ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಶುಚಿಕಿತ್ಸಾಲಯದಲ್ಲಿಲ್ಲ ವೈದ್ಯರು: ಪರದಾಟ

ಹರಿಯಬ್ಬೆಯಲ್ಲಿ ಜಾನುವಾರಿಗೆ ಚರ್ಮಗಂಟು ರೋಗ: ರೈತರ ಆತಂಕ
Last Updated 2 ಅಕ್ಟೋಬರ್ 2022, 5:05 IST
ಅಕ್ಷರ ಗಾತ್ರ

ಧರ್ಮಪುರ: ಸಮೀಪದ ಹರಿಯಬ್ಬೆ ಪಶುಚಿಕಿತ್ಸಾಲಯದಲ್ಲಿ ಎಂಟು ತಿಂಗಳಿನಿಂದ ಪಶು ವೈದ್ಯರು ಇಲ್ಲದೆ ರೈತರು ಪರದಾಡುವಂತಾಗಿದೆ.

ಇಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪಶುವೈದ್ಯರು ಬಡ್ತಿ ಮೇಲೆ ವರ್ಗಾವಣೆಗೊಂಡು ಎಂಟು ತಿಂಗಳು ಕಳೆದಿವೆ. ಇದರಿಂದ ಪಶು ವೈದ್ಯರಿಲ್ಲದೆ ಪಶು ಚಿಕಿತ್ಸಾಲಯ ಬಿಕೋ ಎನ್ನುತ್ತಿದೆ. ರಾಜ್ಯದಲ್ಲಿ ಜಾನುವಾರುಗಳಿಗೆ ಚರ್ಮಗಂಟು ರೋಗ ಕಾಣಿಸಿಕೊಂಡಿದ್ದು, ಹರಿಯಬ್ಬೆಯಲ್ಲೂ ನಾಲ್ಕೈದು ಜಾನುವಾರು ತುತ್ತಾಗಿವೆ. ಜಾನುವಾರು ಪರೀಕ್ಷೆಗೆ ಪ್ರತಿನಿತ್ಯ ರೈತರು ಪಶುಚಿಕಿತ್ಸಾಲಯಕ್ಕೆ ಅಲೆದಾಡುವಂತಾಗಿದೆ.ಆದರೆ, ಪಶು ವೈದ್ಯರು ಇಲ್ಲ.

ಹೋಬಳಿಯಲ್ಲಿ 60 ಕಂದಾಯ ಗ್ರಾಮಗಳಿದ್ದು, ಇಲ್ಲಿನ ಜನರು ಪಶುಪಾಲನೆ, ಕುರಿ, ಮೇಕೆ ಸಾಕಾಣಿಕೆಯನ್ನು ವೃತ್ತಿಯನ್ನಾಗಿಸಿಕೊಂಡಿದ್ದಾರೆ. 2 ಲಕ್ಷದಷ್ಟು ಕುರಿ, ಮೇಕೆ, 16 ಸಾವಿರ ಜಾನುವಾರು (ಹಸು, ಎತ್ತು, ಎಮ್ಮೆ, ಕೋಣ ) ಇವೆ. ಹೆಚ್ಚಿನರೈತರು ಹೈನುಗಾರಿಕೆ ಅವಲಂಬಿಸಿದ್ದಾರೆ.

ಜರ್ಸಿ, ಎಚ್‌ಎಫ್ ಹಸುಗಳನ್ನು ಸಾಕಿರುವುದರಿಂದ ಇವು ಆಗಾಗ್ಗೆ ರೋಗಕ್ಕೆ ತುತ್ತಾಗುವುದು ಸಹಜ. ಇದರಿಂದ ಪಶು ಚಿಕಿತ್ಸಾಲಯಕ್ಕೆ ಅನಿವಾರ್ಯವಾಗಿ ಹೋಗಲೇಬೇಕಾದ ಪರಿಸ್ಥಿತಿ
ಇದೆ. ಆದರೆ ಪಶು ವೈದ್ಯರು ಇಲ್ಲದೇ ಇರುವುದರಿಂದ ತೊಂದರೆಯಾಗಿದೆ ಎಂದು ಹರಿಯಬ್ಬೆ ಜಯರಾಜ್ ಹೇಳಿದರು.

ಹರಿಯಬ್ಬೆ ಸುತ್ತಲಿನ ಗ್ರಾಮಗಳಾದ ಬುರುಡುಕುಂಟೆ, ಹರಿಯಬ್ಬೆ ಪಾಳ್ಯ, ಚಿಲ್ಲಹಳ್ಳಿ, ಮುಂಗುಸುವಳ್ಳಿ, ಗೂಳ್ಯ, ಗೊಲ್ಲಾಹಳ್ಳಿ, ವೇಣುಕಲ್ಲುಗುಡ್ಡ, ಹೊಸಹಳ್ಳಿ, ಸೂಗೂರು, ಸಾಲುಣಿಸೆ ಗ್ರಾಮದ ರೈತರು ಹೆಚ್ಚಾಗಿ ಹಾಲು ಉತ್ಪಾದನೆಯನ್ನು ನೆಚ್ಚಿಕೊಂಡಿದ್ದಾರೆ. ಕೆಲವು ಹಸುಗಳಲ್ಲಿ ಬೊಬ್ಬೆಯಂತಹ ಗಂಟು ಕಾಣಿಸಿಕೊಂಡಿದೆ. ರೋಗಕ್ಕೆ ಚಿಕಿತ್ಸೆ ನೀಡಲು ವೈದ್ಯರೇ ಇಲ್ಲಎಂದು ಗ್ರಾಮದ ರೈತ ಶಿವಣ್ಣ ದೂರಿದರು.

ಧರ್ಮಪುರ, ಹೂವಿನಹೊಳೆ, ಬೇತೂರು, ಹರಿಯಬ್ಬೆ, ರಂಗೇನಹಳ್ಳಿಯಲ್ಲಿ ಪಶು ಚಿಕಿತ್ಸಾಲಯಗಳಿವೆ. ರಂಗೇನಹಳ್ಳಿ ಮತ್ತು ಹರಿಯಬ್ಬೆಯಲ್ಲಿ ಪಶು ವೈದ್ಯರು ಇಲ್ಲ. ಇದರಿಂದ ರೈತರು ತೊಂದರೆ ಎದುರಿಸುವಂತಾಗಿದೆ. ಸಂಬಂಧಪಟ್ಟವರು ಪಶು ವೈದ್ಯರನ್ನು ನೇಮಕಕ್ಕೆ ಕ್ರಮ ಕೈಗೊಳ್ಳಬೇಕು ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಎಚ್. ವೆಂಕಟೇಶಪ್ಪ ಒತ್ತಾಯಿಸಿದ್ದಾರೆ.

ಹರಿಯಬ್ಬೆ ಪಶು ಚಿಕಿತ್ಸಾಲಯಕ್ಕೆ ಧರ್ಮಪುರದ ಪಶು ವೈದ್ಯರನ್ನು ತಾತ್ಕಾಲಿಕವಾಗಿ ಮೂರು ದಿನಗಳವರೆಗೆ ನಿಯೋಜಿಸಲಾಗಿದೆ. ಒಬ್ಬರು ಹಿರಿಯ ಪಶು ವೀಕ್ಷಕರನ್ನು ನೇಮಿಸಲಾಗಿದೆಎಂದು ಪಶು ಇಲಾಖೆಯ ಸಹಾಯಕ ನಿರ್ದೇಶಕಡಾ. ಸಂಜೀವರಾಯಪ್ಪ ತಿಳಿಸಿದರು.

ಜಾನುವಾರುಗಳಲ್ಲಿ ಚರ್ಮಗಂಟು ರೋಗಕಾಣಿಸಿಕೊಂಡಿದ್ದು, ಚಿಕಿತ್ಸೆ ನೀಡಲಾಗಿದೆ. ತುರ್ತಾಗಿ ಪಶು ವೈದ್ಯರ ನೇಮಕದ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಕ್ರಮ ಕೈಗೊಳ್ಳಲಾಗುವುದು.

-ಡಾ. ಸಂಜೀವರಾಯಪ್ಪ, ಪಶು ಇಲಾಖೆಯ ಸಹಾಯಕ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT