ಶುಕ್ರವಾರ, 13 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಿತ್ರದುರ್ಗ: ಅಬ್ಬರಿಸಿದ ಮಳೆ; ನೀರಿನಲ್ಲಿ ಮುಳುಗಿದ ಮಳಿಗೆ

ಮುಂಗಾರು ಆರಂಭವಾದ ಬಳಿಕ ಮೊದಲ ಬಾರಿಗೆ ಧಾರಾಕಾರ ಮಳೆ, ನಸುಕಿನಲ್ಲಿ ಬಂದ ವರುಣ
Published : 14 ಆಗಸ್ಟ್ 2024, 15:53 IST
Last Updated : 14 ಆಗಸ್ಟ್ 2024, 15:53 IST
ಫಾಲೋ ಮಾಡಿ
Comments

ಚಿತ್ರದುರ್ಗ: ಕೋಟೆನಾಡಿನ ಜನರು ಬುಧವಾರ ಬೆಳಿಗ್ಗೆ ಹಾಸಿಗೆಯಿಂದ ಮೇಲೆದ್ದು ಹೊರ ಬರುವಷ್ಟರಲ್ಲಿ ಮನೆಯ ಮುಂದಿನ ರಸ್ತೆಗಳು ಜಲಾವೃತಗೊಂಡಿದ್ದವು. ನಸುಕಿನಲ್ಲಿ ಅಬ್ಬರಿಸಿದ ಮಳೆಗೆ ಚರಂಡಿ, ಕಾಲುವೆ, ಹಳ್ಳಗಳು ಉಕ್ಕಿ ಹರಿದವು. ತಗ್ಗು ಪ್ರದೇಶದ ಹಲವು ಅಂಗಡಿ, ಮಳಿಗೆಗಳು ನೀರಿನಲ್ಲಿ ಮುಳುಗಿದ್ದವು.

ನಸುಕಿನ 3 ಗಂಟೆ ವೇಳೆಗೆ ಗುಡುಗು, ಮಿಂಚು ಸಹಿತ ಮಳೆ ಆರಂಭವಾಯಿತು. ನಿರಂತರವಾಗಿ 2 ಗಂಟೆ ಮಳೆ ಸುರಿದ ಹಿನ್ನೆಲೆಯಲ್ಲಿ ಎಲ್ಲೆಡೆ ನೀರು ತುಂಬಿ ಹರಿಯಿತು. ಮುಂಗಾರು ಆರಂಭವಾದ ನಂತರ ಇದೇ ಮೊದಲ ಬಾರಿಗೆ ಧಾರಾಕಾರ ಮಳೆ ಸುರಿದ ಹಿನ್ನೆಲೆಯಲ್ಲಿ ಜನರಲ್ಲಿ ಆಶ್ಚರ್ಯ ಸೃಷ್ಟಿಯಾಯಿತು. ಕತ್ತಲು ಸರಿದು ಬೆಳಕಾಗುವಷ್ಟರಲ್ಲಿ ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದವು.

ನಗರದ ಗಾಂಧಿ ವೃತ್ತದ ನೆಲ ಮಳಿಗೆಯಲ್ಲಿರುವ ಅಂಗಡಿಗಳಲ್ಲಿ ಎಂಟತ್ತು ಅಡಿ ನೀರು ನಿಂತಿದ್ದ ಕಾರಣ ಮಳಿಗೆ ಮಾಲೀಕರು ಅಪಾರ ನಷ್ಟ ಅನುಭವಿಸಿದರು. ಬೆಳ್ಳಂಬೆಳಿಗ್ಗೆ ಅಂಗಡಿ ಬಾಗಿಲು ತೆರೆದಾಗ ವಸ್ತುಗಳೆಲ್ಲವೂ ನೀರು ಪಾಲಾಗಿದ್ದರು. ನಗರಸಭೆ ಸಿಬ್ಬಂದಿ, ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಬಂದು ನೀರು ಹೊರತೆಗೆಯುವ ಕಾರ್ಯಾಚರಣೆ ನಡೆಸಿದರು.

ಪ್ರತಿ ಬಾರಿ ಮಳೆ ಬಂದಾಗಲೂ ಇದೇ ಪರಿಸ್ಥಿತಿ ಅನುಭವಿಸುತ್ತಿರುವುದಕ್ಕೆ ಅಂಗಡಿ ಮಾಲೀಕರು ನಗರಸಭೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮಳೆನೀರು ನುಗ್ಗದಂತೆ ಶಾಶ್ವತ ಕ್ರಮ ವಹಿಸಬೇಕು ಎಂದು ಒತ್ತಾಯ ಮಾಡಿದರು. ಈ ವೇಳೆ ಅಂಗಡಿ ಮಾಲೀಕರು ಹಾಗೂ ನಗರಸಭೆ ಸಿಬ್ಬಂದಿ ನಡುವೆ ಮಾತಿನ ಚಕಮಕಿಯೂ ನಡೆಯಿತು.

ಅನಾಹುತದ ಸ್ಥಳಕ್ಕೆ ಪೌರಾಯುಕ್ತೆ ರೇಣುಕಾ ಭೇಟಿ ನೀಡಿದಾಗ ಜನರು, ವರ್ತಕರು ಆಕ್ರೋಶ ವ್ಯಕ್ತಪಡಿಸಿದರು. ಮಳೆ ನೀರು ನುಗ್ಗಿದ್ದಕ್ಕೆ ಪರಿಹಾರ ಕೊಡಿ ಎಂದು ಆಗ್ರಹಿಸಿದರು. 

ಮುಖ್ಯ ರಸ್ತೆ ಮೇಲಿನ ನೀರು ಬಟ್ಟೆ ಅಂಗಡಿಗೆ ನೀರು ನುಗ್ಗಿದ ಪರಿಣಾಮ ಹಲವು ಅಂಗಡಿಗಳು ಮುಳುಗಿದ್ದವು. ಮೆಟಲ್‌ ಸ್ಟೋರ್‌, ಖಾಸಗಿ ಬಸ್ ನಿಲ್ದಾಣದ ಸಮೀಪದ ಕೃಷಿ ಉಪಕರಣದ ಮಳಿಗೆಯ ವಸ್ತುಗಳು ಹಾಳಾದವು. ಗಾಂಧಿವೃತ್ತದಲ್ಲಿ ಜಮಾಯಿಸಿದ ವರ್ತಕರು ಜಿಲ್ಲಾಡಳಿತ, ಸ್ಥಳೀಯ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ರಸ್ತೆ ನಿರ್ಮಾಣ ಮಾಡುವಾಗ ಜಿಲ್ಲಾಡಳಿತ ಸೂಕ್ತ ನಿಗಾವಹಿಸದಿರುವುದೇ ಸಮಸ್ಯೆ ಸೃಷ್ಟಿಗೆ ಕಾರಣ ಎಂದು ದೂರಿದರು.

ನಗರದ ಬುರುಜನಹಟ್ಟಿಯಲ್ಲಿರುವ ಸಿಹಿನೀರಿನ ಹೊಂಡ ಮಳೆನೀರಿನಿಂದ ತುಂಬಿದ್ದು ಕೋಡಿ ಬಿದ್ದಿದೆ. ತಾಲ್ಲೂಕಿನ ಹಿರೇಗುಂಟನೂರು, ಭರಮಸಾಗರದಲ್ಲೂ ಧಾರಾಕಾರ ಮಳೆ ಸುರಿದಿದೆ.

ಜೋಗಿಮಟ್ಟಿ ರಸ್ತೆಯಲ್ಲಿ ಮಳೆಗೆ ಮರದ ಕೊಂಬೆ ಮುರಿದು ಬಿದ್ದಿರುವುದು
ಜೋಗಿಮಟ್ಟಿ ರಸ್ತೆಯಲ್ಲಿ ಮಳೆಗೆ ಮರದ ಕೊಂಬೆ ಮುರಿದು ಬಿದ್ದಿರುವುದು
ಸ್ವಾತಂತ್ರ್ಯ ದಿನಾಚರಣೆಗೆ ಸಿದ್ಧವಾಗಿದ್ದ ಶಾಮಿಯಾನ ಉರುಳಿರುವುದು
ಸ್ವಾತಂತ್ರ್ಯ ದಿನಾಚರಣೆಗೆ ಸಿದ್ಧವಾಗಿದ್ದ ಶಾಮಿಯಾನ ಉರುಳಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT