ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀರಾಮುಲು ನಾಯಕ ಸಮುದಾಯದವರಲ್ಲ, ಆಂಧ್ರದ ಬೋಯಾಸ್‌: ಆರೋಪ

ಮೊಳಕಾಲ್ಮುರಿನ ಮಾಜಿ ಶಾಸಕ ನೇರ್ಲಗುಂಟೆ ತಿಪ್ಪೇಸ್ವಾಮಿ
Last Updated 21 ನವೆಂಬರ್ 2019, 10:40 IST
ಅಕ್ಷರ ಗಾತ್ರ

ಚಿತ್ರದುರ್ಗ: ‘ಆರೋಗ್ಯ ಸಚಿವ ಬಿ. ಶ್ರೀರಾಮುಲು ವಾಲ್ಮೀಕಿ ನಾಯಕ ಜನಾಂಗದ ರಾಜ್ಯ ನಾಯಕನಲ್ಲ. ಸಮುದಾಯದವನೂ ಅಲ್ಲ. ಮಹಾ ಸುಳ್ಳುಗಾರ’ ಎಂದು ಮೊಳಕಾಲ್ಮುರಿನ ಮಾಜಿ ಶಾಸಕ ನೇರ್ಲಗುಂಟೆ ತಿಪ್ಪೇಸ್ವಾಮಿ ಏಕವಚನದಲ್ಲಿ ಹರಿಹಾಯ್ದರು.

‘ಆಂಧ್ರದ ಬೋಯಾಸ್ ಸಮುದಾಯದ ಶ್ರೀರಾಮುಲು ಕರ್ನಾಟಕದಲ್ಲಿ ವಾಲ್ಮೀಕಿ ನಾಯಕ ಸಮುದಾಯದ ಜಾತಿ ಪ್ರಮಾಣ ಪತ್ರ ಪಡೆದು ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾನೆ. ಸಮುದಾಯದವರನ್ನು ವಂಚಿಸುತ್ತಿದ್ದಾನೆ’ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

‘ಈಚೆಗೆ ಹುಣಸೂರು ಕ್ಷೇತ್ರದಲ್ಲಿ ಪ್ರಚಾರ ನಡೆಸುವ ವೇಳೆ ಸಿದ್ದರಾಮಯ್ಯ ರಾಜೀನಾಮೆ ಕೊಟ್ಟು ನನ್ನ ವಿರುದ್ಧ ಸ್ಪರ್ಧಿಸಲಿ ಎಂದು ರಾಮುಲು ಸವಾಲು ಹಾಕಿದ್ದಾರೆ. ನಿಜವಾಗಿಯೂ ಅವನಿಗೆ ತಾಕತ್ತು ಇದ್ದರೆ, ರಾಜೀನಾಮೆ ಕೊಟ್ಟು ಈಗ ಮೊಳಕಾಲ್ಮುರು ಕ್ಷೇತ್ರದಲ್ಲಿ ನನ್ನ ವಿರುದ್ಧ ಜಯಗಳಿಸಲಿ’ ಎಂದು ನೇರ ಸವಾಲು ಹಾಕಿದರು.

‘ರಾಜ್ಯ ರಾಜಕೀಯ ವ್ಯವಸ್ಥೆಯಲ್ಲಿ ಸಿದ್ದರಾಮಯ್ಯ ಮೇರು ಪರ್ವತ ಇದ್ದಂತೆ. ಅವರಿಗೂ ರಾಮುಲುಗೂ ಹೋಲಿಕೆ ಮಾಡಲು ಸಾಧ್ಯವೇ ಇಲ್ಲ. ಈತ ಯಾವ ಸೀಮೆ ಮುಖಂಡ. ಉಪಮುಖ್ಯಮಂತ್ರಿ ಆಗುತ್ತೇನೆ, ಅಭಿವೃದ್ಧಿ ಕೈಗೊಳ್ಳುತ್ತೇನೆ ಎಂದು ರಾಜ್ಯದ ವಿವಿಧೆಡೆ ಜನರನ್ನು ವಂಚಿಸುತ್ತಲೇ ಬರುತ್ತಿದ್ದಾನೆ ಹೊರತು ಯಾವುದೂ ಆಗಿಲ್ಲ’ ಎಂದು ಹೇಳಿದರು.

‘ರಾಜ್ಯದಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿ ಆದರೆ, 24ಗಂಟೆಯೊಳಗೆ ಪರಿಶಿಷ್ಟ ವರ್ಗಕ್ಕೆ ಶೇ 7.5 ಮೀಸಲಾತಿ ಕಲ್ಪಿಸುವುದಾಗಿ ರಕ್ತದಲ್ಲಿ ಬರೆದುಕೊಡುತ್ತೇನೆ ಎಂದು ಶ್ರೀರಾಮುಲು ಹೇಳಿದ್ದ. ಸರ್ಕಾರ ಅಧಿಕಾರಕ್ಕೆ ಬಂದು ನಾಲ್ಕು ತಿಂಗಳಾದರೂ ಭರವಸೆ ಈಡೇರಿಲ್ಲ. ಎಲ್ಲಿಯೇ ಹೋದರು ಬರಿ ಬುರುಡೆ ಬಿಡುತ್ತಾನೆ. ರಕ್ತದ ಪ್ರತಿ ಕಣದಲ್ಲೂ ಸುಳ್ಳನೇ ತುಂಬಿಕೊಂಡಿದ್ದಾನೆ’ ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT