ಚಳ್ಳಕೆರೆ: ನಗರದ ವಿವಿಧೆಡೆ ಗಾಂಜಾ ಸೇವಿಸಿ ಅಮಲಿನಲ್ಲಿದ್ದ ಏಳು ಮಂದಿಯನ್ನು ಬಂಧಿಸಿರುವ ಪೊಲೀಸರು ಪ್ರತ್ಯೇಕ ನಾಲ್ಕು ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.
ಗುರುವಾರ ಸಂಜೆ ಗಸ್ತಿನಲ್ಲಿದ್ದ ಪೊಲೀಸರು ನಗರದ ಸರ್ಕಾರಿ, ಖಾಸಗಿ ಬಸ್ ನಿಲ್ದಾಣ, ಪಾವಗಡ ರಸ್ತೆಯ ರೈಲ್ವೆ ಗೇಟ್, ಚಿತ್ರದುರ್ಗ ರಸ್ತೆಯ ಅರಣ್ಯ ಪ್ರದೇಶ ಮುಂತಾದ ಸಾರ್ವಜನಿಕ ಸ್ಥಳಗಳಲ್ಲಿ ಆರೋಪಿಗಳನ್ನು ಬಂಧಿಸದ್ದಾರೆ.
ಆರೋಪಿಗಳಲ್ಲಿ ಒಬ್ಬ ಡಿಪ್ಲೊಮಾ, ಮತ್ತೊಬ್ಬ ಎಂಬಿಎ ವ್ಯಾಸಂಗ ಮಾಡುತ್ತಿದ್ದು, ಉಳಿದವರು ಎಸ್ಸೆಎಸ್ಸೆಲ್ಸಿ ಓದುತ್ತಿದ್ದಾರೆ.
‘ಅಮಲಿನಲ್ಲಿದ್ದ ಏಳು ಮಂದಿಯನ್ನು ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ನಡೆಸಿದಾಗ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟ ಕಾರಣ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
‘ಆಂಧ್ರಪ್ರದೇಶದ ರಾಯದುರ್ಗ, ಕಲ್ಯಾಣದುರ್ಗ, ಆನಂತಪುರದ ಕೆಲ ವ್ಯಕ್ತಿಗಳು, ದಿನ ಬಿಟ್ಟು ದಿನ ಗಾಂಜಾ ತಂದು ನಗರದ ರೈಲ್ವೆ ನಿಲ್ದಾಣದ ಬಳಿ ಸಣ್ಣ ಚೀಟಿಯಲ್ಲಿ ಗಾಂಜಾ ಇಟ್ಟು ₹ 500ಕ್ಕೆ ಯುವಕರಿಗೆ ಮಾರಾಟ ಮಾಡುತ್ತಿರುತ್ತಾರೆ ಎಂದು ತಿಳಿದು ಬಂದಿದ್ದು, ಈ ಬಗ್ಗೆ ತನಿಖಾ ಕಾರ್ಯ ಮುಂದುವರಿಸಲಾಗಿದೆ’ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಡಿವೈಎಸ್ಪಿ ರಮೇಶ್, ನಿರೀಕ್ಷಕ ಆರ್.ಎಫ್. ದೇಸಾಯಿ, ಪಿಎಸ್‍ಐ ಸತೀಶ್‍ನಾಯ್ಕ, ಬಸವರಾಜ, ದರೆಪ್ಪ ದೊಡ್ಡಮನಿ ಸೇರಿದಂತೆ ಹೆಡ್‌ಕಾನ್‌ಸ್ಟೆಬಲ್‌ಗಳು ಗಸ್ತಿನ ವೇಳೆ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.