ಸೋಮವಾರ, ಮೇ 23, 2022
26 °C

ಗಾಣಿಗರು ಸ್ವಾಮೀಜಿ ಮಾರ್ಗದರ್ಶನ ಪಡೆಯಿರಿ: ಮುರುಘಾ ಶರಣರ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸದುರ್ಗ: ‘ವಿಜಯಪುರದ ವನಶ್ರೀ ಮಠದ ಬಸವಕುಮಾರ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ಗಾಣಿಗ ಸಮಾಜ ಸಾಗಬೇಕು. ಅವರಲ್ಲಿ ಸಂಘಟನಾ ಶಕ್ತಿ, ಚತುರತೆ ಹಾಗೂ ಪ್ರಾಮಾಣಿಕತೆ ಇರುವುದನ್ನು ಗಮನಿಸಿಯೇ 2022ರ ಶರಣ ಸಂಸ್ಕೃತಿ ಉತ್ಸವದ ಗೌರವಾಧ್ಯಕ್ಷರನ್ನಾಗಿ ಮಾಡಿದ್ದೇವೆ’ ಎಂದು ಚಿತ್ರದುರ್ಗದ ಶಿವಮೂರ್ತಿ ಮುರುಘಾ ಶರಣರು ಹೇಳಿದರು.

ಪಟ್ಟಣದ ಹುಳಿಯಾರು ರಸ್ತೆಯಲ್ಲಿ ನಿರ್ಮಾಣವಾಗಿರುವ ಗಾಣಿಗರ ಸಮುದಾಯ ಭವನವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.

12ನೇ ಶತಮಾನ ಎಂದರೆ ಅದು ಆದರ್ಶ ಹಾಗೂ ಎಲ್ಲರನ್ನೂ ಒಗ್ಗೂಡಿಸಿದ ಶತಮಾನ. ಬಸವಣ್ಣನವರು ಅಲ್ಲಮನ ಅಧ್ಯಕ್ಷತೆಯಲ್ಲಿ ಎಲ್ಲಾ ಜಾತಿ ಜನಾಂಗದ ಶರಣರನ್ನು ಅನುಭವ ಮಂಟಪದಲ್ಲಿ ಸೇರಿಸಲಾಗಿತ್ತು. ಬಳಿಕ 20ನೇ ಶತಮಾನದವರೆಗೂ ಆಸ್ತಿ ಮಾಡುವ ಕಾಲ ನಿರ್ಮಾಣವಾಗಿತ್ತು. ಕೊರೊನಾದಿಂದ ಅದಕ್ಕೆ ಹಿನ್ನಡೆಯಾಯಿತು. ಈಗ ಆಸ್ತಿ ಮಾಡುವ ಕಾಲವೂ ಮುಗಿದು ಅಸ್ತಿತ್ವದ ಕಾಲ ಬಂದಿದೆ. ಎಲ್ಲಾ ಸಮುದಾಯಗಳೂ ಅಸ್ತಿತ್ವಕ್ಕಾಗಿ ಹೋರಾಟ ನಡೆಸುತ್ತಿವೆ ಎಂದರು.

ಗಾಣಿಗರ ಸಮುದಾಯಕ್ಕೆ ತನ್ನದೇ ಆದ ಪರಂಪರೆ, ಸಂಸ್ಕೃತಿ, ಭಕ್ತಿ, ಶ್ರದ್ಧೆ, ಕಿಚ್ಚು ಇದೆ. ಯಾವುದೇ ಕೆಲಸ ಕೊಟ್ಟರೂ ಚಾಚೂ ತಪ್ಪದೇ ಅಚ್ಚುಕಟ್ಟಾಗಿ ಮಾಡುವ ಚಾಣಕ್ಷತನ ಈ ಸಮಾಜದವರಿಗಿದೆ. ಎಲ್ಲರೂ ಭರವಸೆಯ ವ್ಯಕ್ತಿಗಳಾಗಬೇಕು. ಶ್ರೀಮಠದ ಆಸ್ತಿಯನ್ನು ಸಂರಕ್ಷಣೆ ಮಾಡಿದ ಕೀರ್ತಿ ಇಲ್ಲಿನ ಗಾಣಿಗರ ಸಮುದಾಯದ ಹಿರಿಯರಿಗೆ ಸಲ್ಲುತ್ತದೆ. ದುಡಿಯುವ ಹಾಗೂ ಕೊಡುವ ಸಮುದಾಯ ಇದಾಗಿದೆ ಎಂದರು.

ನೇತೃತ್ವ ವಹಿಸಿದ್ದ ವನಶ್ರೀ ಮಠದ ಬಸವಕುಮಾರ ಸ್ವಾಮೀಜಿ, ‘ಕುಲಕಸುಬಿನಿಂದ ಅಷ್ಟೇ ನಾವು ಗಾಣಿಗರು. ತತ್ವಸಿದ್ಧಾಂತದಿಂದ ನಾವೆಲ್ಲರೂ ಲಿಂಗವಂತರು. ನಾವೆಲ್ಲರೂ ಲಿಂಗಾಯತ ಪರಂಪರೆ ಒಪ್ಪಿಕೊಂಡವರು, ಅಪ್ಪಿಕೊಂಡವರು. ಆದರೆ ತಾಂತ್ರಿಕವಾಗಿ ಚಿತ್ರದುರ್ಗ, ದಾವಣಗೆರೆ ಜಿಲ್ಲೆಯಲ್ಲಿ 2ಎ ಪ್ರವರ್ಗ ಪ್ರಮಾಣಪತ್ರ ಸಿಗುತ್ತಿಲ್ಲ. ಹಿಂದೆ ಜನಗಣತಿ ಸಮಯದಲ್ಲಿ ಲಿಂಗಾಯತರು ಎಂದು ಬರೆಸಿರಿ ಎಂದು ಚಳವಳಿ ನಡೆಸಲಾಯಿತು. ಇದರಿಂದ ಲಿಂಗಾಯತರ ಸಂಖ್ಯೆ ಹೆಚ್ಚಾಯಿತು. ಇದರಿಂದ ಹಿಂದುಳಿದ ಹಲವು ಸಮುದಾಯಗಳಿಗೆ ಅನ್ಯಾಯವಾಗಿದೆ. ನಾವು ಹೋರಾಟ ಮಾಡಿದರೆ ದೊಡ್ಡ ಸಮಸ್ಯೆ ಉಂಟಾಗುತ್ತದೆ. ಸಾಮಾಜಿಕ ಸಮೀಕ್ಷೆಗೆ ಬಂದಾಗ ನ್ಯಾಯಾಲಯದ ಮೂಲಕ 2ಎ ಮೀಸಲಾತಿ ಪ್ರಮಾಣಪತ್ರ ಪಡೆಯುವ ಪ್ರಯತ್ನ ಮಾಡಬೇಕು’ ಎಂದು ಕರೆ ನೀಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ತಾಲ್ಲೂಕು ಗಾಣಿಗರ ಸಂಘದ ಅಧ್ಯಕ್ಷ ಕೆ.ಸಿ. ಮಲ್ಲಿಕಾರ್ಜುನಪ್ಪ, ಅಖಿಲ ಭಾರತ ಗಾಣಿಗರ ಸಂಘದ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಎಸ್. ಲೋಣಿ ಮಾತನಾಡಿದರು.

ಮುಖಂಡರಾದ ಕಾಂತರಾಜು, ಕೆ.ಎಸ್‌. ಕಲ್ಮಠ್‌, ದಕ್ಷಿಣ ಮೂರ್ತಿ, ಲೋಕೇಶ್‌, ರುದ್ರಮುನಿ, ಜಗದೀಶ್‌, ಅನಿತಾ ರಾಜೇಶ್‌ ವೀರಶೈವ ಸಮುದಾಯದ ಮುಖಂಡರು ಇದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.