ಚಳ್ಳಕೆರೆ ತಾಲ್ಲೂಕಿನ ನನ್ನಿವಾಳದಲ್ಲಿರುವ ಮ್ಯಾಸಬೇಡ ಸಮುದಾಯದ ಮೂಲ ಕಟ್ಟೆಮನೆ
ಚಳ್ಳಕೆರೆ ತಾಲ್ಲೂಕಿನ ಬಂಗಾರ ದೇವರಹಟ್ಟಿಯಲ್ಲಿರುವ ಗಾದ್ರಿಪಾಲನಾಯಕ ಬಂಗಾರ ದೇವರ ಗುಡಿ
ಅತ್ತೆ-ಸೊಸೆಯರ ಡಿಕ್ಕಿ ಆಚರಣೆ
ಗಾದ್ರಿ ಪಾಲನಾಯಕ ದೇವರು ಮತ್ತು ಹುಲಿಯೊಂದಿಗೆ ನಡೆದ ಯುದ್ಧದ ಅನುಕರಣೆ ಎಂಬಂತೆ ಬಂಗಾರ ದೇವರಿಗೆ ಹುಲಿಯ ಸ್ಮರಣಾರ್ಥ ನಡೆಯುವ ಡಿಕ್ಕಿ ಆಚರಣೆ ಹಬ್ಬದ ವಿಶೇಷ. ಬಂಗಾರ ದೇವರಿಗೆ ತೆಂಗಿನ ಕಾಯಿ ಒಡೆಯುವಂತಿಲ್ಲ. ಗಂಡುಹುಲಿ ನೀರು ಕುಡಿದು ಸತ್ತರೆ ಹೆಣ್ಣುಹುಲಿ ನೀರು ಕುಡಿಯದೇ ಸತ್ತಿದ್ದರಿಂದ ನೀರುಳ್ಳ ತೆಂಗಿನಕಾಯಿ ದೇವರಿಗೆ ಆಗುವುದಿಲ್ಲ. ಹಾಗಾಗಿ ತೆಂಗಿನಕಾಯಿ ರೀತಿಯಲ್ಲಿರುವ ತಲೆಗಳನ್ನು ಮಹಿಳೆಯರು ಒಬ್ಬರಿಗೊಬ್ಬರು ಡಿಕ್ಕಿ ಹೊಡೆಯಿಸಿಕೊಳ್ಳುವ ಮೂಲಕ ತೆಂಗಿನ ಕಾಯಿ ಒಡೆಯುವ ಪ್ರಕ್ರಿಯೆಗೆ ಚಾಲನೆ ನೀಡುತ್ತಾರೆ. ಈ ಆಚರಣೆಯಲ್ಲಿ ಕಟ್ಟೆಮನೆ ದೊರೆ ಮತ್ತು ಬಂಗಾರದೇವರ ಪೂಜಾರಿಗಳ ಕುಟುಂಬ ವರ್ಗದವರು ಬಂಧುಗಳು ಭಾಗವಹಿಸುತ್ತಾರೆ. ಅತ್ತೆ -ಸೊಸೆಯಂದಿರು ಇದರಲ್ಲಿ ಭಾಗವಹಿಸುವ ಸ್ಪರ್ಧಿಗಳು. ಸ್ಪರ್ಧೆಗೂ ಮುನ್ನ ಪೂಜಾರಿಯ ಕಾಲಿಗೆ ಬಿದ್ದು ಆಶೀರ್ವಾದ ಪಡೆಯುತ್ತಾರೆ. ಪೂಜಾರಿ ಸಣ್ಣ ಬೆಂಕಿ ಹಚ್ಚಿ ಅದು ಸುಟ್ಟ ನಂತರ ಸ್ಪರ್ಧಿಗಳ ಮೇಲೆ ಗೋಗಂಜಲು ಪ್ರೋಕ್ಷಣೆ ಮಾಡುವ ಮೂಲಕ ಡಿಕ್ಕಿಗೆ ಸಮ್ಮತಿ ಸೂಚಿಸುತ್ತಾರೆ. ಅತ್ತೆ-ಸೊಸೆಯರು ಉನ್ನತ್ತರಾದವರಂತೆ ಒಬ್ಬರ ತಲೆಗಳನ್ನು ಒಬ್ಬರು ಹಿಡಿದು ಗುದ್ದಿಕೊಳ್ಳುತ್ತಾರೆ. ಒಮ್ಮೊಮ್ಮೆ ಉನ್ಮಾದದಲ್ಲಿ ಜುಟ್ಟು ಹಿಡಿದುಕೊಂಡು ಕುಸ್ತಿಗೆ ಇಳಿದು ಬಿಡುತ್ತಾರೆ. ಬೆತ್ತದ ಕೋಲಿನವರು ಅವರಿಗೆ ಸಮಾಧಾನ ಮಾಡುತ್ತಿರುತ್ತಾರೆ. ಹೀಗೆ ಅರ್ಧಗಂಟೆಗೂ ಹೆಚ್ಚು ನಡೆಯುವ ಈ ವಿಶಿಷ್ಟ ಆಚರಣೆ ನೋಡಲು ಜನಸಾಗರವೇ ಸೇರುತ್ತದೆ.