ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಿರಿಯೂರು: ಜಾಗ ಯಾವುದಯ್ಯ ಅಂತ್ಯಸಂಸ್ಕಾರಕೆ?

Published : 2 ಜುಲೈ 2023, 5:37 IST
Last Updated : 2 ಜುಲೈ 2023, 5:37 IST
ಫಾಲೋ ಮಾಡಿ
Comments

ಸುವರ್ಣಾ ಬಸವರಾಜ್

ಹಿರಿಯೂರು: ನ್ಯಾಯಾಲಯದ ಆದೇಶದ ಮೇರೆಗೆ ಕಂದಾಯ ಇಲಾಖೆಯು ತಾಲ್ಲೂಕಿನ 163 ಗ್ರಾಮಗಳಲ್ಲಿ ಸ್ಮಶಾನಕ್ಕೆ ಭೂಮಿ ಮಂಜೂರು ಮಾಡಿ ಆದೇಶ ಹೊರಡಿಸಿದೆ. ಆದರೆ ಈವರೆಗೂ ಜಾಗ ಗುರುತಿಸದ ಕಾರಣ ಶವಸಂಸ್ಕಾರದ ಸಮಸ್ಯೆ ಮತ್ತೆ ತಲೆದೋರಿದೆ. 

ಕೆಲ ದಿನಗಳ ಹಿಂದೆ ತಾಲ್ಲೂಕಿನ ಕರಿಯಾಲ ಗ್ರಾಮ ಪಂಚಾಯಿತಿಯ ಜಾಡಮಾಲಿ ರಂಗಪ್ಪ ಎಂಬುವರು ಮೃತರಾಗಿದ್ದರು. ಸ್ವಂತ ಭೂಮಿ ಇಲ್ಲದ ಕಾರಣ ಶವ ಸಂಸ್ಕಾರ ಮಾಡುವುದು ಎಲ್ಲಿ ಎಂಬ ಚಿಂತೆ ಅವರ ಮಕ್ಕಳನ್ನು ಕಾಡತೊಡಗಿತ್ತು. ಗ್ರಾಮದ ಆಸುಪಾಸಿನಲ್ಲಿರುವ ಸರ್ಕಾರಿ ಭೂಮಿಯಲ್ಲೇ ಅಂತಿಮ ಸಂಸ್ಕಾರ ನಡೆಸಲು ನಿರ್ಧರಿಸಲಾಗಿತ್ತು. ಆ ಭೂಮಿಯನ್ನು ಉಳುಮೆ ಮಾಡುತ್ತಿದ್ದವರು ಇದಕ್ಕೆ ಅವಕಾಶ ಕೊಟ್ಟಿರಲಿಲ್ಲ. ಇದರಿಂದ ಬೇಸತ್ತ ಮಕ್ಕಳು ಗ್ರಾಮ ಪಂಚಾಯಿತಿ ಕಚೇರಿ ಎದುರೇ ಸಂಸ್ಕಾರ ನಡೆಸಲು ಸಿದ್ಧತೆ ಕೈಗೊಂಡಿದ್ದರು. ಆದರೆ ಗ್ರಾಮದ ಮುಖಂಡರೆಲ್ಲ ಸೇರಿ ಊರಿಗೆ ಸಮೀಪದಲ್ಲಿರುವ ಗಾಣದಹುಣಿಸೆ ಹಳ್ಳದ ದಡದಲ್ಲಿ ಸಂಸ್ಕಾರಕ್ಕೆ ಅವಕಾಶ ಕಲ್ಪಿಸಿದ್ದರಿಂದ ಸಮಸ್ಯೆ ತಾತ್ಕಾಲಿಕವಾಗಿ ಶಮನಗೊಂಡಿತ್ತು.

‘ಕರಿಯಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 13 ಹಳ್ಳಿಗಳಿವೆ. ಅವುಗಳಲ್ಲಿ ಓಣಿಹಟ್ಟಿ, ಕಿಲ್ಲಾರದಹಳ್ಳಿ ಗೊಲ್ಲರಹಟ್ಟಿ ಹಾಗೂ ಲಂಬಾಣಿ ತಾಂಡಾಗಳಿಗೆ ಮಾತ್ರ ಸ್ಮಶಾನದ ಸಮಸ್ಯೆ ಇಲ್ಲ. ಉಳಿದಂತೆ ಕರಿಯಾಲ, ಮರಡಿಹಟ್ಟಿ, ಮೂಡ್ಲಹಟ್ಟಿ, ಗಾಯತ್ರಿಪುರ, ಬೆಣ್ಣೆಈರಪ್ಪನಹಟ್ಟಿ, ತಮಿಳುಕಾಲೊನಿ, ಬೋವಿಕಾಲೊನಿಗಳಿಗೆ ಸ್ಮಶಾನ ಜಾಗ ಕಲ್ಪಿಸಿಲ್ಲ’ ಎನ್ನುತ್ತಾರೆ ಗ್ರಾಮ ಪಂಚಾಯಿತಿ ಸದಸ್ಯ ಓ.ರಾಮಯ್ಯ.

ಕಂದಾಯ ಇಲಾಖೆಯವರು ಸ್ಮಶಾನದ ಜಾಗವನ್ನು ಗುರುತಿಸಿಕೊಟ್ಟಲ್ಲಿ ನರೇಗಾ ಅಥವಾ ಬೇರೆ ಯಾವುದಾದರೂ ಯೋಜನೆಯಡಿ ತಂತಿಬೇಲಿ ಹಾಕಿ ಅಭಿವೃದ್ಧಿ ಪಡಿಸುತ್ತೇವೆ. ಭೂರಹಿತ ಬಡವರ ‍ಪಾಲಿಗೆ ಶವಸಂಸ್ಕಾರ ದೊಡ್ಡ ಸಮಸ್ಯೆ ಆಗಿದೆ.
ಚಂದ್ರಕಲಾ, ಪಿಡಿಒ, ಕರಿಯಾಲ ಗ್ರಾಮ ಪಂಚಾಯಿತಿ

‘ಸ್ವಂತ ಜಮೀನು ಇದ್ದವರಿಗೆ ಶವಸಂಸ್ಕಾರದ ಸಮಸ್ಯೆ ಅರಿವಿಗೆ ಬರುವುದಿಲ್ಲ. ಕೂಲಿಯನ್ನೇ ನಂಬಿ ಬದುಕು ನಡೆಸುತ್ತಿರುವವರ ಮನೆಗಳಲ್ಲಿ ಸಾವು ಸಂಭವಿಸಿದರೆ ಸಂಸ್ಕಾರಕ್ಕೆ ಜಾಗ ಹುಡುಕಲು ಪ್ರಯಾಸಪಡಬೇಕು. ಅವರಿವರಿಂದ ನಿಂದನೆ, ವಿರೋಧ ಎದುರಿಸಬೇಕಾಗುತ್ತದೆ. ಸ್ಮಶಾನದ ಜಾಗವನ್ನು ಸ್ಪಷ್ಟವಾಗಿ ಗುರುತಿಸದ ಎಲ್ಲ ಊರುಗಳ ಬಡವರದ್ದೂ ಇದೇ ಗೋಳು’ ಎನ್ನುತ್ತಾರೆ ರಾಮಯ್ಯ.

ಪಹಣಿಯಲ್ಲಿ ಸ್ಮಶಾನದ ಹೆಸರು ಬರುತ್ತಿದೆ. ಆದರೆ, ಎಲ್ಲಿದೆ ಎಂದು ಯಾರಿಗೂ ತಿಳಿಯದು. ಊರಿನ ಆಸುಪಾಸಿನಲ್ಲಿ ಇದ್ದ ಸರ್ಕಾರಿ ಭೂಮಿಯನ್ನು ರೈತರು ಸಾಗುವಳಿ ಮಾಡಿದ್ದಾರೆ. ಅಲ್ಲಿ ಸಂಸ್ಕಾರ ಮಾಡಲು ಅವಕಾಶ ಸಿಗುತ್ತಿಲ್ಲ. ತಹಶೀಲ್ದಾರ್‌ ಹಾಗೂ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನಡುವೆ ಸಮನ್ವತೆ ಏರ್ಪಟ್ಟರೆ ಈ ಸಮಸ್ಯೆಗೆ ಖಂಡಿತಾ ಪರಿಹಾರ ಸಿಗುತ್ತದೆ ಎಂದು ಅವರು ಹೇಳುತ್ತಾರೆ.

ಗ್ರಾ.ಪಂ.ಗಳಿಗೆ ಹಸ್ತಾಂತರಿಸಿದ್ದೇವೆ:

ತಹಶೀಲ್ದಾರ್ ‘ತಾಲ್ಲೂಕಿನ 163 ಹಳ್ಳಿಗಳಿಗೆ ಸ್ಮಶಾನ ಭೂಮಿ ಮಂಜೂರು ಮಾಡಿ ಜಾಗವನ್ನು ಆಯಾ ಗ್ರಾಮ ಪಂಚಾಯಿತಿಗಳಿಗೆ ಹಸ್ತಾಂತರಿಸಿದ್ದೇವೆ. ಸ್ಮಶಾನದ ಜಾಗ ಎಂದು ಪಹಣಿಯ 11ನೇ ಕಾಲಂನಲ್ಲೇ ನಮೂದಾಗಿರುತ್ತದೆ. ತಾಲ್ಲೂಕು ಪಂಚಾಯಿತಿಯಿಂದ ಸ್ಮಶಾನದ ಅಭಿವೃದ್ಧಿ ಮಾಡಿಕೊಳ್ಳಬೇಕು. ಶವಸಂಸ್ಕಾರಕ್ಕೆ ಯಾರಾದರೂ ಅಡ್ಡಿಪಡಿಸಿದರೆ ಬೇರೆ ಏನಾದರೂ ಕಾನೂನು ಸಮಸ್ಯೆ ಉಂಟಾದರೆ ನಮ್ಮ ಗಮನಕ್ಕೆ ತಂದಲ್ಲಿ ಪರಿಹರಿಸುತ್ತೇವೆ’ ಎಂದು ತಹಶೀಲ್ದಾರ್ ಪ್ರಶಾಂತ್ ಪಾಟೀಲ್ ಹೇಳುತ್ತಾರೆ.

ಜಾಗ ಗುರುತಿಸಲು ತಹಶೀಲ್ದಾರ್‌ಗೆ ಪತ್ರ ಬರೆದಿದ್ದೇವೆ: ಇಒ ‘ಕಂದಾಯ ಇಲಾಖೆಯಿಂದ ಸ್ಮಶಾನಗಳ ಹಸ್ತಾಂತರ ಆಗಿರುವುದು ನಿಜ. ಆದರೆ ಸ್ಮಶಾನಕ್ಕೆ ಕೊಟ್ಟಿರುವ ಜಾಗ ಎಲ್ಲಿದೆ ಎಂಬುದು ತಿಳಿಯುತ್ತಿಲ್ಲ. ಹೀಗಾಗಿ ಒಂದು ತಿಂಗಳ ಹಿಂದೆ ಸರ್ವೆಯರ್ ಮೂಲಕ ಸ್ಮಶಾನದ ಜಾಗವನ್ನು ಅಳತೆ ಮಾಡಿಸಿಕೊಡಿ ಎಂದು ತಹಶೀಲ್ದಾರ್‌ಗೆ ಪತ್ರ ಬರೆದಿದ್ದೇವೆ. ಆದಷ್ಟು ಬೇಗ ಈ ಸಮಸ್ಯೆಯನ್ನು ಪರಿಹರಿಸುತ್ತೇವೆ’ ಎಂದು ತಾಲ್ಲೂಕು ಪಂಚಾಯಿತಿ ಇಒ ಶಿವಪ್ರಕಾಶ್ ಸ್ಪಷ್ಟನೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT