ಚಿತ್ರದುರ್ಗ: ದೀಪಾವಳಿ; ಖರೀದಿಗೆ ಹೆಚ್ಚಿದ ಭರಾಟೆ

ಚಿತ್ರದುರ್ಗ: ಜಿಲ್ಲೆಯಲ್ಲಿ ಶುಕ್ರವಾರ ಬಲಿಪಾಡ್ಯಮಿಯನ್ನು ಸಂಭ್ರಮದಿಂದ ಆಚರಿಸಲು ಕ್ಷಣಗಣನೆ ಆರಂಭವಾಗಿದೆ. ಅದಕ್ಕಾಗಿ ನರಕ ಚತುರ್ದಶಿಯೊಂದಿಗೆ ಮೂರು ದಿನ ನಡೆಯಲಿರುವ ಬೆಳಕಿನ ಹಬ್ಬ ದೀಪಾವಳಿಗೆ ಬಹುತೇಕ ಜನರು ಸಿದ್ಧತೆಯಲ್ಲಿ ತೊಡಗಿದ್ದಾರೆ. ಪೂಜಾ ಸಾಮಗ್ರಿ ಸೇರಿ ಅಗತ್ಯ ವಸ್ತುಗಳ ಖರೀದಿಗೆ ಮಾರುಕಟ್ಟೆಗಳ ಬಳಿ ಬುಧವಾರವೇ ಜನರು ಮುಗಿಬಿದ್ದರು.
ಹಬ್ಬದ ಅಂಗವಾಗಿ ಸಂತೆಹೊಂಡ, ಆನೆಬಾಗಿಲು ಮಾರ್ಗ ಮತ್ತು ಗಾಂಧಿ ವೃತ್ತದ ಸಮೀಪದಲ್ಲಿ ದೀಪಗಳು, ಮಾವಿನ ಎಲೆ, ಬಾಳೆ ದಿಂಡು, ಹೊಂಬಾಳೆ, ಕಂಚಿಕಡ್ಡಿ, ಬ್ರಹ್ಮದಂಡೆ ಗಿಡ, ಬಿಲ್ವ ಪತ್ರೆ, ತಂಗಟೆ ಹೂ, ಹಣ್ಣು, ಬಾಳೆ ಎಲೆ, ಇತರೆ ಪೂಜಾ ಸಾಮಗ್ರಿ ಖರೀದಿ ಜೋರಾಗಿ ನಡೆಯಿತು. ಬಟ್ಟೆ ಅಂಗಡಿಗಳಲ್ಲೂ ಜನರು ತಮಗಿಷ್ಟವಾದ ಉಡುಪುಗಳನ್ನು ಖರೀದಿಸಲು ಮುಂದಾಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಬೀದಿ ಬದಿಯಲ್ಲಿ ವಸ್ತ್ರ ವ್ಯಾಪಾರ ಗಮನ ಸೆಳೆಯಿತು.
ಪೂಜಾ ಸಾಮಗ್ರಿ ಖರೀದಿಸಲು ಹೆಚ್ಚಿನ ಜನರು ನಗರದತ್ತ ಮುಖ ಮಾಡಿದ್ದರಿಂದ ಮುಖ್ಯ ರಸ್ತೆ ಮಾರ್ಗಗಳಲ್ಲಿ ಟ್ರಾಫಿಕ್ ಕಿರಿಕಿರಿ ಉಂಟಾಯಿತು. ಕೆಲ ಗಂಟೆಗಳ ಕಾಲ ಜನದಟ್ಟಣೆ ಹಾಗೆಯೇ ಮುಂದುವರಿಯಿತು. ಶುಕ್ರವಾರದವರೆಗೂ ವ್ಯಾಪಾರ ಚಟುವಟಿಕೆ ಗರಿಗೆದರಲಿದೆ.
ವಿವಿಧ ವಿನ್ಯಾಸದ ₹ 20ರಿಂದ ₹ 300ರವರೆಗಿನ ಮಣ್ಣಿನ ದೀಪಗಳನ್ನು ವ್ಯಾಪಾರಸ್ಥರು ಗಾಂಧಿ ವೃತ್ತದ ಸಮೀಪ ಅಲ್ಲಲ್ಲಿ ಮಾರಾಟ ಮಾಡುತ್ತಿದ್ದರು. ಇದೇ ಸಂದರ್ಭದಲ್ಲಿ ಕೆಲ ಮಹಿಳೆಯರು ದೀಪಗಳ ಖರೀದಿಯಲ್ಲಿ ತೊಡಗಿದ್ದರು.
ಗುರುವಾರ ನಡೆಯಲಿರುವ ದೀಪಾವಳಿ ಅಮಾವಾಸ್ಯೆ ಹಾಗೂ ಮಹಾಲಕ್ಷ್ಮಿ ಪೂಜೆಗೆ ಹೂವಿನ ಖರೀದಿ ಭರಾಟೆಯೂ ಜೋರಾಗಿತ್ತು. ಎಪಿಎಂಸಿ ಆವರಣದ ಹೂವಿನ ಮಾರುಕಟ್ಟೆ ವಿವಿಧ ಬಗೆಯ ಪುಷ್ಪಗಳಿಂದ ಭರ್ತಿಯಾಗಿತ್ತು. ಹೂವುಗಳನ್ನು ಕೊಳ್ಳಲು ಬೆಳಿಗ್ಗೆ 11ರಿಂದ ಮಧ್ಯಾಹ್ನ 2ರವರೆಗೂ ಒಳಗೆ ಹೋಗಲು ನೂಕುನುಗ್ಗಲು ಉಂಟಾಯಿತು.
ನೂರಾರು ಹೂ ಬೆಳೆಗಾರರು ಹೂವಿನ ಮೂಟೆಗಳನ್ನು ತಲೆಯ ಮೇಲೆ ಹೊತ್ತು ಒಬ್ಬರ ನಂತರ ಮತ್ತೊಬ್ಬರು ಬರುತ್ತಿದ್ದರು. ಮಾರುಕಟ್ಟೆಗೆ ತಂದಾಗ ವ್ಯಾಪಾರದ ಭರಾಟೆ ಜೋರಾಗಿತ್ತು. ಗುಣಮಟ್ಟದ ಹಳದಿ, ಬಿಳಿ ಹಾಗೂ ವಿವಿಧ ವರ್ಣದ ಸೇವಂತಿಯ 10 ಮಾರು ಪುಷ್ಪಕ್ಕೆ ತಲಾ ₹ 1 ಸಾವಿರ. ಇದೇ ದರಕ್ಕೆ ಕನಕಾಂಬರ ಮತ್ತು ಮಲ್ಲಿಗೆ ಖರೀದಿಯಾಗುತ್ತಿದ್ದವು. ವಿವಿಧ ಬಣ್ಣಗಳ ಗುಲಾಬಿ (ಬಟನ್ಸ್) ಹೂಗಳು ಕೆ.ಜಿಗೆ ₹ 300ರಂತೆ ಮಾರಾಟವಾದವು.
ಮನೆಗಳಲ್ಲಿ ಪ್ರತಿಷ್ಠಾಪಿಸುವ ಲಕ್ಷ್ಮಿ ಮೂರ್ತಿ, ಕಳಶದ ಹಾರ ₹200ರಿಂದ ₹300. ಹಿರಿಯರ ಪೂಜೆಗೂ ಇದೇ ದರದಲ್ಲಿ ಹಾರಗಳನ್ನು ಸಿದ್ಧಪಡಿಸಲಾಗಿತ್ತು. ದೇಗುಲಗಳಲ್ಲಿನ ದೇವರ ಮೂರ್ತಿಗಳಿಗೆ ₹ 500ರಿಂದ ₹ 3 ಸಾವಿರದವರೆಗೂ ಭಕ್ತರ ಅಭಿರುಚಿಗೆ ತಕ್ಕಂತೆ ಹಾರಗಳನ್ನು ಮಾರಾಟಗಾರರು ತಯಾರಿಸಿದ್ದರು. ಅದರಂತೆಯೇ ಬಹುತೇಕ ಮಾರಾಟವಾದವು.
ಸ್ವಲ್ಪ ಕಳೆಗುಂದಿದ ಹೂಗಳು ಕಡಿಮೆ ದರಕ್ಕೆ ಮಾರಾಟವಾದವು. ತಲಾ ಒಂದೊಂದು ತೆಂಗಿನಕಾಯಿ ₹ 20ರಿಂದ 30ರವರೆಗೂ ಮಾರಾಟವಾದವು. ವ್ಯಾಪಾರ ಭರಾಟೆ ನಡುವೆ ಕೋವಿಡ್ ಭೀತಿ ಯಾರಲ್ಲೂ ಕಾಣಲಿಲ್ಲ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.