ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ಲೆಕ್ಸ್, ಬ್ಯಾನರ್‌ ಅಬ್ಬರ: ಕಡಿವಾಣಕ್ಕೆ ತಾತ್ಸಾರ

ಧಾರ್ಮಿಕ –ರಾಜಕೀಯ ಸಮಾವೇಶ, ಉತ್ಸವ, ಪ್ರಮುಖರ ಜನ್ಮದಿನ, ಜಯಂತಿ, ಕ್ರೀಡಾಕೂಟಗಳ ವೇಳೆ ದಾರಿಯುದ್ದಕ್ಕೂ ಫ್ಲೆಕ್ಸ್ ಹಾವಳಿ
Last Updated 19 ಏಪ್ರಿಲ್ 2021, 3:57 IST
ಅಕ್ಷರ ಗಾತ್ರ

ಚಿತ್ರದುರ್ಗ: ನಗರದ ವಿವಿಧೆಡೆ ಅಳವಡಿಸಿದ ಫ್ಲೆಕ್ಸ್‌, ಬ್ಯಾನರ್‌ ಹಾಗೂ ಭಿತ್ತಿಚಿತ್ರಗಳು ವಾಹನ ಸವಾರರು ಮತ್ತು ಪಾದಚಾರಿಗಳ ಗಮನ ಸೆಳೆಯುವುದು ಸಾಮಾನ್ಯ. ಈ ವೇಳೆ ವಾಹನ ಚಾಲಕನ ಮನಸು ಕ್ಷಣಾರ್ಧದಲ್ಲಿ ಇವುಗಳ ಮೇಲೆ ಹರಿದರೆ ಅಪಘಾತ ಸಂಭವಿಸುವ ಸಾಧ್ಯತೆಯೇ ಹೆಚ್ಚು. ಹೀಗಿದ್ದರೂ ಈ ಹಾವಳಿ ತಡೆಯಲು ಇಂದಿಗೂ ಸಾಧ್ಯವಾಗಿಲ್ಲ.

ಮಳೆ–ಬಿರುಗಾಳಿಗೆ ನೆಲಕ್ಕುರುಳಿದ ಫ್ಲೆಕ್ಸ್‌ನಿಂದಾಗಿ ಬೆಂಗಳೂರಿನಲ್ಲಿ ಯುವಕನೊಬ್ಬ ಕಾಲಿಗೆ ಪೆಟ್ಟು ಮಾಡಿಕೊಂಡ ನಿದರ್ಶನ ನಮ್ಮ ಮುಂದಿದೆ. ಇಂತಹ ಘಟನೆಗಳಿಂದ ಕೆರಳಿದ ನ್ಯಾಯಾಲಯ, ಆಡಳಿತ ವ್ಯವಸ್ಥೆಯ ವಿರುದ್ಧ ಅಸಮಾಧಾನ ಹೊರಹಾಕಿತ್ತು. ಆದರೂ ಸ್ಥಳೀಯ ಆಡಳಿತ ಎಚ್ಚೆತ್ತುಕೊಂಡಂತೆ ಕಾಣುತ್ತಿಲ್ಲ. ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಯಲ್ಲಿ ಅನಧಿಕೃತ ಫ್ಲೆಕ್ಸ್‌, ಬ್ಯಾನರ್‌ ಹಾವಳಿ ಹೆಚ್ಚುತ್ತಿದ್ದರೂ ಕಡಿವಾಣ ಬಿದ್ದಿಲ್ಲ.

ಧಾರ್ಮಿಕ ಸಮಾರಂಭಗಳು ಜಾಹೀರಾತು ವ್ಯಾಮೋಹಕ್ಕೆ ಸಿಲುಕಿವೆ. ಸಮಾಜ ಸುಧಾರಕರ ಜಯಂತಿ ಪ್ರತಿಷ್ಠೆಯ ಸಂಗತಿಗಳಾಗಿ ಪರಿವರ್ತನೆ ಹೊಂದಿವೆ. ಹೀಗಾಗಿ ಉತ್ಸವ, ಹಬ್ಬ, ಜಯಂತಿಗಳ ವೇಳೆಯಲ್ಲಿ ಪ್ರಮುಖ ರಸ್ತೆಗಳ ಬಣ್ಣಗಳೇ ಬದಲಾಗುತ್ತವೆ. ರಸ್ತೆ ವಿಭಜಕದ ಕಂಬಿಗಳು ಇದಕ್ಕೆ ಹೊರತಾಗಿಲ್ಲ.

ಇನ್ನು ರಾಜಕೀಯ ಮುಖಂಡರ ಜನ್ಮದಿನ, ಸಮಾವೇಶ, ಕ್ರೀಡಾಕೂಟಗಳ ಸಂದರ್ಭದಲ್ಲಿ ಕಣ್ಣು ಹಾಯಿಸಿದಷ್ಟೂ ದೂರ ಫ್ಲೆಕ್ಸ್‌, ಬಂಟಿಂಗ್ಸ್‌ಗಳೇ ರಾರಾಜಿಸುತ್ತವೆ. ಜನರ ಗಮನ ಸೆಳೆಯುವ ಪ್ರಚಾರ ಸಾಮಗ್ರಿಗಳು ಜೀವಬಲಿಗೆ ಕಾಯುತ್ತಿರುವಂತೆ ಗೋಚರಿಸುತ್ತಿವೆ. ನಗರದ ಸೌಂದರ್ಯಕ್ಕೆ ಧಕ್ಕೆಯುಂಟು ಮಾಡುವ ಇವುಗಳ ಹಾವಳಿಗೆ ಕಡಿವಾಣ ಹಾಕುವ ಕೆಲಸ ನಾಮಕಾವಸ್ಥೆಗೆ ಸೀಮಿತವಾಗಿದೆ.

ದಶಕದಿಂದ ಈಚೆಗೆ ಪ್ರಚಾರದ ಗೀಳಿಗೆ ಬಿದ್ದ ಮುಖಂಡರು ಹಾಗೂ ಅವರ ಬೆಂಬಲಿಗರು ಶುಭಾಶಯ ಕೋರುವ ನೆಪದಲ್ಲಿ ಎಲ್ಲೆಂದರಲ್ಲಿ ಫ್ಲೆಕ್ಸ್‌ ಹಾಗೂ ಬ್ಯಾನರ್‌ ಹಾಕುತ್ತಿದ್ದಾರೆ. ಜನ್ಮ ದಿನಾಚರಣೆ, ಹಬ್ಬಗಳಲ್ಲಿ ಇದು ಮಾಮೂಲಿ ಎಂಬಂತಾಗಿದೆ. ಇದು ಪೈಪೋಟಿಗೂ ಎಡೆ ಮಾಡಿಕೊಟ್ಟಿದೆ.

ಬೆಂಬಲಿಗರನ್ನು ಕರೆದು ಬುದ್ಧಿ ಹೇಳಬೇಕಾದ ನಾಯಕರು ಫ್ಲೆಕ್ಸ್‌ ನೋಡಿ ಬೀಗುತ್ತಾರೆ. ಹಾದಿ–ಬೀದಿಗಳಲ್ಲಿ ಭಾವಚಿತ್ರ ಕಂಡು ಪುಳಕಿತಗೊಳ್ಳುತ್ತಾರೆ. ಕಾನೂನಾತ್ಮಕವಾಗಿ ಇದಕ್ಕೆ ಕಡಿವಾಣ ಹಾಕುವ ಅಧಿಕಾರ ಹೊಂದಿರುವ ನಗರ ಸ್ಥಳೀಯ ಸಂಸ್ಥೆಗಳು ಮಾತ್ರ ಜಾಣ ಕುರುಡು ಪ್ರದರ್ಶಿಸುತ್ತಿವೆ.

ಚಿತ್ರದುರ್ಗದ ಮಹಾತ್ಮ ಗಾಂಧಿ ವೃತ್ತ, ಅಂಬೇಡ್ಕರ್‌ ವೃತ್ತ, ಕನಕ ವೃತ್ತ, ಜೆಎಂಐಟಿ ಸರ್ಕಲ್‌, ಚಳ್ಳಕೆರೆ ಗೇಟ್‌ ಸೇರಿ ಹಲವು ಭಾಗಗಳಲ್ಲಿ ಫ್ಲೆಕ್ಸ್‌ ಹಾವಳಿ ವಿಪರೀತವಾಗಿದೆ. ಕೆಲ ಪ್ರಮುಖ ವೃತ್ತಗಳಲ್ಲಿ ನಗರಸಭೆ ಜಾಹೀರಾತು ಫಲಕಗಳನ್ನು ಅಧಿಕೃತವಾಗಿ ಅಳವಡಿಸಿದೆ. ಇವುಗಳೊಂದಿಗೆ ಅನಧಿಕೃತ ಫ್ಲೆಕ್ಸ್‌ ಅಳವಡಿಸುವ ಮೂಲಕ ನಗರದ ಸೌಂದರ್ಯ ಹಾಳು ಮಾಡುವ ಪ್ರಯತ್ನ ರಾಜಾರೋಷವಾಗಿ ನಡೆಯುತ್ತಿದೆ. ಆಕಸ್ಮಿಕವಾಗಿ ಇವು ವಾಹನ ಚಾಲನೆಗೆ ತೊಂದರೆ ಉಂಟು ಮಾಡಿದರೆ ಬೇರೆಡೆ ಸಂಭವಿಸಿದ ದುರಂತ ಚಿತ್ರದುರ್ಗದಲ್ಲೂ ನಡೆದರೆ ಅಚ್ಚರಿಪಡಬೇಕಿಲ್ಲ.

ಜಿಲ್ಲಾಧಿಕಾರಿ ಕಚೇರಿ ಸಮೀಪದ ಒನಕೆ ಓಬವ್ವ ವೃತ್ತದಲ್ಲಿ ನಿತ್ಯವೂ ಒಂದಿಲ್ಲೊಂದು ಫ್ಲೆಕ್ಸ್‌ ಕಾಣುತ್ತದೆ. ಪಕ್ಕದಲ್ಲೇ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯ ಅಧಿಕೃತ ನಿವಾಸವೂ ಇದೆ. ನಗರದ ಸೌಂದರ್ಯಕ್ಕೆ ಧಕ್ಕೆ ತರುವವರಲ್ಲಿ ಯಾವ ಭಯವೂ ಇಲ್ಲ ಎಂಬುದಕ್ಕೆ ಇದೊಂದು ನಿದರ್ಶನವಷ್ಟೇ.

ಅಸಹಾಯಕ ಪರಿಸ್ಥಿತಿ: ರಾಜಕೀಯ ನಾಯಕರ ಒತ್ತಡಕ್ಕೆ ಮಣಿದು ಸ್ಥಳೀಯ ಆಡಳಿತ ಕೈಚೆಲ್ಲಿ ಕುಳಿತಿರುವ ಪರಿಣಾಮ ಪೂರ್ವಾನುಮತಿ ಪಡೆಯದೇ ಅನಧಿಕೃತವಾಗಿ ಅಳವಡಿಸುವವರ ಸಂಖ್ಯೆ ಹೆಚ್ಚುತ್ತಿದೆ. ಇದರ ವಿರುದ್ಧ ಕ್ರಮ ಕೈಗೊಳ್ಳಲು ನಗರಸಭೆ ಅಧಿಕಾರಿಗಳು ಹಿಂದೇಟು ಹಾಕುವ ಪರಿಸ್ಥಿತಿ ಇದೆ. ಫ್ಲೆಕ್ಸ್‌ಗೆ ಬಳಸಿದ ಪ್ಲಾಸ್ಟಿಕ್‌ ಕೆಲವೇ ದಿನಗಳಲ್ಲಿ ಕಸದ ರಾಶಿ ಸೇರುತ್ತವೆ. ಇವುಗಳಿಂದ ಪರಿಸರಕ್ಕೆ ಹಾನಿಯುಂಟಾಗುತ್ತಿದೆ. ಇದನ್ನು ತಡೆಯಲು ಗಮನಹರಿಸುತ್ತಿಲ್ಲ.

ಪುಡಾರಿಗಳು, ವ್ಯಾಪಾರಸ್ಥರು ಅಳಡಿಸಿದ ಜಾಹೀರಾತು ಫಲಕಗಳ ವಿರುದ್ಧ ಸ್ಥಳೀಯ ಆಡಳಿತ ಕ್ರಮ ಕೈಗೊಂಡಿದೆ. ಅನಧಿಕೃತ ಪ್ರಚಾರದ ಫಲಕಗಳಿಗೆ ಕಡಿವಾಣ ಬಿದ್ದಲ್ಲಿ ಸ್ಥಳೀಯ ಸಂಸ್ಥೆಗಳ ಜಾಹೀರಾತು ಆದಾಯ ಹೆಚ್ಚಾಗುವ ಸಾಧ್ಯತೆ ಇದೆ.

ಕ್ರಿಮಿನಲ್ ಪ್ರಕರಣಕ್ಕೆ ಅರ್ಹ
ರಾಜ್ಯ ಸರ್ಕಾರ 2016ರಲ್ಲಿ ಫ್ಲೆಕ್ಸ್‌ಗಳಿಗೆ ನಿಷೇಧ ಹೇರಿದೆ. ಅನಧಿಕೃತವಾಗಿ ಫ್ಲೆಕ್ಸ್‌ ಅಳವಡಿಸುವ ವ್ಯಕ್ತಿಗಳ ವಿರುದ್ಧ ‘ಸಾರ್ವಜನಿಕ ಸ್ಥಳ ವಿರೂಪ ತಡೆ ಕಾಯ್ದೆ–1981’ ಅನ್ವಯ ಕಾನೂನು ಕ್ರಮ ಜರುಗಿಸಲು ಅವಕಾಶವಿದೆ. ಕ್ರಿಮಿನಲ್‌ ಸ್ವರೂಪದ ಪ್ರಕರಣವೆಂದು ಪರಿಗಣಿಸಲಾಗುತ್ತದೆ. ಆರು ತಿಂಗಳು ಜೈಲು ಹಾಗೂ ₹ 1 ಲಕ್ಷದವರೆಗೆ ದಂಡ ವಿಧಿಸುವ ಅವಕಾಶ ಕಾನೂನಿನಲ್ಲಿದೆ.

ನಗರ, ಪಟ್ಟಣದ ಸೌಂದರ್ಯಕ್ಕೆ ಧಕ್ಕೆಯಾಗದ ರೀತಿಯಲ್ಲಿ ಜಾಹೀರಾತು ಫಲಕ ಅಳವಡಿಕೆಗೆ ಸ್ಥಳೀಯ ಸಂಸ್ಥೆ ಸ್ಥಳ ನಿಗದಿಪಡಿಸಿದೆ. ಆಯ್ದ ಸ್ಥಳಗಳಲ್ಲಿ ಹೋರ್ಡಿಂಗ್ಸ್‌ಗಳನ್ನು ಹಾಕಲಾಗಿದೆ. ಇವುಗಳನ್ನು ಗುತ್ತಿಗೆ ಆಧಾರದ ಮೇಲೆ ನೀಡಲಾಗುತ್ತದೆ. ಅಳತೆ, ಸ್ಥಳ ಹಾಗೂ ದಿನಗಳ ಆಧಾರದ ಮೇರೆಗೆ ಶುಲ್ಕ ನಿಗದಿಪಡಿಸಲಾಗುತ್ತದೆ.

ಅಪಘಾತಕ್ಕೆ ಆಹ್ವಾನಿಸುವ ಫ್ಲೆಕ್ಸ್‌
ಹೊಸದುರ್ಗ:
ಪಟ್ಟಣದಲ್ಲಿ ಫ್ಲೆಕ್ಸ್‌ ಹಾವಳಿ ಹೆಚ್ಚಾಗುತ್ತಿದ್ದು, ಅಪಘಾತಕ್ಕೆ ಆಹ್ವಾನ ನೀಡಿದಂತಾಗುತ್ತಿದೆ.

ಇಲ್ಲಿನ ಟಿ.ಬಿ. ವೃತ್ತದಲ್ಲಿ ಹೊಳಲ್ಕೆರೆ, ತರೀಕೆರೆ ಮುಖ್ಯರಸ್ತೆ ಹಾಗೂ ವಿದ್ಯಾನಗರ, ಎನ್‌ಇಎಸ್‌ ಬಡಾವಣೆ ರಸ್ತೆಗಳು ಒಂದುಗೂಡುವಂತಹ ರಸ್ತೆಯ ಬದಿಯಲ್ಲಿ ಲೋಕೋಪಯೋಗಿ ಇಲಾಖೆಯವರು ಹಾಕಿರುವ ಮಾರ್ಗಸೂಚಿ ಫಲಕ ಕಾಣಿಸದಂತೆ ಶಾಲಾ–ಕಾಲೇಜು ಪ್ರವೇಶಾತಿ, ಅಂಗಡಿ, ಆಸ್ಪತ್ರೆಗಳ ಪ್ರಾರಂಭ, ವಿವಿಧ ಹಬ್ಬ, ಜನ್ಮದಿನ, ಜಾತ್ರೆ, ದೇಗುಲ ಲೋಕಾರ್ಪಣೆ, ವಿವಿಧ ಕಾಮಗಾರಿ ಸೇರಿ ಇನ್ನಿತರ ವಿಷಯಕ್ಕೆ ಸಂಬಂಧಿಸಿದಂತೆ ಶುಭಾಶಯ ಕೋರುವ ದೊಡ್ಡ, ದೊಡ್ಡ ಫ್ಲೆಕ್ಸ್‌ಗಳನ್ನು ಹಾಕಿದ್ದಾರೆ.

ಇದರಿಂದಾಗಿ ವಿದ್ಯಾನಗರದಿಂದ ಬರುವವರಿಗೆ ಹೊಳಲ್ಕೆರೆ ಕಡೆಯಿಂದ ಬರುವ ವಾಹನಗಳು ಕಾಣಿಸುವುದಿಲ್ಲ. ಹಾಗೆಯೇ ತರೀಕೆರೆ ಕಡೆಯಿಂದ ಬರುವ ವಾಹನಗಳಿಗೂ ತೊಂದರೆ ಉಂಟಾಗುತ್ತಿದೆ. ವಾಹನಗಳು ವೇಗವಾಗಿ ಬರುತ್ತಿರುವುದರಿಂದ ಅಪಘಾತಗಳು ಸಂಭವಿಸುತ್ತಿವೆ. ಸರ್ಕಾರಿ ಪಿಯು ಕಾಲೇಜು, ಬಿಇಒ ಕಚೇರಿ, ಪ್ರಧಾನ ಅಂಚೆ ಕಚೇರಿ ಕಾಂಪೌಂಡ್‌ಗೆ ಹೊಂದಿಕೊಂಡಂತೆ ಖಾಸಗಿ ಶಾಲಾ–ಕಾಲೇಜು ಪ್ರವೇಶಾತಿ ಸೇರಿ ಇನ್ನಿತರ ಸಭೆ, ಸಮಾರಂಭಗಳ ಫ್ಲೆಕ್ಸ್‌ಗಳನ್ನು ಸಾಕಷ್ಟು ಹಾಕಿರುತ್ತಾರೆ. ಫ್ಲೆಕ್ಸ್‌ ಹಾವಳಿಯು ಪಾದಚಾರಿ, ವಾಹನ ಸವಾರರಿಗೆ ಕಿರಿಕಿರಿ ಉಂಟಾಗುತ್ತಿರುವುದರಿಂದ ತುಂಬಾ ತೊಂದರೆಯಾಗುತ್ತಿದೆ.

ಮೊಳಕಾಲ್ಮುರು:ಕಳೆದ ವಿಧಾನಸಭಾ ಚುನಾವಣೆ ನಂತರ ಪಟ್ಟಣ ಸೇರಿ ತಾಲ್ಲೂಕಿನ ಪ್ರಮುಖ ಗ್ರಾಮಗಳಲ್ಲಿ ಫ್ಲೆಕ್ಸ್ ಹಾವಳಿ ಹೆಚ್ಚಿದೆ.

ಸಚಿವ ಬಿ.ಶ್ರೀರಾಮುಲು ಅವರಂತಹ ಪ್ರಭಾವಿ ನಾಯಕರು ಕಾಲಿಟ್ಟ ನಂತರ ರಾಜಕೀಯ ವಾತಾವರಣ ಬದಲಾಗಿದೆ. ರಾಜ್ಯ, ರಾಷ್ಟ್ರೀಯ ನಾಯಕರ ಜನ್ಮ ದಿನಾಚರಣೆ, ರಾಷ್ಟ್ರೀಯ ದಿನಾಚರಣೆ, ಜಾತ್ರೆಗಳು, ಸ್ಥಳೀಯ ನಾಯಕರಿಗೆ ಶುಭಾಶಯ ಕೋರಿ ಫ್ಲೆಕ್ಸ್ ಹಾಕುವುದು ಹೆಚ್ಚಾಗಿದೆ. ಇದಕ್ಕೆ ತಕ್ಕನಾಗಿ ವಿರೋಧ ಪಕ್ಷದವರೂ ಫ್ಲೆಕ್ಸ್ ಪ್ರಚಾರಕ್ಕೆ ಮುಂದಾಗಿದ್ದಾರೆ. ಮೊಳಕಾಲ್ಮುರು, ರಾಂಪುರ, ಹಾನಗಲ್ ಕ್ರಾಸ್, ಬಿ.ಜಿ. ಕೆರೆಯಲ್ಲಿ ಹೆಚ್ಚಾಗಿ ಫ್ಲೆಕ್ಸ್‌ ಹಾಕಲಾಗುತ್ತಿದೆ.

‘ಪಟ್ಟಣದಲ್ಲಿ ಫ್ಲೆಕ್ಸ್ ಹಾಕಲು ಪಟ್ಟಣ ಪಂಚಾಯಿತಿ ದರ ನಿಗದಿ ಮಾಡಿದೆ. ಸ್ವಂತ ಸ್ಥಳದಲ್ಲಿ ಹಾಕಿದಲ್ಲಿ ಪ್ರಚಾರ ದರ ಮಾತ್ರ ಪಡೆಯಲಾಗುತ್ತಿದೆ. ಸರ್ಕಾರಿ ಜಾಗದಲ್ಲಿ ಹಾಕಿದಲ್ಲಿ ಸ್ಥಳ ಮತ್ತು ಪ್ರಚಾರ ದರ ಪಡೆಯಲಾಗುತ್ತಿದೆ. ದಿನವಾರು ದರ ನಿಗದಿ ಮಾಡಲಾಗಿದೆ. ಸರ್ಕಾರ ಅಳತೆವಾರು ನಿಗದಿ ಮಾಡಿರುವ ದರ ಕಡ್ಡಾಯವಾಗಿ ಪಡೆಯಲಾಗುತ್ತಿದೆ’ ಎಂದು ಮುಖ್ಯಾಧಿಕಾರಿ ಕಾಂತರಾಜ್ ತಿಳಿಸಿದರು.

*
ಫ್ಲೆಕ್ಸ್‌, ಬ್ಯಾನರ್‌ ನೆಲಕ್ಕುರುಳಿ ಸಾರ್ವಜನಿಕರ ಮೇಲೆ ಬಿದ್ದು ಅನಾಹುತವಾದಲ್ಲಿ ಸಂಬಂಧಿಸಿದವರ ವಿರುದ್ಧ ಕಾನೂನು ಕ್ರಮಕ್ಕೆ ಅವಕಾಶವಿದೆ. ಅಳವಡಿಸಿದವರೇ ಸಂಪೂರ್ಣ ಜವಾಬ್ದಾರರು. ಅನಧಿಕೃತವಾಗಿ ಅಳವಡಿಸಿರುವುದನ್ನು ತೆರವುಗೊಳಿಸಲಾಗುವುದು. -ಜೆ.ಟಿ. ಹನುಮಂತರಾಜು, ನಗರಸಭೆ ಪೌರಾಯುಕ್ತ

*
ಪ್ಲೆಕ್ಸ್ ಗಾತ್ರಕ್ಕೆ ಅನುಗುಣವಾಗಿ ತೆರಿಗೆ ಪಾವತಿಸಿ, ಪುರಸಭೆಯಿಂದ ಅನುಮತಿ ಪಡೆದ ನಂತರವೇ ಫ್ಲೆಕ್ಸ್‌ ಹಾಕಬೇಕು. ಇಲ್ಲದಿದ್ದರೆ, ಶಿಸ್ತು ಕ್ರಮ ಕೈಗೊಳ್ಳಲಾಗುವುದು.
-ಆರ್‌. ರಾಧಾ, ಪುರಸಭೆಯ ಪ್ರಭಾರ ಮುಖ್ಯಾಧಿಕಾರಿ

*
ಪಟ್ಟಣದಲ್ಲಿ ಎಲ್ಲೆಂದರಲ್ಲಿ ಫ್ಲೆಕ್ಸ್‌ ಹಾಕುತ್ತಿರುವುದರಿಂದ ಜನರಿಗೆ ತುಂಬಾ ತೊಂದರೆಯಾಗುತ್ತಿದೆ. ಫ್ಲೆಕ್ಸ್‌ ಹಾವಳಿಗೆ ಸಂಪೂರ್ಣ ಕಡಿವಾಣ ಹಾಕಬೇಕು.
-ಟಿ.ಆರ್‌. ಬಸವರಾಜು, ಹೊಸದುರ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT