ಭಾನುವಾರ, ಸೆಪ್ಟೆಂಬರ್ 19, 2021
24 °C

ಚಿತ್ರದುರ್ಗ: ಐಡಿಎಎಸ್‌ ಅಧಿಕಾರಿಗೆ 536ನೇ ರ‍್ಯಾಂಕ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಇಂಡಿಯನ್‌ ಡಿಫೆನ್ಸ್‌ ಅಕೌಂಟ್ಸ್‌ ಸರ್ವಿಸ್‌ (ಐಡಿಎಎಸ್‌) ಪ್ರೊಬೇಷನರಿ ಅಧಿಕಾರಿಯಾಗಿ ಪುಣೆಯಲ್ಲಿ ತರಬೇತಿ ಪಡೆಯುತ್ತಿರುವ ಎನ್‌.ರಾಘವೇಂದ್ರ ಅವರು ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್‌ಸಿ) ಪರೀಕ್ಷೆಯಲ್ಲಿ 536ನೇ ರ‍್ಯಾಂಕ್‌ ಪಡೆದಿದ್ದಾರೆ.

ಚಿತ್ರದುರ್ಗದ ಎನ್‌.ರಾಘವೇಂದ್ರ 2018ನೇ ಸಾಲಿನಲ್ಲಿ ಪರೀಕ್ಷೆಯಲ್ಲಿ 739ನೇ ರ‍್ಯಾಂಕ್‌ ಪಡೆದಿದ್ದರು. ಐಎಎಸ್‌ ಅಧಿಕಾರಿಯಾಗಬೇಕು ಎಂಬ ಕನಸಿನೊಂದಿಗೆ ಐದನೇ ಬಾರಿಗೆ ಪರೀಕ್ಷೆ ಎದುರಿಸಿದ್ದು, ಉತ್ತಮ ರ‍್ಯಾಂಕ್‌ ಪಡೆದಿರುವುದಕ್ಕೆ ಹರ್ಷಗೊಂಡಿದ್ದಾರೆ.

‘ಐಡಿಎಎಸ್‌ ಸೇವೆಗೆ ಸೇರಿದ ಬಳಿಕವೂ ಪ್ರಯತ್ನ ಮುಂದುವರಿಸಿದೆ. ನಿತ್ಯ ಅಭ್ಯಾಸದಲ್ಲಿ ತೊಡಗಿದ್ದೆ. ಪರೀಕ್ಷೆ ಸಂದರ್ಭದಲ್ಲಿ ಮಾತ್ರ ಕೆಲ ದಿನ ರಜೆ ಪಡೆದು ಅಧ್ಯಯನದಲ್ಲಿ ತೊಡಗಿಕೊಂಡಿದ್ದೆ. ಪ್ರಯತ್ನಕ್ಕೆ ತಕ್ಕ ಪ್ರತಿಫಲ ಸಿಕ್ಕಿರುವುದಕ್ಕೆ ಸಂತಸವಾಗಿದೆ’ ಎಂದು ರಾಘವೇಂದ್ರ ಅವರು ‘ಪ್ರಜಾವಾಣಿ’ಯೊಂದಿಗೆ ಅಭಿಪ್ರಾಯ ಹಂಚಿಕೊಂಡರು.

ಚಿತ್ರದುರ್ಗ ತಾಲ್ಲೂಕಿನ ಮಾನಂಗಿ ಗ್ರಾಮದ ನಾಗರಾಜ್‌ ಹಾಗೂ ಸುಜಾತಾ ದಂಪತಿಯ ಪುತ್ರ ರಾಘವೇಂದ್ರ ಎಂಜಿನಿಯರಿಂಗ್‌ ಪದವೀಧರ. ವಾಣಿಜ್ಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತರಾಗಿರುವ ತಂದೆ ಸ್ಪರ್ಧಾತ್ಮಕ ಪರೀಕ್ಷೆಯ ಬಗೆಗೆ ಮಗನಲ್ಲಿ ಸ್ಫೂರ್ತಿ ತುಂಬಿದ್ದರು. ಕರ್ನಾಟಕ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದ ರಾಘವೇಂದ್ರ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸಹಾಯಕ ನಿರ್ದೇಶಕರಾಗಿ ಭದ್ರಾವತಿಯಲ್ಲಿ ಕೆಲಸ ಮಾಡಿದ್ದಾರೆ.

ಚಿತ್ರದುರ್ಗ, ಹೊಸಪೇಟೆ, ಮೈಸೂರು, ಬೆಂಗಳೂರಿನಲ್ಲಿ ವ್ಯಾಸಂಗ ಮಾಡಿದ್ದಾರೆ. 2012ರಲ್ಲಿ ಎಲೆಕ್ಟ್ರಾನಿಕ್ಸ್‌ ಅಂಡ್‌ ಕಮ್ಯುನಿಕೇಷನ್‌ನಲ್ಲಿ ಎಂಜಿನಿಯರಿಂಗ್‌ ಪದವಿ ಪಡೆದು ಸ್ಯಾಮ್‌ಸಂಗ್‌ ಕಂಪನಿಯಲ್ಲಿ ಕೆಲಸ ಮಾಡಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ಉದ್ದೇಶದಿಂದ ಉದ್ಯೋಗಕ್ಕೆ ರಾಜೀನಾಮೆ ನೀಡಿ ದೆಹಲಿಯಲ್ಲಿ 9 ತಿಂಗಳು ತರಬೇತಿ ಪಡೆದಿದ್ದರು.

‘ಕೆಲಸದ ನಡುವೆ ಓದಿಗೆ ಸಮಯ ಹೊಂದಿಸಿಕೊಳ್ಳುವುದು ಕಷ್ಟವಾಗುತ್ತಿತ್ತು. ಆದರೂ, ಛಲಬಿಡದೇ ಅಧ್ಯಯನದಲ್ಲಿ ತೊಡಗಿಕೊಂಡೆ. ನಿತ್ಯ ಐದಾರು ಗಂಟೆ ಅಧ್ಯಯನಕ್ಕೆ ಸಮಯ ಮೀಸಲಿಡುತ್ತಿದೆ. ಸಮಾನ ಮನಸ್ಕರೊಂದಿಗೆ ಸೇರಿ ಚರ್ಚಿಸಿ ಪರೀಕ್ಷೆಗೆ ಸಜ್ಜಾಗಿದ್ದೆ. ಐದನೇ ಬಾರಿ ಪರೀಕ್ಷೆ ಬರೆಯುವಾಗಿ ಹೆಚ್ಚು ಕಷ್ಟವಾಗಲಿಲ್ಲ. ಸಂದರ್ಶನಕ್ಕೆ ರಜೆ ಕೂಡ ಪಡೆದಿರಲಿಲ್ಲ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು