ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಆರ್‌ಡಿಒ ಆವರಣದಲ್ಲಿ ಬೆಂಕಿ ಅವಘಡ: ಹುಲ್ಲುಗಾವಲಿಗೆ ಹಾನಿ

Published 14 ಮಾರ್ಚ್ 2024, 16:02 IST
Last Updated 14 ಮಾರ್ಚ್ 2024, 16:02 IST
ಅಕ್ಷರ ಗಾತ್ರ

ನಾಯಕನಹಟ್ಟಿ: ಇಲ್ಲಿನ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ)ಯ ಆವರಣ ಮತ್ತು ಅದರ ಪಕ್ಕದಲ್ಲಿರುವ ಸೋಲಾರ್ ಘಟಕಗಳಲ್ಲಿ ಮಂಗಳವಾರ ತಡರಾತ್ರಿ ಪ್ರತ್ಯೇಕ ಬೆಂಕಿ ಅವಘಡ ಸಂಭವಿಸಿದೆ.

4,200 ಎಕರೆ ಪ್ರದೇಶದಲ್ಲಿರುವ ಡಿಆರ್‌ಡಿಒ ಪ್ರದೇಶದಲ್ಲಿರುವ ಏರೊನ್ಯಾಟಿಕಲ್ ಟೆಸ್ಟ್‌ರೇಂಜ್-2ರ ರನ್‌ವೇನಿಂದ ಸುಮಾರು 1 ಕಿ.ಮೀ. ದೂರದಲ್ಲಿನ ಹುಲ್ಲುಗಾವಲು ಪ್ರದೇಶದಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ. ಒಣಗಿದ ಹುಲ್ಲಿಗೆ ತಾಕಿದ ಬೆಂಕಿ, ಇಡೀ ಪ್ರದೇಶಕ್ಕೆ ಆವರಿಸಿದೆ. ಸ್ಥಳಕ್ಕೆ ಚಳ್ಳಕೆರೆಯಿಂದ ಬಂದ ಅಗ್ನಿಶಾಮಕ ಸಿಬ್ಬಂದಿ ಐದಾರು ಗಂಟೆಗಳ ಕಾಲ ಶ್ರಮಿಸಿ ಬೆಂಕಿಯನ್ನು ನಂದಿಸಿ ನಿಯಂತ್ರಣಕ್ಕೆ ತಂದರು.

ಸ್ಥಳದಲ್ಲಿ ಪರೀಕ್ಷೆಗಾಗಿ ತಂದಿರುವ ವಾಯುಪಡೆ ಹೆಲಿಕಾಪ್ಟರ್ ಸೇರಿದಂತೆ ಭಾರಿ ಮೊತ್ತದ ತಾಂತ್ರಿಕ ಸಾಧನಗಳಿವೆ. ಆದರೆ ಡಿಆರ್‌ಡಿಒ ಪರೀಕ್ಷಾ ಕೇಂದ್ರದಿಂದ ದೂರ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಿರುವುದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ. ಬೆಂಕಿಗೆ ನಿಖರ ಕಾರಣ ತಿಳಿದುಬಂದಿಲ್ಲ.

ಡಿಆರ್‌ಡಿಒ ಪ್ರದೇಶದಲ್ಲಿನ ಕುರುಚಲು ಕಾಡಿನಲ್ಲಿ ಚಿರತೆ, ಮೊಲ, ಕಾಡುಹಂದಿ, ಕೃಷ್ಣಮೃಗ, ಜಿಂಕೆ ಸೇರಿದಂತೆ ನಾನಾ ಜಾತಿಯ ಕಾಡು ಪ್ರಾಣಿಗಳು ವಾಸವಾಗಿವೆ. ಬೆಂಕಿಯಿಂದ ಕಾಡಿನಲ್ಲಿರುವ ನೂರಾರು ಗಿಡಗಳು ಹಾಗೂ ಹುಲ್ಲುಗಾವಲು ಸುಟ್ಟಿವೆ.

ಡಿಆರ್‌ಡಿಒ ಕ್ಯಾಂಪಸ್‌ನ ಆವರಣದಲ್ಲಿ ಬೆಂಕಿ ಕಾಣಿಸಿಕೊಂಡು ಕೆಲವು ಗಂಟೆಗಳ ಮೊದಲು ನೇರಲಗುಂಟೆ ಗ್ರಾಮ ವ್ಯಾಪ್ತಿಯ ಫೋಟಾನ್ ಸೂರ್ಯಕಿರಣ್ ಸೋಲಾರ್ ಕಂಪನಿಯ ಆವರಣದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದರಿಂದ ಆರಂಭವಾದ ಬೆಂಕಿ ಇಡೀ ಆವರಣಕ್ಕೆ ವ್ಯಾಪಿಸಿ ಸೋಲಾರ್ ಕೇಬಲ್‌ಗಳು, ವೈರ್‌ಗಳು ಸುಟ್ಟಿವೆ. ಇದರಿಂದ ₹ 2 ಲಕ್ಷ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

ಅಗ್ನಿ ಶಾಮಕ ಕೇಂದ್ರ ನನೆಗುದಿಗೆ

ನಾಯಕನಹಟ್ಟಿಗೆ 5 ಕಿ.ಮೀ. ದೂರದಲ್ಲಿ ಡಿಆರ್‌ಡಿಒ ಐಐಎಸ್‌ಸಿ ಬಿಆರ್‌ಸಿ ಸೇರಿದಂತೆ ಹಲವು ವೈಜ್ಞಾನಿಕ ಸಂಸ್ಥೆಗಳಿವೆ. ಚಳ್ಳಕೆರೆ ತಾಲ್ಲೂಕು ಕೇಂದ್ರದಿಂದ ಅಗ್ನಿಶಾಮಕ ದಳ ಬರುವುದು ವಿಳಂಬವಾಗುತ್ತಿದೆ. ನಾಯಕನಹಟ್ಟಿ ಪಟ್ಟಣದ ವ್ಯಾಪ್ತಿಯಲ್ಲಿ 45ಕ್ಕೂ ಹೆಚ್ಚು ಹಳ್ಳಿಗಳಿವೆ. ಇಲ್ಲಿ ಹಲವು ವರ್ಷಗಳಿಂದ ಅಗ್ನಿಶಾಮಕ ಕೇಂದ್ರ ಮಂಜೂರು ಮಾಡಬೇಕು ಎಂಬ ಒತ್ತಾಯವಿದೆ. ಅಗ್ನಿಶಾಮಕ ಕೇಂದ್ರಕ್ಕಾಗಿ ನಾಯಕನಹಟ್ಟಿ ಸಮೀಪದಲ್ಲಿ 3 ಎಕರೆ ಪ್ರದೇಶವನ್ನು ಮೀಸಲಿಡಲಾಗಿದೆ. ಆದರೆ ಅಗ್ನಿಶಾಮಕ ಕೇಂದ್ರಕ್ಕೆ ಯಾವ  ಸರ್ಕಾರಗಳಿಂದಲೂ ಮಂಜೂರಾತಿ ದೊರೆತಿಲ್ಲ. ಶೀಘ್ರ ಅಗ್ನಿಶಾಮಕ ಕೇಂದ್ರ ಮಂಜೂರು ಮಾಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT