ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸದುರ್ಗ: ಹೊಡೆ ಬಿಚ್ಚುತ್ತಿರುವ ರಾಗಿ; ಮಳೆ ನಿರೀಕ್ಷೆಯಲ್ಲಿ ರೈತ

ಹೊಸದುರ್ಗ ತಾಲ್ಲೂಕಿನಲ್ಲಿ 26,060 ಹೆಕ್ಟೇರ್‌ ಬಿತ್ತನೆ
Last Updated 6 ಅಕ್ಟೋಬರ್ 2020, 3:13 IST
ಅಕ್ಷರ ಗಾತ್ರ

ಹೊಸದುರ್ಗ: ತಾಲ್ಲೂಕಿನಲ್ಲಿ 26,060 ಹೆಕ್ಟೇರ್‌ ರಾಗಿ ಬಿತ್ತನೆಯಾಗಿದ್ದು, ಹಲವೆಡೆ ತೆನೆ ಹೊಡೆ ಬಿಚ್ಚುತ್ತಿರುವುದರಿಂದ ಮಳೆ ಅವಶ್ಯಕವಾಗಿದೆ.

ತಾಲ್ಲೂಕಿನಲ್ಲಿ 29,110 ಹೆಕ್ಟೇರ್‌ ರಾಗಿ ಬಿತ್ತನೆ ಗುರಿ ಇದೆ. ಈ ಭಾಗದ ಜನರ ಪ್ರಮುಖ ಆಹಾರ ಬೆಳೆ ಹಾಗೂ ಜಾನುವಾರು ಮೇವಿನ ಬೆಳೆಯಾದ ರಾಗಿಯನ್ನು ಆಗಸ್ಟ್‌ನಲ್ಲಿಯೇ ಗರಿಷ್ಠ ಪ್ರಮಾಣದ ಪ್ರದೇಶದಲ್ಲಿ ರೈತರು ಬಿತ್ತನೆ ಮಾಡಿದ್ದರು.

ಕಳೆದ ಏಳೆಂಟು ವರ್ಷಗಳಿಂದ ಕಾಲ, ಕಾಲಕ್ಕೆ ಸಮೃದ್ಧವಾಗಿ ಮಳೆ ಆಗುತ್ತಿರಲಿಲ್ಲ. ರಾಗಿ ಬೆಳೆ ಕಟಾವು ಮಾಡಲು ಕೃಷಿ ಕಾರ್ಮಿಕರು ಸಿಗುತ್ತಿರಲಿಲ್ಲ. ಕಷ್ಟಪಟ್ಟು ಬೆಳೆದ ಬೆಳೆಗೆ ಮಾರುಕಟ್ಟೆಯಲ್ಲಿ ಸರಿಯಾದ ಬೆಲೆಯೂ ಸಿಗುತ್ತಿರಲಿಲ್ಲ. ಇದರಿಂದಾಗಿ ಹಲವು ರೈತರು ರಾಗಿ ಬೆಳೆಯುವುದನ್ನೇ ಕೈಬಿಟ್ಟಿದ್ದರು.

ಇಂತಹ ಸಂದಿಗ್ಧ ಸಮಯದಲ್ಲಿ ರಾಗಿ ಬೆಳೆ ಒಕ್ಕಣೆ ಮಾಡುವ ಯಂತ್ರ ಬಂದಿರುವುದು, ಗುಣಮಟ್ಟದ ರಾಗಿಯನ್ನು ಸರ್ಕಾರ ಕ್ವಿಂಟಲ್‌ಗೆ ₹3,150 ಬೆಂಬಲ ಬೆಲೆಗೆ ಖರೀದಿಸುತ್ತಿರುವುದರಿಂದ ಈ ಬಾರಿ ತಾಲ್ಲೂಕಿನ ರೈತರಲ್ಲಿ ರಾಗಿ ಬೆಳೆಯುವ ಉತ್ಸಾಹ ಹೆಚ್ಚಾಗಿದೆ. ಇದರಿಂದಾಗಿ ಪ್ರಸಕ್ತ ವರ್ಷ ಹಿಂದಿಗಿಂತಲೂ ಹೆಚ್ಚಿನ ಜಮೀನಿನಲ್ಲಿ ರಾಗಿ ಬಿತ್ತನೆ ಮಾಡಿದ್ದಾರೆ. ಬೆಳೆಯನ್ನು ಎರಡ್ಮೂರು ಬಾರಿ ಎಡೆಕುಂಟೆ ಹೊಡೆದಿದ್ದಾರೆ. ಕೆಲವು ರೈತರು ಕಳೆನಾಶಕ ಸಿಂಪಡಿಸಿದ್ದಾರೆ. ಹಲವರು ಕಳೆ ತೆಗೆಸಿ ಬೆಳೆಯನ್ನು ಉತ್ತಮವಾಗಿ ಉಪಚರಿಸಿದ್ದರು.

ಕಳೆದ ತಿಂಗಳು ಉತ್ತಮವಾಗಿ ಮಳೆ ಬಂದಿದ್ದರಿಂದ ರೈತರು ಬೆಳೆಗೆ ಸಾಕಷ್ಟು ಯೂರಿಯಾ ಗೊಬ್ಬರ ಹಾಕಿದ್ದರು. ಇದರಿಂದ ರಾಗಿ ಬೆಳೆಯು ಕೆಲವೆಡೆ ಸೊಂಟದ ಎತ್ತರಕ್ಕೆ ಹುಲುಸಾಗಿ ಬೆಳೆದಿದೆ. ಹಲವೆಡೆ ರಾಗಿ ಬೆಳೆಯು ವಡೆ ಬಿಚ್ಚಿದೆ. ಇನ್ನೂ ಕೆಲವೆಡೆ ಬೆಳವಣಿಗೆ ಹಂತದಲ್ಲಿದ್ದು, ಹೊಡೆ ಬಿಚ್ಚುವ ಸ್ಥಿತಿಯಲ್ಲಿದೆ. ಉತ್ತಮ ಇಳುವರಿಯ ನಿರೀಕ್ಷೆಯಲ್ಲಿ ರೈತರು ಬೆಳೆಯ ಉಪಚಾರ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಒಂದು ಹದ ಮಳೆಯಾದಲ್ಲಿ ರಾಗಿ ತೆನೆ ಬಲಿಷ್ಠವಾಗಲು ನೆರವಾಗುತ್ತದೆ. ಆದರೆ, 15 ದಿನಗಳಿಂದಲೂ ಮಳೆ ಕೈಕೊಟ್ಟಿದೆ. ಇದರಿಂದ ರೈತರಲ್ಲಿ ಆತಂಕ ಉಂಟು ಮಾಡಿದೆ.

‘ಸೆಪ್ಟೆಂಬರ್‌ ಆರಂಭದ ಮೊದಲೆರಡು ವಾರ ಬಿರುಸಿನ ಮಳೆಯಾಗಿತ್ತು. ಈಗ ಸ್ವಲ್ಪವೂ ಬಾರದಿರುವುದರಿಂದ ಭೂಮಿಯ ಮೇಲ್ಪದರು ಗಡುಸಾಗಿದೆ. ಈ ಸಮಯದಲ್ಲಿ ಮಳೆ ಬಂದರೆ ಮಾತ್ರ ನಿರೀಕ್ಷೆಯಷ್ಟು ಇಳುವರಿ ರಾಗಿ ರೈತರ ಕೈಸೇರುತ್ತದೆ. ಇಲ್ಲದಿದ್ದರೆ ನಷ್ಟ ಹೆಚ್ಚಾಗುತ್ತದೆ’ ಎನ್ನುತ್ತಾರೆ ರೈತ ಬಾಗೂರು ವೆಂಕಟೇಶ್‌, ಹನುಮಂತಪ್ಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT