ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಒಪಿ ಗಣಪ ಜಲಮೂಲಗಳಲ್ಲಿ ವಿಸರ್ಜಿಸುವಂತಿಲ್ಲ

ಪರಿಸರ ಸ್ನೇಹಿ ಗಣೇಶ ಚತುರ್ಥಿ ಆಚರಿಸಲು ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಮನವಿ
Last Updated 4 ಸೆಪ್ಟೆಂಬರ್ 2021, 3:23 IST
ಅಕ್ಷರ ಗಾತ್ರ

ಚಿತ್ರದುರ್ಗ: ‘ಪಿಒಪಿ, ಲೋಹ ಲೇಪಿತ ಹಾಗೂ ವಿಷಕಾರಿ ರಾಸಾಯನಿಕ ಬಣ್ಣ ಮಿಶ್ರಿತಗೊಂಡ ಗಣೇಶ ಮೂರ್ತಿಗಳನ್ನು ಜಿಲ್ಲೆಯ ಯಾವುದೇ ಜಲಮೂಲಗಳಲ್ಲೂ ವಿಸರ್ಜಿಸುವಂತಿಲ್ಲ. ಈ ಕುರಿತು ನಗರಸಭೆ, ಗ್ರಾಮ ಪಂಚಾಯಿತಿ ಸೇರಿ ಸ್ಥಳೀಯ ಆಡಳಿತ ಎಚ್ಚರಿಕೆ ವಹಿಸಬೇಕು’ ಎಂದು ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಸೂಚನೆ ನೀಡಿದರು.

ಗಣೇಶ ಚತುರ್ಥಿ ಅಂಗವಾಗಿ ಶುಕ್ರವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ‘ಕೋವಿಡ್ ಸಾಂಕ್ರಾಮಿಕ ರೋಗದ ಕಾರಣಕ್ಕೆ ಸಾರ್ವಜನಿಕರು ಸಾಧ್ಯವಾದಷ್ಟು ಅರಿಶಿಣದಿಂದಲೇ ಗಣೇಶ ಮೂರ್ತಿಗಳನ್ನು ತಯಾರಿಸುವ ಮೂಲಕ ಪರಿಸರ ಸ್ನೇಹಿ ಗಣೇಶ ಚತುರ್ಥಿ ಆಚರಿಸಬೇಕು’ ಎಂದು ಮನವಿ ಮಾಡಿದರು.

‘ಗಣೇಶ ಮೂರ್ತಿಗಳ ವಿಸರ್ಜನೆಗೆ ಪ್ರತಿ ವಾರ್ಡ್‌ನಲ್ಲೂ ನಿರ್ದಿಷ್ಟ ಸ್ಥಳ ಗುರುತಿಸಿ. ತಾತ್ಕಾಲಿಕ ತೊಟ್ಟಿ, ಮೊಬೈಲ್ ಟ್ಯಾಂಕ್‌ಗಳಲ್ಲಿ ವಿಸರ್ಜಿಸಲು ಅವಕಾಶ ಮಾಡಿಕೊಡಿ. ಇಲ್ಲಿ ಸಂಗ್ರಹವಾಗುವ ಮಣ್ಣು ಮತ್ತು ಪೂಜೆಗೆ ಬಳಸಿದ ಹೂವು, ಹಣ್ಣು, ಬಾಳೆಕಂಬ, ಮಾವಿನ ತೋರಣ ಇತರ ವಸ್ತುಗಳನ್ನು ಹಸಿ–ಒಣ ಕಸವನ್ನಾಗಿ ಪ್ರತ್ಯೇಕಿಸಿ ಸೂಕ್ತವಾಗಿ ವಿಲೇವಾರಿಗೆ ಸ್ಥಳೀಯ ಸಂಸ್ಥೆಗಳು ಕ್ರಮ ವಹಿಸಬೇಕು’ ಎಂದು ಸೂಚಿಸಿದರು.

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ಪ್ರಕಾಶ್, ‘ಹೊರ ರಾಜ್ಯ ಮತ್ತು ಹೊರ ಜಿಲ್ಲೆಗಳಿಂದ ಬರುವ ಪಿಒಪಿ, ಲೋಹ ಮಿಶ್ರಿತ ಬಣ್ಣದ ವಿಗ್ರಹಗಳನ್ನು ಜಿಲ್ಲೆ ಪ್ರವೇಶಿಸದಂತೆ ತಡೆಯಲು ಆರ್‌ಟಿಒ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು ಚೆಕ್‍ಪೋಸ್ಟ್‌ ನಿರ್ಮಿಸಿ ತಪಾಸಣೆ ನಡೆಸಬೇಕಾದ ಅಗತ್ಯವಿದೆ’ ಎಂದರು.

‘ಎಲ್ಲ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಈಗಾಗಲೇ ವಿಸರ್ಜಿಸದೇ ಉಳಿದಿರುವ, ತಯಾರಿಸಿ ಮಾರಾಟ ಮಾಡಲು ಸಿದ್ಧವಾಗಿರುವ ಪಿಒಪಿ ಅಥವಾ ಲೋಹ ಮಿಶ್ರಿತ ಬಣ್ಣದ ವಿಗ್ರಹಗಳನ್ನು ಸ್ಥಳೀಯ ಅಧಿಕಾರಿಗಳ ಸಮಿತಿ ಸುಪರ್ದಿಗೆ ತೆಗೆದುಕೊಳ್ಳಬೇಕು. ಅಂತಹ ವಸ್ತುಗಳನ್ನು ಸ್ಥಳೀಯ ಸಂಸ್ಥೆಗಳಲ್ಲಿ ಇರುವ ಘನತ್ಯಾಜ್ಯ ವಿಲೇವಾರಿ ಘಟಕಗಳಿಗೆ ಸಾಗಿಸಬೇಕು’ ಎಂದು ಸಲಹೆ
ನೀಡಿದರು.

ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸತೀಶ್‌ ರೆಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT