ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರಿಯೂರು | ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹ: ರೈತರ ಪ್ರತಿಭಟನೆ

Published 29 ಏಪ್ರಿಲ್ 2024, 15:56 IST
Last Updated 29 ಏಪ್ರಿಲ್ 2024, 15:56 IST
ಅಕ್ಷರ ಗಾತ್ರ

ಹಿರಿಯೂರು: ಸಮರ್ಪಕ ವಿದ್ಯುತ್ ಪೂರೈಕೆಸುವಂತೆ ಆಗ್ರಹಿಸಿ ನಗರದ ಬೆಸ್ಕಾಂ ಕಚೇರಿ ಮುಂದೆ ಸೋಮವಾರ ತಾಲ್ಲೂಕಿನ ಆದಿವಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೈತರು ಜಿಲ್ಲಾ ರೈತ ಸಂಘದ ಕಾರ್ಯಾಧ್ಯಕ್ಷ ಕೆ.ಸಿ.ಹೊರಕೇರಪ್ಪ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.

‘ಹಿಂದೆಂದೂ ಕಂಡು ಕೇಳದ ಬಿಸಿಲು ಈ ಬಾರಿ ಕಾಣಿಸಿಕೊಂಡಿದ್ದು, ತೋಟದ ಬೆಳೆಗಳಿಗೆ ನೀರು ಉಣಿಸಿದರೂ ಮರುದಿನವೇ ಒಣಗಿದಂತೆ ಕಾಣುತ್ತದೆ. ಅಡಿಕೆ ಗಿಡಗಳ ಸುಳಿಗಳು ಬಿಸಿಲಿಗೆ ಸುಟ್ಟು ಹೋಗುತ್ತಿವೆ. ಕೊಳವೆಬಾವಿಳಲ್ಲಿ ಸಿಗುವ ಅಷ್ಟಿಷ್ಟು ನೀರನ್ನೇ ಬೆಳೆಗಳಿಗೆ ಹರಿಸಿ ಅಡಿಕೆ– ತೆಂಗು– ಬಾಳೆ ತೋಟಗಳನ್ನು ಉಳಿಸಿಕೊಳ್ಳಬೇಕಿದೆ. ಅಸಮರ್ಪಕ ವಿದ್ಯುತ್ ಸರಬರಾಜಿನಿಂದ ಪಂಪ್‌ಸೆಟ್‌ಗಳು ಸುಟ್ಟು ಹೋಗುತ್ತಿವೆ. ಒಮ್ಮೆ ಸುಟ್ಟು ಹೋದ ಮೋಟಾರ್ ಅನ್ನು ಹೊರತೆಗೆದು ದುರಸ್ತಿ ಮಾಡಿಸಿ ಕೊಳವೆಬಾವಿಗೆ ಬಿಡಲು ಆರೇಳು ದಿನ ಬೇಕು. ಅಷ್ಟೊತ್ತಿಗೆ ಬೆಳೆಗಳು ಒಣಗಿ ಹೋಗುತ್ತವೆ’ ಎಂದು ರೈತರು ಆತಂಕ ವ್ಯಕ್ತಪಡಿಸಿದರು.

ಒತ್ತಾಯ: ‘ಆದಿವಾಲ ಗ್ರಾಮ ಪಂಚಾಯಿತಿ ಒಳಗೊಂಡು ತಾಲ್ಲೂಕಿನಲ್ಲಿ ವಿದ್ಯುತ್ ಸಮಸ್ಯೆ ಎದುರಿಸುತ್ತಿರುವ ಹಳ್ಳಿಗಳ ನೀರಾವರಿ ಪಂಪ್‌ಸೆಟ್‌ಗಳಿಗೆ ಸರ್ಕಾರ ಹೇಳಿರುವಂತೆ ನಿತ್ಯ ಏಳು ಗಂಟೆ ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡಬೇಕು. ಹೊಸದಾಗಿ ಕೊಳವೆ ಬಾವಿ ಕೊರೆಯಿಸಿದ ರೈತರಿಗೆ ತಕ್ಷಣ ವಿದ್ಯುತ್ ಸಂಪರ್ಕ ಕಲ್ಪಿಸಬೇಕು’ ಎಂದು ಪ್ರತಿಭಟನಕಾರರು ಒತ್ತಾಯಿಸಿದರು.

ಭರವಸೆ: ಪ್ರತಿಭಟನಕಾರರ ಜೊತೆ ಮಾತನಾಡಿದ ಬೆಸ್ಕಾಂ ಇಲಾಖೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಪೀರ್ ಸಾಬ್, ‘ಇಂದಿನಿಂದಲೇ ಆದಿವಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲ ಹಳ್ಳಿಗಳ ರೈತರ ಪಂಪ್‌ಸೆಟ್‌ಗಳಿಗೆ ಗುಣಮಟ್ಟದ ವಿದ್ಯುತ್ ನೀಡುತ್ತೇವೆ. 10–12 ದಿನಗಳಲ್ಲಿ ಕಸ್ತೂರಿರಂಗಪ್ಪನಹಳ್ಳಿ ಉಪ ವಿದ್ಯುತ್ ವಿತರಣಾ ಕೇಂದ್ರ ಕಾರ್ಯಾರಂಭ ಮಾಡಲಿದ್ದು, ಆ ಭಾಗದ ರೈತರ ವಿದ್ಯುತ್ ಸಮಸ್ಯೆ ಬಗೆಹರಿಯಲಿದೆ’ ಎಂದು ಭರವಸೆ ನೀಡಿದ್ದರಿಂದ ರೈತರು ಪ್ರತಿಭಟನೆ ಹಿಂಪಡೆದರು.

ಸಂಘದ ತಾಲ್ಲೂಕು ಘಟಕದ ಉಪಾಧ್ಯಕ್ಷ ಅನ್ಸರ್ ಅಲಿ, ಸದಾನಂದ, ನಂದಿಹಳ್ಳಿ ಶ್ರೀಧರ್, ಮಂಜುನಾಥ, ಸುಧಾಮ, ತಿಪ್ಪೇಸ್ವಾಮಿ, ಚಿನ್ನಸ್ವಾಮಿ, ಅಪ್ಪಿ ಶ್ರೀನಿವಾಸ್, ರಾಮಸ್ವಾಮಿ, ರಂಗಸ್ವಾಮಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT