ಶುಕ್ರವಾರ, ಆಗಸ್ಟ್ 19, 2022
22 °C
ಭದ್ರಾ ಮೇಲ್ದಂಡೆ, ತುಂಗಭದ್ರಾ ಹಿನ್ನೀರಿಗಾಗಿ ಕಾಯುತ್ತಿರುವ 100ಕ್ಕೂ ಹೆಚ್ಚು ಗ್ರಾಮಗಳ ಜನ

ಹಸಿರೀಕರಣಕ್ಕೆ ಆದ್ಯತೆ ನೀಡದ ಪಂಚಾಯಿತಿಗಳು

ವಿ.ಧನಂಜಯ ನಾಯಕನಹಟ್ಟಿ Updated:

ಅಕ್ಷರ ಗಾತ್ರ : | |

Prajavani

ನಾಯಕನಹಟ್ಟಿ: ಪ್ರತಿ ವರ್ಷ ಗ್ರಾಮ ಪಂಚಾಯಿತಿಯಲ್ಲಿ ಸಸಿ ನೆಡಲು ಕೆಲ ಸದಸ್ಯರು ಕ್ರಿಯಾ ಯೋಜನೆ ತಯಾರಿಸಿ ಸಸಿಗಳನ್ನು ನೆಡುತ್ತಾರೆ. ಲಕ್ಷಾಂತರ ರೂಪಾಯಿ ಬಿಲ್ ಆದ ತಕ್ಷಣ ನೆಟ್ಟ ಸಸಿಗಳ ಪೋಷಣೆ ಮಾಡದೆ ಕೈಬಿಡುತ್ತಾರೆ. ಇದರಿಂದ ಹಸಿರೀಕರಣದ ಕೊರತೆಯಿಂದ ನಾಯಕನಹಟ್ಟಿ ಮತ್ತು ತಳಕು ಹೋಬಳಿಗಳು ಹಲವು ಸಮಸ್ಯೆಗಳನ್ನು ಎದುರಿಸುತ್ತಿವೆ.

100ಕ್ಕೂ ಹೆಚ್ಚು ಗ್ರಾಮಗಳು ಬರಪೀಡಿತವಾಗಿವೆ. ಗ್ರಾಮ ಪಂಚಾಯಿತಿಗಳಿಗೆ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೊಟ್ಯಂತರ ರೂಪಾಯಿ ಅನುದಾನ ಬರುತ್ತದೆ. ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು ಕ್ರಿಯಾ ಯೋಜನೆ ತಯಾರಿಸುವಾಗ ಗ್ರಾಮಗಳಲ್ಲಿನ ಮೂಲಸೌಕರ್ಯಗಳಾದ ಕುಡಿಯುವ ನೀರು, ರಸ್ತೆ, ಚರಂಡಿ, ಬೀದಿದೀಪ, ಸ್ವಚ್ಛತೆ, ನೈರ್ಮಲ್ಯಕ್ಕೆ ಆದ್ಯತೆ ನೀಡುತ್ತಾರೆ. ಆದರೆ, ತಮ್ಮ ಗ್ರಾಮಗಳಲ್ಲಿ ಶಾಲೆಗಳ ಆವರಣ, ಸರ್ಕಾರಿ ಜಾಗದಲ್ಲಿ, ಗೋಮಾಳಗಳಲ್ಲಿ, ರಸ್ತೆಬದಿಗಳಲ್ಲಿ ಸಸಿಗಳನ್ನು
ಬೆಳೆಸಲು ಪ್ರೊತ್ಸಾಹಿಸುವ ಕಾರ್ಯ ನಡೆದಿಲ್ಲ.

‘ಉದ್ಯೋಗ ಖಾತ್ರಿ ಯೋಜನೆಯಲ್ಲಿ ಬದು ನಿರ್ಮಾಣ, ಕೃಷಿ ಹೊಂಡ, ಕಾಲುವೆ
ದುರಸ್ತಿಗಳಿಗೆ ಸಾಕಷ್ಟು ಅನುದಾನವನ್ನು ಬಳಸುತ್ತಿದ್ದಾರೆಯೇ ಹೊರತು ಗ್ರಾಮಗಳು, ಗ್ರಾಮಗಳ ಸುತ್ತಮುತ್ತಲ ಪ್ರದೇಶದಲ್ಲಿ ಹಸಿರೀಕರಣಕ್ಕೆ ಆದ್ಯತೆ ನೀಡುತ್ತಿಲ್ಲ. ಇದರಿಂದ ಎರಡೂ ಹೋಬಳಿಗಳು ಅಪ್ಪಟ ಬಯಲು ಸೀಮೆಗಳಾಗಿ ಬದಲಾಗಿವೆ’ ಎಂದು ತಳಕು ಗ್ರಾಮದ ರೈತ ಹೋರಾಟಗಾರ ಓಬಣ್ಣ ಆರೋಪಿಸುತ್ತಾರೆ.

ತಳಕು ಹೋಬಳಿಯ ಓಬಳಾಪುರ, ಕಾಲುವೆಹಳ್ಳಿ, ರೇಣುಕಾಪುರ, ಮೈಲಹಳ್ಳಿ, ದೊಡ್ಡಉಳ್ಳಾರ್ತಿ, ಮನ್ನೇಕೋಟೆ, ತಳಕು, ಘಟ್ಟಪರ್ತಿ, ಹಿರೇಹಳ್ಳಿ, ದೇವರೆಡ್ಡಿಹಳ್ಳಿ, ಬೇಡರೆಡ್ಡಿಹಳ್ಳಿ, ಗೌರಸಮುದ್ರ ಮತ್ತು ನಾಯಕನಹಟ್ಟಿ ಹೋಬಳಿಯ ನೇರಲಗುಂಟೆ, ನೆಲಗೇತನಹಟ್ಟಿ, ಗೌಡಗೆರೆ, ಅಬ್ಬೇನಹಳ್ಳಿ, ಮಲ್ಲೂರಹಳ್ಳಿ, ತಿಮ್ಮಪ್ಪಯ್ಯನಹಳ್ಳಿ, ಎನ್.ದೇವರಹಳ್ಳಿ, ಎನ್.ಮಹದೇವಪುರ ಗ್ರಾಮ ಪಂಚಾಯಿತಿಗಳ ಗ್ರಾಮಗಳು ಬರದಿಂದ ನಲುಗಿವೆ.

‘ಹಸಿರೀಕರಣದ ಕೊರತೆಯಿಂದ ಮಳೆ ಪ್ರಮಾಣ ತಗ್ಗಿದ್ದು, ಕೆರೆಕಟ್ಟೆಗಳು ಬತ್ತಿಹೋಗಿವೆ. ಇದರಿಂದ ಅಂತರ್ಜಲ ಮಟ್ಟ ಕುಸಿದು ಕುಡಿಯುವ ನೀರಿಗೆ ಹಾಹಾಕಾರ ಎದುರಾಗಿದೆ. ಬಹುತೇಕ ಎಲ್ಲ ಗ್ರಾಮಗಳು ಕುಡಿಯುವ ನೀರಿಗೆ ಕೊಳವೆಬಾವಿಯನ್ನು ನಂಬಿಕೊಂಡಿವೆ. ಆದರೆ, ಕುಸಿದ ಅಂತರ್ಜಲದಿಂದ ಹೊರಬರುವ ನೀರಿನಲ್ಲಿ ಯಥೇಚ್ಛವಾದ ಫ್ಲೋರೈಡ್ ಅಂಶವಿದ್ದು, ಆ ನೀರನ್ನೇ ಜನರು ಬಳಸುವ ಅನಿವಾರ್ಯ ಸ್ಥಿತಿ ಇದೆ’ ಎಂದು ತಳಕು ಗ್ರಾಮದ ಟಿ.ವೀರೇಶ ಹೇಳುತ್ತಾರೆ.

‘ತುರ್ತಾಗಿ ಪ್ರತಿ ಗ್ರಾಮದ ಕೆರೆಗಳಿಗೆ ಭದ್ರಾ ಮೇಲ್ದಂಡೆ ಮೂಲಕ ನೀರುಣಿಸಬೇಕು. ತುಂಗಭದ್ರಾ ಹಿನ್ನೀರಿನಿಂದ ಕುಡಿಯುವ ನೀರಿನ ಸರಬರಾಜು ಮಾಡಬೇಕು ಹಾಗೂ ಗ್ರಾಮಗಳಲ್ಲಿ ಯಥೇಚ್ಛವಾಗಿ ಸಸಿಗಳನ್ನು ಬೆಳೆಸುವಂತಾದರೆ ಸಕಾಲಕ್ಕೆ ಮಳೆ ಬಂದು ರೈತರ ಕೃಷಿ ಚಟುವಟಿಕೆಗೆ, ಜನ ಜಾನುವಾರಿಗೆ ಕುಡಿಯುವ ನೀರು ದೊರೆಯುತ್ತದೆ’ ಎನ್ನುವರು ಕಾಟಂದೇವರಕೋಟೆಯ ಯುವಕ ಶಿವರಾಜ್.

‘ಓಬಳಾಪುರದ ಕೆರೆಯನ್ನು ಭದ್ರಾ ಮೇಲ್ದಂಡೆ ಯೋಜನೆ ವ್ಯಾಪ್ತಿಯಿಂದ ಕೈಬಿಟ್ಟಿದ್ದು ಸರಿಯಲ್ಲ. ಕಾಟಂದೇವರಕೋಟೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ದುರಸ್ತಿಗೊಳಿಸಬೇಕು. ಆಂಧ್ರಪ್ರದೇಶದ ಗಡಿ ಗ್ರಾಮಗಳಲ್ಲಿ ಅಕ್ರಮ ಮದ್ಯ ಮಾರಾಟ ಹಾವಳಿ ತಡೆಯಬೇಕು’ ಎಂದು ಒತ್ತಾಯಿಸುವರು ನಾಗೇಂದ್ರ.

ಪ್ರತಿ ಗ್ರಾಮ ಪಂಚಾಯಿತಿಯು ಉದ್ಯೋಗ ಖಾತ್ರಿ ಯೋಜನೆಯಲ್ಲಿ ಹಸಿರೀಕರಣಕ್ಕೆ ಆದ್ಯತೆ ನೀಡಬೇಕು. ಗ್ರಾಮ ಉದ್ಯಾನಗಳನ್ನು ಬೆಳೆಸಲು ಕ್ರಿಯಾಯೋಜನೆ ರೂಪಿಸಬೇಕು.

ವಿ.ಸೋಮಶೇಖರ್, ಕೋಡಿಹಳ್ಳಿ

ಗಿಡ ಮರಗಳನ್ನು ಬೆಳೆಸುವುದು ಕೇವಲ ಅರಣ್ಯ ಇಲಾಖೆಯ ಕೆಲಸವಲ್ಲ. ಪ್ರತಿ ಮನೆಗೂ ಎರಡೆರಡು ಸಸಿಗಳನ್ನು ಪಂಚಾಯಿತಿಯಿಂದ ನೀಡಿ ಬೆಳೆಸಲು ಪ್ರೋತ್ಸಾಹ ನೀಡಬೇಕು.

ಸರೋಜಮ್ಮ, ಅಬ್ಬೇನಹಳ್ಳಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.