ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ: ವಿಷಾಹಾರ ಸೇವನೆಯಿಂದ ಒಂದೇ ಕುಟುಂಬದ ನಾಲ್ವರ ಸಾವು

ಲಂಬಾಣಿಹಟ್ಟಿಯಲ್ಲಿ ಹರಿಯಿತು ಕಣ್ಣೀರಧಾರೆ, ಭೂತಾಯಿ ಒಡಲು ಸೇರಿದ ನಾಲ್ವರು
Last Updated 15 ಜುಲೈ 2021, 4:16 IST
ಅಕ್ಷರ ಗಾತ್ರ

ಭರಮಸಾಗರ: ಹಲವು ದಿನಗಳಿಂದ ಕಣ್ಮರೆಯಾಗಿದ್ದ ಮಳೆ ಸೋನೆಯಂತೆ ನಿಧಾನವಾಗಿ ಸುರಿಯಲಾರಂಭಿಸಿತು. ಮನೆಯ ಮುಂದೆ ಇಟ್ಟಿದ್ದ ಶವಗಳ ಅಂತಿಮ ದರ್ಶನಕ್ಕೆ ಸಂಬಂಧಿಕರು, ಗ್ರಾಮಸ್ಥರ ದಂಡು ಹರಿದು ಬಂದಿತು.ಇಸಾಮುದ್ರ ಲಂಬಾಣಿಹಟ್ಟಿಯ ಜನರು ಸುರಿಸಿದ ಕಣ್ಣೀರ ಧಾರೆ ಮಳೆಯ ನೀರಿಗಿಂತ ಜೋರಾಗಿ ಹರಿಯಿತು.

ವಿಷಾಹಾರ ಸೇವಿಸಿ ಮೃತಪಟ್ಟ ಒಂದೇ ಕುಟುಂಬದ ನಾಲ್ವರ ಅಂತ್ಯಕ್ರಿಯೆ ಬುಧವಾರ ನೆರವೇರಿತು. ತಿಪ್ಪಾನಾಯ್ಕ ಅವರ ಜಮೀನಿನಲ್ಲೇ ನಾಲ್ವರೂ ಭೂತಾಯಿ ಒಡಲು ಸೇರಿದರು. ನಾಲ್ಕು ಪ್ರತ್ಯೇಕ ಕುಣಿಗಳಲ್ಲಿ ನಾಲ್ವರನ್ನು ಹೂಳಲಾಯಿತು. ಪೊಲೀಸರು ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಲಂಬಾಣಿ ಸಮುದಾಯದ ವಿಧಿವಿಧಾನದ ಪ್ರಕಾರ ಅಂತ್ಯಕ್ರಿಯೆ ನಡೆಯಿತು.

ಮುದ್ದೆ ಉಂಡು ಮಲಗಿದ್ದ ಒಂದೇ ಕುಟುಂಬದ ನಾಲ್ವರು ಮಂಗಳವಾರ ಮೃತಪಟ್ಟಿದ್ದರು. ತಿಪ್ಪಾನಾಯ್ಕ, ಪತ್ನಿ ಸುಧಾಬಾಯಿ, ತಾಯಿ ಗುಂಡಿಬಾಯಿ ಹಾಗೂ ಪುತ್ರಿ ರಮ್ಯಾ ಮೃತಪಟ್ಟಿದ್ದು, ಪುತ್ರ ರಾಹುಲ್‌ ದಾವಣಗೆರೆಯ ಎಸ್‌ಎಸ್‌ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮುದ್ದೆ ಊಟ ಮಾಡದೇ ಆರೋಗ್ಯವಾಗಿರುವ ಮತ್ತೊಬ್ಬ ಪುತ್ರಿ ರಕ್ಷಿತಾ ಆಘಾತಕ್ಕೆ ಒಳಗಾಗಿದ್ದಾಳೆ. ಚಿಕ್ಕಪ್ಪ ಹಾಗೂ ಸಂಬಂಧಿಕರ ನೆರವಿನೊಂದಿಗೆ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದಳು.

ತಿಪ್ಪಾನಾಯ್ಕ, ಸುಧಾಬಾಯಿ ಹಾಗೂ ಗುಂಡಿಬಾಯಿ ಅವರ ಮೃತದೇಹಗಳನ್ನು ಮಂಗಳವಾರ ರಾತ್ರಿ 7.30ಕ್ಕೆ ಗ್ರಾಮಕ್ಕೆ ತರಲಾಯಿತು. ಅದಾಗಲೇ ದಾವಣಗೆರೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಮ್ಯಾ ಕೂಡ ಮೃತಪಟ್ಟಿರುವ ಮಾಹಿತಿ ಬಂದಿತ್ತು. ರಮ್ಯಾ ಮೃತದೇಹದ ಮರಣೋತ್ತರ ಪರೀಕ್ಷೆ ಮುಗಿಸಿ ಗ್ರಾಮಕ್ಕೆ ತರುವುದು ವಿಳಂಬವಾಯಿತು. ಮಧ್ಯರಾತ್ರಿ ಬಂದ ಮೃತದೇಹವನ್ನು ತಾಯಿಯ ಪಕ್ಕದಲ್ಲಿ ಇಡಲಾಯಿತು. ಮನೆಯ ಮುಂಭಾಗದಲ್ಲಿಯೇ ಬೆಳಿಗ್ಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಯಿತು.

ತಿಪ್ಪಾನಾಯ್ಕ ಅವರ ಸಂಬಂಧಿಕರು ಹಾಗೂ ಗ್ರಾಮಸ್ಥರು ಮೃತರ ದರ್ಶನ ಪಡೆಯಲು ಧಾವಿಸಿದರು. ಹೂಹಾರಗಳನ್ನು ಹಾಕಿ ಬಿಕ್ಕಳಿಸಿ ಅತ್ತರು. ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಇಡೀ ಗ್ರಾಮ ಮೌನಕ್ಕೆ ಶರಣಾಗಿತ್ತು. ದುಃಖದ ಸಂದರ್ಭದಲ್ಲಿ ಹೇಳುವ ಲಂಬಾಣಿ ಗೀತೆಗಳು ಸಾವಿನ ಮನೆಯಲ್ಲಿಅನುರಣಿಸುತ್ತಿದ್ದವು.

ಮನೆಯಿಂದ ಅಂದಾಜು ಮುಕ್ಕಾಲು ಕಿ.ಮೀ ದೂರದ ಜಮೀನಿನಲ್ಲೇ ಅಂತ್ಯಕ್ರಿಯೆಗೆ ವ್ಯವಸ್ಥೆ ಮಾಡಲಾಗಿತ್ತು. ಮೆಕ್ಕೆಜೋಳದ ಜಮೀನಿನಲ್ಲಿ ಜೆಸಿಬಿ ಬಳಸಿ ನಾಲ್ಕು ಕುಣಿಗಳನ್ನು ನಿರ್ಮಿಸಲಾಗಿತ್ತು. ನಾಲ್ವರ ಶವಗಳನ್ನು ಟ್ರ್ಯಾಕ್ಟರ್‌ ಮೂಲಕ ಶವಸಂಸ್ಕಾರದ ಸ್ಥಳಕ್ಕೆ ತರುವ ವ್ಯವಸ್ಥೆ ಮಾಡಲಾಯಿತು. ಜಿಲ್ಲಾಧಿಕಾರಿ ಕವಿತಾ ಎಸ್‌. ಮನ್ನಿಕೇರಿ ಹಾಗೂ ತಹಶೀಲ್ದಾರ್ ವೆಂಕಟೇಶಯ್ಯ ಅವರೂ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡರು. ಪೊಲೀಸರ ಸಮ್ಮುಖದಲ್ಲಿಯೇ ಅಂತ್ಯಕ್ರಿಯೆ ನೆರವೇರಿತು. ಗ್ರಾಮದಲ್ಲಿ ಪೊಲೀಸ್‌ ತುಕಡಿಯೊಂದನ್ನು ನಿಯೋಜಿಸಲಾಗಿದೆ.

‘ಜೀವಿಸುವುದಕ್ಕಾಗಿ ತಿಂದ ಆಹಾರವೇ ಮೃತ್ಯುರೂಪ ತಳೆದು ನಾಲ್ವರನ್ನು ಭಕ್ಷಿಸಿತೇ’ ಎಂಬ ಮಾತುಗಳು ಕೇಳಿಬಂದವು. ‘ಸಾವಿಗೆ ಬೇರೆಯೇ ಕಾರಣವಿರಬಹುದೇ’ ಎಂಬ ಅನುಮಾನಗಳೂ ಅಂತ್ಯಕ್ರಿಯೆಗೆ ಬಂದವರಿಂದ ವ್ಯಕ್ತವಾಗುತ್ತಿದ್ದವು. ಇಸಾಮುದ್ರ ಗ್ರಾಮದ ಪ್ರೌಢಶಾಲೆಯ ವಿದ್ಯಾರ್ಥಿನಿಯರು ರಮ್ಯಾ ದರ್ಶನ ಪಡೆದು ದುಃಖಿತರಾದರು. ಎಲ್ಲರಿಗೂ ಉತ್ತಮ ಗೆಳತಿಯಾಗಿದ್ದಳು ಎಂದು ನೆನಪಿಸಿಕೊಂಡರು.

ಅತಿ ಪ್ರೀತಿಯಿಂದ ಆರೈಕೆಮಾಡಿದ ಜಾನುವಾರುಗಳು ಮನೆಯ ಜಗುಲಿಯಲ್ಲಿ ಮೌನಕ್ಕೆ ಶರಣಾಗಿದ್ದವು. ಹುಲ್ಲು ಹಾಕುವುದು, ಹಾಲು ಕರೆಯುತ್ತಿದ್ದ ಕುಟುಂಬದ ಸದಸ್ಯರ ಮುಖವನ್ನು ಕಾಣದೇ ಆತಂಕಕ್ಕೊಳಗಾದಂತೆ ಕಂಡುಬಂದವು.

₹ 2 ಲಕ್ಷ ನೆರವು
ಬುಧವಾರ ಬೆಳಿಗ್ಗೆ ಗ್ರಾಮಕ್ಕೆ ಭೇಟಿ ನೀಡಿದ ಶಾಸಕ ಎಂ. ಚಂದ್ರಪ್ಪ ಶೋಕತಪ್ತ ಬಂಧುಗಳಿಗೆ ಹಾಗೂ ಮೃತರ ಪುತ್ರಿ ರಕ್ಷಿತಾಗೆ ಸಾಂತ್ವನ ಹೇಳಿದರು. ವೈಯಕ್ತಿಕವಾಗಿ ಕುಟುಂಬಕ್ಕೆ ₹ 2 ಲಕ್ಷ ನೆರವು ನೀಡಿದರು.

ತಿಪ್ಪಾನಾಯ್ಕ ಅವರ ಸಹೋದರ ಮಂಜು ನಾಯ್ಕ ಅವರಿಗೆ ನೆರವಿನ ಹಣವನ್ನು ಹಸ್ತಾಂತರಿಸಿದರು. ಆಸ್ಪತ್ರೆಯಲ್ಲಿ ಇರುವ ರಾಹುಲ್ ಚಿಕಿತ್ಸೆ ಹಾಗೂ ಅಂತ್ಯಸಂಸ್ಕಾರಕ್ಕೆ ಬಳಕೆ ಮಾಡುವಂತೆ ಹೇಳಿದರು. ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಪರಿಹಾರ ದೊರಕಿಸಿಕೊಡುವುದಾಗಿ ಭರವಸೆ ನೀಡಿದರು.

ಸಾವಿನ ಕಾರಣ: ಶೀಘ್ರ ಹೊರಬೀಳದು
ಅನುಮಾನಾಸ್ಪದ ಸಾವಿನ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು, ‘ಸಾವಿನ ನಿಖರ ಕಾರಣ ತಿಳಿಸಲು ತಡವಾಗುವ ಸಾಧ್ಯತೆ ಇದೆ. ಹಲವು ದಿನಗಳ ಕಾಲ ಈ ಅನುಮಾನಕ್ಕೆ ಉತ್ತರ ಸಿಗುವುದಿಲ್ಲ. ಮರಣೋತ್ತರ ಪರೀಕ್ಷೆ ಚಿತ್ರದುರ್ಗ ಹಾಗೂ ದಾವಣಗೆರೆಯಲ್ಲಿ ನಡೆದಿದೆ. ನಾಲ್ವರ ವರದಿಯನ್ನು ಸೇರಿಸಿ ವಿಶ್ಲೇಷಣೆ ಮಾಡಲಾಗುತ್ತದೆ. ಸೋಮವಾರ ರಾತ್ರಿ ಸೇವಿಸಿದ ಆಹಾರದ ಮಾದರಿಗಳನ್ನು ಮೈಸೂರಿನ ಕೇಂದ್ರೀಯ ಆಹಾರ ತಂತ್ರಜ್ಞಾನ ಮತ್ತು ಸಂಶೋಧನಾ ಸಂಸ್ಥೆ (ಸಿಎಫ್‌ಟಿಆರ್‌ಐ) ಪ್ರಯೋಗಾಲಯಕ್ಕೆ ರವಾನೆ ಮಾಡಲಾಗಿದೆ. ಎರಡೂ ವರದಿ ಕೈಸೇರಿದ ಬಳಿಕ ನಿಖರ ಕಾರಣ ಗೊತ್ತಾಗುತ್ತದೆ’ ಎನ್ನುತ್ತಾರೆ ಪೊಲೀಸ್‌ ಅಧಿಕಾರಿಗಳು.

***
ಸಾವಿನ ತನಿಖೆ ನಡೆಯುತ್ತಿದೆ. ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಮರಣೋತ್ತರ ಪರೀಕ್ಷೆ ಹಾಗೂ ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಬರಲು ಇನ್ನೂ ಕೆಲ ದಿನ ಆಗಬಹುದು.
-ಜಿ. ರಾಧಿಕಾ, ಎಸ್‌ಪಿ

***

ಗ್ರಾಮದಲ್ಲಿ ಯಾವುದೇ ಸಾಂಕ್ರಾಮಿಕ ರೋಗ ಹರಡಿಲ್ಲ. ವಿಷಾಹಾರ ಸೇವನೆಯಿಂದ ಸಾವು ಸಂಭವಿಸಿದ ಸಾಧ್ಯತೆ ಹೆಚ್ಚು. ಅವರು ಸೇವಿಸಿದ ಆಹಾರ ಪರೀಕ್ಷಿಸಲಾಗುತ್ತಿದೆ. ಗ್ರಾಮಸ್ಥರು ಭಯಪಡುವ ಅಗತ್ಯವಿಲ್ಲ.
–ಡಾ.ರಂಗನಾಥ್, ಜಿಲ್ಲಾ ಆರೋಗ್ಯಾಧಿಕಾರಿ

***

ಪ್ರಯೋಗಾಲಯದ ವರದಿ ಬರುವವರೆಗೆ ಸಾವಿನ ಕಾರಣ ತಿಳಿಯದು. ಮೃತರ ಅಂತ್ಯಕ್ರಿಯೆಗೆ ನೆರವು ನೀಡಲಾಗಿದೆ. ಪರಿಹಾರದ ಬಗ್ಗೆ ಸರ್ಕಾರಕ್ಕೆ ಶಿಫಾರಸು ಮಾಡಲು ಆಲೋಚಿಸಲಾಗುತ್ತಿದೆ.
–ಕವಿತಾ ಎಸ್‌.ಮನ್ನಿಕೇರಿ, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT