ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ವಿರೋಧಿಗಳೇ ದೇಶದ ನಿಜವಾದ ಶತ್ರುಗಳು: ಕಾದಂಬರಿಕಾರ ಕುಂ.ವೀರಭದ್ರಪ್ಪ ಆಕ್ರೋಶ

Last Updated 26 ನವೆಂಬರ್ 2021, 10:50 IST
ಅಕ್ಷರ ಗಾತ್ರ

ಚಿತ್ರದುರ್ಗ: ರೈತರ ಹಿತಾಸಕ್ತಿ ಕಾಪಾಡಲು ವಿಫಲರಾದವರು ಹಾಗೂ ರೈತ ವಿರೋಧಿ ನಿಲುವು ತೆಗೆದುಕೊಳ್ಳುವವರು ಈ ದೇಶದ ನಿಜವಾದ ಶತ್ರುಗಳು ಎಂದು ಕಾದಂಬರಿಕಾರ ಕುಂ.ವೀರಭದ್ರಪ್ಪ ಅಭಿಪ್ರಾಯಪಟ್ಟರು.

ಇಲ್ಲಿನ ಹೊರವಲಯದ ಮಂಗಳೂರು–ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ ತಡೆ ನಡೆಸುತ್ತಿದ್ದ ರೈತರ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

‘ಲೋಕಸಭೆಯಲ್ಲಿ ಶೇ 90ರಷ್ಟು ಸಂಸದರು ಕೋಟ್ಯಧೀಶರು. ವಿಧಾನಸಭೆಯಲ್ಲಿ ಶೇ 40ರಷ್ಟು ಜನಪ್ರತಿನಿಧಿಗಳು ಕ್ರಿಮಿನಲ್‌ ಹಿನ್ನೆಲೆಯಿಂದ ಬಂದವರು. ರಿಯಲ್‌ ಎಸ್ಟೇಟ್‌ ಉದ್ಯಮ ನಡೆಸುವ ಇಂಥವರಿಂದ ರೈತರಿಗೆ ಯಾವುದೇ ಪ್ರಯೋಜನವಿಲ್ಲ. ರೈತ ವಿರೋಧಿ ಮತ್ತು ಅಪಾಯಕಾರಿ ಕಾನೂನು ರೂಪಿಸುತ್ತಾರೆ’ ಎಂದು ದೂರಿದರು.

‘ಬೆಳೆದ ಬೆಳೆಗೆ ರೈತರು ಬೆಲೆ ನಿಗದಿಪಡಿಸಲು ಸಾಧ್ಯವಾಗದಿರುವುದು ದುರಂತದ ಸಂಗತಿ. ಕಬ್ಬು ಬೆಳೆಗಾರರು ಸಕ್ಕರೆ ಬೆಲೆ ನಿಗದಿಪಡಿಸಲಾಗುತ್ತಿಲ್ಲ. ಸಕ್ಕರೆ ಕಾರ್ಖಾನೆಗಳು ರೈತರಿಗೆ ಸರಿಯಾದ ಬಾಕಿ ಪಾವತಿಸುತ್ತಿಲ್ಲ. ಮಧ್ಯವರ್ತಿಗಳ ಹಾವಳಿ ವಿಪರೀತವಾಗಿದೆ. ಸರ್ಕಾರ ಇಂತಹ ಮಧ್ಯವರ್ತಿಗಳ ಪರವಾಗಿದೆ’ ಎಂದು ಆರೋಪಿಸಿದರು.

‘ಎಪಿಎಂಸಿ ದುರ್ಬಲಗೊಳಿಸುವ ಕಾನೂನು ಹಿಂಪಡೆಯದೇ ಇದ್ದರೆ ರೈತರ ಪರಿಸ್ಥಿತಿ ಇನ್ನಷ್ಟು ಹದಗೆಡಲಿದೆ. ಹತ್ತಾರು ಎಕರೆ ಜಮೀನು ಇಟ್ಟುಕೊಂಡ ರೈತರು ಬೆಂಗಳೂರಿನಲ್ಲಿ ಕೂಲಿ ಕೆಲಸ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ದೇಶದ 137 ಕೋಟಿ ಜನರು ರೈತ ಹೋರಾಟಕ್ಕೆ ಬೆಂಬಲ ನೀಡಬೇಕು. ರೈತರನ್ನು ಭಯೋತ್ಪಾದಕರೆಂದು ಜರಿದ ಸಿನಿಮಾ ನಟಿಯನ್ನು ಜೈಲಿಗೆ ಕಳುಹಿಸಬೇಕಾಗಿದ್ದ ಸರ್ಕಾರ, ರೈತರ ವಿರುದ್ಧ ಪ್ರಕರಣ ದಾಖಲಿಸಿದೆ’ ಎಂದು ಕಿಡಿಕಾರಿದರು.

‘ಜಾಗತಿಕ ಮಟ್ಟದಲ್ಲಿ ರೂಪಾಯಿ ಮೌಲ್ಯ ಪಾತಾಳಕ್ಕೆ ಕುಸಿದಿದೆ. ಕೇಂದ್ರ ಸರ್ಕಾರ ಇಂಧನ ಬೆಲೆ ಏರಿಕೆ ಮಾಡಿ ಜನರಿಗೆ ತೊಂದರೆ ನೀಡುತ್ತಿದೆ. ಪ್ರತಿಭಟಿಸದೇ ಹೋದರೆ ದೇಶದ ಎಲ್ಲ ರಂಗಗಳನ್ನೂ ಸರ್ಕಾರ ಖಾಸಗೀಕರಣ ಮಾಡುತ್ತದೆ. ರೈಲು, ವಿಮಾನ ನಿಲ್ದಾಣಗಳು ಈಗಾಗಲೇ ಮಾರಾಟವಾಗಿವೆ’ ಎಂದು ಆರೋಪಿಸಿದರು.

ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡ ಈಚಘಟ್ಟ ಸಿದ್ಧವೀರಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT