ಶನಿವಾರ, ಜೂನ್ 25, 2022
24 °C

ಹೊಳಲ್ಕೆರೆ: 6 ಲಕ್ಷ ಸಸಿ ಬೆಳೆಸಲು ಮುಂದಾದ ಅರಣ್ಯ ಇಲಾಖೆ

ಸಾಂತೇನಹಳ್ಳಿ ಸಂದೇಶ್ ಗೌಡ Updated:

ಅಕ್ಷರ ಗಾತ್ರ : | |

Prajavani

ಹೊಳಲ್ಕೆರೆ: ಸಾಮಾಜಿಕ ಹಾಗೂ ಪ್ರಾದೇಶಿಕ ವಲಯ ಅರಣ್ಯ ಇಲಾಖೆಗಳು ಈ ವರ್ಷ ತಾಲ್ಲೂಕಿನಲ್ಲಿ ಸುಮಾರು 6 ಲಕ್ಷ ಸಸಿಗಳನ್ನು ಬೆಳೆಸುವ ಗುರಿ ಹೊಂದಿದ್ದು, ಈಗಾಗಲೇ ಸಸಿ ನೆಡುವ ಕಾರ್ಯ ಆರಂಭಗೊಂಡಿದೆ.

‘ಸಾಮಾಜಿಕ ಅರಣ್ಯ ಇಲಾಖೆಯಿಂದ ಹನುಮಂತ ದೇವರ ಕಣಿವೆಯಲ್ಲಿಯ ನರ್ಸರಿಯಲ್ಲಿ 1.90 ಲಕ್ಷ ವಿವಿಧ ಜಾತಿಯ ಸಸಿಗಳನ್ನು ಬೆಳೆಸಿದ್ದು, ನಾಟಿಗೆ ಸಿದ್ಧವಾಗಿವೆ. 13,000 ಶ್ರೀಗಂಧ, 8,500 ರಕ್ತಚಂದನ, 9,500 ಹೆಬ್ಬೇವು, 42,000 ತೇಗ, 20,000 ಸಿಲ್ವರ್, 18,000 ನುಗ್ಗೆ ಹಾಗೂ ಪೇರಲೆ, ಹೊಂಗೆ, ನೇರಳೆ, ಸೀತಾಫಲ, ಮಾವು, ನಿಂಬೆ, ನುಗ್ಗೆ, ಕರಿಬೇವು, ಪಪ್ಪಾಯ ಸೇರಿ 15,000 ಸಸಿಗಳನ್ನು ಬೆಳೆಸಲಾಗಿದೆ. ಇದರಲ್ಲಿ ರೈತರಿಗೆ 50,000 ಸಸಿಗಳನ್ನು ಉಚಿತವಾಗಿ ವಿತರಿಸುವ ಗುರಿ ಇದೆ. ನರೇಗಾ ಯೋಜನೆಯಲ್ಲಿ ಸಸಿ ಬೆಳೆಸಲು ಅವಕಾಶ ಇದ್ದು, ಗುಂಡಿ ತೋಡಿಸುವುದರಿಂದ ಸಸಿ ನಾಟಿ ಮಾಡಿ, ನಿರ್ವಹಣೆ ಮಾಡಿ ಕೂಲಿ ಹಣ ಪಡೆಯಬಹುದು’ ಎಂದು ಸಾಮಾಜಿಕ ವಲಯ ಅರಣ್ಯಾಧಿಕಾರಿ ಬಹುಗುಣ ತಿಳಿಸಿದ್ದಾರೆ.

‘ಸರ್ಕಾರದ ಖಾಲಿ ಜಾಗ, ಗೋಮಾಳ, ಶಾಲೆಯ ಆವರಣದಲ್ಲಿ 1.5 ಲಕ್ಷ ಸಸಿಗಳನ್ನು ನೆಡಲಾಗುವುದು. ಈಚಘಟ್ಟ ಸಮೀಪ ಇರುವ 25 ಹೆಕ್ಟೇರ್ ಹಾಗೂ ಚಿಕ್ಕ ಎಮ್ಮಿಗನೂರು ಸಮೀಪದ 21 ಹೆಕ್ಟೇರ್ ಗೋಮಾಳದಲ್ಲಿ ಸಸಿ ಬೆಳೆಸುವ ಗುರಿ ಇದೆ. ರಾಷ್ಟ್ರೀಯ ಹೆದ್ದಾರಿ-13ರ ಪಕ್ಕದಲ್ಲಿ ಬಸಾಪುರ ಗೇಟ್‌ನಿಂದ ದೊಗ್ಗನಾಳ್ ಗೇಟ್‌ವರೆಗೆ 3 ಕಿ.ಮೀ, ಗುಂಡೇರಿಯಿಂದ ರಾಮಗಿರಿ ಮಾರ್ಗದಲ್ಲಿ 3 ಕಿ.ಮೀ.ವರೆಗೆ ರಸ್ತೆ ಪಕ್ಕದಲ್ಲಿ ದೊಡ್ಡ ಸಸಿಗಳನ್ನು ನೆಡಲಾಗುವುದು’ ಎಂದು ಅವರು ತಿಳಿಸಿದ್ದಾರೆ.

‘ವಲಯ ಅರಣ್ಯ ಇಲಾಖೆಯಿಂದ ಟಿ. ನುಲೇನೂರು ಗೇಟ್ ಸಮೀಪ ಇರುವ ನರ್ಸರಿಯಲ್ಲಿ ಸುಮಾರು 4 ಲಕ್ಷ ಸಸಿಗಳನ್ನು ಬೆಳೆಸಿದ್ದು, ನಾಟಿ ಕಾರ್ಯ ಆರಂಭಿಸಲಾಗಿದೆ. ಈಗಾಗಲೇ ಲೋಕದೊಳಲು ದೇವರ ಗುಡ್ಡ, ಮಲಸಿಂಗನಹಳ್ಳಿ ಗುಡ್ಡ, ಗರಗ ಕಾವಲ್‌ನಲ್ಲಿ ಸಸಿ ನೆಡಲಾಗುತ್ತಿದೆ. ಹನುಮಂತದೇವರ ಕಣಿವೆಯಲ್ಲಿ 50 ಹೆಕ್ಟೇರ್ ಪ್ರದೇಶದಲ್ಲಿ ಟ್ರೀ ಪಾರ್ಕ್ ನಿರ್ಮಿಸಲಾಗುವುದು. ಇಲ್ಲಿ 5,000 ಸಸಿ ಬೆಳೆಸುವ ಗುರಿ ಇದ್ದು, ಉದ್ಯಾನ ನಿರ್ಮಿಸಲಾಗುವುದು. ಹಿಂದಿನ ವರ್ಷ 56 ಹೆಕ್ಟೇರ್ ಪ್ರದೇಶದಲ್ಲಿ 2,74,196 ಸಸಿಗಳನ್ನು ನೆಡಲಾಗಿತ್ತು’ ಎಂದು ವಲಯ ಅರಣ್ಯಾಧಿಕಾರಿ ವಸಂತ ಕುಮಾರ್ ತಿಳಿಸಿದ್ದಾರೆ.

*
ಜೂನ್‌ನಿಂದ ಮುಂಗಾರು ಆರಂಭವಾಗಲಿದ್ದು, ಮೂರು ತಿಂಗಳು ಮಳೆ ಬರುತ್ತದೆ. ಆದ್ದರಿಂದ ಈಗ ಸಸಿ ನೆಟ್ಟರೆ ಒಣಗಿ ಹೋಗುವುದಿಲ್ಲ. -ಬಹುಗುಣ, ಸಾಮಾಜಿಕ ವಲಯ ಅರಣ್ಯಾಧಿಕಾರಿ

*
ಅರಣ್ಯ ಪ್ರದೇಶದ ಖಾಲಿ ಜಾಗದಲ್ಲಿ ಸಸಿ ನೆಡಲಾಗುವುದು. ಈ ವರ್ಷ 4 ಲಕ್ಷ ಸಸಿ ನೆಡುವ ಗುರಿ ಇದೆ.
-ವಸಂತ ಕುಮಾರ್, ಪ್ರಾದೇಶಿಕ ವಲಯ ಅರಣ್ಯಾಧಿಕಾರಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು