ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಆಸ್ಪತ್ರೆ ಕೋವಿಡ್‌ ಕೇಂದ್ರದಿಂದ ನಾಪತ್ತೆಯಾಗಿದ್ದ ವೃದ್ಧ ರಾತ್ರಿ ಪತ್ತೆ

Last Updated 7 ಮೇ 2021, 4:11 IST
ಅಕ್ಷರ ಗಾತ್ರ

ಹೊಸದುರ್ಗ: ಇಲ್ಲಿಯ ಸರ್ಕಾರಿ ಆಸ್ಪತ್ರೆಯ ಕೋವಿಡ್‌ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಾಲ್ಲೂಕಿನ ಬುರುಡೇಕಟ್ಟೆ ಗ್ರಾಮದ ಚನ್ನಬಸಪ್ಪ (80) ಗುರುವಾರ ಬೆಳಿಗ್ಗೆ ನಾಪತ್ತೆ ಆಗಿದ್ದರಿಂದ ಆತಂಕ ಸೃಷ್ಟಿಯಾಗಿತ್ತು.

ಈ ಆಸ್ಪತ್ರೆಯಲ್ಲಿ ಒಟ್ಟು 40 ಮಂದಿ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಮೇ 3ರಂದು ಅವರಿಗೆ ಕೊರೊನಾ ಪಾಸಿಟಿವ್‌ ಬಂದಿದ್ದರಿಂದ ಚಿಕಿತ್ಸೆಗೆ ದಾಖಲಾಗಿದ್ದರು. 2 ದಿನ ಚಿಕಿತ್ಸೆ ಪಡೆದ ಅವರು ಗುರುವಾರ ನಸುಕಿನಲ್ಲಿ ಲಗೇಜು ಸಹಿತ ಪರಾರಿಯಾಗಿದ್ದರು. ಅವರು ಸ್ವಗ್ರಾಮಕ್ಕಾಗಲಿ, ಸಂಬಂಧಿಗಳ ಮನೆಗಾಗಲಿ ಹೋಗಿರಲಿಲ್ಲ. ಇದರಿಂದ ಆತಂಕಕ್ಕೆ ಒಳಗಾದ ಅವರು ಮಕ್ಕಳು ಪಟ್ಟಣದ ಪೊಲೀಸ್‌ ಠಾಣೆಗೆ ಈ ಬಗ್ಗೆ ಮಾಹಿತಿ ನೀಡಿದರು. ಪೊಲೀಸರು ಹಾಗೂ ಸೋಂಕಿತ ವ್ಯಕ್ತಿ ಕಡೆಯ ಏಳೆಂಟು ಜನರು ಬೆಳಿಗ್ಗೆಯಿಂದ ಸಂಜೆಯವರೆಗೂ ಪಟ್ಟಣ ಸೇರಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಹುಡುಕಿದರೂ ಪತ್ತೆಯಾಗಿರಲಿಲ್ಲ. ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಮೀಪ ರಾತ್ರಿ ಪತ್ತೆಯಾದರು.

ಪತ್ತೆಯಾದ ತಕ್ಷಣ ಸಂಬಂಧಿಕರು ಸಾರ್ವಜನಿಕ ಆಸ್ಪತ್ರೆಯ ಕೋವಿಡ್ ಚಿಕಿತ್ಸೆ ಕೇಂದ್ರಕ್ಕೆ ಕರೆದುಕೊಂಡು ಬಂದು ಮತ್ತೆ ಚಿಕಿತ್ಸೆಗೆ ದಾಖಲಿಸಿದರು.‘ಮತ್ತೆ ಈ ರೀತಿ ಯಾರಿಗೂ ಹೇಳದೇ, ಕೇಳದೇ ಹೋಗಬಾರದು. ನಾವು ಹೋಗಿ ಅಂತ ಹೇಳುವವರೆಗೂ ಚಿಕಿತ್ಸೆ ಪಡೆಯಬೇಕು’ ಎಂದು ವೈದ್ಯರು ತಿಳಿಹೇಳಿ ಮತ್ತೆ ಚಿಕಿತ್ಸೆ ಆರಂಭಿಸಿದರು.

‘ಲಾಕ್‌ಡೌನ್‌ ಮಾಡಿದ ಮೇಲೆ ಬೆಂಗಳೂರು ಸೇರಿ ಬೇರೆ, ಬೇರೆ ನಗರಗಳಿಂದ ಸಾಕಷ್ಟು ಜನರು ಪಟ್ಟಣ ಸೇರಿ ತಾಲ್ಲೂಕಿನ ಹಲವು ಹಳ್ಳಿಗಳಿಗೆ ಬಂದಿದ್ದರು. ನಂತರದ ದಿನದಲ್ಲಿ ಸೋಂಕಿತರು ಹೆಚ್ಚಾಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಪರಿಸ್ಥಿತಿ ಕೈಮೀರುವ ಮೊದಲು ಸೋಂಕು ನಿಯಂತ್ರಣಕ್ಕೆ ತಾಲ್ಲೂಕು ಆಡಳಿತ ಹಾಗೂ ಆರೋಗ್ಯ ಇಲಾಖೆ ವಿಶೇಷ ಕಾಳಜಿ ವಹಿಸಬೇಕು. ಕೋವಿಡ್‌ ಚಿಕಿತ್ಸೆ ಕೇಂದ್ರದಿಂದ ಸೋಂಕಿತರು ಯಾವುದೇ ಕಾರಣಕ್ಕೂ ಹೊರಗೆ ಹೋಗದಂತೆ ಕಟ್ಟೆಚ್ಚರ ವಹಿಸಬೇಕು’ ಎಂದು ತಾಲ್ಲೂಕಿನ ನಾಗರಿಕರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT