ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

30 ತಿಂಗಳಲ್ಲಿ ವೈದ್ಯಕೀಯ ಕಾಲೇಜು ಪೂರ್ಣ: ಸಚಿವ ಡಾ.ಕೆ.ಸುಧಾಕರ್‌ ಭರವಸೆ

ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಭರವಸೆ
Last Updated 13 ನವೆಂಬರ್ 2020, 15:01 IST
ಅಕ್ಷರ ಗಾತ್ರ

ಚಿತ್ರದುರ್ಗ: ಸರ್ಕಾರಿ ವೈದ್ಯಕೀಯ ಕಾಲೇಜು ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅಗತ್ಯ ಅನುದಾನ ಬಿಡುಗಡೆ ಮಾಡಿದ್ದು, 30 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವುದು. ಮುಂದಿನ ಶೈಕ್ಷಣಿಕ ವರ್ಷದಿಂದಲೇ ಕೋರ್ಸ್ ಆರಂಭಕ್ಕೆ ಪ್ರಯತ್ನಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಭರವಸೆ ನೀಡಿದರು.

ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಕಾಲೇಜು ನಿರ್ಮಾಣಕ್ಕೆ ಗುರುತಿಸಿದ ಸ್ಥಳವನ್ನು ಶುಕ್ರವಾರ ಪರಿಶೀಲಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ನಿಗದಿತ ಸ್ಥಳದ ವಿವರ ಪಡೆದು ವಿನ್ಯಾಸದ ನೀಲನಕ್ಷೆ ಪರಿಶೀಲಿಸಿದರು. ನಿರುಪಯುಕ್ತ ಹಳೆ ಕಟ್ಟಡಗಳನ್ನು ತೆರವುಗೊಳಿಸಿ ನೂತನ ನೀಲನಕ್ಷೆ ಸಿದ್ಧಪಡಿಸುವಂತೆ ಸೂಚನೆ ನೀಡಿದರು.

‘ದೀಪಾವಳಿಗೂ ಮೊದಲೇ ಚಿತ್ರದುರ್ಗದ ಜನರಿಗೆ ಮುಖ್ಯಮಂತ್ರಿ ಕೊಡುಗೆ ನೀಡಿದ್ದಾರೆ. ಸುಸಜ್ಜಿತ ಕಟ್ಟಡ ನಿರ್ಮಾಣಕ್ಕೆ ಅಗತ್ಯ ಅನುದಾನ ಬಿಡುಗಡೆ ಮಾಡಲಾಗಿದೆ. ಇನ್ನು ಮುಂದೆ ಬಯಲುಸೀಮೆ ಜನರಿಗೆ ಉತ್ತಮ ಆರೋಗ್ಯ ಸೇವೆ ದೊರೆಯಲಿದೆ. ವೈದ್ಯಕೀಯ ಶಿಕ್ಷಣವೂ ಸುಲಭವಾಗಿ ಕೈಗೆಟುಕಲಿದೆ. ರಾಜ್ಯದ ಎಲ್ಲ ಮೂಲೆಯಲ್ಲಿ ವೈದ್ಯಕೀಯ ಕಾಲೇಜು ಆರಂಭಿಸಲಾಗುತ್ತಿದೆ’ ಎಂದರು.

‘ಕೇಂದ್ರ ಸರ್ಕಾರ ಪ್ರಸಕ್ತ ವರ್ಷ 75 ವೈದ್ಯಕೀಯ ಕಾಲೇಜುಗಳಿಗೆ ಅನುಮೋದನೆ ನೀಡಿದೆ. ಈ ಪೈಕಿ ನಾಲ್ಕು ಕಾಲೇಜು ರಾಜ್ಯಕ್ಕೆ ಮಂಜೂರಾಗಿವೆ. ಹಾವೇರಿ, ಚಿಕ್ಕಮಗಳೂರು, ಯಾದಗಿರಿ ಹಾಗೂ ಕೊಪ್ಪಳ ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜು ಪ್ರಾರಂಭಿಸಲಾಗುತ್ತಿದೆ. ರಾಜ್ಯ ಸರ್ಕಾರ ವಿಶೇಷ ಕಾಳಜಿ ವಹಿಸಿ ಚಿತ್ರದುರ್ಗ ವೈದ್ಯಕೀಯ ಕಾಲೇಜು ಆರಂಭಕ್ಕೆ ಮುಂದಾಗಿದೆ. ಡಿಸೆಂಬರ್‌ ಅಂತ್ಯದ ವೇಳೆಗೆ ಭೂಮಿ ಪೂಜೆ ನೆರವೇರಿಸಲಾಗುತ್ತದೆ’ ಎಂದು ಹೇಳಿದರು.

‘ವೈದ್ಯಕೀಯ ಕಾಲೇಜು ಸ್ಥಾಪನೆಗೆ ಅಂದಾಜು ₹500 ಕೋಟಿ ಅಗತ್ಯವಿದೆ. ಪ್ರಾರಂಭಿಕ ಹಂತದಲ್ಲಿ ಸರ್ಕಾರ ₹ 50 ಕೋಟಿ ಬಿಡುಗಡೆ ಮಾಡಿದೆ. ಜಿಲ್ಲಾ ಖನಿಜ ನಿಧಿಯ (ಡಿಎಂಎಫ್‌) ಮೂರನೇ ಒಂದು ಭಾಗವನ್ನು ಇದಕ್ಕೆ ಬಳಸಿಕೊಳ್ಳಲು ನಿರ್ಧರಿಸಲಾಗಿದೆ. ಉಳಿದ ಅನುದಾನವನ್ನು ರಾಜ್ಯ ಸರ್ಕಾರ ಭರಿಸಲಿದೆ ’ ಎಂದು ಮಾಹಿತಿ ನೀಡಿದರು.

‘ವೈದ್ಯಕೀಯ ಕಾಲೇಜಿಗೆ ಸುಮಾರು 20 ಎಕರೆಯಷ್ಟು ಭೂಮಿಯ ಅಗತ್ಯವಿದೆ. ಕಾಲೇಜಿಗೆ ಗುರುತಿಸಿದ ಸ್ಥಳದಲ್ಲಿ ಹಳೆಯ ಕಟ್ಟಡಗಳಿವೆ. ಇವುಗಳನ್ನು ತೆರವುಗೊಳಿಸುವಂತೆ ಸೂಚನೆ ನೀಡಲಾಗಿದೆ. ವೈದ್ಯಕೀಯ ಕಾಲೇಜಿಗೆ ಪೂರಕವಾಗಿರುವ ಅರೆ ವೈದ್ಯಕೀಯ, ನರ್ಸಿಂಗ್‌ ಸೇರಿ ಸುಮಾರು ಎಂಟು ಕೋರ್ಸ್‌ಗಳಿದ್ದು, ಅವುಗಳ ಆರಂಭಕ್ಕೂ ಒತ್ತು ನೀಡಲಾಗುವುದು’ ಎಂದು ವಿವರಿಸಿದರು.

ಗೃಹ ಸಚಿವ ಬಸವರಾಜ ಬೊಮ್ಮಾಯಿ, ಸಂಸದ ಎ.ನಾರಾಯಣಸ್ವಾಮಿ, ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ, ಕೆ.ಪೂರ್ಣಿಮಾ, ಟಿ.ರಘುಮೂರ್ತಿ, ಜಿಲ್ಲಾಧಿಕಾರಿ ಕವಿತಾ ಎಸ್‌.ಮನ್ನಿಕೇರಿ, ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಸಂಗಪ್ಪ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಸುರೇಶಬಾಬು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಟಿ.ಯೋಗೇಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT