ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಣ್ಯದಲ್ಲಿ ಬೀಡುಬಿಟ್ಟ ಒಂಟಿಸಲಗ

ಸಲಗ ಹಿಮ್ಮೆಟ್ಟಿಸಲು ಬಂದಿವೆ ಸಕ್ರೇಬೈಲು ಸಾಕಾನೆ
Last Updated 8 ಡಿಸೆಂಬರ್ 2019, 2:39 IST
ಅಕ್ಷರ ಗಾತ್ರ

ಚಿತ್ರದುರ್ಗ: ತಾಲ್ಲೂಕಿನ ನಂದಿಪುರ ಅರಣ್ಯ ವ್ಯಾಪ್ತಿಯಲ್ಲಿ ಒಂಟಿಸಲಗವೊಂದು ಬೀಡುಬಿಟ್ಟಿದೆ. ದಾರಿತಪ್ಪಿ ಬಂದಿರುವ ಆನೆಯನ್ನು ಭದ್ರಾ ಅಭಯಾರಣ್ಯಕ್ಕೆ ಮರಳಿಸುವ ಕಾರ್ಯಾಚರಣೆಯನ್ನು ಅರಣ್ಯ ಇಲಾಖೆ ಶನಿವಾರ ಕೈಗೆತ್ತಿಕೊಂಡಿದೆ.

ಕೂಂಬಿಂಗ್‌ ಕಾರ್ಯಾಚರಣೆಗೆ ಶಿವಮೊಗ್ಗದ ಸಕ್ರೇಬೈಲು ಆನೆ ಬಿಡಾರದಿಂದ ಎರಡು ಆನೆಗಳನ್ನು ಕರೆಸಲಾಗಿದೆ. ಸಾಕಾನೆಗಳ ನೆರವಿನಿಂದ ಒಂಟಿಸಲಗವನ್ನು ಹಿಮ್ಮೆಟ್ಟಿಸುವ ಕಾರ್ಯ ಭಾನುವಾರ ಬೆಳಿಗ್ಗೆ ಆರಂಭವಾಗಲಿದೆ.

ಜಮೀನು, ತೋಟಗಳಲ್ಲಿ ಹೆಜ್ಜೆ ಗುರುತುಗಳನ್ನು ಬಿಟ್ಟು ಜೋಗಿಮಟ್ಟಿ ವನ್ಯಧಾಮದ ವ್ಯಾಪ್ತಿಯಲ್ಲಿ ಕಣ್ಮೆರೆಯಾಗಿದ್ದ ಆನೆ ಶನಿವಾರ ಡ್ರೋಣ್‌ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆನೆ ಪತ್ತೆಗೆ ತೆರಳಿದ್ದ ಅರಣ್ಯ ಇಲಾಖೆ ಸಿಬ್ಬಂದಿಯ ಕಣ್ಣಿಗೂ ಬಿದ್ದಿದೆ. ನಂದಿಪುರದ ಬೆಟ್ಟದ ಸಾಲಿನ ಅಹೋಬಲ ನರಸಿಂಹಸ್ವಾಮಿ ದೇಗುಲದ ಸಮೀಪ ಆನೆ ಪತ್ತೆಯಾಗಿದೆ.

ನಂದಿಪುರ ಹಾಗೂ ಓಬೆನಹಳ್ಳಿ ಸಮೀಪ ಶುಕ್ರವಾರ ರಾತ್ರಿ ಸಂಚರಿಸಿದ ಆನೆಯ ಹೆಜ್ಜೆ ಗುರುತುಗಳು ಸಿಕ್ಕಿವೆ. ಬೆಟ್ಟದ ಸಮೀಪದ ಮೆಕ್ಕೆಜೋಳದ ಹೊಲ ಹೊಕ್ಕ ಸಲಗ ಬೆಳೆ ನಾಶ ಮಾಡಿದೆ. ಬೆಳಿಗ್ಗೆ ಜನಸಂಚಾರ ಆರಂಭವಾಗುವುದಕ್ಕೂ ಮೊದಲೇ ಮತ್ತೆ ಬೆಟ್ಟಕ್ಕೆ ಮರಳಿದೆ ಎಂದು ಅರಣ್ಯ ಇಲಾಖೆ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.

ಅರಣ್ಯದಲ್ಲಿ ಆನೆ ಇರುವುದು ಖಚಿತವಾದ ಹಿನ್ನೆಲೆಯಲ್ಲಿ ಕಕ್ಕೆರವು ಗ್ರಾಮದ ರಸ್ತೆಯಲ್ಲಿ ರಾತ್ರಿ 7 ಗಂಟೆಯ ಬಳಿಕ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ರಾತ್ರಿ ವೇಳೆ ಮಾತ್ರ ಸಂಚರಿಸುತ್ತಿರುವ ಆನೆಯನ್ನು ಜೋಗಿಮಟ್ಟಿ ವನ್ಯಧಾಮದ ಆಚೆಗೆ ಇರುವ ಕಾರಿಡಾರ್‌ಗೆ ಮರಳಿಸುವ ಪ್ರಯತ್ನ ನಡೆಯುತ್ತಿದೆ.

ಆನೆ ಇರುವುದು ಖಚಿತವಾದ ಬಳಿಕ ಕಕ್ಕೆರು, ಕಸವನಹಳ್ಳಿ ಸೇರಿ ಹಿರಿಯೂರು ತಾಲ್ಲೂಕಿನ ಹಳ್ಳಿಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಜನರು ಜಾಗೃತರಾಗಿ ಇರುವಂತೆ ಅರಣ್ಯ ಇಲಾಖೆ ಸೂಚನೆ ನೀಡಿದೆ. ಕಾರ್ಯಾಚರಣೆ ಸಂದರ್ಭದಲ್ಲಿ ಜನಜಂಗುಳಿ ನೆರೆಯದಂತೆ ಪೊಲೀಸರು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದಾರೆ.

ಮೂರು ದಿನಗಳ ಹಿಂದೆ ಹೊಳಲ್ಕೆರ ತಾಲ್ಲೂಕಿನ ತಾಳ್ಯದಲ್ಲಿ ಆನೆಯ ಹೆಜ್ಜೆಗುರುತು ಪತ್ತೆಯಾಗಿದ್ದವು. ತೋಟದ ಬೇಲಿಯನ್ನು ಮುರಿದು ಕುರುಹು ಉಳಿಸಿದ್ದ ಆನೆ ಮರುದಿನ ಜೋಗಿಮಟ್ಟಿ ವನ್ಯಧಾಮ ತಲುಪಿತ್ತು. ಎರಡು ದಿನಗಳಿಂದ ಈ ವನ್ಯಧಾಮದ ಸುತ್ತಲಿನ ಬೆಟ್ಟದಲ್ಲೇ ಬೀಡುಬಿಟ್ಟಿದೆ. ರಾತ್ರಿ ವೇಳೆ ಸಂಚರಿಸುವ ಗಜರಾಜ, ಹಗಲು ಹೊತ್ತು ವಿಶ್ರಾಂತಿ ಪಡೆಯುತ್ತಿದೆ ಎನ್ನುತ್ತಾರೆ ಅರಣ್ಯ ಇಲಾಖೆ ಅಧಿಕಾರಿಗಳು.

ನಂದಿಪುರ ಅರಣ್ಯದಲ್ಲಿ ಆನೆ ಇರುವುದು ಗೊತ್ತಾಗುತ್ತಿದ್ದಂತೆ ಡಿಸಿಎಫ್‌ ಚಂದ್ರಶೇಖರ ನಾಯಕ ಹಾಗೂ ಎಸಿಎಫ್‌ ರಾಘವೇಂದ್ರ ನೇತೃತ್ವದಲ್ಲಿ ನೂರಕ್ಕೂ ಹೆಚ್ಚು ಅರಣ್ಯ ಇಲಾಖೆ ಸಿಬ್ಬಂದಿ ಶನಿವಾರ ಸ್ಥಳಕ್ಕೆ ತೆರಳಿದರು. ಇಡೀ ದಿನ ಬೆಟ್ಟದಿಂದ ಕೆಳಗೆ ಇಳಿಯದ ಆನೆ, ಸಂಜೆಯಾಗುತ್ತಲೇ ಹೆಜ್ಜೆಹಾಕಲು ಆರಂಭಿಸಿತ್ತು. ರಾತ್ರಿ ಹೊತ್ತು ಅದು ಸಾಗುವ ಮಾರ್ಗದ ಮೇಲೆ ನಿಗಾ ಇಡಲಾಗಿತ್ತು.

‘ಭದ್ರಾ ಹಾಗೂ ಬನ್ನೇರುಘಟ್ಟ ಅಭಯಾರಣ್ಯ ಸಂಪರ್ಕಿಸುವ ಆನೆ ಕಾರಿಡಾರ್‌ ಚಿತ್ರದುರ್ಗ, ತುಮಕೂರು ಜಿಲ್ಲೆ ಹಾದು ಹೋಗುತ್ತದೆ. ಹಳೆಯದಾದ ಈ ಕಾರಿಡಾರಿನಲ್ಲಿ ಪ್ರತಿ ವರ್ಷ ಆನೆ ಸಂಚರಿಸುತ್ತವೆ. ದಾರಿ ತಪ್ಪಿದ ಆನೆ ಜೋಗಿಮಟ್ಟಿ ವನ್ಯಧಾಮಕ್ಕೆ ಬಂದಿದೆ’ ಎನ್ನುತ್ತಾರೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಚಂದ್ರಶೇಖರ ನಾಯಕ.

ಆನೆಯನ್ನು ಹಿಮ್ಮೆಟ್ಟಿಸುವ ಕಾರ್ಯಾಚರಣೆಗೆ ಅರಣ್ಯ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದೆ. ಇಬ್ಬರು ತಜ್ಞರು, ಇಬ್ಬರು ವೈದ್ಯರು ಸ್ಥಳದಲ್ಲೇ ಬೀಡು ಬಿಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT