ಭಾನುವಾರ, ಆಗಸ್ಟ್ 14, 2022
26 °C
ಪರಿನಿರ್ವಾಣ ದಿನಾಚರಣೆ, ರಕ್ತದಾನ ಶಿಬಿರದಲ್ಲಿ ಷಡಾಕ್ಷರಿ ಮುನಿ ಸ್ವಾಮೀಜಿ

ಅಂಬೇಡ್ಕರ್ ಸಿದ್ಧಾಂತಕ್ಕೆ ಮಸಿ ಬಳಿಯಬೇಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ‘ದಲಿತ, ಹಿಂದುಳಿದ, ಶೋಷಿತ ಸಮುದಾಯದಲ್ಲಿನ ಕೆಲವರಿಂದಲೇ ಅಂಬೇಡ್ಕರ್ ಸಿದ್ಧಾಂತಕ್ಕೆ ಮಸಿ ಬಳಿಯುವ ಕೆಲಸ ಆಗುತ್ತಿರುವುದು ನೋವಿನ ಸಂಗತಿ. ಇಂತಹ ಕೆಲಸಕ್ಕೆ ಯಾರೂ ಕೈಹಾಕಬೇಡಿ’ ಎಂದು ಹಿರಿಯೂರು ಆದಿಜಾಂಬವ ಗುರುಪೀಠದ ಷಡಾಕ್ಷರಿ ಮುನಿ ದೇಶಿಕೇಂದ್ರ ಸ್ವಾಮೀಜಿ ಸಲಹೆ ನೀಡಿದರು.

ನಗರಸಭೆ ಸಮೀಪ ಅಂಬೇಡ್ಕರ್ ಸೇನೆ ಜಿಲ್ಲಾ ಸಮಿತಿಯಿಂದ ಡಾ.ಬಿ.ಆರ್. ಅಂಬೇಡ್ಕರ್‌ ಅವರ 64ನೇ ಪರಿನಿರ್ವಾಣ ಅಂಗವಾಗಿ ಭಾನುವಾರ ಆಯೋಜಿಸಿದ್ದ ರಕ್ತದಾನ ಶಿಬಿರ, ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಆರ್ಥಿಕ ತಜ್ಞ, ಸಮಾಜಮುಖಿ ಹೋರಾಟಗಾರ ಅಂಬೇಡ್ಕರ್‌ ಅವರ ವಿಚಾರವನ್ನು ಯುವಸಮೂಹಕ್ಕೆ ತಿಳಿಸಬೇಕಿದೆ. ಪುಸ್ತಕ ಪ್ರೇಮಿಯಾದ ಅವರನ್ನು ಅರಿತುಕೊಂಡು ಇತಿಹಾಸ ನಿರ್ಮಿಸಬೇಕಿದೆ. ಹಿಂದುಳಿದ ಸಮುದಾಯದವರು ಶಿಕ್ಷಣಕ್ಕೆ ಆದ್ಯತೆ ನೀಡುವ ಮೂಲಕ ಅನಕ್ಷರತೆ, ಶೋಷಣೆ, ದೌರ್ಜನ್ಯ, ದಬ್ಬಾಳಿಕೆ ಹೊಸಕಿಹಾಕಬೇಕಿದೆ’ ಎಂದು ಸಲಹೆ ನೀಡಿದರು.

ನಿವೃತ್ತ ಪ್ರಾಂಶುಪಾಲ ಜೆ.ಯಾದವರೆಡ್ಡಿ, ‘ಅಂಬೇಡ್ಕರ್ ಶೋಷಿತ ಜಗತ್ತಿನ ನಾಯಕ. ಅದಕ್ಕಾಗಿ ಎಂದಿಗೂ ಒಂದು ಗುಂಪಿಗೆ ಸೀಮಿತಗೊಳಿಸಬೇಡಿ. ಶೋಷಣೆ, ದೌರ್ಜನ್ಯದ ವಿರುದ್ಧ ಶಾಂತಿಯುತವಾಗಿ ಪೆನ್ನಿನ ಮೂಲಕ ಉತ್ತರ ನೀಡಿದ ಯುಗ ಪ್ರವರ್ತಕ’ ಎಂದು ಬಣ್ಣಿಸಿದರು.

ಅಂಬೇಡ್ಕರ್ ಸೇನೆ ರಾಜ್ಯ ಘಟಕದ ಅಧ್ಯಕ್ಷ ಪಿ.ಮೂರ್ತಿ, ‘ದಲಿತರ ಕಣ್ಣು ತೆರೆಸುವ ಮೂಲಕ ಬೆಳಕು ಕೊಟ್ಟವರು ಅಂಬೇಡ್ಕರ್. ವಿದೇಶಗಳಲ್ಲಿ ಅವರನ್ನು ಆರಾಧಿಸಲಾಗುತ್ತಿದೆ. ನಮ್ಮ ದೇಶದಲ್ಲೂ ಇನ್ನಷ್ಟೂ ಗೌರವಿಸುವ ಮನಸುಗಳು ಬೇಕಿವೆ’ ಎಂದು ಹೇಳಿದರು.

ಸಹ ಪ್ರಾದ್ಯಾಪಕ ಡಾ.ಎಸ್.ಆರ್. ಲೇಪಾಕ್ಷಿ, ಸೇನೆ ಮುಖಂಡರಾದ ಎ.ಮಂಜುನಾಥ ತಾಳಿಕೆರೆ, ಜೆ.ಡಿ. ಸಂತೋಷ್‌ಕುಮಾರ್, ಬಾಳೆಕಾಯಿ ಶ್ರೀನಿವಾಸ್, ಸಮರ್ಥರಾಯ್, ನರಸಿಂಹರಾಜ, ತಾರಕೇಶ್ವರಿ, ಅಂಗಡಿ ಮಂಜಣ್ಣ, ಶಿಲ್ಪಾ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.