ಬುಧವಾರ, ಡಿಸೆಂಬರ್ 8, 2021
27 °C
ರಸಗೊಬ್ಬರಕ್ಕೆ ಹೆಚ್ಚುತ್ತಿರುವ ಬೇಡಿಕೆ, ದಾಸ್ತಾನು ಖಾಲಿ

ಚಿತ್ರದುರ್ಗ | ಯೂರಿಯಾಕ್ಕಾಗಿ ಕೃಷಿ ಇಲಾಖೆಗೆ ಮುತ್ತಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಯೂರಿಯಾ ರಸಗೊಬ್ಬರ ಸಿಗದಿರುವುದರಿಂದ ಆಕ್ರೋಶಗೊಂಡ ನೂರಾರು ರೈತರು ಇಲ್ಲಿನ ಕೃಷಿ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಲು ಮಂಗಳವಾರ ಪ್ರಯತ್ನಿಸಿದರು. ಪರಿಸ್ಥಿತಿಯನ್ನು ನಿಯಂತ್ರಿಸಿದ ಪೊಲೀಸರು ರೈತರ ಮನವೊಲಿಸಿದರು.

ಎರಡು-ಮೂರು ದಿನಗಳಿಂದ ಯೂರಿಯಾ ರಸಗೊಬ್ಬರಕ್ಕೆ ತಾಲ್ಲೂಕು ವ್ಯವಸಾಯ ಉತ್ಪನ್ನ ಸಹಕಾರ ಮಾರಾಟ ಸಂಘದ ಮುಖ್ಯ ಕಚೇರಿಗೆ ರೈತರು ಅಲೆದು ಹೈರಾಣಾಗಿದ್ದಾರೆ. ಚೀಟಿ ಇಲ್ಲದವರಿಗೆ ಗೊಬ್ಬರ ಸಿಗುತ್ತಿಲ್ಲ. ‘ದಾಸ್ತಾನು ಖಾಲಿ’ ಎಂಬ ನಾಮಫಲಕ ನೋಡಿ ರೈತರು ಮತ್ತಷ್ಟು ಆಕ್ರೋಶಗೊಂಡಿದ್ದರು.

ರಸಗೊಬ್ಬರ ಪಡೆಯಲು ಪ್ರತಿ ದಿನ ನಸುಕಿನ 5 ರಿಂದಲೇ ರೈತರು ಸಂಘದ ಕಚೇರಿ ಮುಂದೆ ಸರದಿಯಲ್ಲಿ ನಿಲ್ಲುತ್ತಿದ್ದಾರೆ. ಹಲವು ಗ್ರಾಮಗಳಿಂದ ಬಂದಿದ್ದ 500ಕ್ಕೂ ಹೆಚ್ಚು ರೈತರು ಮಂಗಳವಾರ ಕೂಡ ರಸಗೊಬ್ಬರಕ್ಕೆ ಮುಗಿಬಿದ್ದಿದ್ದರು. ನೂಕುನುಗ್ಗಲು ನಿಯಂತ್ರಿಸುವ ಕಾರಣಕ್ಕಾಗಿ ಕೃಷಿ ಇಲಾಖೆ ಹಾಗೂ ಟಿಎಪಿಸಿಎಂಎಸ್‌ ಮುಂಭಾಗ ಪೊಲೀಸರನ್ನು ನಿಯೋಜಿಸಲಾಗಿದೆ.

2 ಸಾವಿರ ಚೀಲ ವಿತರಿಸಿದ್ದೇವೆ: ‘ರೈತರಿಗೆ ತೊಂದರೆ ಆಗಬಾರದು ಎಂಬ ಉದ್ದೇಶದಿಂದ ಒಂದು ತಿಂಗಳಿನಿಂದ ಯೂರಿಯಾ ರಸಗೊಬ್ಬರ ವಿತರಿಸಲು ಕ್ರಮ ಕೈಗೊಂಡಿದ್ದೇವೆ. ಚಿತ್ರದುರ್ಗದಲ್ಲಿ ಒಂದು ಸಾವಿರ, ಭರಮಸಾಗರದಲ್ಲಿ 600, ಸಿರಿಗೆರೆ ವೃತ್ತದ ಸಮೀಪ 400 ಚೀಲ ವಿತರಿಸಲಾಗಿದೆ’ ಎಂದು ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕಿ ಭಾರತಮ್ಮ ತಿಳಿಸಿದರು.

‘ಗೊಂದಲ ಉಂಟಾಗಬಾರದು ಎಂಬ ಕಾರಣಕ್ಕಾಗಿ ಚೀಟಿ ಹಾಗೂ ಗೊಬ್ಬರ ವಿತರಿಸುವ ಸ್ಥಳಗಳಲ್ಲಿ ಅಧಿಕಾರಿಗಳನ್ನು ನಿಯೋಜಿಸಿದ್ದೇವೆ. ಉತ್ತಮ ಮಳೆ ಆಗುತ್ತಿರುವುದರಿಂದ ರೈತರಿಗೆ ಗೊಬ್ಬರ ಅನಿವಾರ್ಯವಾಗಿದೆ. ಕೊರತೆ ಉಂಟಾಗಬಹುದು ಎಂಬ ಆತಂಕದಲ್ಲಿ ಮುಗಿಬಿಳುತ್ತಿದ್ದಾರೆ’ ಎಂದು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು