ಸೋಮವಾರ, ಡಿಸೆಂಬರ್ 9, 2019
26 °C
ಚಿರತೆಗಾಗಿ ಇಟ್ಟಿದ್ದ ಬೋನು ನೋಡಲು ಹೋಗಿದ್ದ ಸಿಬ್ಬಂದಿ

ಶ್ರೀರಾಂಪುರ ಹೋಬಳಿ: ಅರಣ್ಯ ವೀಕ್ಷಕ ನಿಗೂಢ ನಾಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶ್ರೀರಾಂಪುರ: ಇಲ್ಲಿನ ಮೈಲಾರಪುರ ಮೀಸಲು ಕಾವಲು ಪ್ರದೇಶದಲ್ಲಿ ಚಿರತೆ ಸೆರೆಗೆ ಇಟ್ಟಿದ್ದ ಬೋನು ನೋಡಲು ಬುಧವಾರ ಹೋಗಿದ್ದ ಅರಣ್ಯ ಇಲಾಖೆಯ ವೀಕ್ಷಕ ನಿಗೂಢ ರೀತಿಯಲ್ಲಿ ನಾಪತ್ತೆಯಾಗಿದ್ದಾರೆ.

ಮುತ್ತಿನದೇವರ ಗುಡ್ಡದ ಬಳಿ ಅರಣ್ಯ ಇಲಾಖೆ ಬೋನು ಇಟ್ಟಿರುವುದನ್ನು ನೋಡಲು ಅರಣ್ಯ ಇಲಾಖೆ ವೀಕ್ಷಕ, ಹೆಗ್ಗೆರೆ ಗ್ರಾಮದ ಎಚ್.ಆರ್. ಬಸವರಾಜ್ ಅವರು ಮೈಲಾರಪುರದ ಕಾವಲು ಪ್ರದೇಶದಲ್ಲಿ ಬೈಕ್ ನಿಲ್ಲಿಸಿ ಹೋಗಿದ್ದರು.

10 ಗಂಟೆ ವೇಳೆಗೆ ಬಸವರಾಜ್‌ ಅವರು ಸಹೋದ್ಯೋಗಿಗೆ ಕರೆ ಮಾಡಿ, ‘ಎರಡು ಚಿರತೆಗಳು ನನ್ನ ಮೇಲೆ ದಾಳಿ ನಡೆಸುವ ಸಾಧ್ಯತೆ ಇದೆ; ಬೇಗ ಬನ್ನಿ’ ಎಂದು ಹೇಳಿ ಕರೆ ಕಡಿತಗೊಳಿಸಿದ್ದರು.

ವಿಷಯ ತಿಳಿದ ಅರಣ್ಯ ಇಲಾಖೆಯ ಸಿಬ್ಬಂದಿ ಹಾಗೂ ಶ್ರೀರಾಂಪುರ ಪೊಲೀಸ್ ಠಾಣೆಯ ಪಿಎಸ್ಐ ವಿಶ್ವನಾಥ್ ನೇತೃತ್ವದ ತಂಡ ಬಂದು ನೋಡಿದಾಗ ಬಸವರಾಜ್ ಬೈಕ್ ಮಾತ್ರ ಸ್ಥಳದಲ್ಲಿತ್ತು.

ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸರು ಸಾರ್ವಜನಿಕರೊಂದಿಗೆ ಕಾವಲು ಪ್ರದೇಶದಲ್ಲಿ ಸಂಜೆವರೆಗೆ ಹುಡುಕಿದರೂ ಬಸವರಾಜ್‌ ಸಿಗಲಿಲ್ಲ. ಚಿರತೆ ದಾಳಿ ನಡೆಸಿರುವ ಸುಳಿವೂ ಪತ್ತೆಯಾಗಲಿಲ್ಲ.

‘ಕತ್ತಲಾದ ಕಾರಣ ಕಾರ್ಯಾಚರಣೆ ಸ್ಥಗಿತಗೊಳಿಸಿದ್ದೇವೆ. ಗುರುವಾರ ಮತ್ತೆ ಹುಡುಕಾಟ ನಡೆಸುತ್ತೇವೆ’ ಎಂದು ಅರಣ್ಯಾಧಿಕಾರಿ ಪ್ರದೀಪ್ ಪವಾರ್ ತಿಳಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು