ಬುಧವಾರ, ಅಕ್ಟೋಬರ್ 20, 2021
24 °C
ಉದ್ಯೋಗ ಅರಸಿ ಹೊರ ಜಿಲ್ಲೆ–ರಾಜ್ಯಗಳಿಗೆ ವಲಸೆ * ಹೆಚ್ಚದ ಉದ್ಯಮಿಗಳ ಸಂಖ್ಯೆ

ಚಿತ್ರದುರ್ಗ: ಕೈಗಾರಿಕಾ ಅಭಿವೃದ್ಧಿಗೆ ಕಾಯುತ್ತಿದೆ ಕೋಟೆನಾಡು

ಕೆ.ಎಸ್. ಪ್ರಣವಕುಮಾರ್ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಜಿಲ್ಲೆಯಲ್ಲಿ ಕೈಗಾರಿಕೀಕರಣಕ್ಕೆ ಉತ್ತಮ ಅವಕಾಶಗಳಿವೆ. ನೀರಿನ ಸೌಲಭ್ಯ ಹೊರತುಪಡಿಸಿ ನೈಸರ್ಗಿಕ ಸಂಪನ್ಮೂಲಗಳು ಇವೆ. ಆದರೂ ನಿರೀಕ್ಷಿತ ಮಟ್ಟದಲ್ಲಿ ಕೈಗಾರಿಕೆಗಳು ಸ್ಥಾಪನೆಯಾಗಿಲ್ಲ. ಸ್ಥಳೀಯರಾಗಲಿ, ಹೊರಗಿನವರಾಗಲಿ ಬಂಡವಾಳ ಹೂಡುತ್ತಿಲ್ಲ. ಇದರಿಂದಾಗಿ ಕಾರ್ಮಿಕರು ಉದ್ಯೋಗ ಅರಸಿ ಹೊರ ಜಿಲ್ಲೆ, ಹೊರ ರಾಜ್ಯಗಳಿಗೆ ವಲಸೆ ಹೋಗುವುದು ತಪ್ಪಿಲ್ಲ. ಉದ್ಯಮಿಗಳ ಸಂಖ್ಯೆಯೂ ಹೆಚ್ಚುತ್ತಿಲ್ಲ.

ಸದ್ಯ ಇರುವಂಥ ಕೈಗಾರಿಕಾ ಪ್ರದೇಶ, ಕೈಗಾರಿಕಾ ವಸಾಹತುಗಳ ಪೈಕಿ ಕೆಲವು ಶೇ 75ರಷ್ಟು ಅಭಿವೃದ್ಧಿ ಕಂಡಿವೆ. ಇನ್ನೂ ಕೆಲವು ಅಭಿವೃದ್ಧಿ ಭಾಗ್ಯವನ್ನೇ ಕಾಣದೇ ಕನಿಷ್ಠ ಮೂಲಸೌಕರ್ಯಗಳು ಗಗನ
ಕುಸುಮವಾಗಿವೆ. ಹೀಗಾಗಿ ಕೆಲ ಪ್ರದೇಶಗಳು ಕೈಗಾರಿಕೋದ್ಯಮಿಗಳನ್ನು ಹೂಡಿಕೆಗೆ ಆಕರ್ಷಿಸುವಲ್ಲಿ ವಿಫಲವಾಗಿವೆ. ಜೊತೆಗೆ ರಾಜಕಾರಣಿಗಳ ಇಚ್ಛಾಶಕ್ತಿಯ ಕೊರತೆ, ಭೂಸ್ವಾಧೀನ ಪ್ರಕ್ರಿಯೆಗೆ ಎದುರಾಗುವ ತೊಡಕು ಮುಂತಾದ ಕಾರಣಗಳಿಂದ ಬೃಹತ್‌ ಮತ್ತು ಮಧ್ಯಮ ಕೈಗಾರಿಕೆಗಳ ಸ್ಥಾಪನೆಗೆ ಅಡ್ಡಿಯಾಗುತ್ತಿವೆ.

ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ (ಕೆಎಸ್‌ಎಸ್‌ಐಡಿಸಿ) ಜಿಲ್ಲೆಯ ಎಂಟು ಕಡೆಗಳಲ್ಲಿ ಕೈಗಾರಿಕಾ ಪ್ರದೇಶ ಸ್ಥಾಪನೆಗೆ ಅವಕಾಶ ಮಾಡಿಕೊಟ್ಟಿದೆ. ಚಿತ್ರದುರ್ಗ ನಗರದಲ್ಲಿ ಸಂಚಾರಿ ಪೊಲೀಸ್ ಠಾಣೆ ಮುಂಭಾಗ, ಹಿರಿಯೂರಿನಲ್ಲಿ ವಾಣಿವಿಲಾಸ ಸಾಗರ ಮಾರ್ಗದ ಸಕ್ಕರೆ ಕಾರ್ಖಾನೆ ಸಮೀಪ, ಹೊಸದುರ್ಗ ಸೇರಿ ಮೂರು ಕಡೆ ಆರಂಭದಲ್ಲಿ ಒಂದಿಷ್ಟು
ಅಭಿವೃದ್ಧಿಪಡಿಸಿ ಸ್ಥಳೀಯ ಸಂಸ್ಥೆಗೆ ಹಸ್ತಾಂತರಿಸಿದೆ. ಆನಂತರ ಮೂಲಸೌಲಭ್ಯಗಳೇ ಮರೀಚಿಕೆಯಾಗಿವೆ. ನೀರು, ರಸ್ತೆ, ವಿದ್ಯುದ್ದೀಪ, ಶೌಚಾಲಯ ಮುಂತಾದ ಸೌಲಭ್ಯಗಳಿಲ್ಲದೇ ಸೊರಗಿದೆ.

ಚಿತ್ರದುರ್ಗದ ಹಳೆ ಬೆಂಗಳೂರು ರಸ್ತೆ ಮಾರ್ಗದಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ವತಿಯಿಂದ ರಾಷ್ಟ್ರೀಯ ಹೆದ್ದಾರಿ 4ಕ್ಕೆ ಹೊಂದಿಕೊಂಡಂತೆ 1958ರಲ್ಲಿ ಕೈಗಾರಿಕಾ ಪ್ರದೇಶವೊಂದನ್ನು ಸ್ಥಾಪಿಸಲಾಗಿದೆ. ಐದು ದಶಕ ಕಳೆದರೂ ಇಲ್ಲಿಯ ಇಂಡಸ್ಟ್ರಿಯಲ್ ಏರಿಯಾ ಅಭಿವೃದ್ಧಿ ಭಾಗ್ಯವೇ ಕಂಡಿರಲಿಲ್ಲ. ಆದರೆ, ಒಂದು ದಶಕದಿಂದ ನಿಧಾನವಾಗಿ ಪ್ರಗತಿಯತ್ತ ಸಾಗಿದೆ. ಒಟ್ಟು 87.23 ಎಕರೆ ವಿಸ್ತೀರ್ಣ ಹೊಂದಿದ್ದು, 111 ನಿವೇಶನಗಳ ಪೈಕಿ ಯಾವುದೂ ಖಾಲಿ ಇಲ್ಲ. ಒಟ್ಟು 74 ಕೈಗಾರಿಕೆಗಳು ಸ್ಥಾಪನೆಯಾಗಿವೆ. ಕೆಐಎಡಿಬಿ ಮೂಲಕ ರಸ್ತೆ, ವಿದ್ಯುತ್ ಸೌಕರ್ಯ ಕಲ್ಪಿಸಲಾಗಿದೆ. ಕೊಳವೆಬಾವಿ ಕೊರೆಸಿಕೊಳ್ಳುವ ಮೂಲಕ ಉದ್ಯಮಿಗಳೇ ನೀರಿನ ವ್ಯವಸ್ಥೆ ಮಾಡಿಕೊಂಡಿದ್ದಾರೆ.

ರಾಜ್ಯ ಸರ್ಕಾರ 2016ರಲ್ಲಿ ಚಳ್ಳಕೆರೆ ತಾಲ್ಲೂಕಿನ ಉಳ್ಳಾರ್ತಿ ಹಾಗೂ ಕುದಾಪುರದಲ್ಲಿ ರಾಜ್ಯದಲ್ಲೇ ಅತಿ ದೊಡ್ಡದಾದ ಕೈಗಾರಿಕಾ ಪಾರ್ಕ್‌ ನಿರ್ಮಿಸಲು ಯೋಜನೆ ರೂಪಿಸಿತ್ತು. ಇದಕ್ಕಾಗಿ 2016–17ರಲ್ಲಿ ಉಳ್ಳಾರ್ತಿಗೆ 250 ಎಕರೆ, ಕುದಾಪುರದಲ್ಲಿ 50 ಎಕರೆ ಜಾಗ ನೀಡಿತು. ಕೆಎಸ್‌ಎಸ್‌ಐಡಿಸಿ ಉಳ್ಳಾರ್ತಿಯಲ್ಲಿ 446 ನಿವೇಶನದೊಂದಿಗೆ 125 ಎಕರೆ ಜಾಗವನ್ನು ಅಭಿವೃದ್ಧಿ ಪಡಿಸಿದೆ. ಅದೇ ರೀತಿ ಕುದಾಪುರದಲ್ಲಿ 151 ನಿವೇಶನ, 10 ಮಳಿಗೆ ಅಭಿವೃದ್ಧಿ ಪಡಿಸಿದೆ. ಆದರೆ, ಇಲ್ಲಿ ಕೈಗಾರಿಕೆ ಸ್ಥಾಪಿಸಲು ಯಾರೂ ಮುಂದೆ ಬರುತ್ತಿಲ್ಲ.

ಜಿಲ್ಲೆಯಲ್ಲಿ ಸದ್ಯ ರಾಮ್ಕೊ, ಬೈನರಿ ಅಪರಲ್, ಸ್ನೇಹಾ ಪೌಲ್ಟ್ರಿ ಫೀಡ್ಸ್‌, ಅಮೃತ್‌ ಆರ್ಗ್ಯಾನಿಕ್ಸ್‌ ಸೇರಿ 10 ಬೃಹತ್, 18 ಮಧ್ಯಮ ಕೈಗಾರಿಕೆಗಳಿವೆ. ಒಟ್ಟಾರೆ ₹ 421.2 ಕೋಟಿ ಬಂಡವಾಳ ಹೂಡಿವೆ. ಸುಮಾರು 4,128 ಮಂದಿಗೆ ಉದ್ಯೋಗ ಅವಕಾಶ ದೊರೆತಿದೆ. ಆದರೆ, ಕೋವಿಡ್‌ ನಂತರ ಇದರಲ್ಲಿ ಶೇ 20ರಷ್ಟು ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಕೆ ನಂತರ ನಿಧಾನವಾಗಿ ಸಹಜ ಸ್ಥಿತಿಯತ್ತ ಮರಳುತ್ತಿವೆ.

ಕೆಲವರಿಂದ ಗುಜರಿ ನಿರ್ಮಾಣ: ‘ಚಿತ್ರದುರ್ಗದ ಆಜಾದ್‌ ಮಿಲ್ ಮುಂಭಾಗದ ಕೈಗಾರಿಕಾ ವಸಾಹತು ಪ್ರದೇಶದ ಕೆಲ ಭಾಗವನ್ನು ಗುಜರಿ ಸಾಮಗ್ರಿ ಬಿಸಾಡುವ ಸ್ಥಳವನ್ನಾಗಿ ಕೆಲವರು ಮಾಡಿಕೊಂಡಿದ್ದಾರೆ. ನಗರಸಭೆಗೆ ಹಸ್ತಾಂತರಿಸಿ ಅನೇಕ ವರ್ಷಗಳಾದರೂ ನೀರು, ರಸ್ತೆ, ವಿದ್ಯುದ್ದೀಪ, ಶೌಚಾಲಯ ಮುಂತಾದ ಸೌಲಭ್ಯಗಳಿಲ್ಲ. ಆಸ್ತಿ ತೆರಿಗೆಯನ್ನು ಮಾತ್ರ ತಪ್ಪದೇ ಕಟ್ಟಿಸಿಕೊಳ್ಳುತ್ತಿದೆ. ಅಗತ್ಯ ಸೌಲಭ್ಯ ಕಲ್ಪಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ’ ಎನ್ನುತ್ತಾರೆ ಚಿತ್ರದುರ್ಗ ಸಣ್ಣ ಪ್ರಮಾಣದ ಕೈಗಾರಿಕೆಗಳ ಸಂಘದ ಅಧ್ಯಕ್ಷ ಕೆಂಚವೀರಪ್ಪ.

‘ಕೈಗಾರಿಕೆಗಳು ಇರುವಂಥ ಜಾಗದಲ್ಲಿ ಗುಜರಿ ಸಾಮಗ್ರಿಗಳನ್ನು ಮನಸೋ ಇಚ್ಛೆ ರಸ್ತೆಗಳಲ್ಲಿಯೇ ಸುರಿಯುವುದು ಸರಿಯಲ್ಲ. ಇದರಿಂದ ಸುಗಮ ಸಂಚಾರಕ್ಕೆ ತೊಂದರೆ ಆಗುತ್ತದೆ. ಅಲ್ಲದೇ, ಸ್ವಚ್ಛತೆಯೂ ಇಲ್ಲದಂತಾಗಿ ಉದ್ಯಮಕ್ಕೆ ತೊಂದರೆ ಆಗುತ್ತದೆ. ಅಧಿಕಾರಿಗಳು ಈ ಕುರಿತು ಗಮನಹರಿಸಿ ಸಮಸ್ಯೆ ನಿವಾರಿಸಬೇಕು. ಜತೆಗೆ ಮೂಲಸೌಕರ್ಯ ಕಲ್ಪಿಸಬೇಕು’ ಎಂದು ಮನವಿ ಮಾಡಿದ್ದಾರೆ.

‘ಕೈಗಾರಿಕಾ ಪಟ್ಟಣ’ದ ಕನಸು

ಚಿತ್ರದುರ್ಗ ರಾಜ್ಯದ ಮಧ್ಯ ಭಾಗದಲ್ಲಿದೆ. ನಾಡಿನ ಯಾವುದೇ ಮೂಲೆಗೆ ಸಂಚರಿಸಬೇಕಾದರೆ ಕೋಟೆ ನಗರಿ ಪ್ರವೇಶಿಸಲೇಬೇಕಿದೆ. ಅಲ್ಲದೇ, ಆಂಧ್ರ, ಮಹಾರಾಷ್ಟ್ರ ಸೇರಿ ಇತರ ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ಹೆದ್ದಾರಿ ರಸ್ತೆಗಳು ಇದೇ ಮಾರ್ಗದಲ್ಲಿ ಹಾದು ಹೋಗಿವೆ. ಜಿಲ್ಲೆಗೆ ಹತ್ತಿರ ಇರುವ ರಾಜಧಾನಿ ಬೆಂಗಳೂರು, ತುಮಕೂರು ಜಿಲ್ಲೆಗಳಲ್ಲಿ ಈಗಾಗಲೇ ಸಾಕಷ್ಟು ಕೈಗಾರಿಕೆಗಳು ಇವೆ. ಸ್ಥಳಾವಕಾಶದ ಕೊರತೆಯೂ ಉಂಟಾಗಿದೆ. ಹೀಗಾಗಿ 1,500 ಎಕರೆ ಜಾಗದಲ್ಲಿ ಕೈಗಾರಿಕಾ ಪಟ್ಟಣ ಸ್ಥಾಪಿಸಬೇಕು ಎಂಬುದು ರಾಜ್ಯ ಸರ್ಕಾರದ ಕನಸು.

ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಒಂದೆರಡು ಕಿಲೋಮೀಟರ್‌ ವ್ಯಾಪ್ತಿಯೊಳಗೆ ಚಿತ್ರದುರ್ಗ, ಹಿರಿಯೂರು, ಚಳ್ಳಕೆರೆಯಲ್ಲಿ ತಲಾ 500 ಎಕರೆ ಜಾಗದಲ್ಲಿ ಕೈಗಾರಿಕಾ ಪಟ್ಟಣ ಸ್ಥಾಪಿಸಲು ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ ಮಹದಾಸೆ ಹೊಂದಿದ್ದಾರೆ. ಇದು ನನಸಾದಲ್ಲಿ 20 ಸಾವಿರದಿಂದ 30 ಸಾವಿರ ಜನರಿಗೆ ಉದ್ಯೋಗ ದೊರೆಯಲಿದೆ.

‘ಶಿರಾವರೆಗೂ ಈಗಾಗಲೇ ಅಭಿವೃದ್ಧಿ ಆಗಿದೆ. ಅದು ಬಿಟ್ಟರೆ ಉಳಿದಿರುವುದು ಹಿರಿಯೂರು ಮತ್ತು ಚಿತ್ರದುರ್ಗ. ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ಜಾಗವಿದ್ದರೆ ಉದ್ಯಮಿಗಳು, ಬಂಡವಾಳ ಹೂಡಿಕೆದಾರರು ಮುಂದೆ ಬರುತ್ತಾರೆ. ಅದಕ್ಕಾಗಿ ಮುಂದಿನ ತಿಂಗಳು ಮೂರು ತಾಲ್ಲೂಕುಗಳ ತಹಶೀಲ್ದಾರರು, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು ಮತ್ತು ಉಪನಿರ್ದೇಕರು ಸ್ಥಳ ಪರಿಶೀಲನೆಗಾಗಿ ಜಂಟಿಯಾಗಿ ಕಾರ್ಯಾಚರಣೆ ಮಾಡಲಿದ್ದಾರೆ’ ಎನ್ನುತ್ತಾರೆ ಜಿಲ್ಲಾ ಕೈಗಾರಿಕಾ ಕೇಂದ್ರದ ಉಪನಿರ್ದೇಶಕ ಬಿ.ಕೆ. ಮಂಜುನಾಥಸ್ವಾಮಿ.

 ಮೂಲಸೌಕರ್ಯದ ಕೊರತೆ

‘ಹಿರಿಯೂರು ಹೊರವಲಯದ ಹಳೆ ಸಕ್ಕರೆ ಕಾರ್ಖಾನೆ ಸಮೀಪ ಕೈಗಾರಿಕಾ ವಸಾಹತು ಸ್ಥಾಪನೆಗೆ ನಿವೇಶನಗಳನ್ನು ಗುರುತಿಸಿ, ಉದ್ಯಮಶೀಲರಿಗೆ ಜಾಗವನ್ನು ನಿಯೋಜಿಸಿ ನಾಲ್ಕು ದಶಕಗಳೇ ಕಳೆದಿವೆ. ಆದರೆ, ಅಭಿವೃದ್ಧಿ ಕಾರ್ಯ ಶೂನ್ಯವಾಗಿದೆ. ಮೂಲಸೌಕರ್ಯ ಕೊರತೆ ಈಗಲೂ ಕಾಡುತ್ತಿದೆ’ ಎನ್ನುತ್ತಾರೆ ತೆಂಗಿನನಾರು (ಹುರಿಹಗ್ಗ) ತಯಾರಿಸುವ ಕೈಗಾರಿಕೆಗಳ ಸಂಘದ ಅಧ್ಯಕ್ಷ ಮುರೇಶ್.

ಕೆಎಸ್‌ಎಸ್‌ಐಡಿಸಿ ಮಾಲೀಕತ್ವ ನೀಡಿದೆ. ಆದರೆ, ನಗರಸಭೆ ಎನ್‌ಒಸಿ ನೀಡುತ್ತಿಲ್ಲ. ವಿದ್ಯುತ್ ಇಲಾಖೆ ಓವರ್‌ಲೋಡ್ ಎಂಬ ಕಾರಣ ನೀಡಿ ಜಾರಿಕೊಳ್ಳುತ್ತಿದೆ. ಮೂರು ಕಡೆ ಹಣ ಕಟ್ಟಿ ಈ ಹಿಂದೆ ಪರದಾಡಿದ್ದು ಆಗಿದೆ. ಇಲಾಖೆಗಳ ನಡುವಿನ ತಿಕ್ಕಾಟದಿಂದ ಮಾಲೀಕರು ಬಡವಾಗುತ್ತಿದ್ದಾರೆ. ವಿದ್ಯುತ್ ಪರಿವರ್ತಕಗಳನ್ನು ಅನೇಕ ಮಾಲೀಕರೇ ಹಾಕಿಸಿಕೊಂಡಿದ್ದಾರೆ. ಎನ್‌ಒಸಿಗಾಗಿ ಬಹುತೇಕರು ನಿತ್ಯ ಅಲೆದಾಡುತ್ತಿದ್ದಾರೆ. ಲಕ್ಷಗಟ್ಟಲೇ ಸಾಲ ಮಾಡಿ ಉದ್ಯಮ ಮಾಡುವ ಬದಲು ಸುಮ್ಮನಿದ್ದಿದ್ದರೆ ಎಷ್ಟೋ ಚೆನ್ನಾಗಿ ಇರುತ್ತಿದ್ದೆವು ಎಂಬುದು ಹಲವು ಕೈಗಾರಿಕೋದ್ಯಮಿಗಳ ಅಭಿಪ್ರಾಯ.

ಕೈಗಾರಿಕಾ ವಸಾಹತು ಜಾಗದಲ್ಲಿ ಉಂಟಾಗುತ್ತಿರುವ ಸಮಸ್ಯೆಗಳ ಕಾರಣಕ್ಕೆ ಹಿರಿಯೂರು ಹೊರವಲಯಗಳಲ್ಲಿ ಸ್ವಂತ ಜಾಗ ಖರೀದಿಸುವ ಮೂಲಕ ಈಚೆಗೆ ಕೈಗಾರಿಕೆಗಳು ತಲೆಎತ್ತುತ್ತಿವೆ.

ಮಿನಿ ಬಾಂಬೆ ಮರುಸ್ಥಾಪನೆ ಯಾವಾಗ?

ಚಳ್ಳಕೆರೆ: ಎರಡು ದಶಕಗಳ ಹಿಂದೆ ಶೇಂಗಾ ಎಣ್ಣೆ ಉತ್ಪಾದನೆ ಮತ್ತು ಬೀಜ ತಯಾರಿಕೆಯಲ್ಲಿ ಮಿನಿ ಬಾಂಬೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಚಳ್ಳಕೆರೆಯಲ್ಲಿದ್ದ ಬಹುತೇಕ ಕೈಗಾರಿಕಾ ಉತ್ಪಾದನಾ ಘಟಕಗಳು ಮುಚ್ಚಿವೆ. ಇದರಿಂದಾಗಿ ಇದನ್ನೇ ಅವಲಂಬಿಸಿದ್ದ ನೂರಾರು ಕುಟುಂಬಗಳು ಸಂಕಷ್ಟ ಎದುರಿಸುವಂತಾಗಿದೆ. ಮೊದಲಿನಂತೆಯೇ ಮರುಸ್ಥಾಪನೆ ಯಾವಾಗ ಆದೀತು ಎಂದು ಅನೇಕರು ಕಾಯುತ್ತಿದ್ದಾರೆ.

ಶೇಂಗಾ ಬೀಜ ತಯಾರಿಸುವ ಡಿಕಾಟಿಕೇಟರ್ಸ್‌ ಸೇರಿ ಶೇಂಗಾದಿಂದ ಎಣ್ಣೆ ಉತ್ಪಾದಿಸುವ ನೂರಾರು ಘಟಕಗಳು ಮತ್ತು ಬೀಜ ತಯಾರಿಸುವ ಹಲವು ಘಟಕಗಳು ಈ ಹಿಂದೆ ಸದ್ದು ಮಾಡುತ್ತಿದ್ದವು. ಇಲ್ಲಿಯ ಎಣ್ಣೆ ಗಿರಣಿಗಳಿಗೆ ಆಂಧ್ರ, ತಮಿಳುನಾಡು, ಗುಜರಾತ್‌ ಸೇರಿ ಹೊರ ರಾಜ್ಯದಿಂದಲೂ ಶೇಂಗಾ ಆಮದು ಆಗುತ್ತಿತ್ತು. ಎಣ್ಣೆ ಉತ್ಪಾದನೆಯ ಜೊತೆಗೆ ಅದರ ವಹಿವಾಟು ಸಹ ಬೃಹತ್ ಪ್ರಮಾಣದಲ್ಲಿಯೇ ನಡೆಯುತ್ತಿತ್ತು. ಆದರೀಗ ಹೊರ ರಾಜ್ಯಗಳಲ್ಲೇ ಕೈಗಾರಿಕೆಗಳು ಸ್ಥಾಪನೆಯಾಗಿರುವ ಕಾರಣ ಉದ್ಯಮಕ್ಕೆ ದೊಡ್ಡ ಪೆಟ್ಟು ಬಿದ್ದಿದೆ.

ಶೇಂಗಾ ಬೆಳೆಯುವಲ್ಲಿಯೂ ಚಳ್ಳಕೆರೆ ತಾಲ್ಲೂಕಿನ ರೈತರ ಪಾತ್ರ ಹೆಚ್ಚಿದೆ. ಕೈಗಾರಿಕೆಗಳು ಸಕ್ರಿಯವಾಗಿ ನಡೆಯುತ್ತಿದ್ದಾಗ ತಾಲ್ಲೂಕಿನ 15–20 ಗ್ರಾಮಗಳ ನೂರಾರು ಕುಟುಂಬಗಳು ಕೈಗಾರಿಕೆ, ಗಿರಣಿಯಲ್ಲಿ ದೊರೆಯುವ ಕೂಲಿ ಕೆಲಸದಿಂದ ಬದುಕನ್ನು ಕಟ್ಟಿಕೊಂಡಿದ್ದರು. ಆದರೆ, ಈಗ ಉದ್ಯೋಗಕ್ಕಾಗಿ ಬೆಂಗಳೂರು ಸೇರಿ ಬೃಹತ್‌ ನಗರದತ್ತ ಹಲವರು ವಲಸೆ ಹೋಗುತ್ತಿದ್ದಾರೆ. ಬೆಳೆದ ಶೇಂಗಾ ಅಲ್ಲಲ್ಲೇ
ಮಾರಾಟವಾಗುತ್ತಿದೆ.

ಅನಾವೃಷ್ಟಿಯಿಂದ ಶೇಂಗಾ ಬೆಳೆಯ ಪ್ರಮಾಣ ವರ್ಷ ವರ್ಷಕ್ಕೂ ಕುಂಠಿತಗೊಳ್ಳುತ್ತಿದೆ. ಇದರಿಂದಾಗಿ ಶೇಂಗಾ ಬೆಳೆಯ ಮೇಲೆ ಅವಲಂಬಿತವಾದ ಗಿರಣಿಗಳು ಕಚ್ಚಾ ವಸ್ತುಗಳ ತೀವ್ರ ಕೊರತೆ ಎದುರಿಸುತ್ತಿದ್ದು ಅವನತಿಯತ್ತ ಸಾಗುತ್ತಿವೆ. ಗಿರಣಿಗಳ ಮಾಲೀಕರು ಶೇಂಗಾ ಬೆಳೆಯ ವ್ಯಾಪಾರಕ್ಕೆ ಇಳಿದು, ಅಲ್ಪ ಸ್ವಲ್ಪ ಪ್ರಮಾಣದಲ್ಲಿ ದೊರೆಯುವ ಕಚ್ಚಾ ವಸ್ತುವಿನಿಂದಲೇ ಗಿರಣಿಗಳನ್ನು ನಡೆಸುವ ಸಾಹಸಕ್ಕೆ ಕೈಹಾಕಿದ್ದಾರೆ.
ತಾಲ್ಲೂಕಿನಲ್ಲಿ ಡಿಆರ್‌ಡಿಒ ಸಂಸ್ಥೆ ಆರಂಭವಾದ ಮೇಲೆ ಚಳ್ಳಕೆರೆ ದಿನದಿನಕ್ಕೂ ಅಭಿವೃದ್ಧಿಯಾಗುತ್ತಿದೆ. ಜನಸಂಖ್ಯೆ ಹೆಚ್ಚುತ್ತಲೇ ಇದೆ. ಇಲ್ಲಿಯ ಜನರಿಗೆ ಹೆಚ್ಚಿನ ರೀತಿಯಲ್ಲಿ ಉದ್ಯೋಗ ಸೃಷ್ಟಿಸಲು ಸರ್ಕಾರಿ ಸ್ವಾಮ್ಯದ ಕೈಗಾರಿಕೆಗಳನ್ನು ಸ್ಥಾಪಿಸುವ ಅಗತ್ಯವೂ ಇದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು