ಶುಕ್ರವಾರ, ಆಗಸ್ಟ್ 23, 2019
22 °C
ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ರೈತ ಸಂಘದ ಒತ್ತಾಯ

ಶಾಶ್ವತ ಬರಪೀಡಿತ ಜಿಲ್ಲೆ ಘೋಷಿಸಿ

Published:
Updated:
Prajavani

ಚಿತ್ರದುರ್ಗ: ಸತತವಾಗಿ ಮಳೆ ಕೊರತೆ ಎದುರಿಸುತ್ತಿರುವ ಚಿತ್ರದುರ್ಗ ಜಿಲ್ಲೆಯನ್ನು ಆಂಧ್ರಪ್ರದೇಶದ ಮಾದರಿಯಲ್ಲಿ ಶಾಶ್ವತ ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಮಂಗಳವಾರ ಪ್ರತಿಭಟನೆ ನಡೆಸಿತು.

ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ರೈತರು, ಫಸಲ್‌ ಬೀಮಾ ಯೋಜನೆ ವಿಮಾ ಹಣ ಹಾಗೂ ಬರಪರಿಹಾರ ವಿತರಣೆಯಲ್ಲಿ ತಾರತಮ್ಯ ಉಂಟಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಚಿತ್ರದುರ್ಗ ಬರಪೀಡಿತ ಪ್ರದೇಶ. ದಶಕದಲ್ಲಿ ಎಂಟು ವರ್ಷ ಮಳೆ ಕೊರತೆ ಎದುರಿಸಿದೆ. ರೈತರ ಬೆಳೆಗಳು ಸಂಪೂರ್ಣವಾಗಿ ವಿನಾಶವಾಗಿವೆ. ಅಂತರ್ಜಲ ಪಾತಾಳಕ್ಕೆ ಇಳಿದಿದೆ. ಕುಡಿಯುವ ನೀರಿಗೂ ತತ್ವಾರ ಉಂಟಾಗಿದೆ. ಹೀಗಾಗಿ, ಶಾಶ್ವತ ಬರಪೀಡಿತ ಜಿಲ್ಲೆಗಳ ಪಟ್ಟಿಗೆ ಸೇರಿಸಬೇಕು’ ಎಂದು ಆಗ್ರಹಿಸಿದರು.

‘ಕೇಂದ್ರ ಸರ್ಕಾರದ ಅಧಿಕಾರಿಗಳ ತಂಡ ಜಿಲ್ಲೆಯಲ್ಲಿ ಬರ ಅಧ್ಯಯನ ನಡೆಸಿದೆ. ಬೆಳೆ ನಷ್ಟದ ಪ್ರಮಾಣವನ್ನು ರೈತರು ದಾಖಲೆ ಸಹಿತ ತಂಡಕ್ಕೆ ನೀಡಿದ್ದಾರೆ. ಸರ್ಕಾರ ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡಿದರೂ, ವಿಮಾ ಕಂಪನಿಗಳು ಮಾತ್ರ ಪರಿಹಾರ ನೀಡುತ್ತಿಲ್ಲ. ಬರ ಪರಿಹಾರವೂ ಕೈಗೆ ಸಿಗುತ್ತಿಲ್ಲ’ ಎಂದು ಅಸಮಾಧಾನ ಹೊರಹಾಕಿದರು.

‘ಜಿಲ್ಲೆಯ ಎಲ್ಲ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ಕೈಗೆತ್ತಿಕೊಳ್ಳಬೇಕು. ನದಿ ಜೋಡಣೆ ಯೋಜನೆಯನ್ನು ಅನುಷ್ಠಾನಗೊಳಿಸಲು ಕೇಂದ್ರ ಸರ್ಕಾರ ಮುಂದಾಗಬೇಕು. ಆಂಧ್ರಪ್ರದೇಶದ ಕಡಪ, ಕರ್ನೂಲ್‌, ಹಿಂದೂಪುರ ಜಿಲ್ಲೆಗಳಿಗೆ ಸಿಗುತ್ತಿರುವ ಸೌಲಭ್ಯ ಚಿತ್ರದುರ್ಗಕ್ಕೂ ದೊರಕಬೇಕು’ ಎಂದು ಒತ್ತಾಯಿಸಿದರು.

ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡರಾದ ಟಿ.ನುಲೇನೂರು ಶಂಕರಪ್ಪ, ಕೆ.ಪಿ.ಭೂತಯ್ಯ, ಬಸ್ತಿಹಳ್ಳಿ ಸುರೇಶಬಾಬು, ಧನಂಜಯ, ರುದ್ರಸ್ವಾಮಿ ಇದ್ದರು.

Post Comments (+)