ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆ್ಯಪಲ್ ಬಾರೆಗೆ ಭಾರಿ ಬೇಡಿಕೆ

ಹೆಚ್ಚು ಪ್ರೊಟೀನ್ ಅಂಶ ಹೊಂದಿರುವ ಬಡವರ ಸೇಬು
Last Updated 24 ನವೆಂಬರ್ 2020, 3:45 IST
ಅಕ್ಷರ ಗಾತ್ರ

ಚಳ್ಳಕೆರೆ: ಬಯಲು ಸೀಮೆಯಲ್ಲಿ ಬೆಳೆದ ರಾಯಬಾರೆ (ಬಡವರ ಸೇಬು) ಹಣ್ಣಿಗೆ ಸ್ಥಳೀಯ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿದೆ.

ಹೆಚ್ಚು ಪ್ರೊಟೀನ್ ಮತ್ತು ನೀರಿನ ಅಂಶ ಹೊಂದಿರುವ ಜತೆಗೆ ಸೇಬುಹಣ್ಣಿನ ಎಲ್ಲ ಪೋಷಕಾಂಶ ಇರುವ ಕಾರಣ ಈ ಹಣ್ಣಿಗೆ ಬಳ್ಳಾರಿ, ರಾಯಚೂರು, ಕಲಬುರ್ಗಿ ಮುಂತಾದ ಹೊರ ಜಿಲ್ಲೆಗಳಲ್ಲೂ ಬೇಡಿಕೆ ಹೆಚ್ಚು.

ರಾಯಬಾರೆ ತಳಿಯ ಹಣ್ಣು ಸದ್ಯ ಸ್ಥಳೀಯವಾಗಿಯೇ ಹೆಚ್ಚು ಮಾರಾಟ ಆಗುವುದರಿಂದ ಬೆಳೆಗಾರರು ಉತ್ತಮ ಆದಾಯದ ನಿರೀಕ್ಷೆಯಲ್ಲಿದ್ದಾರೆ.

ಕಳೆದ ವರ್ಷ ಸಕಾಲಕ್ಕೆ ಸರಿಯಾಗಿ ಮಳೆ ಬೀಳದ ಕಾರಣ ಮಳೆಯಾಶ್ರಿತ ಭೂಮಿಯಲ್ಲಿ ಕೊಳವೆಬಾವಿ ಕೊರೆಯಿಸಿ ಲಭ್ಯವಾದ ಅತ್ಯಲ್ಪ ನೀರಿಗೆ ಡ್ರಿಪ್ ಅಳವಡಿಸಿಕೊಂಡು ಸಾವಯವ ಕೃಷಿ ವಿಧಾನದ ಮೂಲಕ ಬೆಳೆದ ಆ್ಯಪಲ್ ಬಾರೆ ಉತ್ತಮ ಇಳುವರಿ ಬಂದಿದೆ. ಒಂದು ಹಣ್ಣು ಕನಿಷ್ಠ 30ರಿಂದ 70 ಗ್ರಾಂ ತೂಕ ಬರುತ್ತದೆ.

ತಳಕು ಹೋಬಳಿ ಮತ್ತು ಪರಶುರಾಂಪುರ ಹೋಬಳಿಯ ಕಾಲುವೆಹಳ್ಳಿ, ಜಾಜೂರು, ರೇಣುಕಾಪುರ, ಹಾಲಗೊಂಡನಹಳ್ಳಿ, ಚಿಕ್ಕೇನಹಳ್ಳಿ, ಗಂಜಿಗುಂಟೆ ಮುಂತಾದ ಗ್ರಾಮ ಸೇರಿ ತಾಲ್ಲೂಕಿನಲ್ಲಿ ಒಟ್ಟು 8 ಹೆಕ್ಟೆರ್ ಪ್ರದೇಶದಲ್ಲಿ ಆ್ಯಪಲ್ ಬಾರೆ ಬೆಳೆಯಲಾಗಿದೆ.

ಈಗಾಗಲೇ 15-20 ದಿನದಿಂದ ಬೆಳೆ ಕಟಾವ್ ಮಾಡಿ ಹಣ್ಣನ್ನು ಸ್ಥಳೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಮೂಲಕ ಬೆಳೆಗಾರರು ಉತ್ತಮ ಆದಾಯ ಪಡೆದಿದ್ದಾರೆ.

‘ಸಾವಯಕ ಕೃಷಿ ಪದ್ಧತಿ ಅನುಸರಿಸಿ 2.5 ಎಕರೆಯಲ್ಲಿ ಬೆಳೆದ ಆ್ಯಪಲ್‍ಬಾರೆ ಉತ್ತಮ ಇಳುವರಿ ಬಂದಿದೆ. ಎರಡು ಎಕರೆಗೆ 15ರಿಂದ 20 ಟನ್ ಹಣ್ಣು ಬರುತ್ತದೆ. ಮಾರುಕಟ್ಟೆಯಲ್ಲಿ ಕೆ.ಜಿ.ಗೆ ₹ 30- ₹ 40 ಸಿಕ್ಕರೂ ಈ ಬೆಳೆಯಿಂದ ₹ 1.5 ಲಕ್ಷಕ್ಕೂ ಹೆಚ್ಚು ಆದಾಯ ಪಡೆಯುವ ನಿರೀಕ್ಷೆ ಇದೆ. ಸಸಿ, ಗೊಬ್ಬರ, ಔಷಧ, ಬೇಸಾಯ, ಕೂಲಿ ಸೇರಿ ಎರಡು ಎಕರೆಗೆ
₹ 50 ಸಾವಿರ ವೆಚ್ಚ ಮಾಡಲಾಗಿದೆ’ ಎನ್ನುತ್ತಾರೆ ರೈತ ಮುಖಂಡ ಕಾಲುವೆಹಳ್ಳಿ ಕೆ.ಪಿ.ಭೂತಯ್ಯ.

‘ಆ್ಯಪಲ್‍ಬಾರೆ, ಇಲ್ಲಿನ ಹವಾಗುಣಕ್ಕೆ ಸೂಕ್ತ ಬೆಳೆ. ಇದನ್ನು ಸಾವಯವ ಕೃಷಿ ಪದ್ಧತಿಯಲ್ಲಿ ಬೆಳೆದಿರುವುದರಿಂದ ಗಾತ್ರ, ಬಣ್ಣ, ಗುಣಮಟ್ಟ ಮತ್ತು ರುಚಿ ಉತ್ತಮವಾಗಿರುತ್ತದೆ. ಆದ್ದರಿಂದ ಈ ಹಣ್ಣಿಗೆ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಯಾವಾಗಲೂ
ಬೇಡಿಕೆ ಇರುತ್ತದೆ’ ಎಂದು ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಡಾ.ವಿರೂಪಾಕ್ಷಪ್ಪ ಹೇಳಿದರು.

***

ನಿರಂತರ 2 ತಿಂಗಳು ಬೆಳೆ

ಫಲ ಕೊಡಲು ಆರಂಭವಾದ ಮೇಲೆ ಎರಡು ತಿಂಗಳು ನಿರಂತರ ಬೆಳೆ ಬರುತ್ತದೆ. ಒಮ್ಮೆ ನಾಟಿ ಮಾಡಿದ ಮೇಲೆ 20 ವರ್ಷ ಬೆಳೆಯನ್ನು ಪಡೆಯಬಹುದು. ಸೇಬುಹಣ್ಣಿನ ಎಲ್ಲ ಪೋಷಕಾಂಶವನ್ನು ಹೊಂದಿರುವ ಬಾರೆಹಣ್ಣನ್ನು ಬಡವರ ಸೇಬು ಎಂದು ಕರೆಯುತ್ತಾರೆ. ನರೇಗಾ ಯೋಜನೆಯಡಿ ಹಣ್ಣು ಮತ್ತು ಹೂವಿನ ತೋಟ ನಿರ್ಮಾಣಕ್ಕೆ, ಕೂಲಿ ಮತ್ತು ಪರಿಕರಗಳಿಗೆ ಇಲಾಖೆಯಿಂದ ಪ್ರತಿ ಹೆಕ್ಟೇರ್‌ಗೆ ₹ 45 ಸಾವಿರ ಧನ ಸಹಾಯ ನೀಡಲಾಗುವುದು ಎಂದು ಹೇಳಿದರು.

– ಡಾ.ವಿರೂಪಾಕ್ಷಪ್ಪ, ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ, ಚಳ್ಳಕೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT