮೂಲಸೌಕರ್ಯದ ಕೊರತೆಯಿಂದಾಗಿ ಸಂಚಾರ ದಟ್ಟಣೆ ನಿಯಂತ್ರಣ ಪೊಲೀಸ್‌ ಇಲಾಖೆಗೆ ಸವಾಲಾಗಿದೆ.

ನಿತ್ಯ ನಗರದಲ್ಲೇ ಹಲವು ಬಾರಿ ಸಂಚಾರ ದಟ್ಟಣೆ ಸಮಸ್ಯೆಯನ್ನು ಜನರು ಎದುರಿಸುತ್ತಿದ್ದಾರೆ. ಜತೆಗೆ ಲಘು ಅಪಘಾತಗಳು ಮಾಮೂಲಿಯಾಗಿವೆ. ಜಿಲ್ಲಾ ಕೇಂದ್ರದಲ್ಲಿ ಕಳೆದೆರಡು ವರ್ಷಗಳಿಂದ ಆಮೆ ವೇಗದಲ್ಲಿ ರಸ್ತೆ ವಿಸ್ತರಣೆ ಕಾಮಗಾರಿ ನಡೆಯುತ್ತಿರುವುದು ಸಮಸ್ಯೆ ಮತ್ತಷ್ಟು ಗಂಭೀರ ಸ್ವರೂಪ ಪಡೆಯಲು ಕಾರಣವಾಗಿದೆ. ಇದರಿಂದ ನಗರದ ಬಿ.ಡಿ. ರಸ್ತೆ ಮಾರ್ಗದಲ್ಲಿ ದಿನಪೂರ್ತಿ ವಾಹನ ದಟ್ಟಣೆ ಇರುತ್ತದೆ.

ಎಸ್‌ಬಿಐ ಬ್ಯಾಂಕ್‌ ಸಮೀಪದಲ್ಲೇ ಟ್ರಾಫಿಕ್ ಕಿರಿಕಿರಿ ಹೆಚ್ಚಾಗಿದೆ. ಈ ರಸ್ತೆಯ ನಾಲ್ಕು ದಿಕ್ಕುಗಳಲ್ಲೂ ಬ್ಯಾಂಕ್, ಕಾಲೇಜುಗಳಿವೆ. ಮಾರುಕಟ್ಟೆಗೆ ಹೋಗಲು ಇದೇ ರಸ್ತೆಯನ್ನೇ ಬಹುತೇಕರು ಬಳಸುತ್ತಾರೆ. ಗಾಂಧಿ ವೃತ್ತದಿಂದಲೂ ನಾಲ್ಕು ಕಡೆ ಸಂಪರ್ಕ ಮಾರ್ಗ ಇರುವುದರಿಂದ ಸಮಸ್ಯೆ ಇಲ್ಲಿಯೂ ಇದೆ.

ಚಳ್ಳಕೆರೆ ಗೇಟ್‌ನಿಂದ ಕನಕ ವೃತ್ತದವರೆಗೂ ಎಸ್‌ಬಿಐ ವೃತ್ತ, ಗಾಂಧಿ ವೃತ್ತ ಹಾಗೂ ಸಂಗೊಳ್ಳಿ ರಾಯಣ್ಣ ವೃತ್ತದ ಸಮೀಪ ಟ್ರಾಫಿಕ್ ಸಿಗ್ನಲ್ ಅಳವಡಿಸಲಾಗಿತ್ತು. ಆದರೆ ಅವುಗಳ ನಿರ್ವಹಣೆಯಿಲ್ಲದೆ ರಸ್ತೆ ವಿಸ್ತರಣೆ ಕಾಮಗಾರಿಗೂ ಮುನ್ನವೇ ಸಂಪೂರ್ಣ ಹಾಳಾಗಿದ್ದವು.

ಮೂರು ವೃತ್ತಗಳಲ್ಲೂ ಸಂಚಾರ ಪೊಲೀಸರು ಇದ್ದರೂ ದಟ್ಟಣೆ ನಿಯಂತ್ರಣಕ್ಕೆ ಬರುತ್ತಿಲ್ಲ.

ಬೆಂಗಳೂರು ಕಡೆ ಹೋಗುವ ಕೆಎಸ್‌ಆರ್‌ಟಿಸಿ ಬಸ್‌ಗಳು ಬಿ.ಡಿ. ರಸ್ತೆ ಮಾರ್ಗದಲ್ಲೇ ಹಾದು ಹೋಗುತ್ತವೆ. ಖಾಸಗಿ ಬಸ್‌ಗಳು ಮೇದೆಹಳ್ಳಿ ರಸ್ತೆ ಮೂಲಕ ಬೈಪಾಸ್‌ನಲ್ಲಿ ತೆರಳುತ್ತವೆ. ಆದರೆ ಚಳ್ಳಕೆರೆ, ಹಿರಿಯೂರು, ನಾಯಕನಹಟ್ಟಿ ಭಾಗದಿಂದ ಬರುವ ಬಸ್‌ಗಳು ಬಿ.ಡಿ.ರಸ್ತೆ, ತರುವನೂರು ರಸ್ತೆ ಮೂಲಕವೇ ನಗರ ಪ್ರವೇಶಿಸುತ್ತವೆ. ಇದರಿಂದ ನ್ಯಾಯಾಲಯದ ಮುಂದಿನ ರಸ್ತೆ ದಟ್ಟಣೆಯಿಂದ ಕೂಡಿರುತ್ತದೆ. ರಸ್ತೆ ಕಾಮಗಾರಿ ನಡೆಯುತ್ತಿದ್ದರೂ ಹೊಸಪೇಟೆ ಮಾರ್ಗದಲ್ಲಿ ಬರುವ ಬಸ್‌ಗಳು ಜೆ.ಸಿ.ಆರ್. ಹಾಗೂ ವಿ.ಪಿ.ಬಡಾವಣೆಯ ಮುಖ್ಯರಸ್ತೆಯಲ್ಲಿ ಸಾಗುವುದರಿಂದ ದಟ್ಟಣೆ ಹೆಚ್ಚಾಗಿದೆ. ರಸ್ತೆ ದಾಟುವುದೇ ಕಷ್ಟವಾಗಿದೆ.

ಗಾಂಧಿವೃತ್ತದ ಸುತ್ತಲೂ ಸೋಮವಾರದ ಸಂತೆಯಂದು ಪಾದಚಾರಿಗಳೂ ಓಡಾಡುವುದು ಕಷ್ಟ. ಚಿಕ್ಕಪೇಟೆ, ರಂಗಯ್ಯನ ಬಾಗಿಲು, ಆನೆ ಬಾಗಿಲು, ಕೋಟೆ ರಸ್ತೆ, ಹೊಳಲ್ಕೆರೆ ರಸ್ತೆ, ಲಕ್ಷ್ಮಿ ಬಜಾರ್‌, ವಾಸವಿ ಮಹಲ್‌, ಸಂತೆಹೊಂಡದ ರಸ್ತೆ, ಪ್ರಸನ್ನ ಚಿತ್ರಮಂದಿರದ ರಸ್ತೆಗಳು ಸುಗಮ ಸಂಚಾರಕ್ಕೆ ಯೋಗ್ಯವಾಗಿಲ್ಲ. ಭಾನುವಾರ ಬಿಟ್ಟು ಉಳಿದೆಲ್ಲ ದಿನಗಳಲ್ಲೂ ಈ ರಸ್ತೆ ಮಾರ್ಗಗಳಲ್ಲಿ ವಾಹನ ದಟ್ಟಣೆ ಹೆಚ್ಚು.

ಸಾರ್ವಜನಿಕರಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ನಗರದಲ್ಲಿ ಸಂತೆಹೊಂಡದ ರಸ್ತೆ, ಪ್ರವಾಸಿ ಮಂದಿರದಿಂದ ಒನಕೆ ಓಬವ್ವ ವೃತ್ತ, ಪೋಸ್ಟ್‌ ಆಫೀಸ್‌ ರಸ್ತೆ, ಎಸ್‌ಬಿಐ ಬ್ಯಾಂಕ್‌ ಪಕ್ಕ, ಗಾಂಧಿ ವೃತ್ತದಿಂದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ರಸ್ತೆಗಳನ್ನು ಏಕಮುಖ ಸಂಚಾರ ಮಾರ್ಗಗಳಾಗಿ ಬದಲಾವಣೆ ಮಾಡಲಾಗಿದೆ. ಆದರೆ ರಸ್ತೆ ಕಾಮಗಾರಿ ನೆಪದಲ್ಲಿ ಎಲ್ಲವೂ ಇದ್ದು ಇಲ್ಲದಂತಾಗಿದೆ.

ಪಾರ್ಕಿಂಗ್‌ ಅವ್ಯವಸ್ಥೆ

ಪ್ರಮುಖ ರಸ್ತೆ ಮತ್ತು ನಗರದ ಒಳಭಾಗದ ರಸ್ತೆಗಳಬದಿಯಲ್ಲಿ ಮನಸ್ಸಿಗೆ ಬಂದಹಾಗೆ ವಾಹನಗಳನ್ನು ನಿಲ್ಲಿಸಲಾಗುತ್ತಿದೆ. ಕಾರು, ಬೈಕ್‌ಗಳನ್ನು ನಿಲುಗಡೆಮಾಡುವವರು ಸಂಚಾರ ನಿಯಮಗಳನ್ನು ಪಾಲಿಸುತ್ತಿಲ್ಲ. ಜಿಲ್ಲಾಧಿಕಾರಿ ಕಚೇರಿ ಹಾಗೂ ಒನಕೆ ಓಬವ್ವ ವೃತ್ತದ ಸಮೀಪದಲ್ಲಿ ‘ನೋ ಪಾರ್ಕಿಂಗ್’ ಸ್ಥಳದಲ್ಲಿಯೇ ವಾಹನಗಳನ್ನು ನಿಲ್ಲಿಸಲಾಗುತ್ತದೆ. ರಸ್ತೆಯ ಎರಡು ಕಡೆ ಬೇಕಾಬಿಟ್ಟಿಯಾಗಿ ವಾಹನ ನಿಲುಗಡೆ ಸಾಮಾನ್ಯವಾಗಿದೆ. ಮೆದೇಹಳ್ಳಿ ರಸ್ತೆ, ಸಂತೆಹೊಂಡದ ಮಾರ್ಗದಲ್ಲಿ ಕಿರಿಕಿರಿ ಹೆಚ್ಚಾಗಿದೆ.

ಹೆಲ್ಮೆಟ್‌, ಸೀಟ್‌ಬೆಲ್ಟ್‌ ಬಹುದೂರ

ನಗರದಲ್ಲಿ ಸಂಚರಿಸುವ ಬೈಕ್‌ ಸವಾರರು ಹೆಲ್ಮೆಟ್‌ ಹಾಗೂ ಕಾರಿನಲ್ಲಿ ಸಂಚರಿಸುವವರು ಸೀಟ್‌ ಬೆಲ್ಟ್‌ ಎಂದರೆ ಏನು ಎಂದು ಪ್ರಶ್ನಿಸುವ ಸ್ಥಿತಿ ನಿರ್ಮಾಣವಾಗಿದೆ. ಹೆಲ್ಮೆಟ್ ಕಡ್ಡಾಯ ಎಂಬ ಕಾನೂನಿದ್ದರೂ ಚಿತ್ರದುರ್ಗದಲ್ಲಿ ಬಹುತೇಕರು ಹೆಲ್ಮೆಟ್ ಧರಿಸುತ್ತಿಲ್ಲ. ಜಿಲ್ಲಾ ಪೊಲೀಸ್, ಸಂಚಾರ ಪೊಲೀಸರು ಜಾಗೃತಿ ಮೂಡಿಸಿದರೂ ಪ್ರಯೋಜನವಾಗಿಲ್ಲ.

ಗಾಂಧಿ ವೃತ್ತ, ಕನಕ ವೃತ್ತ, ಚಳ್ಳಕೆರೆ ಗೇಟ್‌, ಮೇದೆಹಳ್ಳಿ ಅಂಡರ್‌ಪಾಸ್‌ಗಳಲ್ಲಿ ವಾಹನ ತಪಾಸಣೆ ನಡೆಸಿ ನಿತ್ಯ 30ರಿಂದ 50ಪ್ರಕರಣಗಳಲ್ಲಿ ದಂಡ ವಿಧಿಸುತ್ತಿದ್ದಾರೆ. ಕೆಲವರು ನಾನಾ ಕಾರಣ ಹೇಳಿ ದಂಡದಿಂದ ತಪ್ಪಿಸಿಕೊಳ್ಳುವುದು ಸಾಮಾನ್ಯವಾಗಿದೆ.

ಪ್ರಮುಖ ಅಪಘಾತ ವಲಯಗಳು

ಚಿತ್ರದುರ್ಗ ನಗರದ ಜೆಎಂಐಟಿ ಸರ್ಕಲ್, ನಗರದ ಹೊರವಲಯ ದಾವಣಗೆರೆ ರಸ್ತೆ ಟರ್ಕ್ ಟರ್ಮಿನಲ್ ಬಳಿ, ಮಠದ ಕುರುಬರಹಟ್ಟಿ ಕ್ರಾಸ್, ಬೆಸ್ಕಾಂ ಸಮುದಾಯದ ಭವನದ ಮುಂಭಾಗ, ವಿದ್ಯಾನಗರ ಸಮೀಪದ ರೈಲ್ವೆ ಕೆಳ ಸೇತುವೆ ಸೇರಿ ನಗರದ ಮತ್ತಿತರ ಪ್ರದೇಶಗಳನ್ನು ಅಪಘಾತ ವಲಯಗಳನ್ನಾಗಿ ಗುರುತಿಸಲಾಗಿದೆ.

ನಗರ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಅಪಘಾತಗಳು ಸಂಭವಿಸುವ ಜೆಎಂಐಟಿ ಸರ್ಕಲ್, ಟರ್ಕ್ ಟರ್ಮಿನಲ್, ಬೆಸ್ಕಾಂ ಸಮುದಾಯ ಭವನ, ವಿದ್ಯಾನಗರದ ರೈಲ್ವೆ ಕೆಳಸೇತುವೆ ಈ ಪ್ರದೇಶಗಳಲ್ಲಿ ಸರ್ವಿಸ್ ರಸ್ತೆಗಳು ಸೇರಿಕೊಳ್ಳುವ ಪರಿಣಾಮ ಇಲ್ಲಿ ಅಪಘಾತಗಳು ಸಂಭವಿಸುತ್ತವೆ.

ಟ್ರಾಫಿಕ್‌ ಜಾಮ್‌ ಕಿರಿಕಿರಿ

ಸುವರ್ಣ ಬಸವರಾಜ್‌

ಹಿರಿಯೂರು: ನಗರದ ವೇದಾವತಿ ಸೇತುವೆಯಿಂದ ಗಾಂಧಿವೃತ್ತದವರೆಗೆ ಕಾಲ್ನಡಿಗೆಯಲ್ಲಿ ಸಾಗಿದರೆ ಮೂರ್ನಾಲ್ಕು ನಿಮಿಷದಲ್ಲಿ ಹೋಗಬಹುದು. ಆದರೆ ಬಸ್ಸು, ಕಾರು, ದ್ವಿಚಕ್ರವಾಹನದಲ್ಲಿ ಮಾತ್ರ ಇದು ಸಾಧ್ಯವಿಲ್ಲ.

ಮೈಸೂರು, ಬೆಂಗಳೂರು ಕಡೆಯಿಂದ ಬರುವ ವಾಹನಗಳು ಗಾಂಧಿ ವೃತ್ತದ ಮೂಲಕ ಚಿತ್ರದುರ್ಗ, ಚಳ್ಳಕೆರೆಗೆ ಹೋಗುವಾಗ ಏನಿಲ್ಲವೆಂದರೂ ನಿತ್ಯ ನೂರು ಬಾರಿಯಾದರೂ ಸಂಚಾರ ಅಸ್ತವ್ಯಸ್ತವಾಗುತ್ತದೆ. ಕೇವಲ ಒಂದು ಫರ್ಲಾಂಗು ದೂರ ಕ್ರಮಿಸಲು ಕೆಲವೊಮ್ಮೆ ಅರ್ಧ ಗಂಟೆ ತೆಗೆದುಕೊಳ್ಳುತ್ತದೆ.

ಸಂಚಾರ ಅಸ್ತವ್ಯಸ್ತವಾದಾಗ ರಸ್ತೆ ಬದಿಯ ಕಟ್ಟಡದ ಮಾಲೀಕರು, ಕಟ್ಟಡ ತೆರವುಗೊಳಿಸಲಾಗುವುದು ಎನ್ನುತ್ತಾರೆ. ಬಳಿಕ ಮರೆಯುತ್ತಾರೆ ಎಂಬ ದೂರಿದೆ.

ಹೊಳಲ್ಕೆರೆ, ಚಳ್ಳಕೆರೆ, ಹೊಸದುರ್ಗ ಪಟ್ಟಣಗಳಲ್ಲಿ ರಸ್ತೆ ವಿಸ್ತರಣೆ ಆಗಿದೆ. ಹಿರಿಯೂರಿನಲ್ಲಿ ಮಾತ್ರ ರಸ್ತೆ ವಿಸ್ತರಣೆಗೆ ಅಡ್ಡಿ ಏಕೆ? ಎಂಬ ಪ್ರಶ್ನೆ ಜನರನ್ನು ಕಾಡುತ್ತಿದೆ. ರಸ್ತೆ ವಿಸ್ತರಣೆಗೆ ಕಟ್ಟಡಗಳನ್ನು ಕಳೆದುಕೊಳ್ಳುವವರನ್ನು ಒಪ್ಪಿಸಿ, ಸೂಕ್ತ ಪರಿಹಾರ ಕೊಟ್ಟು ನ್ಯಾಯಾಲಯದ ತಡೆಯಾಜ್ಞೆ ತೆರವುಗೊಳಿಸುವ ಇಚ್ಛಾಶಕ್ತಿಯನ್ನು ನಗರಸಭೆ ಆಡಳಿತ ಹಾಗೂ ಶಾಸಕರು ಪ್ರದರ್ಶಿಸಬೇಕು ಎನ್ನುತ್ತಾರೆ ನಿವೃತ್ತ ಪ್ರಾಂಶುಪಾಲ ಬಿ.ಆರ್‌. ರಮೇಶ್.

ಪ್ರವಾಸಿ ಮಂದಿರ ವೃತ್ತದಿಂದ ಹುಳಿಯಾರು ರಸ್ತೆಯಲ್ಲಿನ ವೇದಾವತಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುವರೆಗಿನ ರಸ್ತೆ ವಿಸ್ತರಿಸುವ ಕುರಿತು ಜನಪ್ರತಿನಿಧಿಗಳು ನೀಡಿದ್ದ ಭರವಸೆಗಳು ಜಾರಿಯಾಗದ ಕಾರಣ ನಾಗರೀಕರು ರಸ್ತೆ ವಿಸ್ತರಣೆ ಕಾಮಗಾರಿ ಬಗ್ಗೆ ಭರವಸೆ ಕಳೆದುಕೊಂಡಿದ್ದಾರೆ. ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಸಂಚಾರ ದಟ್ಟಣೆಯ ಸಮಸ್ಯೆಯನ್ನು ನಿತ್ಯ ಅನುಭವಿಸುತ್ತಿದ್ದಾರೆ. ಪೊಲೀಸರು ಸಹ ಈ ವಿಚಾರದಲ್ಲಿ ಕೈಚೆಲ್ಲಿ ಕುಳಿತಿದ್ದಾರೆ.

ಕಿರಿದಾದ ರಸ್ತೆಗಳೇ ಸವಾಲು

ಶಿವಗಂಗಾ ಚಿತ್ತಯ್ಯ

ಚಳ್ಳಕೆರೆ: ದಿನದಿಂದ ದಿನಕ್ಕೆ ಚಳ್ಳಕೆರೆ ನಗರ ವಿಸ್ತರಿಸಿಕೊಂಡು ಬೆಳೆಯುತ್ತಿದೆ. ಇಲ್ಲಿನ ರಸ್ತೆ ಬದಿಯಲ್ಲಿ ಎಲ್ಲೆಂದರಲ್ಲೆ ತಲೆ ಎತ್ತಿರುವ ಗೂಡಂಗಡಿಗಳು, ಬೀದಿ ಬದಿ ವ್ಯಾಪಾರಿಗಳು, ಕಿರಿದಾದ ರಸ್ತೆಗಳು, ಹೆಚ್ಚಿದ ಬೀಡಾಡಿ ದನಗಳು ನಗರದ ಟ್ರಾಫಿಕ್‌ ವ್ಯವಸ್ಥೆಗೆ ಕಂಟಕವಾಗಿವೆ.

ನೆಹರೂ ವೃತ್ತದ ಚಿತ್ರದುರ್ಗ ಮಾರ್ಗದ ರಸ್ತೆ ಹೊರತುಪಡಿಸಿದರೆ ಕಟ್ಟಡಗಳ ಕಾರಣಕ್ಕೆ ಪಾವಗಡ, ಬಳ್ಳಾರಿ ಮಾರ್ಗದ ರಸ್ತೆಗಳು ತುಂಬಾ ಕಿರಿದಾಗಿದ್ದು, ಪಾದಚಾರಿಗಳ ಓಡಾಟ ಹಾಗೂ ವಾಹನ ಸಂಚಾರಕ್ಕೆ ಅಡಚಣೆಯಾಗುತ್ತಿದೆ.

ಹೂವು, ಹಣ್ಣು, ತರಕಾರಿ ಮಾರುಕಟ್ಟೆ, ಹೋಟೆಲ್ ಎಲ್ಲವು ನೆಹರೂ ವೃತ್ತದಲ್ಲಿ ಇರುವುದರಿಂದ ಜನರು ತಮ್ಮ ವಾಹನಗಳನ್ನು ಪಾದಚಾರಿ ಮಾರ್ಗದಲ್ಲೇ ಬಿಟ್ಟು ಹೋಗುತ್ತಾರೆ. ವಾಹನಗಳ ಸಂಚಾರ ದಟ್ಟಣೆ ನಿಯಂತ್ರಣಕ್ಕೆ₹ 6 ಲಕ್ಷ ವೆಚ್ಚದಲ್ಲಿ ನೆಹರೂ ವೃತ್ತದಲ್ಲಿ ಅಳವಡಿಸಿದ್ದ ಸಿಗ್ನಲ್‌ ಲೈಟ್‌, ಸಿಸಿಟಿವಿ ಕ್ಯಾಮೆರಾ ಕೆಟ್ಟು ನಾಲ್ಕೈದು ವರ್ಷ ಆಗಿದೆ. ಇದರ ಬಗ್ಗೆ ಯಾರೂ ಗಮನಹರಿಸುತ್ತಿಲ್ಲ. ಇದರಿಂದ ಪೋಲಿಸರ ಎದುರಿನಲ್ಲೇ ಅಪಘಾತಗಳು ನಡೆದಿವೆ.

ಜನರಲ್ಲಿ ಸಂಚಾರ ನಿಯಮದ ಅರಿವಿನ ಕೊರತೆ ಹಾಗೂ ಜನಪ್ರತಿನಿಧಿಗಳ ಸಹಕಾರ ಇಲ್ಲದೆ ಇರುವ ಕಾರಣ ಕಠಿಣ ಸಂಚಾರ ವ್ಯವಸ್ಥೆ ಜಾರಿಗೊಳಿಸಲು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ಪೊಲೀಸ್‌ ಅಧಿಕಾರಿಗಳು.

***

ಭವಿಷ್ಯದ ದೃಷ್ಟಿಯಿಂದ ನಡೆಯುತ್ತಿರುವ ರಸ್ತೆ ವಿಸ್ತರಣೆ ಕಾಮಗಾರಿ ಬಹುತೇಕ ಅಂತಿಮ ಹಂತದಲ್ಲಿದ್ದು, ಚಳ್ಳಕೆರೆ ಗೇಟ್‌ನಿಂದ ಕನಕ ವೃತ್ತದವರೆಗಿನ ಮುಖ್ಯ ಸ್ಥಳಗಳಲ್ಲಿ ಟ್ರಾಫಿಕ್‌ ಸಿಗ್ನಲ್‌ ಲೈಟ್‌ ಆಳವಡಿಕೆ ಮಾಡಲಾಗುತ್ತದೆ. ಜತೆಗೆ ಏಕಮುಖ ಸಂಚಾರ ಮಾರ್ಗಗಳನ್ನು ಪರಿಷ್ಕೃತಗೊಳಿಸಿ ಜನಸ್ನೇಹಿ ವ್ಯವಸ್ಥೆ ಜಾರಿಗೊಳಿಸಲಾಗುವುದು.

–ಕೆ. ಪರಶುರಾಮ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ಚಿತ್ರದುರ್ಗ

ರಸ್ತೆ ಕಾಮಗಾರಿ ನಡೆಸಲು ಚಿತ್ರದುರ್ಗ ನಗರದ ಎಲ್ಲ ರಸ್ತೆಗಳನ್ನು ಕಿತ್ತು ಹಾಕಲಾಗಿದೆ. ವರ್ಷದಲ್ಲೇ ಎರಡು ಬಾರಿ ನನಗೆ ಬೈಕ್‌ನಲ್ಲಿ ಅಪಘಾತವಾಗಿದೆ. ಎಲ್ಲಿಯೂ ಸಂಚಾರ ನಿಯಮಗಳು ಪಾಲನೆಯಾಗುತ್ತಿಲ್ಲ. ಸಿ.ಎಸ್‌. –––ಪ್ರೇಮಾನಂದ್‌, ಸ್ಥಳೀಯರು

>ಚಳ್ಳಕೆರೆ ನಗರದ ಬೆಂಗಳೂರು ರಸ್ತೆಯಲ್ಲಿನ ಗೂಡಂಗಡಿ ದಂಧೆ ನಿಯಂತ್ರಿಸಿ, ಪಾವಗಡ, ಬಳ್ಳಾರಿ ರಸ್ತೆಯ ಕಟ್ಟಡ ತೆರವುಗೊಳಿಸಿದರೆ ಸಂಚಾರ ಅವ್ಯವಸ್ಥೆ ಸರಿಯಾಗುತ್ತದೆ.

ಎಚ್‌.ಎಸ್‌. ಸೈಯದ್‌, ಹೋರಾಟಗಾರ, ಚಳ್ಳಕೆರೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು