ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಯಕನಹಟ್ಟಿ: ಸದ್ದಿಲ್ಲದೇ ನಡೆಯುತ್ತಿದೆ ಅನ್ನದಾಸೋಹ

ಲಾಕ್‌ಡೌನ್‌ನಿಂದಾಗಿ ಊಟಕ್ಕೆ ಪರದಾಡುವ ಅನ್ಯರಾಜ್ಯದ ಟ್ರಕ್‌ ಚಾಲಕರು
Last Updated 3 ಜೂನ್ 2021, 5:11 IST
ಅಕ್ಷರ ಗಾತ್ರ

ನಾಯಕನಹಟ್ಟಿ: ಅಗತ್ಯ ವಸ್ತುಗಳನ್ನು ಸಾಗಿಸುವ ಕಾರಣ ರಾಜ್ಯದ ಬೇರೆ ಜಿಲ್ಲೆ ಮತ್ತು ಅನ್ಯರಾಜ್ಯಗಳಿಂದ ಬರುವ ಟ್ರಕ್‌ ಚಾಲಕರು ಹಾಗೂ ಕೊರೊನಾ ಸೋಂಕಿತರಿಗೆ ಉಪಾಹಾರ ನೀಡುವ ಸೇವೆ ಪಟ್ಟಣದಲ್ಲಿ ಸದ್ದಿಲ್ಲದೇ ನಡೆಯುತ್ತಿದೆ.

ನಾಯಕನಹಟ್ಟಿ ಎಂದಾಕ್ಷಣ ನೆನಪಾಗುವುದು ಐತಿಹಾಸಿಕ ಗುರುತಿಪ್ಪೇರುದ್ರಸ್ವಾಮಿ ಹೊರಮಠ ಮತ್ತು ಒಳಮಠ ದೇವಾಲಯಗಳು ಮತ್ತು ದೇವಾಲಯದಲ್ಲಿ ನಡೆಯುವ ದಾಸೋಹ ಸೇವೆ. ವರ್ಷದ ಎಲ್ಲ ದಿನಗಳಲ್ಲಿ ನಾಯಕನಹಟ್ಟಿ ಪಟ್ಟಣದಲ್ಲಿರುವ ದೇವಾಲಯದಲ್ಲಿ ಅನ್ನದಾಸೋಹ ಸೇವೆ ನಡೆಯುತ್ತದೆ. ಸದ್ಯ ಲಾಕ್‌ಡೌನ್‌ನಿಂದಾಗಿ ದೇವಾಲಯಗಳು ಮತ್ತು ದಾಸೋಹ ಸೇವೆ ಸ್ಥಗಿತವಾಗಿದೆ. ಇದರಿಂದ ನೂರಾರು ಜನರು ಪರಿತಪಿಸುತ್ತಿದ್ದಾರೆ. ಇದನ್ನು ಅರಿತ ಪಟ್ಟಣದ ಹಿರಿಯರು, ಸಮಾನ ಮನಸ್ಕರು ಹಾಗೂ ಯುವಕರು ತಂಡವೊಂದು ಪಟ್ಟಣದ ವಿದ್ಯಾವಿಕಾಸ ಶಾಲೆಯ ಆವರಣದಲ್ಲಿ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೇ ಸ್ವಯಂಪ್ರೇರಣೆಯಿಂದ ಕಳೆದ ವಾರದಿಂದ ಪಟ್ಟಣದಲ್ಲಿ ಅನ್ನದಾಸೋಹವನ್ನು ಆರಂಭಿಸಿದ್ದಾರೆ.

ಯುವಕರ ತಂಡ ಯಾರ ಬಳಿಯೂ ಹಣಕಾಸಿನ ಸಹಾಯವನ್ನು ಪಡೆಯದೇ ತಮ್ಮ ಕೈಯಲ್ಲಿದ್ದ ಹಣದಲ್ಲೇ ಉಪಾಹಾರ ಸೇವೆಯನ್ನು ಆರಂಭಿಸಿದ್ದಾರೆ. ದಿನ ಕಳೆದಂತೆ ಪಟ್ಟಣದ ಹಿರಿಯರು, ಸಮಾನ ಮನಸ್ಕರು, ವ್ಯಾಪಾರಿಗಳು, ಉದ್ಯಮಿಗಳು, ರೈತರು, ನಿತ್ಯ ಉಪಾಹಾರವನ್ನು ಕೋವಿಡ್ ನಿಯಮಾವಳಿಯಂತೆ ತಯಾರಿಸಲು ಮುಂದಾಗಿದ್ದಾರೆ.

ಹೀಗೆ ತಯಾರಾದ ಉಪಾಹಾರವನ್ನು ಯುವಕರ ಮತ್ತು ಶಾಲಾ ವಿದ್ಯಾರ್ಥಿಗಳ ತಂಡ ಸುಮಾರು 400ರಿಂದ 500 ಪೊಟ್ಟಣಗಳಲ್ಲಿ ವ್ಯವಸ್ಥಿತವಾಗಿ ಕಟ್ಟಿ ನೀರಿನ ಪೌಚ್‌ಗಳ ಜೊತೆಗೆ ಬೈಕ್ ಹಾಗೂ ಕಾರ್‌ಗಳಲ್ಲಿ ಅವುಗಳನ್ನು ತುಂಬಿಕೊಂಡು ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿರುವ ಕೋವಿಡ್ ರೋಗಿಗಳು, ಕರ್ತವ್ಯ ನಿರ್ವಹಿಸುವ ಸಿಬ್ಬಂದಿ, ಪೊಲೀಸರು, ಆಸ್ಪತ್ರೆಗೆ ಬರುವ ಜನರಿಗೆ, ಪಟ್ಟಣದಲ್ಲಿ ಕಂಡು ಬರುವ ಕಡುಬಡವರಿಗೆ, ವೃದ್ಧರಿಗೆ ಹಂಚುತ್ತಿದೆ.

ಟ್ರಕ್ ಚಾಲಕರಿಗೆ ನೆರವು: ನಾಯಕನಹಟ್ಟಿ ಪಟ್ಟಣದಲ್ಲಿ ರಾಜ್ಯಹೆದ್ದಾರಿ–45 ಹಾದು ಹೋಗಿದ್ದು, ದಾವಣಗೆರೆ, ಹೊಸಪೇಟೆ, ಮಹಾರಾಷ್ಟ್ರ, ಸೋಲಾಪುರ, ಬಳ್ಳಾರಿ, ಕೋಲಾರ, ಬೆಂಗಳೂರು ಸೇರಿದಂತೆ ವಿವಿಧ ಭಾಗಗಳಿಂದ ನಿತ್ಯ ಅವಶ್ಯಕ ವಸ್ತುಗಳನ್ನು ತುಂಬಿಕೊಂಡು ನೂರಾರು ಟ್ರಕ್‌ಗಳು ಹಾದುಹೋಗುತ್ತವೆ. ಜೊತೆಗೆ ಪೆಟ್ರೋಲ್ ಡೀಸೆಲ್ ಸಾಗಿಸುವ ಟ್ಯಾಂಕರ್‌ಗಳು ಸಂಚರಿಸುತ್ತವೆ. ಲಾಕ್‌ಡೌನ್‌ನಿಂದಾಗಿ ಹೋಟೆಲ್‌ಗಳು ಬಂದ್ ಇರುವುದರಿಂದ ಮಾರ್ಗ ಮಧ್ಯೆ ಎಲ್ಲಿಯೂ ಈ ಟ್ರಕ್ ಚಾಲಕರಿಗೆ ಊಟ ದೊರೆಯುವುದಿಲ್ಲ. ಇದನ್ನು ಅರಿತ ಯುವಕರ ತಂಡ ನೀರಿನ ಪೌಚ್‌ಗಳ ಜೊತೆಗೆ ಉಪಾಹಾರದ ಪೊಟ್ಟಣಗಳನ್ನು ಹಿಡಿದು ರಾಜ್ಯ ಹೆದ್ದಾರಿಯಲ್ಲಿ ನಿಂತು ಹೋಗಿ ಬರುವ ವಾಹನ ಚಾಲಕರಿಗೆ ನೀಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT