ಶನಿವಾರ, ಜನವರಿ 16, 2021
18 °C
ರಾತ್ರಿ ಪಾಳಿಯ ವೈದ್ಯರ ಗೈರು; ವೈದ್ಯಾಧಿಕಾರಿಗೆ ತರಾಟೆ

ಆಸ್ಪತ್ರೆಗೆ ಶಾಸಕಿ ದಿಢೀರ್ ಭೇಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಿರಿಯೂರು: ನಗರದ ಸಾರ್ವಜನಿಕ ಆಸ್ಪತ್ರೆಗೆ ಶುಕ್ರವಾರ ರಾತ್ರಿ ಹತ್ತು ಗಂಟೆ ಸಮಯದಲ್ಲಿ ಭೇಟಿ ನೀಡಿದ್ದ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ರಾತ್ರಿ ಪಾಳಿಯ ವೈದ್ಯರು ಹಾಜರಿಲ್ಲದಿರುವುದನ್ನು ಕಂಡು ದೂರವಾಣಿಯಲ್ಲಿ ವೈದ್ಯಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.

ರಕ್ತದೊತ್ತಡ ಕಡಿಮೆಯಾಗಿ ತುರ್ತು ಚಿಕಿತ್ಸೆಗೆಂದು ನಗರದ ಸಾರ್ವಜನಿಕ ಆಸ್ಪತ್ರೆಗೆ ರೋಗಿಯೊಬ್ಬರು ಬಂದಾಗ ಆಸ್ಪತ್ರೆ ಸಿಬ್ಬಂದಿ ಜಿಲ್ಲಾ ಆಸ್ಪತ್ರೆಗೆ ಹೋಗಿ ಎಂದು ಸಲಹೆ ನೀಡಿದ್ದಾರೆ. ರಾತ್ರಿ ಪಾಳಿಯ ವೈದ್ಯರು ಇಲ್ಲವೇ ಎಂದು ಕೇಳಿದಾಗ ಮೊದಲ ಮಹಡಿ ರೂಮಿನಲ್ಲಿದ್ದಾರೆ ಎಂಬ ಉತ್ತರ ಬಂದಿದೆ. ತಕ್ಷಣ ರೋಗಿಯ ಕಡೆಯವರು ನಗರದಲ್ಲಿದ್ದ ಶಾಸಕಿಗೆ ದೂರವಾಣಿ ಕರೆ ಮಾಡಿದಾಗ ಅವರು ಆಸ್ಪತ್ರೆಗೆ ಬಂದಿದ್ದಾರೆ.

‘ಶಾಸಕರಿಗೂ ರಾತ್ರಿ ಪಾಳಿಯ ವೈದ್ಯರು ಮೊದಲ ಮಹಡಿಯಲ್ಲಿದ್ದಾರೆ ಎಂಬ ಉತ್ತರವನ್ನು ಕರ್ತವ್ಯದಲ್ಲಿದ್ದ ಸಿಬ್ಬಂದಿ ಹೇಳಿದಾಗ, ‘ಅವರನ್ನು ಕರೆಯಿರಿ’ ಎಂದಿದ್ದಾರೆ. ಆಗ ಸಿಬ್ಬಂದಿ ತಡಬಡಾಯಿಸಿದ್ದಾರೆ. ‘ಯಾರನ್ನೋ ರಕ್ಷಣೆ ಮಾಡಲು ನೀವ್ಯಾಕೆ ಸುಳ್ಳು ಹೇಳುತ್ತೀರಿ? ಇದೇ ಏನು ನೀವು ರೋಗಿಗಳಿಗೆ ಮಾಡುತ್ತಿರುವ ಸೇವೆ’ ಎಂದು ತರಾಟೆಗೆ ತೆಗೆದುಕೊಂಡರು.

‘ವರ್ಷದ ಹಿಂದೆ ಆಸ್ಪತ್ರೆಯಲ್ಲಿ ಆರೇಳು ವೈದ್ಯ ಹುದ್ದೆಗಳು ಖಾಲಿ ಇದ್ದವು. ಪ್ರಸ್ತುತ ಮಂಜೂರಾಗಿರುವ 14 ಹುದ್ದೆಗಳ ಪೈಕಿ ಒಬ್ಬರನ್ನು ಹೊರತುಪಡಿಸಿ ಎಲ್ಲ ವೈದ್ಯರಿದ್ದಾರೆ. ಹೀಗಿದ್ದರೂ ಕರ್ತವ್ಯ ಲೋಪ ಮಾಡಿ ರೋಗಿಗಳಿಗೆ ತೊಂದರೆ ಕೊಟ್ಟರೆ ಸುಮ್ಮನಿರಬೇಕೆ? ಬಡ ರೋಗಿಗಳು ಈ ಆಸ್ಪತ್ರೆಗೆ ಬರುವುದೇ ಕಷ್ಟ. ಇಲ್ಲಿಂದ ಜಿಲ್ಲಾ ಆಸ್ಪತ್ರೆಗೆ ಹೋಗಿ ಎಂದರೆ ಹೇಗೆ’ ಎಂದು ಖಾರವಾಗಿ ಪ್ರಶ್ನಿಸಿದರು.

ಹೆರಿಗೆ ವಾರ್ಡ್‌ಗೆ ಭೇಟಿ ನೀಡಿದ ಶಾಸಕರು ಬಾಣಂತಿಯರೊಂದಿಗೆ ಆಸ್ಪತ್ರೆಯಲ್ಲಿನ ವ್ಯವಸ್ಥೆ ಬಗ್ಗೆ ಮಾಹಿತಿ ಪಡೆದರು. ‘ಒಂದೆರಡು ದಿನದ ಕೂಸುಗಳು ಇರುವ ಜಾಗದ ಕಡೆ ಯಾರು ಬೇಕೊ ಅವರು ಬಂದು ಹೋಗದಂತೆ ಕ್ರಮ ಕೈಗೊಳ್ಳಬೇಕು. ಸ್ವಚ್ಛತೆಗೆ ಆದ್ಯತೆ ನೀಡಬೇಕು’ ಎಂದು ಪೂರ್ಣಿಮಾ ಶ್ರೀನಿವಾಸ್ ಸೂಚಿಸಿದರು.

‘ಆಸ್ಪತ್ರೆಯಲ್ಲಿನ ಸೇವೆ ಬಗ್ಗೆ ಸಾರ್ವಜನಿಕರಿಂದ ವ್ಯಾಪಕ ದೂರುಗಳು ಬರುತ್ತಿವೆ. ಇದಕ್ಕೆ ವೈದ್ಯರು ಅವಕಾಶ ಕೊಡಬಾರದು. ಬಡವರು ನಿಮ್ಮನ್ನು ದೇವರ ಪ್ರತಿರೂಪ ಎಂದು ಭಾವಿಸಿದ್ದಾರೆ. ಅದಕ್ಕೆ ತಕ್ಕಂತೆ ನಡೆದುಕೊಳ್ಳಿ. ವೃತ್ತಿ ಗೌರವ ಕಾಪಾಡಿ’ ಎಂದು ಶಾಸಕರು ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.