ಸೋಮವಾರ, ಮಾರ್ಚ್ 20, 2023
30 °C
ಹೊಸದುರ್ಗ ತಾಲ್ಲೂಕಿನ ಕೆಲ್ಲೋಡಿನಲ್ಲಿ ಸುರಿದ ಬಿರುಸಿನ ಮಳೆ

ಮನೆಯ ಗೋಡೆ ಕುಸಿದು ಮಗು ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೆಲ್ಲೋಡು (ಹೊಸದುರ್ಗ):  ಮಂಗಳವಾರ ರಾತ್ರಿ ಸುರಿದ ಬಿರುಸಿನ ಮಳೆಗೆ ತಾಲ್ಲೂಕಿನ ಕೆಲ್ಲೋಡು ಗ್ರಾಮದ ಓಂಕಾರಪ್ಪ ಅವರ ಮನೆಗೋಡೆ ಕುಸಿದು ಮಗುವೊಂದು ಮೃತಪಟ್ಟಿದೆ.

ಗ್ರಾಮದ ಓಂಕಾರಪ್ಪ ಹಾಗೂ ಸಾವಿತ್ರಮ್ಮ ಅವರ ಪುತ್ರ ಲೋಹಿತ್‌ (3) ಮೃತಪಟ್ಟ ಮಗು. ದಂಪತಿ ಗಾಯ ಗೊಂಡಿದ್ದಾರೆ. ಸಾವಿತ್ರಮ್ಮ ಅವರ ಹೊಟ್ಟೆಯ ಮೇಲೆ ಮರದ ತುಂಡು ಹಾಗೂ ಇಟ್ಟಿಗೆಗಳು ಬಿದ್ದಿರುವುದರಿಂದ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ದಾವಣಗೆರೆಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ರಾತ್ರಿ ಊಟ ಮಾಡಿ ಕುಟುಂಬದ 6 ಮಂದಿ ಸದಸ್ಯರು ಮನೆಯಲ್ಲಿ ಮಲಗಿದ್ದರು. ಸುಮಾರು ಅರ್ಧ ತಾಸು ಬಿರುಸಿನ ಮಳೆ ಸುರಿದಾಗ ದಿಢೀರನೆ ಗೋಡೆ ಕುಸಿದಿದೆ. ಮಗು ಹಾಗೂ ದಂಪತಿ ಮಣ್ಣಿನಲ್ಲಿ ಸಿಲುಕಿದ್ದರು. ಒಂದೂವರೆ ವರ್ಷ ಹಾಗೂ 5 ವರ್ಷದ ಬಾಲಕಿಯರಿಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನಿದ್ರೆಗಣ್ಣಿನಲ್ಲಿದ್ದ ಓಂಕಾರಪ್ಪ ಅವರ ಸಹೋದರ ಹಾಗೂ ಬಾಲಕಿಯರು ಗೋಡೆಬಿದ್ದ ಸದ್ದಿಗೆ ಭಯಭೀತರಾಗಿ ಕಿರುಚುತ್ತಾ ಮನೆಯಿಂದ ಹೊರಗೆ ಬಂದಿದ್ದಾರೆ.

ತಕ್ಷಣವೇ ಅಕ್ಕಪಕ್ಕದ ಮನೆಯವರು ಬಂದು ಮಣ್ಣು ಹಾಗೂ ಮರದ ದಿಮ್ಮಿಗಳ ಮಧ್ಯೆ ಸಿಲುಕಿದ್ದ ದಂಪತಿ ಹಾಗೂ ಮೃತಪಟ್ಟಿದ್ದ ಮಗುವನ್ನು ಹುಡುಕಿ ಹೊರಗೆ ತೆಗೆದಿದ್ದಾರೆ. ಪ್ರತಿದಿನ ಓಂಕಾರಪ್ಪ ಅವರ ಮನೆಯಲ್ಲಿಯೇ ಮಲಗುತ್ತಿದ್ದ ಅವರ ತಾಯಿ ರಾತ್ರಿ ಅದೇ ಗ್ರಾಮದಲ್ಲಿದ್ದ ಇನ್ನೊಬ್ಬ ಪುತ್ರನ ಮನೆಯಲ್ಲಿ ಮಲಗಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದ್ದ ಒಬ್ಬನೇ ಪುತ್ರ ಮೃತಪಟ್ಟಿದ್ದರಿಂದ ಪೋಷಕರ ಹಾಗೂ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಗ್ರಾಮಸ್ಥರು ಸಾಂತ್ವನ ಹೇಳಿದರು.

₹1.90 ಲಕ್ಷ ನಷ್ಟ: ತಾಲ್ಲೂಕಿನ ವಿವಿಧೆಡೆ ಮಂಗಳವಾರ ರಾತ್ರಿ ಸುರಿದ ಬಿರುಸಿನ ಮಳೆಗೆ ₹1.90 ಲಕ್ಷ ನಷ್ಟ ಉಂಟಾಗಿದೆ ಎಂದು ತಾಲ್ಲೂಕು ಕಂದಾಯ ಇಲಾಖೆ ಅಂದಾಜಿಸಿದೆ.

ಕೆಲ್ಲೋಡು ಗ್ರಾಮದ ಓಂಕಾರಪ್ಪ, ಕುರುಬರಹಳ್ಳಿ ಭೀಮಪ್ಪ, ಬೊಮ್ಮೇನ ಹಳ್ಳಿ ಮಾಸ್ತಪ್ಪ ಅವರ ಮನೆಗೋಡೆ ಕುಸಿದಿದೆ. ತೊಣಚೆನಹಳ್ಳಿ ರೈತ ಪರಪ್ಪ ಅವರ 80 ಬಾಳೆಗಿಡಗಳಿಗೆ ಹಾನಿಯಾಗಿದೆ.

ಉತ್ತಮ ಮಳೆಗೆ ಒಣಗುವ ಸ್ಥಿತಿಯಲ್ಲಿದ್ದ ಈರುಳ್ಳಿ, ಮೆಕ್ಕೆಜೋಳ, ಶೇಂಗಾ, ಹತ್ತಿ, ಸಾಮೆ ಬೆಳೆಗಳಿಗೆ ಜೀವಕಳೆ ಬಂದಿರುವುದರಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.