ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ: ಜಾನುವಾರುಗಳಿಗೆ ಒಣ ಮೇವಿನ ಆಸರೆ

18 ವಾರಕ್ಕೆ ಸಾಕಾಗುವಷ್ಟು ಮೇವು ಲಭ್ಯ, ಹಸಿರು ಮೇವಿಗೆ ಕೊರತೆ
Last Updated 27 ಮಾರ್ಚ್ 2023, 6:05 IST
ಅಕ್ಷರ ಗಾತ್ರ

ಚಿತ್ರದುರ್ಗ: ಜಿಲ್ಲೆಯಲ್ಲಿ ಬಿಸಿಲಿನ ತಾಪ ದಿನ ಕಳೆದಂತೆ ಹೆಚ್ಚಾಗುತ್ತಿದೆ. ಬೇಸಿಗೆ ಧಗೆಗೆ ಹಸಿರು ಕಣ್ಮರೆಯಾಗುತ್ತಿದ್ದು, ಒಣ ಹವೆಯ ವಾತಾವರಣ ಸೃಷ್ಟಿಯಾಗಿದೆ. ಜಾನುವಾರು ತಿನ್ನುತ್ತಿದ್ದ ಹಸಿರು ಹುಲ್ಲು ಕಮರಿದ್ದು, ಒಣ ಹುಲ್ಲು ಮಾತ್ರ ಆಸರೆಯಾಗಿದೆ.

ಎರಡು ವರ್ಷಗಳಿಂದ ಜಿಲ್ಲೆಯಲ್ಲಿ ಉತ್ತಮ ಮಳೆ ಬೀಳುತ್ತಿರುವುದರಿಂದ ಮೇವಿನ ಕೊರತೆ ಅಷ್ಟಾಗಿ ಕಾಡುತ್ತಿಲ್ಲ. ಬೇಸಿಗೆ ಪೂರ್ಣಗೊಳ್ಳುವವರೆಗೂ ಜಾನುವಾರುಗಳ ಅಗತ್ಯಕ್ಕೆ ಅನುಗುಣವಾಗಿ ಮೇವಿನ ಲಭ್ಯತೆ ಇದೆ ಎಂಬುದನ್ನು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಖಚಿತಪಡಿಸಿಕೊಂಡಿದೆ. ಸಕಾಲಕ್ಕೆ ಮಳೆ ಬೀಳದೇ ಇದ್ದರೆ ಮೇವು ಕೊರತೆ ಎದುರಾಗುವ ಆತಂಕ ರೈತರಲ್ಲಿದೆ.

ಬರ ಪರಿಸ್ಥಿತಿಗೆ ಹೆಸರಾಗಿರುವ ಜಿಲ್ಲೆಯಲ್ಲಿ ಪ್ರತಿ ಬೇಸಿಗೆಯಲ್ಲಿ ಮೇವಿನ ಸಮಸ್ಯೆ ತಲೆದೋರುತ್ತಿತ್ತು. ಮೇವು ಬ್ಯಾಂಕ್‌, ಗೋಶಾಲೆ ತೆರೆಯುವ ಅನಿವಾರ್ಯತೆ ಸೃಷ್ಟಿಯಾಗುತ್ತಿತ್ತು. ಇತ್ತೀಚಿಗೆ ನಿರೀಕ್ಷೆ ಮೀರಿ ಮಳೆ ಸುರಿದ ಪರಿಣಾಮ ಇಂತಹ ಸ್ಥಿತಿ ಪ್ರಸಕ್ತ ವರ್ಷ ನಿರ್ಮಾಣವಾಗಿಲ್ಲ. ಆದರೂ, ಅಲ್ಲಲ್ಲಿ ಮೇವು ದಾನ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ದೇವರ ಎತ್ತುಗಳಿಗೆ ದಾನಿಗಳು ಮೇವು ನೀಡುವ ಕಾರ್ಯವನ್ನು ಮುಂದುವರಿಸಿದ್ದಾರೆ.

ಜಿಲ್ಲೆಯಲ್ಲಿ ಹೆಚ್ಚಾಗಿ ಬೆಳೆಯುವ ರಾಗಿ, ಮೆಕ್ಕೆಜೋಳ, ಶೇಂಗಾ ಸೇರಿ ಇತರ ಬೆಳೆಗಳು ಜಾನುವಾರು ಮೇವುಗಳಾಗಿ ಬಳಕೆ ಆಗುತ್ತಿವೆ. ಸಕಾಲಕ್ಕೆ ಮಳೆ ಸುರಿದಿದ್ದರಿಂದ ರಾಗಿ ಹುಲ್ಲು, ಮೆಕ್ಕೆಜೋಳದ ಸೊಪ್ಪೆ ಹಾಗೂ ಶೇಂಗಾ ಹೊಟ್ಟು ಸುಸ್ಥಿತಿಯಲ್ಲಿ ರೈತರಿಗೆ ಸಿಕ್ಕಿದೆ. ಹಿರಿಯೂರು, ಹೊಸದುರ್ಗದ ಕೆಲ ಭಾಗಗಳಲ್ಲಿ ಒಂದಷ್ಟು ಪ್ರಮಾಣದ ಭತ್ತದ ಹುಲ್ಲು ಸಹ ಜಾನುವಾರುಗಳ ಹೊಟ್ಟೆ ತುಂಬುತ್ತಿದೆ.

ಚಳ್ಳಕೆರೆ, ಮೊಳಕಾಲ್ಮುರು, ಹಿರಿಯೂರು ತಾಲ್ಲೂಕಿನ ಬುಡಕಟ್ಟು ಸಮುದಾಯದಲ್ಲಿ ಜಾನುವಾರು ಸಾಕಣೆ ಮೂಲಕಸುಬು. ಮ್ಯಾಸನಾಯಕ, ಕಾಡುಗೊಲ್ಲ ಸಮುದಾಯ ಪಶುಪಾಲನೆಯನ್ನೇ ನಂಬಿಕೊಂಡಿದೆ. ಮ್ಯಾಸನಾಯಕ ಬುಡಕಟ್ಟು ಸಮುದಾಯದಲ್ಲಿ ದೇವರ ಎತ್ತು ಸಾಕಣೆ ಸಂಪ್ರದಾಯವಿದೆ. ಈ ಹಟ್ಟಿ, ರೊಪ್ಪಗಳು ಗೋಶಾಲೆಗಳ ಮಾದರಿಯಲ್ಲಿ ನಡೆಯುತ್ತಿವೆ. ಈ ಜಾನುವಾರುಗಳಿಗೆ ಪ್ರಸಕ್ತ ವರ್ಷ ಅಷ್ಟೇನೂ ಮೇವಿನ ಕೊರತೆ ಎದುರಾಗಿಲ್ಲ ಎನ್ನಲಾಗುತ್ತಿದೆ.

‘ಉತ್ತಮ ಮಳೆ ಬಿದ್ದಿರುವ ಪರಿಣಾಮ ಜಾನುವಾರು ಮೇವಿಗೆ ಕೊರತೆ ಇಲ್ಲ. ಸಮೀಪದ ಅರಣ್ಯ ಪ್ರದೇಶದಲ್ಲಿ ಮೇವು ಬೆಳೆದಿದ್ದು, ಜಾನುವಾರುಗಳು ಬಹುತೇಕ ಇದನ್ನೇ ಆಶ್ರಯಿಸಿವೆ. ರಾಗಿ ಹುಲ್ಲು, ಜೋಳದ ಸೊಪ್ಪೆ ಕೂಡ ಸಾಕಷ್ಟು ಪ್ರಮಾಣದಲ್ಲಿ ಇದೆ. ಈ ವರ್ಷ ಮೇವಿಗೆ ಕೊರತೆ ಇಲ್ಲ’ ಎನ್ನುತ್ತಾರೆ ನನ್ನಿವಾಳ ಗೋಶಾಲೆಯ ಪ್ರಹ್ಲಾದ್.

ಸಾಕಷ್ಟು ಪ್ರಮಾಣದ ಕುರಿ ಹಾಗೂ ಮೇಕೆಗಳು ಜಿಲ್ಲೆಯಲ್ಲಿವೆ. ಬೇಸಿಗೆಯಲ್ಲಿ ಮೇವು, ನೀರಿನ ಕೊರತೆ ಎದುರಾಗುವುದರಿಂದ ಅನೇಕರು ಕುರಿಗಳನ್ನು ಮಲೆನಾಡು ಪ್ರದೇಶಕ್ಕೆ ಕರೆದೊಯ್ಯುತ್ತಾರೆ. ಮಳೆಗಾಲ ಪ್ರಾರಂಭವಾಗುವ ಸಂದರ್ಭದಲ್ಲಿ ಊರಿಗೆ ಮರಳುವುದು ವಾಡಿಕೆ. ಬೇಸಿಗೆಗೂ ಮುನ್ನವೇ ಹಲವು ಕುರಿಗಳೊಂದಿಗೆ ಗುಳೆ
ಹೋಗಿದ್ದಾರೆ.

ಮುಂಗಾರುಪೂರ್ವ ಮಳೆ ಸುರಿದರೆ ಮಾತ್ರ ಮೇವಿನ ಕೊರತೆ ನೀಗಲಿದೆ. ಮಳೆ ವಿಳಂಬವಾದಷ್ಟು ಮೇವಿನ ಸಮಸ್ಯೆ ಬಿಗಡಾಯಿಸಲಿದೆ. ಆದರೆ, ಗೋಶಾಲೆ ಹಾಗೂ ಮೇವು ಬ್ಯಾಂಕ್‌ ತೆರೆಯುವಷ್ಟು ಪರಿಸ್ಥಿತಿ ಕೈಮೀರದು ಎಂಬುದು ಪಶುಪಾಲನಾ ಹಾಗೂ ಪಶುವೈದ್ಯಕೀಯ ಸೇವಾ ಇಲಾಖೆಯ ಲೆಕ್ಕಾಚಾರ.

‘18 ವಾರಕ್ಕೆ ಮೇವು ಲಭ್ಯ’

‘ನಿರೀಕ್ಷೆಗೂ ಮೀರಿ ಮಳೆಯಾಗಿದ್ದರಿಂದ ಜಿಲ್ಲೆಯಲ್ಲಿ ಜಾನುವಾರು ಮೇವಿಗೆ ಕೊರತೆ ಉಂಟಾಗುವ ಆತಂಕವಿಲ್ಲ. ಇನ್ನೂ 18 ವಾರಗಳಿಗೆ ಸಾಕಾಗುವಷ್ಟು
ಮೇವು ಲಭ್ಯವಿದೆ. ಮಳೆ ಬಿದ್ದರೆ ಹೊಸ ಮೇವು ಚಿಗುರಲಿದ್ದು, ಜಾನುವಾರು ಸಾಕಾಣೆದಾರರು ಚಿಂತೆಪಡುವ ಅಗತ್ಯವಿಲ್ಲ’ ಎಂದು ಪಶುಪಾಲನೆ ಮತ್ತು ಪಶುವೈದ್ಯಕೀಯ ಇಲಾಖೆಯ ಉಪನಿರ್ದೇಶಕ ಎ.ಬಾಬುರತ್ನ ತಿಳಿಸಿದ್ದಾರೆ.

‘ಜಿಲ್ಲೆಯಲ್ಲಿ 12 ಗೋಶಾಲೆಗಳಿದ್ದು, ಸಾವಿರಕ್ಕೂ ಅಧಿಕ ಜಾನುವಾರುಗಳಿವೆ. ಇಲ್ಲಿ ಮೇವಿಗೆ ತೊಂದರೆ ಆಗದಂತೆ ಸರ್ಕಾರ ವ್ಯವಸ್ಥೆ ಮಾಡಿದೆ. ಶೀಘ್ರವೇ ಪುಣ್ಯಕೋಟಿ
ಯೋಜನೆ ಕೂಡ ಜಾರಿಗೆ ಬರಲಿದೆ. ನೀರಾವರಿ ಸೌಲಭ್ಯ ಹೊಂದಿರುವ ಕೆಲ ರೈತರು ಹಸಿ ಮೇವು ಬೆಳೆಸಿಕೊಂಡಿದ್ದಾರೆ’ ಎಂದು ಮಾಹಿತಿ
ನೀಡಿದ್ದಾರೆ.

ಮಳೆ ವಿಳಂಬವಾದರೆ ಮೇವಿನ ಕೊರತೆ

ಕೊಂಡ್ಲಹಳ್ಳಿ ಜಯಪ್ರಕಾಶ

ಮೊಳಕಾಲ್ಮುರು: ತಾಲ್ಲೂಕಿನಲ್ಲಿ ಮ್ಯಾಸನಾಯಕ ಸಮುದಾಯ ಹೆಚ್ಚಿನ ಪ್ರಮಾಣದಲ್ಲಿದೆ. ಈ ಸಮುದಾಯದ ದೇವರ ಎತ್ತುಗಳಿಗೆ ಪ್ರತಿವರ್ಷದಂತೆ ಈ ವರ್ಷವೂ ಮೇವಿನ ಸಮಸ್ಯೆ ಎದುರಾಗುವ ಆತಂಕವಿದೆ.

ಮುತ್ತಿಗಾರಹಳ್ಳಿ, ಕಂಪಳರಂಗಸ್ವಾಮಿ, ದಡ್ಡಿಸೂರನಾಯಕ, ಪಾಪನಾಯಕ ದೇವರ ಎತ್ತುಗಳು ಸೇರಿದಂತೆ ತಾಲ್ಲೂಕಿನಲ್ಲಿ ಒಂದು ಸಾವಿರಕ್ಕೂ ಹೆಚ್ಚು ದೇವರ ಎತ್ತುಗಳಿವೆ. ಸ್ಥಳೀಯವಾಗಿ ಮೇವು ಇಲ್ಲದ ಕಾರಣ ಮೇಯಿಸಲು ಬೇರೆ ಕಡೆ ಹೊಡೆದುಕೊಂಡು ಹೋಗಲಾಗಿದೆ. ಇದನ್ನು ತಡೆಯಲು ಗೋಶಾಲೆ ಆರಂಭಕ್ಕೆ ಬದಲು ಮೇವು ನೀಡಿದರೆ ಹೆಚ್ಚಿನ ಪ್ರಯೋಜನವಾಗುತ್ತದೆ. ಈ ನಿಟ್ಟಿನಲ್ಲಿ ಹಲವು ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ ಎಂದು ಸಮುದಾಯದ ಮುಖಂಡ ಓಬಣ್ಣ
ಬೇಸರ ವ್ಯಕ್ತಪಡಿಸಿದರು.

ಮುತ್ತಿಗಾರಹಳ್ಳಿ ಮ್ಯಾಸರಹಟ್ಟಿ, ಕೊಂಡ್ಲಹಳ್ಳಿ ಈರಣ್ಣಮರ, ರಾಂಪುರ ಸೇರಿ ಹಲವು ಕಡೆ ಸರ್ಕಾರ ಗೋಶಾಲೆಗಳನ್ನು ಪ್ರತಿವರ್ಷ ಆರಂಭಿಸುತ್ತಿತ್ತು. ಆದರೆ ಈ ವರ್ಷ ಆರಂಭವಾಗಿಲ್ಲ.

ಏರಿದ ಬಿಸಿಲು: ಕಮರಿದ ಮೇವು

ವಿ.ಧನಂಜಯ

ನಾಯಕನಹಟ್ಟಿ: ಒಂದು ತಿಂಗಳಿನಿಂದ ಬಿಸಿಲಿನ ತಾಪ ಹೆಚ್ಚಿದ ಹಿನ್ನೆಲೆಯಲ್ಲಿ ಹೊಲಗಳ ಬದುಗಳಲ್ಲಿ, ಕುರುಚಲು ಕಾಡು ಮತ್ತು ಗೋಮಾಳಗಳಲ್ಲಿ ಮೇವು ಸಂಪೂರ್ಣ ಒಣಗಿಹೋಗಿದೆ. ದೇವರ ಎತ್ತುಗಳು ಸೇರಿ ಇತರ ಜಾನುವಾರುಗಳಿಗೆ ಸಂಕಷ್ಟ ಎದುರಾಗಲಿದೆ.

ನಾಯಕನಹಟ್ಟಿ ಹೋಬಳಿಯು ದಶಕದಿಂದ ಬರಗಾಲಕ್ಕೆ ತುತ್ತಾಗಿದೆ. ರಾಜ್ಯದಲ್ಲಿಯೇ ಅತಿ ಕಡಿಮೆ ಮಳೆ ಬೀಳುವ ಈ ಪ್ರದೇಶವನ್ನು ಶಾಶ್ವತ ಬರಪೀಡಿತ ಪ್ರದೇಶವೆಂದು ಸರ್ಕಾರ ಪರಿಗಣಿಸಿದೆ. ಅವದಿಗೂ ಮುನ್ನವೇ ಬಿಸಿಲಿನ ರೌದ್ರನರ್ತನ ಆರಂಭವಾಗಿದೆ. ಎಲ್ಲಿ ನೋಡಿದರೂ ಬಯಲಿದೆ. ಹೊಲಗಳ ಬದುಗಳಲ್ಲಿ ಮೇವಿಲ್ಲ. ಇದರಿಂದ ದನಕರು ಹಸಿವಿನಿಂದ ಕಂಗಾಲಾಗಿವೆ. ಜಾನುವಾರುಗಳಿಗೆ ಮೇವು ಒದಗಿಸುವುದೇ ರೈತರಿಗೆ ಸವಾಲಿನ ಕೆಲಸವಾಗಿದೆ. ನಾಯಕನಹಟ್ಟಿ ಹೋಬಳಿಯು ಬುಡಕಟ್ಟು ದೇವರುಗಳ ನೆಲೆಬೀಡಾಗಿದ್ದು, ಚನ್ನಬಸಯ್ಯನಹಟ್ಟಿ, ಗೌಡಗೆರೆ, ಮ್ಮಲೂರಹಳ್ಳಿ, ಭೀಮಗೊಂಡನಹಳ್ಳಿ, ನೆಲಗೇತನಹಟ್ಟಿ ಕೊಂಡಯ್ಯನಕಪಿಲೆ, ಎತ್ತಿನಹಟ್ಟಿ, ಉಪ್ಪಾರಹಟ್ಟಿ ಸೇರಿದಂತೆ ಹಲವೆಡೆ 2,000ಕ್ಕೂ ಹೆಚ್ಚು ಬುಡಕಟ್ಟು ದೇವರುಗಳಿಗೆ ಸಂಬಂಧಿಸಿದ ದೇವರ ಎತ್ತುಗಳಿವೆ. ಈ ದೇವರ ಎತ್ತುಗಳನ್ನು ಲಾಲನೆ, ಪಾಲನೆಯ ಹೊಣೆಯನ್ನು ಕಿಲಾರಿಗಳು ಹೊತ್ತಿದ್ದಾರೆ.

‘ಅಡವಿ ಮತ್ತು ಗೋಮಾಳಗಳಲ್ಲಿ ಮೇವಿನ ಕೊರತೆಯಿಂದ ರಾಸುಗಳಿಗೆ ಮೇವನ್ನು ಒದಗಿಸುವುದೇ ಸವಾಲಿನ ಕೆಲಸವಾಗಿದೆ. ದೇವರ ಎತ್ತುಗಳಿಗೆ ಭಕ್ತರು ನೀಡುವ ಮೆಕ್ಕೆಜೋಳದ ಸೊಪ್ಪೆಯನ್ನು ಸಂಗ್ರಹಿಸಿ ಜಾನುವಾರುಗಳಿಗೆ ನೀಡಲಾಗುತ್ತಿದೆ’ ಎಂದು ಮಲ್ಲೂರಹಳ್ಳಿ ಕಾಟಯ್ಯ ಹೇಳುತ್ತಾರೆ.

‘ಮೂರು ವರ್ಷಗಳ ಹಿಂದೆ ಜಾನುವಾರು ಮೇವಿಗೆ ಸರ್ಕಾರ ಗೋಶಾಲೆಗಳನ್ನು ತೆರೆದಿತ್ತು. ಇದರಿಂದ ಜಾನುವಾರಗಳ ಜೀವ ಉಳಿದಿದ್ದವು. ಪ್ರಸ್ತುತ ಚುನಾವಣೆ ವರ್ಷವಾದ ಹಿನ್ನೆಲೆಯಲ್ಲಿ ಯಾರೂ ಈ ಸಮಸ್ಯೆಗಳ ಬಗ್ಗೆ ಗಮನಹರಿಸುತ್ತಿಲ್ಲ’ ಎಂದು ನೆಲಗೇತನಹಟ್ಟಿಯ ದೊಡ್ಡಬೋರಯ್ಯ ಬೇಸರ ವ್ಯಕ್ತಪಡಿಸಿದ್ದಾರೆ.

ದೇವರ ಎತ್ತುಗಳು ಮೇವು ಅರಸಿ ಅಡವಿಗೆ ಹೋಗುತ್ತಿದ್ದವು. ಹುಲ್ಲು ಒಣಗಿ ನಿರೀಕ್ಷೆಯಷ್ಟು ಮೇವು ಲಭ್ಯವಾಗುತ್ತಿಲ್ಲ. ಭಕ್ತರ ಜೋಳದ ಜಮೀನುಗಳು ಆಸರೆಯಾಗಿವೆ.

-ಪ್ರಹ್ಲಾದ್‌, ನನ್ನಿವಾಳ ಗೋಶಾಲೆ

ಹೊಲಗಳಲ್ಲಿ ಎಲ್ಲಿ ನೋಡಿದರೂ ಒಂದು ಹಿಡಿಯಷ್ಟು ಹುಲ್ಲು ದೊರೆಯುತ್ತಿಲ್ಲ. ಬಿಸಿಲು ಕಳೆದು ಮಳೆಗಾಲ ಆರಂಭವಾಗುವವರೆಗೆ ಹೇಗಾದರೂ ಮಾಡಿ ಜಾನುವಾರುಗಳಿಗೆ ಮೇವಿನ ವ್ಯವಸ್ಥೆ ಮಾಡಿಕೊಡಬೇಕು.

-ಮಂಜುನಾಥ, ಜಾಗನೂರಹಟ್ಟಿ, ನಾಯಕನಹಟ್ಟಿ

ಈ ವರ್ಷ ಶೇಂಗಾ, ಜೋಳ, ಮೆಕ್ಕೆಜೋಳದ ಮೇವು ಸ್ವಲ್ಪವೂ ಹಾಳಾಗದಂತೆ ಸಿಕ್ಕಿದೆ. ಬೇಗ ಮಳೆ ಬಂದಲ್ಲಿ ಮೇವು ಬೆಳೆಯುತ್ತದೆ. ಮಳೆ ವಿಳಂಬವಾದಲ್ಲಿ ಗೋಶಾಲೆ ಅವಶ್ಯಕತೆ ಬೀಳಲಿದೆ.

-ತಿಪ್ಪೇಸ್ವಾಮಿ, ರಾಯಪುರ, ಮೊಳಕಾಲ್ಮುರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT