ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ-ಶಿವಮೊಗ್ಗ ಹೆದ್ದಾರಿ ಕಾಮಗಾರಿಗೆ ಚಾಲನೆ

ಆನ್‌ಲೈನ್ ಮೂಲಕ ಚಿತ್ರದುರ್ಗ-ಹೊಸಪೇಟೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಉದ್ಘಾಟಿಸಿದ ಕೇಂದ್ರ ಸಚಿವ ನಿತಿನ್ ಗಡ್ಕರಿ
Last Updated 19 ಡಿಸೆಂಬರ್ 2020, 13:22 IST
ಅಕ್ಷರ ಗಾತ್ರ

ಚಿತ್ರದುರ್ಗ: ಜಿಲ್ಲೆಯಲ್ಲಿ ಹಾದುಹೋಗಿರುವ ಕೆಲ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳಿಗೆ ಕೇಂದ್ರ ಸಚಿವ ನಿತಿನ್‌ ಗಡ್ಕರಿ ಶನಿವಾರ ದೆಹಲಿಯಿಂದಲೇ ಆನ್‌ಲೈನ್ ಮೂಲಕ ಚಾಲನೆ ನೀಡಿದರು. ರಾಷ್ಟ್ರೀಯ ಹೆದ್ದಾರಿ 50ರ ಚಿತ್ರದುರ್ಗ-ಹೊಸಪೇಟೆ ಮಾರ್ಗದವರೆಗಿನ ಚತುಷ್ಪಥ ರಸ್ತೆ ಕಾಮಗಾರಿಯನ್ನು ಇದೇ ವೇಳೆ ಉದ್ಘಾಟಿಸಿದರು.

ರಾಷ್ಟ್ರೀಯ ಹೆದ್ದಾರಿ 13ರ ಚಿತ್ರದುರ್ಗ-ಶಿವಮೊಗ್ಗ 101 ಕಿ.ಮೀ ಉದ್ದದ ಮಾರ್ಗವನ್ನು ದ್ವಿಪಥ/ಚತುಷ್ಪಥ ರಸ್ತೆಯನ್ನಾಗಿ ಸುಮಾರು ₹ 517 ಕೋಟಿ ವೆಚ್ಚದಲ್ಲಿ ಮೇಲ್ದರ್ಜೆಗೇರಿಸುವ, ಇದೇ ಮಾರ್ಗದಲ್ಲಿ ರಾಷ್ಟ್ರೀಯ ಹೆದ್ದಾರಿ 13ಕ್ಕೆ ಸಂಪರ್ಕ ಕಲ್ಪಿಸುವ 1.42 ಕಿ.ಮೀ ಮಾರ್ಗಕ್ಕೆ ₹ 43 ಕೋಟಿ ವೆಚ್ಚದಲ್ಲಿ ಕೈಗೊಳ್ಳುತ್ತಿರುವ ಕಾಮಗಾರಿಗೆ ಚಾಲನೆ ಸಿಕ್ಕಿತು.

ಈ ರಸ್ತೆ ಮಾರ್ಗ ಒಂದು ಪಥ ಇದ್ದಿದ್ದರಿಂದ ಅಪಘಾತ ಸಾಮಾನ್ಯ ಎನ್ನುವಂತಾಗಿತ್ತು. ಅದಕ್ಕಾಗಿ ಕೇಂದ್ರ ಸರ್ಕಾರ ಮೇಲ್ದರ್ಜೆಗೇರಿಸಲು ಅಭಿವೃದ್ಧಿ ಕೈಗೊಂಡಿದೆ.

ಚಿತ್ರದುರ್ಗದಿಂದ ಹೊಸಪೇಟೆಯವರೆಗಿನ 120 ಕಿ.ಮೀ ಉದ್ದದ ಹೆದ್ದಾರಿ ಚತುಷ್ಪಥ ಕಾಮಗಾರಿಸುಮಾರು ₹1,388 ಕೋಟಿ ವೆಚ್ಚದಲ್ಲಿ ಆರಂಭವಾಯಿತು. ಟಾಟಾ ಕಂಪೆನಿ ಗುತ್ತಿಗೆ ಪಡೆದಿದ್ದು, ನಂತರ ಎಲ್‌ ಆ್ಯಂಡ್‌ ಟಿ ಕಂಪೆನಿಗೆ ಉಪಗುತ್ತಿಗೆ ನೀಡಿತ್ತು. 30 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಈ ಮೊದಲು ಗಡುವು ನೀಡಲಾಗಿತ್ತು. ಅದರ ಪ್ರಕಾರ 2018ರ ಜೂನ್‌ ವೇಳೆಗೆ ಚತುಷ್ಪಥ ಹೆದ್ದಾರಿ ಲೋಕಾರ್ಪಣೆ ಆಗಬೇಕಿತ್ತು. ಆದರೆ, ಸಾಧ್ಯವಾಗಲಿಲ್ಲ.

ಜಾರ್ಖಂಡ್‌, ಪಶ್ಚಿಮ ಬಂಗಾಳ, ಬಿಹಾರ ಮತ್ತು ರಾಜಸ್ತಾನದ 3,000ಕ್ಕೂ ಹೆಚ್ಚು ಕಾರ್ಮಿಕರು ಚತುಷ್ಪಥ ಕಾಮಗಾರಿಯಲ್ಲಿ ತೊಡಗಿದ್ದರು. ಅವರಿಗೆ ನಗದು ರೂಪದಲ್ಲಿ ಕೂಲಿ ಹಣವನ್ನು ಉಪಗುತ್ತಿಗೆ ಪಡೆದವರು ಮೇಸ್ತ್ರಿಗಳ ಮೂಲಕ ಬಟವಾಡೆ ಮಾಡುತ್ತಿದ್ದರು. ಆದರೆ, ಕೇಂದ್ರ ಸರ್ಕಾರ ₹ 500, ₹ 1ಸಾವಿರ ಮುಖ ಬೆಲೆಯ ನೋಟು ರದ್ದತಿಗೊಳಿಸಿದ್ದರಿಂದ ಕಾಮಗಾರಿ ಕೆಲ ತಿಂಗಳು ಮಂದಗತಿಯಲ್ಲಿ ಸಾಗಿತು. ಕೂಲಿ ಕಾರ್ಮಿಕರಿಗೆ ಹಣ ಪಾವತಿಸಲು, ವಾಹನಗಳ ದುರಸ್ತಿ, ಬಿಡಿ ಭಾಗಗಳನ್ನು ಖರೀದಿಸಲು ಆ ವೇಳೆ ಸಾಧ್ಯವಾಗಲಿಲ್ಲ. ಇದರಿಂದಾಗಿ ಕಾಮಗಾರಿ ವೆಚ್ಚವೂ ಹೆಚ್ಚಾಯಿತು. ಹೀಗಾಗಿ ತಡವಾಗಿ ಉದ್ಘಾಟನೆಗೊಂಡಿದೆ. ಆದರೂ ಪೂರ್ಣಗೊಂಡಿಲ್ಲ.

ಸದ್ಯ ಕಾಮಗಾರಿ ವೆಚ್ಚವನ್ನು ₹ 1,694 ಕೋಟಿಗೆ ನಿಗದಿಗೊಳಿಸಲಾಗಿದೆ. 50 ಕಿ.ಮೀ. ಸೇವಾ ರಸ್ತೆ (ಸರ್ವಿಸ್ ರಸ್ತೆ), ಎರಡು ಮುಖ್ಯ ಮೇಲ್ಸೇತುವೆ, 52 ಸಣ್ಣ ಮೇಲ್ಸೇತುವೆ, 26 ಕೆಳ ಸೇತುವೆ, ಎರಡು ಕಡೆ ಟೋಲ್, 48 ಬಸ್ ಶೆಲ್ಟರ್ಸ್‌ಗಳ ನಿರ್ಮಾಣ ಹೀಗೆ ಹೆದ್ದಾರಿಯುದ್ದಕ್ಕೂ ಸೇತುವೆ ನಿರ್ಮಾಣ, ಮೇಲ್ಸೇತುವೆ, ರಸ್ತೆ ಸಮತಟ್ಟು ಕೆಲಸಗಳು ನಡೆದಿವೆ. ಇನ್ನೂ ಕೆಲವು ನಡೆಯಬೇಕಿದೆ. 2021ರ ಜೂನ್ 30ಕ್ಕೆ ಕಾಮಗಾರಿ ಪೂರ್ಣಗೊಳಿಸಲು ಸಮಯ ನಿಗದಿಗೊಳಿಸಲಾಗಿದೆ.

ಚಳ್ಳಕೆರೆಯಿಂದ ಶ್ರೀರಂಗಪಟ್ಟಣವರೆಗಿನ ಮೇಲ್ದರ್ಜೆಗೇರಿಸುವ ರಾಷ್ಟ್ರೀಯ ಹೆದ್ದಾರಿ ರಸ್ತೆ ಅಭಿವೃದ್ಧಿ ಕಾಮಗಾರಿಗೂ ಇದೇ ವೇಳೆ ಚಾಲನೆ ದೊರೆಯಿತು.

ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳಿಗೆ ಚಾಲನೆ, ಶಂಕುಸ್ಥಾಪನೆ ಹಾಗೂ ಲೋಕಾರ್ಪಣೆ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿಡಿಯೊ ಕಾನ್ಫ್‌ರೆನ್ಸ್‌ ಮೂಲಕ ಶಾಸಕರಾದ ಟಿ.ರಘುಮೂರ್ತಿ, ಪೂರ್ಣಿಮಾ ಶ್ರೀನಿವಾಸ್, ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ, ಹೆಚ್ಚುವರಿ ಜಿಲ್ಲಾಧಿಕಾರಿ ಸಂಗಪ್ಪ ವೀಕ್ಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT