ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಶಕಗಳೇ ಉರುಳಿದರೂ ಈಡೇರದ ಆಶ್ವಾಸನೆ: ಭದ್ರೆ, ಬರ, ರೈಲ್ವೆಯೇ ಚುನಾವಣೆ ಅಸ್ತ್ರ

ಕಾಂಗ್ರೆಸ್‌– ಬಿಜೆಪಿ ನಡುವೆ ಜಟಾಪಟಿ
Last Updated 3 ಮೇ 2019, 17:07 IST
ಅಕ್ಷರ ಗಾತ್ರ

ಚಿತ್ರದುರ್ಗ: ‘ಬರದ ನಾಡಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಭದ್ರಾ ಮೇಲ್ದಂಡೆ ಯೋಜನೆಗೆ ಪಕ್ಷ ಆದ್ಯತೆ ನೀಡಲಿದೆ. ಅಧಿಕಾರಕ್ಕೆ ಬಂದರೆ ಭದ್ರಾ ನೀರು ತರುವುದು ನಿಶ್ಚಿತ...’

ಒಂದೂವರೆ ದಶಕದ ಹಿಂದೆ ರಾಜಕಾರಣಿಯೊಬ್ಬರು ಆಡಿದ ಮಾತಿದು. ಆ ಬಳಿಕ ವಿಧಾನಸಭಾ, ಲೋಕಸಭಾ ಹಾಗೂ ಸ್ಥಳೀಯ ಸಂಸ್ಥೆಗಳಿಗೆ ಹಲವು ಚುನಾವಣೆ ನಡೆದಿವೆ. 17ನೇ ಲೋಕಸಭಾ ಚುನಾವಣೆಯ ಅಖಾಡದಲ್ಲಿಯೂ ಇದೇ ಮಾತು ಧ್ವನಿಸುತ್ತಿದೆ.

ವರ್ಷಗಳು ಉರುಳಿದರೂ ಚಿತ್ರದುರ್ಗ ಜಿಲ್ಲೆಯಲ್ಲಿ ಚುನಾವಣೆ ವಸ್ತುಗಳು ಮಾತ್ರ ಬದಲಾಗಿಲ್ಲ. ನೀರಾವರಿ, ದಾವಣಗೆರೆ–ಚಿತ್ರದುರ್ಗ–ತುಮಕೂರು ನೇರ ರೈಲು ಮಾರ್ಗ, ಬರ ಪರಿಸ್ಥಿತಿ ನಿರ್ವಹಣೆಯೇ ಮತ ಸೆಳೆಯುವ ಶಕ್ತಿಗಳಾಗಿವೆ. ಎಲ್ಲ ರಾಜಕೀಯ ಪಕ್ಷಗಳು ಇದೇ ದಾಳವನ್ನು ಉರುಳಿಸುತ್ತಿವೆ.

ವಾರ್ಷಿಕ ಸರಾಸರಿ 534 ಮಿ.ಮೀ ಮಳೆ ಬೀಳುವ ಪ್ರದೇಶವಾದ ಚಿತ್ರದುರ್ಗ ಜಿಲ್ಲೆ, ಶತಮಾನದಲ್ಲಿ ಬಹುಪಾಲು ವರ್ಷ ಬರ ಪರಿಸ್ಥಿತಿ ಎದುರಿಸಿದೆ. 5.72 ಲಕ್ಷ ಹೆಕ್ಟೇರ್‌ ವ್ಯವಸಾಯ ಭೂಮಿ ಹೊಂದಿರುವ ಜಿಲ್ಲೆಯಲ್ಲಿ ಕೃಷಿಯೇ ಜನರ ಮೂಲ ಕಸುಬು. ಸತತ ಬರದಿಂದ ತತ್ತರಿಸಿರುವ ರೈತರು, ನೀರಾವರಿ ಯೋಜನೆಗಳ ಬಗ್ಗೆ ಭರವಸೆ ಇಟ್ಟುಕೊಂಡಿದ್ದಾರೆ. ಚಿತ್ರದುರ್ಗ ಲೋಕಸಭಾ ಕ್ಷೇತ್ರದ ವ್ಯಾ‍ಪ್ತಿಗೆ ಒಳಪಡುವ ತುಮಕೂರು ಜಿಲ್ಲೆಯ ಶಿರಾ ಹಾಗೂ ಪಾವಗಡದ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ.

ಲೋಕಸಭಾ ಕ್ಷೇತ್ರದ ಪ್ರಥಮ ಸಂಸದರು ಹಾಗೂ ರಾಜ್ಯದ ಮುಖ್ಯಮಂತ್ರಿಯೂ ಆಗಿದ್ದ ಎಸ್‌.ನಿಜಲಿಂಗಪ್ಪ ಅವರ ಕಾಲದಲ್ಲಿಯೂ ನೀರಾವರಿ ಯೋಜನೆಗೆ ಸಂಬಂಧಿಸಿದ ಚರ್ಚೆಗಳು ನಡೆದಿದ್ದವು. 1990ರ ಬಳಿಕ ಇದು ಇನ್ನಷ್ಟು ಸ್ಪಷ್ಟತೆ ಪಡೆದು ಭದ್ರಾ ಮೇಲ್ದಂಡೆ ಯೋಜನೆಯ ರೂಪಕ್ಕೆ ತಿರುಗಿತು. ಅಲ್ಲಿಂದ ನಡೆದ ಎಲ್ಲ ಲೋಕಸಭಾ ಚುನಾವಣೆಯಲ್ಲಿ ಭದ್ರಾ ಮೇಲ್ದಂಡೆಯ ಬಗ್ಗೆ ಪ್ರಸ್ತಾಪವಾಗಿದೆ.

ನಿರಂತರ ಹೋರಾಟದ ಫಲವಾಗಿ ₹ 2,813 ಕೋಟಿಯ ಭದ್ರಾ ಮೇಲ್ದಂಡೆ ಯೋಜನೆಗೆ 2003 ಆ.23ರಂದು ಆಡಳಿತಾತ್ಮಕ ಅನುಮೋದನೆ ಸಿಕ್ಕಿತು. 2006ರಲ್ಲಿ ಯೋಜನೆಯ ಗಾತ್ರವನ್ನು ₹ 4,150 ಕೋಟಿಗೆ ಹೆಚ್ಚಿಸಿ, ನೀರಾವರಿ ನಿಗಮಕ್ಕೆ ಜವಾಬ್ದಾರಿ ನೀಡಲಾಯಿತು. 2009, 2012ರಲ್ಲಿ ಪರಿಷ್ಕರಣೆಗೊಂಡು ದೊಡ್ಡ ಸ್ವರೂಪ ಪಡೆಯಿತು. ಆದರೆ, ಜನರ ನಿರೀಕ್ಷೆಗಳು ಮಾತ್ರ ಹಾಗೇ ಉಳಿದವು.

ನೀರಾವರಿ ಯೋಜನೆಗಳಿಗೆ ಒತ್ತು ನೀಡುವುದಾಗಿ 2018ರ ವಿಧಾನಸಭಾ ಚುನಾಣೆಯ ಸಂದರ್ಭದಲ್ಲಿ ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಪಕ್ಷಗಳು ಪ್ರಣಾಳಿಕೆಗಳಲ್ಲಿ ಘೋಷಣೆ ಮಾಡಿದ್ದವು. ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿಯೂ ಈ ಯೋಜನೆಯ ಬಗ್ಗೆ ಭರವಸೆ ಬಿತ್ತುವ ಕೆಲಸವನ್ನು ರಾಜಕೀಯ ಪಕ್ಷಗಳು ಮಾಡುತ್ತಿವೆ. ಇದಕ್ಕೆ ರಾಷ್ಟ್ರೀಯ ಯೋಜನೆ ಸ್ಥಾನ ನೀಡುವುದಾಗಿ ಬಿಜೆಪಿ ಭರವಸೆ ನೀಡಿ ಮತಯಾಚನೆ ಮಾಡುತ್ತಿದೆ. ಯೋಜನೆ ಅನುಷ್ಠಾನಗೊಳಿಸಿದ್ದಾಗಿ ಕಾಂಗ್ರೆಸ್‌ ಬೀಗುತ್ತಿದೆ.

ಪಂಪ್‌ಹೌಸ್‌ ಪ್ರಯೋಗವೂ ಚರ್ಚಿತ:ತರೀಕೆರೆ ತಾಲ್ಲೂಕಿನ ಶಾಂತಿಪುರ ಪಂಪ್‌ಹೌಸ್‌ ಬಳಿ ಪರೀಕ್ಷಾರ್ಥವಾಗಿ ನಾಲೆಗೆ ನೀರು ಹರಿಸಿರುವುದು ಕ್ಷೇತ್ರ ವ್ಯಾಪ್ತಿಯಲ್ಲಿ ಚರ್ಚಿತ ವಿಚಾರವಾಗಿದೆ.

ನೀರು ನಾಲೆಗೆ ಹರಿಯುತ್ತಿರುವ ದೃಶ್ಯ ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು. ಇದೇ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ‘ಭರವಸೆ ನೀಡಿದಂತೆ ನೀರು ತರುತ್ತಿದ್ದೇವೆ ನೋಡಿ’ ಎಂದು ಕಾಂಗ್ರೆಸ್‌ ಮತ ಸೆಳೆಯುವ ಪ್ರಯತ್ನ ಮಾಡುತ್ತಿದೆ. ‘ಇದು ಜನರ ದಿಕ್ಕು ತಪ್ಪಿಸುವ ಪ್ರಯತ್ನ’ ಎಂದು ಬಿಜೆಪಿ ಆರೋಪಿಸುತ್ತಿದೆ.

ನೇರ ರೈಲು ಮಾರ್ಗ:ತುಮಕೂರು–ಚಿತ್ರದುರ್ಗ–ದಾವಣಗೆರೆ ನೇರ ರೈಲು ಮಾರ್ಗವೂ ಚುನಾವಣೆಯ ವಸ್ತುವಾಗಿ ಒಂದೂವರೆ ದಶಕ ಕಳೆದಿದೆ. ಬೆಂಗಳೂರು–ದಾವಣಗೆರೆ ನಡುವಿನ ಅಂತರವನ್ನು ಕಡಿಮೆ ಮಾಡುವ ಹಾಗೂ ಬೆಂಗಳೂರಿನಿಂದ ಚಿತ್ರುದುರ್ಗಕ್ಕೆ ನೇರ ರೈಲು ಕಲ್ಪಿಸುವ ಈ ಯೋಜನೆಯ ಬಗ್ಗೆ ಜಿಲ್ಲೆಯ ಜನರು ಕನಸುಗಳನ್ನು ಕಟ್ಟಿಕೊಂಡಿದ್ದಾರೆ. ಯೋಜನೆ ಅಧಿಕೃತವಾಗಿ ಘೋಷಣೆಯಾಗಿ 9 ವರ್ಷ ಕಳೆದರೂ, ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿಲ್ಲ.

ಲೋಕಸಭಾ ಚುನಾವಣೆಗೂ ಮುನ್ನವೆ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ಆರೋಪ– ಪ್ರತ್ಯಾರೋಪಕ್ಕೆ ಇದು ವಸ್ತುವಾಗಿತ್ತು. ಮುರುಘಾ ಮಠದಲ್ಲಿ ನಡೆದ ಸಂವಾದದಲ್ಲಿ ಚಿತ್ರದುರ್ಗ ಸಂಸದ ಬಿ.ಎನ್‌.ಚಂದ್ರಪ್ಪ, ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ ಅವರು ತಮ್ಮ ಪಕ್ಷದ ನಿಲುವುಗಳನ್ನು ಮುಂದಿಟ್ಟಿದ್ದರು. ರಾಜ್ಯ ಸರ್ಕಾರ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿಲ್ಲ ಎಂಬುದು ಬಿಜೆಪಿಯ ಆರೋಪ. ಯೋಜನೆಯ ಒಪ್ಪಂದಕ್ಕೆ ಸಹಿ ಹಾಕುವಾಗಲೇ ಬಿಜೆಪಿ ತಪ್ಪು ನಿರ್ಧಾರ ಕೈಗೊಂಡಿದೆ ಎಂಬುದು ಕಾಂಗ್ರೆಸ್‌ ದೂರು. ಚುನಾವಣೆಯ ಕಣದಲ್ಲಿಯೂ ಇದೇ ಮಾತುಗಳು ಮತ್ತೆ ಕೇಳುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT