ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ | ಬಿರುಗಾಳಿ, ಮಳೆ: 36 ಹೆಕ್ಟೇರ್‌ ಬೆಳೆ ಹಾನಿ

Last Updated 10 ಮೇ 2022, 3:54 IST
ಅಕ್ಷರ ಗಾತ್ರ

ಚಳ್ಳಕೆರೆ: ಭಾನುವಾರ ಸುರಿದ ಭಾರಿ ಮಳೆ ಹಾಗೂ ಬಿರುಗಾಳಿಯಿಂದ ಹಾನಿಗೊಳಗಾದ ಪ್ರದೇಶಕ್ಕೆ ಭೇಟಿ ನೀಡಿ ಅಲ್ಲಿನ ಬೆಳೆ ಮತ್ತು ಮನೆ ಹಾನಿ ಕುರಿತ ವರದಿಯನ್ನು ಕೂಡಲೇ ತಯಾರಿಸಬೇಕು ಎಂದು ಶಾಸಕ ಟಿ.ರಘುಮೂರ್ತಿ ಅಧಿಕಾರಿಗಳಿಗೆ ಸೂಚಿಸಿದರು.

ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಅಧಿಕಾರಿಗಳ ತುರ್ತು ಸಭೆಯಲ್ಲಿ ಮಾತನಾಡಿದರು.

ಮನೆ, ಬೆಳೆ ಜನ–ಜಾನುವಾರು ಜೀವ ಹಾನಿ ವರದಿಯನ್ನು ಕಳುಹಿಸಿಕೊಡುವ ಸರ್ಕಾರದಿಂದ ಸೂಕ್ತ ಪರಿಹಾರ ತರಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು.ಮಳೆ–ಗಾಳಿಗೆ ಸಿಲುಕಿ ವಿದ್ಯುತ್ ಕಂಬ ಹಾಗೂ ತಂತಿ ಹರಿದು ಬಿದ್ದು ಸಂಪರ್ಕ ಕಡಿತಗೊಂಡಿರುವುದನ್ನು ಕೂಡಲೇ ಸರಿಪಡಿಸಬೇಕು ಎಂದು ತಾಕೀತು ಮಾಡಿದರು.

ಈಗಾಗಲೇ ಪಿಯು ಮತ್ತು ಪದವಿ ತರಗತಿಯ ಪರೀಕ್ಷೆಗಳು ನಡೆಯುತ್ತಿವೆ. ಪದೇ ಪದೇ ವಿದ್ಯುತ್ ಸಂಪರ್ಕ ಕಡಿತಗೊಳಿಸಿದರೆ ವಿದ್ಯಾರ್ಥಿಗಳಿಗೆತೊಂದರೆಯಾಗುತ್ತದೆ. ಪರೀಕ್ಷೆ ಮುಗಿಯುವವರೆಗೂ ದಿನದ 24 ಗಂಟೆ ನಿರಂತರ ವಿದ್ಯುತ್ ಸರಬರಾಜಿಗೆ ಬೆಸ್ಕಾಂ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದರು.

ಸರ್ಕಾರಿ ಗೋಮಾಳ, ಗ್ರಾಮಠಾಣ ಭೂಮಿಯಲ್ಲಿ ಪ್ರತಿ ಗ್ರಾಮದಲ್ಲಿ ಸ್ಮಶಾನ ಜಾಗದ ಜತೆಗೆ ನಿವೇಶನ ರಹಿತ ಬಡ ಕುಟುಂಬಗಳಿಗೆ ನಿವೇಶನ ಹಂಚಲು ಕ್ರಮ ಕೈಗೊಳ್ಳಬೇಕು ಎಂದು ತಹಶೀಲ್ದಾರ್‌ ಅವರಿಗೆ ಸೂಚಿಸಿದರು.

ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಡಾ.ವಿರೂಪಾಕ್ಷಪ್ಪ, ‘ಕ್ಯಾದಿಗುಂಟೆ, ದೊಡ್ಡಚೆಲ್ಲೂರು, ನೇರಲಗುಂಟೆ, ಗೌರಿಪುರ, ಪರಶುರಾಂಪುರ, ತಳಕು ಹೋಬಳಿ ಸುತ್ತಲಿನ ಗ್ರಾಮದ ಅಡಿಕೆ, ಬಾಳೆ, ತೆಂಗು, ಪಪ್ಪಾಯಿ ಸೇರಿ ತಾಲ್ಲೂಕಿನಲ್ಲಿ 36 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಇದರಿಂದ₹ 80 ಲಕ್ಷ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ’ ಎಂದು ಹೇಳಿದರು.

ತಹಶೀಲ್ದಾರ್ ಎನ್.ರಘುಮೂರ್ತಿ ಮಾತನಾಡಿ, ‘ಕೃಷಿ, ತೋಟಗಾರಿಕೆ ಹಾಗೂ ಕಂದಾಯ ಅಧಿಕಾರಿಗಳು ಬೆಳೆ ಹಾನಿಗೊಳಗಾದ ಪ್ರದೇಶಕ್ಕೆ ಭೇಟಿ ನೀಡಿ ಜಂಟಿಯಾಗಿ ಸಮೀಕ್ಷೆ ವರದಿಯನ್ನು ತಯಾರಿಸುತ್ತಿದ್ದಾರೆ.ವರದಿ ನೀಡಿದ ಮಾತ್ರಕ್ಕೆ ಪರಿಹಾರ ದೊರೆಯುವುದಿಲ್ಲ. ಹಾಗಾಗಿ ಸರ್ಕಾರದ ಮೇಲೆ ಒತ್ತಡ ಹಾಕುವ ಮೂಲಕ ಅರ್ಹರಿಗೆ ಪರಿಹಾರ ಕೊಡಿಸಬೇಕು’ ಎಂದು ಶಾಸಕರಲ್ಲಿ ಮನವಿಮಾಡಿದರು.

ಶುದ್ಧ ಕುಡಿಯುವ ನೀರಿನ ಘಟಕ, ರಂಗಮಂದಿರ, ಶಾಲಾ ಕೊಠಡಿಯ ಚಾವಣಿಯ ಹೆಂಚು, ಶೀಟ್ ಬಿರುಗಾಳಿಗೆ ಹಾರಿ ಹೋಗಿವೆ. ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ.ಮಳೆ ಹಾಗೂ ಗಾಳಿ ಬೀಸುವ ಸಂದರ್ಭದಲ್ಲಿ ಮರ, ಹಳೆಮನೆ ಹಾಗೂ ವಿದ್ಯುತ್ ಪರಿವರ್ತಕದ ಬಳಿ ನಿಲ್ಲದಂತೆ ಎಚ್ಚರಿ ವಹಿಸಲು ಪ್ರತಿ ಗ್ರಾಮದಲ್ಲಿ ಟಾಂಟಾಂ ಹೊಡೆಸಬೇಕು ಎಂದು ಪಿಡಿಒಗಳಿಗೆ ಸಲಹೆ ನೀಡಿದರು.

ಕೃಷಿ ಅಧಿಕಾರಿ ಡಾ.ಅಶೋಕ್, ಕಂದಾಯ ಅಧಿಕಾರಿ ನಿಂಗೇಗೌಡ, ಪ್ರಕಾಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT