ಶುಕ್ರವಾರ, ಸೆಪ್ಟೆಂಬರ್ 17, 2021
24 °C

ಚಿತ್ರದುರ್ಗ: ವಿದ್ಯುತ್‌ ಮಾರ್ಗಕ್ಕೆ ರೈತರ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಹಿರಿಯೂರು ಹಾಗೂ ಜಗಳೂರು ನಡುವೆ ನೂತನವಾಗಿ ನಿರ್ಮಾಣವಾಗುತ್ತಿರುವ ವಿದ್ಯುತ್‌ ಮಾರ್ಗಕ್ಕೆ ಹಾಲುಮರದಹಟ್ಟಿ ಗ್ರಾಮದ ರೈತರು ಶುಕ್ರವಾರ ವಿರೋಧ ವ್ಯಕ್ತಪಡಿಸಿದರು. ಇದರಿಂದ ವಿದ್ಯುತ್‌ ಮಾರ್ಗ ನಿರ್ಮಾಣ ಕಾರ್ಯ ತಾತ್ಕಾಲಿಕವಾಗಿ ಸ್ಥಗಿತಗೊಂಡಿತು.

ಜಗಳೂರು ತಾಲ್ಲೂಕಿನ ಪವನ ವಿದ್ಯುತ್‌ ಯಂತ್ರಗಳಿಂದ ಉತ್ಪಾದನೆಯಾಗುವ ವಿದ್ಯುತ್‌ ಅನ್ನು ಸರಬರಾಜು ಮಾಡಲು 220 ಕೆ.ವಿ.ಸಾಮರ್ಥ್ಯದ ಮಾರ್ಗವನ್ನು ನಿರ್ಮಿಸಲಾಗುತ್ತಿದೆ. ಇದೊಂದು ಸ್ವತಂತ್ರ ವಿದ್ಯುತ್ ಯೋಜನೆಯಾಗಿದ್ದು, ರೈತರಿಂದ ಭಾರಿ ವಿರೋಧ ವ್ಯಕ್ತವಾಗುತ್ತಿದೆ.

ಹಾಲುಮರದಹಟ್ಟಿಯ ಜಮೀನುಗಳಲ್ಲಿ ಈಚೆಗೆ ಬೃಹತ್ ಗಾತ್ರದ ವಿದ್ಯುತ್‌ ಕಂಬಗಳನ್ನು ಅಳವಡಿಸಲಾಗಿದೆ. ಇವುಗಳ ನಡುವೆ ಲೇನ್‌ ಸಂಪರ್ಕ ಕಲ್ಪಿಸುವ ಕಾರ್ಯವನ್ನು ಶುಕ್ರವಾರ ಕೈಗೆತ್ತಿಕೊಳ್ಳಲಾಯಿತು. ಇದರಿಂದ ಆಕ್ರೋಶಗೊಂಡ ರೈತರು ಉದ್ದೇಶಿತ ಕಾಮಗಾರಿ ಸ್ಥಗಿತಗೊಳಿಸುವಂತೆ ಪಟ್ಟುಹಿಡಿದರು.

ರೈತರಿಂದ ವಿರೋಧ ವ್ಯಕ್ತವಾಗುವ ನಿರೀಕ್ಷೆಯಲ್ಲಿ ಕಂಪನಿಯ ಸಿಬ್ಬಂದಿ ಪೊಲೀಸರ ರಕ್ಷಣೆ ಪಡೆದಿದ್ದರು. ಪೊಲೀಸರ ಮಧ್ಯಪ್ರವೇಶದ ಬಳಿಕವೂ ರೈತರ ಆಕ್ರೋಶ ಕಡಿಮೆಯಾಗಲಿಲ್ಲ. ಹೀಗಾಗಿ, ಕೆಲ ಹೊತ್ತು ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

‘ವಿದ್ಯುತ್‌ ಮಾರ್ಗ ನಿರ್ಮಾಣಕ್ಕೂ ಮೊದಲು ರೈತರಿಗೆ ಮಾಹಿತಿ ನೀಡಬೇಕು. ಅಹವಾಲು ಆಲಿಸಿ ಸೂಕ್ತ ಪರಿಹಾರ ನೀಡಿ ಅನುಮತಿ ಪಡೆಯಬೇಕು. ಇಂತಹ ಯಾವುದೇ ನಿಯಮಗಳನ್ನು ಖಾಸಗಿ ವಿದ್ಯುತ್‌ ಕಂಪನಿಯ ಸಿಬ್ಬಂದಿ ಪಾಲಿಸಿಲ್ಲ’ ಎಂದು ಜಮೀನು ಮಾಲೀಕ ಮುದ್ದುರಾಜ್‌ ಅಸಮಾಧಾನ ಹೊರಹಾಕಿದರು.

‘ಖಾಸಗಿ ವಿದ್ಯುತ್‌ ಮಾರ್ಗಕ್ಕೆ ರೈತರು ಜಮೀನು ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಅಂದಾಜು ನಾಲ್ಕು ಎಕರೆ ಭೂಮಿ ಕೈತಪ್ಪುವ ಆತಂಕ ಎದುರಾಗಿದೆ. ತಹಶೀಲ್ದಾರ್‌ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ರೈತರ ಮೇಲೆ ದಬ್ಬಾಳಿಕೆ ನಡೆಯುತ್ತಿದೆ’ ಎಂದು ಆರೋಪಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು