ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸದುರ್ಗ | ಮಳೆ ಕೊರತೆ: ಮುಸುಕಿನ ಜೋಳದ ಬೆಳೆ ನಾಶ ಮಾಡಿದ ರೈತರು

Published 4 ಅಕ್ಟೋಬರ್ 2023, 14:51 IST
Last Updated 4 ಅಕ್ಟೋಬರ್ 2023, 14:51 IST
ಅಕ್ಷರ ಗಾತ್ರ

ಹೊಸದುರ್ಗ: ಕೆಲ ತಿಂಗಳಿಂದ ಮಳೆ ಬಾರದೆ ರೈತರು ಬರಗಾಲ ಎದುರಿಸುತ್ತಿದ್ದಾರೆ. ಮುಸುಕಿನ ಜೋಳ, ರಾಗಿ, ಶೇಂಗಾ ಸೇರಿದಂತೆ ಇತರೆ ಬೆಳೆಗಳು ಇಳುವರಿ ಕಂಡಿಲ್ಲ. ಇದರಿಂದ ಬೇಸತ್ತ ಕೆಲ ರೈತರು ಮುಸುಕಿನ ಜೋಳವನ್ನು ಬುಧವಾರ ಟ್ರ್ಯಾಕ್ಟರ್‌ನಿಂದ ನಾಶಪಡಿಸಿದರು.

ಮಳೆ ಇಲ್ಲದೆ ಬೆಳೆಗಳು ಒಣಗುತ್ತಿವೆ. ಹುಲುಸಾಗಿ ಬೆಳೆಯುತ್ತಿದ್ದ ಮುಸುಕಿನ ಜೋಳ ಮಳೆ ಬಾರದ್ದರಿಂದ ಹಲವು ರೋಗಗಳಿಗೆ ತುತ್ತಾಗಿ, ರೋಗಗ್ರಸ್ತ ಸ್ಥಿತಿಯಲ್ಲಿದೆ. ಎಲೆಗಳೆಲ್ಲ ಒಣಗಿವೆ, ನಿರೀಕ್ಷಿತ ಮಟ್ಟದ ಆದಾಯವಿಲ್ಲದ ಕಾರಣ ರೈತರು ಬೆಳೆ ನಾಶ ಪಡಿಸಲು ಮುಂದಾಗಿದ್ದಾರೆ.

‘ಜೂನ್– ಜುಲೈ ತಿಂಗಳಲ್ಲಿ ನಾಲ್ಕು ಎಕರೆ ಭೂಮಿಯಲ್ಲಿ ಮುಸುಕಿನ ಜೋಳ ಬಿತ್ತನೆ ಮಾಡಲಾಗಿತ್ತು. ಅಂದಿನಿಂದ ಇಲ್ಲಿಯವರೆಗೂ ನಿರೀಕ್ಷಿತ ಪ್ರಮಾಣದ ಮಳೆ ಬಂದಿಲ್ಲ. ಬಿತ್ತನೆ, ಔಷಧ, ಗೊಬ್ಬರ ಸೇರಿದಂತೆ ವಿವಿಧ ಕೃಷಿ ಚಟುವಟಿಕೆಗಳಿಗಾಗಿ ₹ 1 ಲಕ್ಷ ವ್ಯಯಿಸಲಾಗಿದೆ. ಬೆಳೆ ವಿಮೆ ಸಹ ಕಟ್ಟಲಾಗಿದೆ. ಇದುವರೆಗೂ ಯಾವುದೇ ಅಧಿಕಾರಿಗಳು ಬಂದು ವೀಕ್ಷಿಸಿಲ್ಲ. ಬ್ಯಾಂಕ್‌ನಲ್ಲಿ ₹1.5 ಲಕ್ಷ ಸಾಲ ತಂದು ಬಿತ್ತನೆ ಮಾಡಲಾಗಿದೆ. ಸರ್ಕಾರ ರೈತರ ಬಗ್ಗೆ ಕಾಳಜಿ ತೋರಬೇಕು’ ಎಂದು ಐಲಾಪುರದ ರೈತ ಸೋಮಶೇಖರಯ್ಯ ಮನವಿ ಮಾಡಿದರು.

‘ಜಮೀನಿನಲ್ಲಿ ಐದು ಕೊಳವೆಬಾವಿ ಕೊರೆಯಿಸಿದ್ದು, ಯಾವುದರಲ್ಲೂ ನೀರು ದೊರೆಯಲಿಲ್ಲ. ಹಾಗಾಗಿ ಮಳೆಯಾಶ್ರಿತ ಬೆಳೆಗಳನ್ನು ಬೆಳೆಯುತ್ತಿದ್ದೇವೆ. ಸೊಸೈಟಿಯಲ್ಲಿ ಬೆಳೆ ಸಾಲ ಪಡೆದು ಬಿತ್ತನೆ ಮಾಡಲಾಗಿದೆ. ಈ ಬಾರಿ ಮುಸುಕಿನ ಜೋಳದಿಂದ ಬಂದ ಹಣದಲ್ಲಿ ಸಾಲ ತೀರಿಸುವ ಉದ್ದೇಶವಿತ್ತು. ಆದರೀಗ ಅದೂ ಇಲ್ಲ. ಬ್ಯಾಂಕ್‌ನವರಿಗೆ ಹೇಗೆ ಉತ್ತರಿಸುವುದೊ ತಿಳಿಯುತ್ತಿಲ್ಲ. ಸರ್ಕಾರ ಕೂಡಲೇ ಪರಿಹಾರ ನೀಡಬೇಕು’ ಎಂದು ಬಾಗೂರಿನ ರೈತ ಸುಪ್ರಿತ್ ಕೋರಿದದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಸಹಾಯಕ ಕೃಷಿ ನಿರ್ದೇಶಕ ಸಿ.ಎಸ್.ಈಶ ಅವರು, ‘ಹೊಸದುರ್ಗ ತಾಲ್ಲೂಕನ್ನು ಬರ ಪೀಡಿತ ಪ್ರದೇಶ ಎಂದು ಘೋಷಿಸಲಾಗಿದೆ. ಆಗಸ್ಟ್, ಸೆಪ್ಟೆಂಬರ್‌ನಲ್ಲಿ ಮಳೆ ಇಲ್ಲದ ಕಾರಣ ಬೆಳೆ ಒಣಗುತ್ತಿವೆ. ತಾಲ್ಲೂಕಿನಲ್ಲಿ ಸಮೀಕ್ಷೆ ನಡೆಯುತ್ತಿದ್ದು, ಸರ್ಕಾರ ಶೀಘ್ರವೇ ತೀರ್ಮಾನ ಕೈಗೊಳ್ಳಲಿದೆ. ರೈತರು ಆತಂಕಪಡುವ ಅಗತ್ಯವಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT